Site icon Vistara News

ಡಿ.ಕೆ. ಶಿವಕುಮಾರ್‌ರನ್ನು ಬಿಟ್ಟುಕೊಡದ ರಾಹುಲ್‌ ಗಾಂಧಿ: ಒಟ್ಟಾಗಿ ಹೋಗಿ ಎಂಬ ಸಂದೇಶ

karnataka congress ticket aspirants fight

ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವದ ಕಾರ್ಯಕ್ರಮದಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ನಡುವೆ ಕಂದಕ ಹೆಚ್ಚಾಗುತ್ತಿದೆ ಎಂಬುದನ್ನು ಅರಿತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇಬ್ಬರೂ ಒಟ್ಟಾಗಿ ಹೋದರೆ ಮಾತ್ರವೇ ಅಧಿಕಾರ ಸಿಗುತ್ತದೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸುವ ಸಂದರ್ಭ ಬಂದಾಗ ಡಿ.ಕೆ. ಶಿವಕುಮಾರ್‌ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಚಿತ್ರವನ್ನು ಸಿದ್ದರಾಮಯ್ಯ ಅವರಿಗೆ ನೀಡಿದರು. ನಂತರ ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡರು. ಸಿದ್ದರಾಮಯ್ಯ ಅವರ ಕೈಯನ್ನು ಹಿಡಿದು ಮೇಲೆತ್ತಿ ಇಬ್ಬರೂ ಒಟ್ಟಾಗಿರುತ್ತೇವೆ ಎಂದು ಸಂದೇಶ ನೀಡಿದರು.

ರಾಹುಲ್‌ ಗಾಂಧಿ ಅವರು ತಮ್ಮ ಭಾಷಣದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು. ಸಿದ್ದರಾಮಯ್ಯ ಅವರನ್ನು ಡಿ.ಕೆ. ಶಿವಕುಮಾರ್‌ ಅವರು ತಬ್ಬಿಕೊಂಡದ್ದನ್ನು ಕಂಡು ನನಗೆ ಬಹಳ ಸಂತೋಷವಾಯಿತು. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅತ್ಯುತ್ತಮ ರೀತಿಯಲ್ಲಿ ಪಕ್ಷವನ್ನು ಸಂಘಟಿಸುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಇವರಿಬ್ಬರ ಪರಿಶ್ರಮದಿಂದ ಕರ್ನಾಟಕದಲ್ಲಿ ಜನಸ್ನೇಹಿ ಸರ್ಕಾರ ರೂಪುಗೊಳ್ಳಲಿದೆ ಎಂದು ಹೇಳಿದರು.

ಇಬ್ಬರೂ ನಾಯಕರು ಹಾಗೂ ಅವರಿಬ್ಬರ ಬೆಂಬಲಿಗರ ನಡುವೆ ನಡೆಯುತ್ತಿರುವ ಶೀತಲ ಸಮರಕ್ಕೆ ಈ ಮೂಲಕ ಮುಲಾಮು ಹಚ್ಚಲು ರಾಹುಲ್‌ ಗಾಂಧಿ ಪ್ರಯತ್ನಿಸಿದ್ದಾರೆ. ನಿಜಕ್ಕೂ ಅವರ ಮಾತುಗಳು ಎಷ್ಟು ಮಟ್ಟಿಗೆ ಕಾರ್ಯರೂಪಕ್ಕೆ ಬರಲಿವೆ ಎನ್ನುವುದನ್ನು ಭವಿಷ್ಯದಲ್ಲಿ ಕಾದುನೋಡಬೇಕಿದೆ.

ಇದನ್ನೂ ಓದಿ | Video | ಸಿದ್ದರಾಮಯ್ಯ @75: ಸಿದ್ದರಾಮೋತ್ಸವಕ್ಕೂ ಮುನ್ನ ಒಂದು ಸಿಪ್‌ ಬಿಯರ್‌

Exit mobile version