Site icon Vistara News

Rajasthan Election: ರಾಜಸ್ಥಾನದ ಭವಿಷ್ಯ ನಿರ್ಧರಿಸಲಿದೆ ಈ 5 ಅಂಶಗಳು

rajasthan ele

rajasthan ele

ಜೈಪುರ: ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಯ (Rajasthan Assembly Election) ಕಾವು ಏರತೊಡಗಿದೆ. ನವೆಂಬರ್ 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದು ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಉಚಿತ ಕೊಡುಗೆಗಳು, ಮೋದಿ ವರ್ಸಸ್ ಸಿಎಂ ಅಭ್ಯರ್ಥಿ, ರಜಪೂತ್-ಗುಜ್ಜರ್ ಮತಗಳು ಮತ್ತು ಹಿಂದುತ್ವ – ಈ ಐದು ಅಂಶಗಳು ʼಮರುಭೂಮಿ ರಾಜ್ಯʼದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಧಿಕಾರದಲ್ಲಿರುವ ಸರ್ಕಾರವನ್ನು ಕಿತ್ತೊಗೆಯುವ ಪರಂಪರೆ ಸುಮಾರು ಮೂರು ದಶಕಗಳಿಂದ ಇಲ್ಲಿ ನಡೆದುಕೊಂಡು ಬಂದಿದೆ. ಹೀಗಾಗಿ ಆಡಳಿತರೂಢ ಕಾಂಗ್ರೆಸ್‌ಗೆ(Congress) ಈ ಬಾರಿ ಹಿನ್ನಡೆಯಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಅಲ್ಲದೆ ನಾಲ್ಕು ವರ್ಷಗಳಲ್ಲಿ ವ್ಯಾಪಕವಾಗಿ ಹರಡಿರುವ ಪ್ರಶ್ನೆಪತ್ರಿಕೆ ಸೋರಿಕೆ ಜನರಲ್ಲಿ ಆಕ್ರೋಶ ಮೂಡಿಸಿದ್ದು, ಇದು ಬಿಜೆಪಿ(BJP) ಪರ ಮತವಾಗಿ ಪರಿವರ್ತನೆಯಾಗಲಿದೆ ಎಂದು ಕಮಲ ಪಡೆಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಉಚಿತ ಕೊಡುಗೆಗಳ ಮೂಲಕ, ಸರ್ಕಾರವನ್ನು ಬದಲಾಯಿಸುವ ಸಂಪ್ರದಾಯಕ್ಕೆ ಬ್ರೇಕ್‌ ಹಾಕುವ ಪಣ ತೊಟ್ಟಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದ ರಾಜಸ್ಥಾನಿಗರು ರೋಸಿ ಹೋಗಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ ಅವರ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ ದಿನ, ಬಿಜೆಪಿ ತನ್ನ ಚುನಾವಣಾ ಗೀತೆ ‘ಮೋದಿ ಸಾಥೆ ಆಪ್ನೋ ರಾಜಸ್ಥಾನ್’ ಅನ್ನು ಬಿಡುಗಡೆ ಮಾಡಿತ್ತು. ಈ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ಸಾರುವ ಕೆಲಸ ಮಾಡಿತ್ತು. ನಾಲ್ಕು ವರ್ಷಗಳಲ್ಲಿ ಸುಮಾರು 18 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಅವುಗಳನ್ನು ತಡೆಯಲು ಸರ್ಕಾರ ವಿಫಲವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ. ದೋಟಾಸ್ರಾ ಮೇಲೆ ಇಡಿ ದಾಳಿ ನಡೆಸಿದ ನಂತರ ಬಿಜೆಪಿ ಈ ದಂಧೆ ವ್ಯಾಪಕವಾಗಿ ಹರಡಿದೆ ಎಂದು ಆರೋಪಿಸಿದೆ. ಕೆಲವು ‘ದೊಡ್ಡ ಕುಳಗಳು’ ಇದರಲ್ಲಿ ಭಾಗಿಯಾಗಿವೆ ಎಂದು ಜನರು ಅನುಮಾನ ವ್ಯಕ್ತಪಡಿಸುತ್ತಾರೆ.

ಅಶೋಕ್ ಗೆಹ್ಲೋಟ್ ಅವರ ಕ್ಷೇತ್ರ ಜೋಧ್ಪುರದಲ್ಲಿಯೂ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಚರ್ಚೆಯಾಗುತ್ತಿದೆ. ಕಾಂಗ್ರೆಸ್‌ ನಾಯಕ ಸಚಿನ್ ಪೈಲಟ್ ಕೂಡ ಇದೇ ವಿಚಾರವಾಗಿ ತಮ್ಮದೇ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದರು. ʼʼರಾಜಸ್ಥಾನ ಪೊಲೀಸರಿಗೆ ತಮ್ಮ ಬಳಿ ಯಾವುದೇ ಪುರಾವೆ ಸಿಕ್ಕಿಲ್ಲʼʼ ಎಂದು ದೋಟಾಸ್ರಾ ಹೇಳುತ್ತಾರೆ. ʼʼಇಡಿ ಪೂರ್ವಗ್ರಹ ಪೀಡಿತವಾಗಿದೆʼʼ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ. ಅದಾಗ್ಯೂ ಇಡಿ ಕ್ರಮದಿಂದಾಗಿ ರಾಜಸ್ಥಾನದಲ್ಲಿ ಬಿಜೆಪಿ ಈಗ ಮೇಲುಗೈ ಸಾಧಿಸಿದೆ ಎನ್ನಲಾಗುತ್ತಿದೆ. ʼʼಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಭಯ ಯಾಕೆ?ʼʼ ಎಂದು ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ಸಿಎಂ ಗೆಹ್ಲೋಟ್ ಅವರನ್ನು ಪ್ರಶ್ನಿಸಿದ್ದಾರೆ.

ಉಚಿತ ಕೊಡುಗೆಗಳ ಗ್ಯಾರಂಟಿ

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಉಚಿತ ಕೊಡುಗೆಗಳ ಪಾಲು ಸಾಕಷ್ಟಿದೆ. ಇತ್ತ ರಾಜಸ್ಥಾನದಲ್ಲಿ ಉಚಿತ ಕೊಡುಗೆಗಳ ಭರಾಟೆ ಜೋರಾಗಿಯೇ ಸದ್ದು ಮಾಡುತ್ತಿದೆ. ರಾಜ್ಯದ ನಗರ ಅಥವಾ ಗ್ರಾಮೀಣ ಪ್ರದೇಶಗಳಿಗೆ ‘ಚಿರಂಜೀವಿ’ ಆಂಬ್ಯುಲೆನ್ಸ್‌ ಸೇವೆ ಒದಗಿಸಲಾಗಿದೆ. ಗೆಹ್ಲೋಟ್ ಸರ್ಕಾರದ ಎಲ್ಲಾ ಕುಟುಂಬಗಳಿಗೆ 25 ಲಕ್ಷ ರೂ.ಗಳ ‘ಚಿರಂಜೀವಿ’ ವೈದ್ಯಕೀಯ ವಿಮೆ ಒದಗಿಸುವ ಯೋಜನೆ ದೊಡ್ಡ ಯಶಸ್ಸನ್ನು ಗಳಿಸಿದೆ. ಉಚಿತ ಚಿಕಿತ್ಸೆ ಮಾತ್ರವಲ್ಲದೆ ಉಚಿತ ಔಷಧಿಗಳನ್ನು ಸಹ ನೀಡುತ್ತಿರುವುದರಿಂದ ಜನರು ಈ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ನಾವು ಅಧಿಕಾರದಿಂದ ಹೊರಬಂದರೆ, ಬಿಜೆಪಿ ಈ ಯೋಜನೆಯನ್ನು ನಿಲ್ಲಿಸುತ್ತದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ” ಎಂದು ಗೆಹ್ಲೋಟ್ ಹೇಳುತ್ತಾರೆ. ಅಲ್ಲದೆ ಕಾಂಗ್ರೆಸ್‌ 100 ಯೂನಿಟ್ ಉಚಿತ ವಿದ್ಯುತ್ ಮತ್ತು 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ನೀಡುತ್ತಿದೆ. ಇದಲ್ಲದೆ ಗೆಹ್ಲೋಟ್ ಈಗ ಮತ್ತೆ ಅಧಿಕಾರಕ್ಕೆ ಬಂದರೆ ಇನ್ನೂ ಹಲವು ‘ಗ್ಯಾರಂಟಿಗಳನ್ನು’ ಒದಗಿಸುವ ಭರವಸೆ ನೀಡಿದ್ದಾರೆ. ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ವರ್ಷಕ್ಕೆ 10,000 ರೂ., ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ / ಟ್ಯಾಬ್ಲೆಟ್‌, ಹಳೆಯ ಪಿಂಚಣಿ ಯೋಜನೆ ಮರು ಜಾರಿ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಕಾನೂನು ಒದಗಿಸುವ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಯಾರು?

ಗಮನಿಸಬೇಕಾದ ಮುಖ್ಯ ವಿಚಾರ ಎಂದರೆ ಸದ್ಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಬಣಗಳಲ್ಲಿ ಸ್ಪಷ್ಟ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ. ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಚುನಾವಣೆ ಎದುರಿಸಿದರೆ, ಕೈ ಪಡೆ ಮತ್ತೆ ಗೆಹ್ಲೋಟ್ ಮಣೆ ಹಾಕುವುದು ಅನುಮಾನ. 2018ರವರೆಗೆ ಕಮಲ ಪಡೆಯ ಅತ್ಯಂತ ಜನಪ್ರಿಯ ನಾಯಕಿಯಾಗಿದ್ದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಟಿಕೆಟ್‌ ಪಡೆಯಲು ಎರಡನೇ ಲಿಸ್ಟ್‌ ತನಕ ಕಾಯಬೇಕಾಯಿತು. ಅದಕ್ಕೆ ತಕ್ಕಂತೆ ಅವರು ಇದುವರೆಗಿನ ರ‍್ಯಾಲಿಯಲ್ಲಿ ಪಾಲ್ಗೊಂಡಿಲ್ಲ. ಕಾಂಗ್ರೆಸ್‌ ಪ್ರಚಾರದ ಧ್ವನಿಯಾಗಿ ಗೆಹ್ಲೋಟ್ ಅವರನ್ನೇ ನೆಚ್ಚಿಕೊಂಡಿದೆ. ಸಚಿನ್‌ ಪೈಲಟ್ ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರಚಾರ ಮಾಡುವ ನಿರೀಕ್ಷೆಯಿದೆ.

ಈ ಬಾರಿ ಗೆಹ್ಲೋಟ್ ವರ್ಸಸ್ ಮೋದಿ ಹೋರಾಟ ಎಂದೇ ಜನರು ಭಾವಿಸಿದ್ದಾರೆ. ವಸುಂಧರಾ ರಾಜೆ ಅವರನ್ನು ಬದಿಗಿಟ್ಟಿದ್ದಕ್ಕಾಗಿ ಬಿಜೆಪಿ ಬೆಲೆ ತೆರಬೇಕಾಗುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೋದಿ ಮುಖ್ಯಮಂತ್ರಿಯಾಗಲು ಜೈಪುರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಮತದಾರರು ಟೀಕಿಸುತ್ತಾರೆ. ಆದರೆ ಕೆಲವು ನಿಷ್ಠಾವಂತ ಕಾಂಗ್ರೆಸ್ ಮತದಾರರು ಐದು ವರ್ಷಗಳಲ್ಲಿ ಗೆಹ್ಲೋಟ್ ಮತ್ತು ಪೈಲಟ್ ಪರಸ್ಪರ ಭಿನ್ನಾಭಿಪ್ರಾಯ ಹೊಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಜಪೂತ್-ಗುಜ್ಜರ್ ಮತಗಳು

2018ರ ಚುನಾವಣೆಯಲ್ಲಿ ರಜಪೂತರು ಬಿಜೆಪಿಯಿಂದ ದೂರ ಸರಿದರು ಮತ್ತು ಗುಜ್ಜರ್‌ ಸಮುದಾಯದವರು ಕಾಂಗ್ರೆಸ್‌ಗೆ ಮತ ಚಲಾಯಿಸಿದರು. ಕಾಂಗ್ರೆಸ್ ಗೆಲುವಿಗೆ ಕಾರಣವಾದ ಎರಡು ಅಂಶಗಳು ಇವು. ಮೇವಾರ್‌ನ ರಜಪೂತರು 2018ರಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೆ ವಿರುದ್ಧ ಅಸಮಾಧಾನಗೊಂಡಿದ್ದರು. ಪೂರ್ವ ರಾಜಸ್ಥಾನದ ಗುಜ್ಜರ್‌ಗಳು ಸಚಿನ್ ಪೈಲಟ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಭಾವಿಸಿ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರು. ಹೀಗಾಗಿ ಈ ಬಾರಿ ರಜಪೂತ ಮತಗಳನ್ನು ಮರಳಿ ಪಡೆಯಲು ಬಿಜೆಪಿ ಶ್ರಮಿಸುತ್ತಿದೆ ಮತ್ತು ಪೈಲಟ್ ಅವರಿಗೆ ಮನ್ನಣೆ ಸಿಗದ ಕಾರಣ ಗುಜ್ಜರ್‌ಗಳು ನಿರಾಶೆಗೊಂಡಿದ್ದಾರೆ. ಜೈಪುರ ರಾಜಮನೆತನದ ಸಂಸದೆ ದಿಯಾ ಕುಮಾರಿ ಜೈಪುರದ ಸ್ಥಾನದಿಂದ ಸ್ಪರ್ಧಿಸುತ್ತಿದ್ದು, ಬಿಜೆಪಿಯ ಸಿಎಂ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಮೇವಾರ್ ಮತ್ತು ಮಾರ್ವಾರ್‌ನ ಇಬ್ಬರು ರಜಪೂತ ನಾಯಕರಾದ ವಿಶ್ವರಾಜ್ ಸಿಂಗ್ ಮೇವಾರ್ ಮತ್ತು ಭವಾನಿ ಸಿಂಗ್ ಕಲ್ವಿ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಬಿಜೆಪಿ ಅನುಕೂಲ ವಾತಾವರಣ ಸೃಷ್ಟಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Digvijaya Singh : ರಾಮ ಮಂದಿರಕ್ಕೆ ನಾನೂ 1.11 ಲಕ್ಷ ಕೊಟ್ಟಿದ್ದೇನೆ; ದಿಗ್ವಿಜಯ್​ ಸಿಂಗ್​ ಈಗ ಈ ರೀತಿ ಹೇಳಿದ್ಯಾಕೆ?

ಹಿಂದುತ್ವ

ಗೆಹ್ಲೋಟ್ ಸರ್ಕಾರವು ಮುಸ್ಲಿಮರನ್ನು ಓಲೈಸುತ್ತಿದೆ ಎಂದು ಭಾವಿಸಿರುವ ಸಾಕಷ್ಟು ಹಿಂದೂ ಮತದಾರರು ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಬಯಸಿದ್ದಾರೆ. ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಹತ್ಯೆಯು ಚರ್ಚಾ ವಿಷಯವಾಗಿದ್ದು, ‘ಶಾಂತಿಯುತ’ ರಾಜ್ಯದಲ್ಲಿ ಇಂತಹ ಕ್ರೌರ್ಯವನ್ನು ಸಹಿಸಲು ಸಾಧ್ಯವಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಹಿಂದುಗಳ ಗಮನ ಸೆಳೆಯಲು ಬಿಜೆಪಿ ರಾಮ ಮಂದಿರವನ್ನು ಹೆಚ್ಚು ಪ್ರಸ್ತಾವಿಸುತ್ತಿದೆ. ಆದರೆ, ರಾಜಸ್ಥಾನ ಎಂದಿಗೂ ಕೋಮು ಆಧಾರದ ಮೇಲೆ ಮತ ಚಲಾಯಿಸುವುದಿಲ್ಲ ಮತ್ತು ಬಿಜೆಪಿಯ ಈ ಯೋಜನೆ ಕೆಲಸ ಮಾಡುವುದಿಲ್ಲ ಎಂದು ಕಾಂಗ್ರೆಸಿರು ಪ್ರತಿಪಾದಿಸುತ್ತಾರೆ.

Exit mobile version