ಬೆಂಗಳೂರು: ರಾಜ್ಯಸಭಾ ಚುನಾವಣೆಗೆ (Rajya Sabha Election) ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಜಯಗಳಿಸಿದ್ದಾರೆ. ಬಿಜೆಪಿ – ಜೆಡಿಎಸ್ ಮೈತ್ರಿಯಿಂದ (BJP JDS Alliance) ಐದನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕುಪೇಂದ್ರ ರೆಡ್ಡಿ (Kupendra Reddy) ಸೋಲು ಕಂಡಿದ್ದಾರೆ. ಈ ಮೂಲಕ ಮೈತ್ರಿಗೆ ಮುಖಭಂಗವಾದಂತೆ ಆಗಿದೆ. ಒಟ್ಟು 222 ಶಾಸಕರಿಂದ ಮತದಾನ ಮಾಡಿದ್ದಾರೆ.
ಅಜಯ್ ಮಾಕನ್ -47, ನಾಸೀರ್ ಹುಸೇನ್ – 46, ಜಿ.ಸಿ. ಚಂದ್ರಶೇಖರ – 45, ನಾರಾಯಣಸಾ ಭಾಂಡಗೆ – 48, ಕುಪೇಂದ್ರ ರೆಡ್ಡಿ – 35 ಮತಗಳನ್ನು ಗಳಿಸಿದ್ದಾರೆ.
ಭಾರಿ ಕುತೂಹಲಕ್ಕೆ ತೆರೆ!
ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಕ್ಕೆ ದಿನಾಂಕ ನಿಗದಿಯಾದಾಗಿನಿಂದಲೂ ರಾಜಕೀಯ ಲೆಕ್ಕಾಚಾರಗಳು ಶುರುವಾಗಿದ್ದವು. ಕಾಂಗ್ರೆಸ್ ತನ್ನ ಸಂಖ್ಯಾಬಲದ ಪ್ರಕಾರ (135) ಸರಿಯಾಗಿ ಮೂರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ನಾರಾಯಣಸಾ ಭಾಂಡಗೆ ಅವರನ್ನು ಸ್ಪರ್ಧೆಗೆ ಒಡ್ಡಿತ್ತು. ಇಷ್ಟೇ ಆಗಿದ್ದರೆ ಚುನಾವಣೆಯೇ ನಡೆಯುತ್ತಿರಲಿಲ್ಲ. ಆದರೆ, ಕೊನೇ ಕ್ಷಣದಲ್ಲಿ ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರು ಕಣಕ್ಕಿಳಿದರು. ಇದು ಚುನಾವಣಾ ಅಖಾಡವನ್ನು ಮತ್ತಷ್ಟು ರಂಗು ಮಾಡಿತು.
ಶುರುವಾಗಿತ್ತು ನಂಬರ್ ಗೇಮ್!
ಯಾವಾಗ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕೆ ಇಳಿದರೋ ಆಗ “ನಂಬರ್ ಗೇಮ್” ಶುರುವಾಗಿತ್ತು. ಕಾಂಗ್ರೆಸ್‌ಗೆ ಬೇಕಿದ್ದ ಮತಗಳು ಸರಿಯಾಗಿದ್ದರೂ ಅಡ್ಡ ಮತದಾನದ ಭೀತಿ ಎದುರಾಗಿತ್ತು. ಕಾಂಗ್ರೆಸ್‌ನಿಂದ ಆತ್ಮಸಾಕ್ಷಿಯ ಮತಗಳು ಬರಲಿವೆ. ತಾವು ಗೆದ್ದೇ ಗೆಲ್ಲುವುದಾಗಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸಹಿತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಹೇಳುತ್ತಾ ಬಂದಿದ್ದರು. ಇದು ಕಾಂಗ್ರೆಸ್ ಆತಂಕವನ್ನು ಹೆಚ್ಚಿಸಿತ್ತು. ಇನ್ನು ಶಾಸಕ ರಾಜಾವೆಂಕಟಪ್ಪ ನಾಯಕ ಮೃತಪಟ್ಟರು. ಇದರಿಂದ ಕಾಂಗ್ರೆಸ್‌ಗೆ ಇನ್ನೊಂದು ಮತದ ಅನಿವಾರ್ಯ ಎದುರಾಯಿತು. ಅಲ್ಲದೆ, ಕುದುರೆ ವ್ಯಾಪಾರವಾದರೆ ಎಂಬ ಆತಂಕದಿಂದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಿತ್ತು.
ಕೈಹಿಡಿದ ಪಕ್ಷೇತರರು
ಪಕ್ಷೇತರ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ, ದರ್ಶನ್ ಪುಟ್ಟಣ್ಣಯ್ಯ, ಪುಟ್ಟ ಸಿದ್ದೇಗೌಡ, ಲತಾ ಮಲ್ಲಿಕಾರ್ಜುನ ಅವರು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಯಾವೊಬ್ಬ ಶಾಸಕರೂ ಅಡ್ಡ ಮತದಾನ ಮಾಡದೇ ಇದ್ದಿದ್ದರಿಂದ ನಿರಾಯಾಸವಾಗಿ ಗೆಲುವನ್ನು ಪಡೆದುಕೊಂಡಿದೆ.
“ಅಡ್ಡ”ದಾರಿ ಹಿಡಿದ ಎಸ್‌ಟಿ ಸೋಮಶೇಖರ್
ಇನ್ನು ಬಿಜೆಪಿಯ ರೆಬೆಲ್ ಶಾಸಕ ಎಸ್.ಟಿ. ಸೋಮಶೇಖರ್ ಅವರು ಕಾಂಗ್ರೆಸ್‌ಗೆ ಅಡ್ಡ ಮತದಾನ ಮಾಡಿದ್ದಾರೆ. ಅಭಿವೃದ್ಧಿಗೆ ಯಾರು ಆದ್ಯತೆ ಕೊಡುತ್ತಾರೋ ಅವರಿಗೆ ನನ್ನ ಪ್ರಥಮ ಪ್ರಾಶಸ್ತ್ಯದ ಮತ ಎಂದು ಹೇಳಿಕೆಯನ್ನೂ ನೀಡಿದ್ದಾರೆ. ಈಗ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ಮುಂದಾಗಿದೆ. ಈ ಸಂಬಂಧ ಹೈಕೋರ್ಟ್ ವಕೀಲರ ಜತೆಯೂ ಚರ್ಚೆ ಮಾಡಲಾಗಿದ್ದು, ಪಕ್ಷದಿಂದ ಉಚ್ಚಾಟನೆ ಮಾಡುವ ಹಾಗೂ ಶಾಸಕತ್ವವನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಮೊರೆ ಹೋಗಲು ನಿರ್ಧಾರ ಮಾಡಿದೆ. ಒಂದು ವೇಳೆ ಸ್ಪೀಕರ್ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್ ಕದ ತಟ್ಟುವ ಆಲೋಚನೆಯಲ್ಲಿದೆ ಎಂದು ಹೇಳಲಾಗುತ್ತಿದೆ.
ಮತದಾನಕ್ಕೇ ಬಾರದ ಶಿವರಾಂ ಹೆಬ್ಬಾರ್!
ಪಕ್ಷ ತಾಯಿ ಇದ್ದಂತೆ ಹೀಗಾಗಿ ನಾವು ಪಕ್ಷದ ವಿರುದ್ಧ ಹೋಗುವುದಿಲ್ಲ. ಪಕ್ಷದ ಅಭ್ಯರ್ಥಿಗೇ ಮತ ಹಾಕುತ್ತೇವೆ ಎಂದು ಬಿಜೆಪಿ ನಾಯಕರಿಗೆ ಸೋಮವಾರ ರಾತ್ರಿ ವರೆಗೂ ಹೇಳುತ್ತಾ ಬಂದಿದ್ದ, ಸಂಪರ್ಕದಲ್ಲಿದ್ದ ಶಿವರಾಂ ಹೆಬ್ಬಾರ್ ಅವರು ಮಂಗಳವಾರ ಮತದಾನವನ್ನೇ ಮಾಡಲಿಲ್ಲ. ಮತದಾನದ ಬೂತ್ ಕಡೆಗೆ ತಲೆಯನ್ನೇ ಹಾಕಲಿಲ್ಲ! ಇದು ಬಿಜೆಪಿಯನ್ನು ಕೆಂಡವಾಗಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಳೆದ ವಾರದಿಂದ ಸೋಮಶೇಖರ್, ಹೆಬ್ಬಾರ್ ಮಾತನಾಡುತ್ತಿದ್ದರು. ಹೆಬ್ಬಾರ್ ಅವರಂತೂ ಕೊನೆ ಕ್ಷಣದ ವರೆಗೂ ಮಾತಾಡಿದ್ರು. ನಾವು ಪಕ್ಷಕ್ಕೆ ಮೋಸ ಮಾಡಲ್ಲ ಅಂದ್ರು. ತಾಯಿಗೆ ಮೋಸ ಮಾಡಲ್ಲ ಅಂದಿದ್ರು. ಆದರೆ, ಈಗ ಮೋಸ ಮಾಡಿದ್ದಾರೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯವಾಗಿ ಸೂಸೈಡ್ ಮಾಡಿಕೊಂಡ ಎಸ್‌ಟಿಎಸ್!
ಸೋಮವಾರ ಎಸ್.ಟಿ. ಸೋಮಶೇಖರ್ ಅವರೇ ನನಗೆ ಕರೆ ಮಾಡಿದ್ದರು. ದ್ರೋಹ ಬಗೆಯಲ್ಲ ಅಂತ ಹೇಳಿದ್ದರು. ಅವರು ಸಿಎಂ ಸಿದ್ದರಾಮಯ್ಯ ಅವರ ಜತೆ ಓಡಾಟ ಶುರು ಮಾಡಿದಾಗಿನಿಂದಲೇ ನಮಗೆ ಗುಮಾನಿ ಇತ್ತು. ಆದರೂ ಅವರನ್ನು ನಂಬಿದ್ದೆವು. ಇವತ್ತು ಅವರು ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೂ ಜನ ಅವರನ್ನು ಕ್ಷಮಿಸುವುದಿಲ್ಲ ಎಂದು ಅಶೋಕ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: Rajya sabha Election: ಎಸ್.ಟಿ. ಸೋಮಶೇಖರ್ ಅಡ್ಡಮತ; ಬಿಜೆಪಿಯಿಂದ ಏನು ಕ್ರಮ? ಶಾಸಕತ್ವ ಉಳಿಯುತ್ತಾ?
ಚಲಾವಣೆಯಾಗಿದ್ದು 222 ಮತಗಳು!
ವಿಧಾನಸಭೆಯಲ್ಲಿ ಒಟ್ಟು 224 ಮತ ಶಾಸಕರು ಇದ್ದಾರೆ. ರಾಜ್ಯಸಭೆಗೆ ನಾಲ್ವರು ಸದಸ್ಯರನ್ನು ಆಯ್ಕೆ ಮಾಡುವ ಸಂಬಂಧ ಇಷ್ಟು ಶಾಸಕರು ಮತದಾನವನ್ನು ಮಾಡಬೇಕಿತ್ತು. ಅದರಲ್ಲಿ ಕಾಂಗ್ರೆಸ್ ಶಾಸಕ ರಾಜಾವೆಂಕಟಪ್ಪ ನಾಯಕ ಅವರು ಭಾನುವಾರ (ಫೆ. 25) ಮೃತಪಟ್ಟರು. ಇನ್ನು ಮತದಾನ ಮಾಡಬೇಕಿದ್ದ ಬಿಜೆಪಿಯ ಶಿವರಾಂ ಹೆಬ್ಬಾರ್ ಬರಲೇ ಇಲ್ಲ.