ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajya sabha Election) ಬಿಜೆಪಿಯ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ (ST Somashekhar) ಅವರು ಬಿಜೆಪಿ ಅಥವಾ ಮೈತ್ರಿ ಅಭ್ಯರ್ಥಿಗೆ ಮತ ಹಾಕುವ ಬದಲು ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ (Congress Candidate) ಮತ ಹಾಕಿದ್ದಾರೆ. ಹೀಗಾಗಿ ಎಸ್‌ಟಿಎಸ್ ವಿರುದ್ಧ ಶಿಸ್ತು ಕ್ರಮಕ್ಕೆ ಬಿಜೆಪಿ ಮುಂದಾಗಿದೆ. ಪಕ್ಷದಿಂದ ಉಚ್ಚಾಟನೆ ಮಾಡಲು ನಿರ್ಧರಿಸಿರುವ ಬಿಜೆಪಿಯು, ಶಾಸಕತ್ವವನ್ನು ಅನರ್ಹ ಮಾಡುವಂತೆ ಸ್ಪೀಕರ್ ಯು.ಟಿ. ಖಾದರ್ ಮೊರೆ ಹೋಗಲಿದೆ. ಒಂದು ವೇಳೆ ಸ್ಪೀಕರ್ ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ ಹೈಕೋರ್ಟ್ ಇಲ್ಲವೇ ಸುಪ್ರೀಂ ಕೋರ್ಟ್ ಕದ ತಟ್ಟುವ ನಿರ್ಧಾರಕ್ಕೆ ಬಿಜೆಪಿ ಬಂದಿದೆ.
ಈ ಬಗ್ಗೆ ಬಿಜೆಪಿ ಮುಖಂಡ ಮತ್ತು ವಕೀಲ ವಿವೇಕ್ ರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ವಿಪ್ ಜಾರಿ ಮಾಡಿದ ನಂತರ ಪಕ್ಷಕ್ಕೆ ದ್ರೋಹ ಬಗೆದ ಸಂಬಂಧ ಎಸ್.ಟಿ. ಸೋಮಶೇಖರ್ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಅವರು ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದರು.
ಎಸ್.ಟಿ. ಸೋಮಶೇಖರ್ ಪಕ್ಷಕ್ಕೆ ದ್ರೋಹ ಬಗೆದಿರುವುದು ಮತ್ತು ಜನರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡದ್ದು ಪಕ್ಷಾಂತರ ನಿಷೇಧ ಕಾಯ್ದೆಯಡಿ ಘೋರವಾದ ಅಪರಾಧವಾಗಿದೆ. ಸದಸ್ಯರಿಗೆ ವಿಪ್ ಜಾರಿ ಮಾಡಿದ್ದಾರೆ. ವಿಪ್ ಜಾರಿಯ ಬಳಿಕ ಯಾವ ಜನಪ್ರತಿನಿಧಿಯೂ ಅದರ ವಿರುದ್ಧ ಮತದಾನ ಮಾಡಲು ಅಥವಾ ಅಡ್ಡ ಮತದಾನಕ್ಕೆ ಅವಕಾಶವಿಲ್ಲ. ವಿಪ್ ಉಲ್ಲಂಘನೆ ಆಗಿದೆ. ಆದ್ದರಿಂದ ಕೂಡಲೇ ಅವರ ಸದಸ್ಯತ್ವ ಅಮಾನತಾಗಲಿದೆ ಎಂದು ಹೇಳಿದರು.
ಸ್ಪೀಕರ್ ವಿಳಂಬ ಮಾಡಿದರೆ ಕೋರ್ಟ್ ಮೊರೆ
ಸ್ಪೀಕರ್ ಯು.ಟಿ. ಖಾದರ್ ಅವರು ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ ಅದರ ವಿರುದ್ಧ ಹೈಕೋರ್ಟ್, ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಲು ಅವಕಾಶವಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ: Rajya Sabha Election: ರಾಜ್ಯಸಭೆಯಲ್ಲಿ 3 ಸೀಟು ಗೆದ್ದು ಬೀಗಿದ ಕಾಂಗ್ರೆಸ್; 1 ಸ್ಥಾನ ಬಿಜೆಪಿಗೆ; ಮೈತ್ರಿಗೆ ಮುಖಭಂಗ!
ಎಸ್‌ಟಿಎಸ್ ಶಾಸಕತ್ವಕ್ಕೆ ಏನೂ ತೊಂದರೆ ಇಲ್ಲ?
ಪಕ್ಷಾಂತರ ನಿಷೇಧ ಕಾಯ್ದೆಯ ಶೆಡ್ಯೂಲ್ 10 ಅಡಿ ನೀಡಿರುವ ವಿಪ್ ಅನ್ವಯ ಎಸ್.ಟಿ. ಸೋಮಶೇಖರ್ ಅವರ ಶಾಸಕತ್ವಕ್ಕೆ ಯಾವುದೇ ಸಮಸ್ಯೆ ಬಾರದು ಎಂದು ಹೇಳಲಾಗುತ್ತಿದೆ. ಅಂದರೆ ಈ ಕಾಯ್ದೆಯಡಿ ಸೋಮಶೇಖರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಜೆಪಿಯು ಸ್ಪೀಕರ್ ಮೊರೆ ಹೋಗಬಹುದಾಗಿದೆ. ಆಗ ಎಸ್‌ಟಿಎಸ್ ನೀಡುವ ಕಾರಣವನ್ನು ಪರಿಗಣಿಸಿ ಅವರ ಮೇಲೆ ಕ್ರಮವನ್ನು ತೆಗೆದುಕೊಳ್ಳುವುದು ಬಿಡುವುದು ಸ್ಪೀಕರ್‌ಗೆ ಬಿಟ್ಟ ವಿಚಾರವಾಗಿದೆ. ಹೀಗಾಗಿ ಇಲ್ಲಿ ಸ್ಪೀಕರ್ ನಿರ್ಣಯವೇ ಅಂತಿಮವಾಗಿರುತ್ತದೆ. ಆದರೆ, ಒಂದು ವೇಳೆ ಸ್ಪೀಕರ್ ಈ ಬಗ್ಗೆ ವಿಳಂಬ ನೀತಿ ಅನುಸರಿಸಿದ್ದೇ ಹೌದಾದಲ್ಲಿ ತಡ ಮಾಡದೇ ಕೋರ್ಟ್ ಮೊರೆ ಹೋಗಲು ಬಿಜೆಪಿ ನಿರ್ಧಾರ ಮಾಡಿದೆ.