ಬೆಂಗಳೂರು: ಲೋಕಸಭೆ ಚುನಾವಣೆಗೆ (LoK Sabaha Election) ಕೆಲವೇ ತಿಂಗಳು ಬಾಕಿ ಇರುವ ಮಧ್ಯೆಯೇ ಚುನಾವಣೆ ಆಯೋಗವು ರಾಜ್ಯಸಭೆ ಚುನಾವಣೆ (Rajya Sabha Election) ದಿನಾಂಕ ಘೋಷಿಸಿದ್ದು, ಕರ್ನಾಟಕದ 4 ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಒಟ್ಟು 15 ರಾಜ್ಯಗಳ 56 ರಾಜ್ಯಸಭೆ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಸಲು ಆಯೋಗವು (Election Commission Of India) ತೀರ್ಮಾನಿಸಿದೆ.
ಏಪ್ರಿಲ್‌ನಲ್ಲಿ ತೆರವಾಗುವ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಫೆಬ್ರವರಿ 8 ರಂದು ಅಧಿಸೂಚನೆ ಹೊರಡಿಸಲಾಗುವುದು. ಫೆ. 27ರಂದು ಮತದಾನ ನಡೆಯಲಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬ ಸದಸ್ಯರು ಇದ್ದಾರೆ. ಇವರ ಅವಧಿ ಈಗ ಮುಕ್ತಾಯವಾಗುತ್ತಿದೆ.
ಈ ನಾಲ್ವರ ಅವಧಿ ಮುಕ್ತಾಯ
- ಜಿ ಸಿ ಚಂದ್ರಶೇಖರ್ – ಕಾಂಗ್ರೆಸ್
- ನಾಸೀರ್ ಹುಸೇನ್ – ಕಾಂಗ್ರೆಸ್
- ಎಲ್ ಹನುಮಂತಯ್ಯ – ಕಾಂಗ್ರೆಸ್
- ರಾಜೀವ್ ಚಂದ್ರಶೇಖರ್ – ಬಿಜೆಪಿ
ಈ ನಾಲ್ವರ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ತೆರವಾಗುವ ಈ ಸ್ಥಾನಗಳಿಗೆ ಇವರೇ ಅಭ್ಯರ್ಥಿಗಳಾಗಿರಲಿದ್ದಾರಾ? ಅಥವಾ ಬೇರೆಯವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.
ಶುರುವಾಗಿದೆ ರಾಜಕೀಯ ಲೆಕ್ಕಾಚಾರ!
ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುವ ಸಂಬಂಧ ರಾಜ್ಯ ರಾಜಕೀಯದಲ್ಲಿ ಲೆಕ್ಕಾಚಾರಗಳು ಶುರುವಾಗಿದೆ. ಕಾಂಗ್ರೆಸ್‌ನಲ್ಲಿ 135 + 1 ಶಾಸಕರು ಇರುವುದರಿಂದ ರಾಜ್ಯಸಭೆಯ 3 ಸ್ಥಾನಗಳ ಗೆಲುವು ಪಕ್ಕಾ ಆಗಿದೆ. ಅಂದರೆ, ಯಾವುದೇ ರಾಜಕೀಯ ಬೆಳವಣಿಗೆಗಳು ನಡೆಯದೇ, ಕುದರೆ ವ್ಯಾಪಾರ ನಡೆಯದೇ ಇದ್ದರೆ ಕಾಂಗ್ರೆಸ್‌ಗೆ 3 ಸ್ಥಾನಗಳು ಆರಾಮವಾಗಿ ಒಲಿಯುತ್ತದೆ. ಇನ್ನು ಬಿಜೆಪಿಯಲ್ಲಿ 65 ಶಾಸಕರು ಇರುವುದರಿಂದ ಒಂದು ಸ್ಥಾನ ಆರಾಮವಾಗಿ ಗೆಲ್ಲಬಹುದು. ಇಷ್ಟಾಗಿ ಬಿಜೆಪಿ ಬಳಿ 20 ಶಾಸಕರ ಮತಗಳು ಹೆಚ್ಚುವರಿ ಇರುತ್ತದೆ. ಜೆಡಿಎಸ್ ಬಳಿ 19 ಶಾಸಕರು ಇರುವುದರಿಂದ 39 ಶಾಸಕರ ಮತಗಳು ಉಳಿದಂತೆ ಆಗುತ್ತದೆ. ಗೆಲ್ಲಲು 45 ಶಾಸಕರ ಮತಗಳು ಬೇಕಿರುವುದರಿಂದ ಹೆಚ್ಚುವರಿ ಮತಗಳನ್ನು ಕಾಂಗ್ರೆಸ್‌ನಿಂದ ಸೆಳೆಯಬೇಕು. ಒಂದು ವೇಳೆ ಅಲ್ಲಿಂದ 6 ಮಂದಿಯನ್ನು ಸೆಳೆದರೆ ಕಾಂಗ್ರೆಸ್‌ಗೆ 2 ಸ್ಥಾನಗಳು ಮಾತ್ರವೇ ಉಳಿದು ಇನ್ನೊಂದು ಜೆಡಿಎಸ್ ಪಾಲಾಗಬಹುದು ಎಂಬ ಲೆಕ್ಕಾಚಾರವನ್ನೂ ಹಾಕಲಾಗಿದೆ.
ಯಾವ ಯಾವ ರಾಜ್ಯಗಳಲ್ಲಿ ಚುನಾವಣೆ?
ಫೆಬ್ರವರಿ 27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Voting) ನಡೆಯಲಿದೆ ಎಂದು ಚುನಾವಣೆ ಆಯೋಗವು ಮಾಹಿತಿ ನೀಡಿದೆ. ಉಮೇದುವಾರಿಕೆ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಒಟ್ಟು 15 ರಾಜ್ಯಗಳ 56 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಫೆಬ್ರವರಿ 16ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆಬ್ರವರಿ 20 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮತದಾನ ನಡೆಯುವ ಫೆಬ್ರವರಿ 27ರಂದೇ ಫಲಿತಾಂಶ ಲಭ್ಯವಾಗಲಿದೆ.
The terms of Ashwini Vaishnaw, Prashant Nanda and Amar Pattnaik will come to an end in April, 2024. As per the official ECI notification, the election for Rajya Sabha seats will be held on February 27, 2024. https://t.co/UAaPvKGiDN
— Odisha Patrika (@OdishaPatrika) January 29, 2024
ಯಾವ ರಾಜ್ಯಗಳಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆ?
ರಾಜ್ಯ | ಸ್ಥಾನ |
ಕರ್ನಾಟಕ | 4 |
ಆಂಧ್ರಪ್ರದೇಶ | 3 |
ಬಿಹಾರ | 6 |
ಛತ್ತೀಸ್‌ಗಢ | 1 |
ಗುಜರಾತ್ | 4 |
ಹರಿಯಾಣ | 1 |
ಹಿಮಾಚಲ ಪ್ರದೇಶ | 1 |
ಮಧ್ಯಪ್ರದೇಶ | 5 |
ಮಹಾರಾಷ್ಟ್ರ | 6 |
ತೆಲಂಗಾಣ | 3 |
ಉತ್ತರ ಪ್ರದೇಶ | 10 |
ಉತ್ತರಾಖಂಡ | 1 |
ಪಶ್ಚಿಮ ಬಂಗಾಳ | 5 |
ಒಡಿಶಾ | 3 |
ರಾಜಸ್ಥಾನ | 3 |
ಒಟ್ಟು | 56 |
ಇದನ್ನೂ ಓದಿ: DK Shivakumar: ತುಮಕೂರನ್ನು ಎರಡನೇ ಬೆಂಗಳೂರು ಮಾಡುತ್ತೇವೆ: ಡಿ.ಕೆ. ಶಿವಕುಮಾರ್
ರಾಜ್ಯಸಭೆಯಲ್ಲಿ ಪಕ್ಷವಾರು ಬಲಾಬಲ ಎಷ್ಟಿದೆ?
ರಾಜ್ಯಸಭೆಯ ಒಟ್ಟು 245 ಸ್ಥಾನಗಳಲ್ಲಿ ಬಿಜೆಪಿಯೇ ಹೆಚ್ಚಿನ ಸದಸ್ಯರನ್ನು ಹೊಂದಿದೆ. ಬಿಜೆಪಿಯು ಐವರು ನಾಮನಿರ್ದೇಶಿತ ಸದಸ್ಯರು ಸೇರಿ 94 ಸದಸ್ಯರನ್ನು ಹೊಂದಿದೆ. ಇನ್ನು ಕಾಂಗ್ರೆಸ್ 30 ಸದಸ್ಯರನ್ನು ಹೊಂದಿದೆ. ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯಸಭೆಯ 56 ಕ್ಷೇತ್ರಗಳಿಗೆ ಚುನಾವಣೆ ನಡೆಯುವುದರಿಂದ ಇದು ಕೂಡ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.