Site icon Vistara News

Rajya Sabha Election: ರಾಜ್ಯಸಭೆ ಪ್ರವೇಶಿಸಿದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ! ಯಾರು ಈ ಭಾಂಡಗೆ?

Rajya Sabha election Ordinary worker enters Rajya Sabha from BJP Who is Narayanasa bhandage

ಬೆಂಗಳೂರು: ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬಿದ್ದಿದ್ದು, ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಜಯಗಳಿಸಿದ್ದಾರೆ. ಬಿಜೆಪಿಯ ನಾರಾಯಣಸಾ ಬಾಂಡಗೆ ಅವರು ಒಟ್ಟು 47 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತ ರಾಜ್ಯಸಭೆಯನ್ನು ಪ್ರವೇಶ ಮಾಡಿದಂತೆ ಆಗಿದೆ.

ಈ ಬಾರಿಯ ರಾಜ್ಯಸಭಾ ಚುನಾವಣೆ ಸಂಬಂಧ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೆರಡು ಕಡೆ ಸ್ಪರ್ಧಿಸಿ ಸೋಲುಕಂಡಿದ್ದ ಬಿಜೆಪಿಯ ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವರು ಲಾಬಿ ನಡೆಸಿದ್ದರು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಹೈಕಮಾಂಡ್‌ ನಾರಾಯಣಸಾ ಬಾಂಡಗೆ ಅವರಿಗೆ ಮಣೆ ಹಾಕಿತ್ತು. ಈಗ ಅವರು ನಿರಾಯಾಸವಾಗಿ ಗೆದ್ದಿದ್ದು, ರಾಜ್ಯಸಭೆಯನ್ನು ಪ್ರವೇಶ ಮಾಡಿದ್ದಾರೆ.

ಯಾರು ಈ ನಾರಾಯಣಸಾ ಕೃಷ್ಣಸಾ ಭಾಂಡಗೆ?

ನಾರಾಯಣಸಾ ಕೃಷ್ಣಸಾ ಭಾಂಡಗೆ ಅವರು ಮೂಲತಃ ಉತ್ತರ ಕರ್ನಾಟಕದ ಬಾಗಲಕೋಟೆಯವರಾಗಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್ ಸೇರ್ಪಡೆಯಾಗಿದ್ದು, 40 ವರ್ಷಗಳಿಂದ ಆರ್‌ಎಸ್‌ಎಸ್‌ನಲ್ಲಿದ್ದಾರೆ. ಬಾಗಲಕೋಟೆಯಲ್ಲಿ ಆರಂಭದ ಎಬಿವಿಪಿಯಲ್ಲಿ ಸದಸ್ಯರಾಗಿ ಕೆಲಸ ಮಾಡಿದ್ದರು. ಈ ಹಿಂದೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ನಾರಾಯಣ ಭಾಂಡಗೆ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದ ಎಸ್‌ಎಸ್‌ಕೆ ಸಮಾಜದ ಮುಖಂಡರೂ ಆಗಿರುವ ಇವರು ಬಿಜೆಪಿಯ ಒಬಿಸಿ ಘಟಕದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಒಂದು ಬಾರಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ರಾಜ್ಯ ಕಾರ್ಯದರ್ಶಿಯಾಗಿಯೂ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದಾರೆ. 6 ಬಾರಿ ರಾಜ್ಯದ ಚುನಾವಣೆಗೆ ಕೆಲಸಗಳಿಗೆ ನಿಯೋಜನೆ ಹೊಂದಿದ್ದರು. ಪಶ್ಚಿಮ ಬಂಗಾಳ, ಗೋವಾ, ತೆಲಂಗಾಣ , ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಚುನಾವಣಾ ಕಾರ್ಯಕ್ಕೆ ಬಿಜೆಪಿಯಿಂದ ನಿಯೋಜನೆ ಹೊಂದಿದ್ದರು. 1990 ದಶಕದಲ್ಲಿ ಅಯೋಧ್ಯೆ ಮತ್ತು ಈದ್ಗಾ ಮೈದಾನ ಹೋರಾಟದಲ್ಲಿ ಇವರು ಭಾಗವಹಿಸಿದ್ದರು.

ಜನಸಂಘದಿಂದ ಬಂದವರು

ನಾರಾಯಣಸಾ ಭಾಂಡಗೆ 1973ರಲ್ಲಿ ಜನಸಂಘ ಸೇರಿದ್ದರು. ಆಗಿನ ಪ್ರಧಾನಿ ಇಂದಿರಾ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಕ್ಕೆ 18 ದಿನ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿ ಬಂದಿದ್ದರು. ಕಾಶ್ಮೀರದಲ್ಲಿ ನಡೆದಿದ್ದ ತಿರಂಗಾ ಯಾತ್ರೆಯಲ್ಲೂ ಇವರು ಭಾಗಿಯಾಗಿದ್ದರು.

ಇದನ್ನೂ ಓದಿ: Rajya Sabha Election: ರಾಜ್ಯಸಭೆಯಲ್ಲಿ 3 ಸೀಟು ಗೆದ್ದು ಬೀಗಿದ ಕಾಂಗ್ರೆಸ್‌; 1 ಸ್ಥಾನ ಬಿಜೆಪಿಗೆ; ಮೈತ್ರಿಗೆ ಮುಖಭಂಗ!

ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿದೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನೂತನ ರಾಜ್ಯಸಭಾ ಸದಸ್ಯ ನಾರಾಯಣ ಸಾ ಬಾಂಡಗೆ, ಸಾಮಾನ್ಯ ಕಾರ್ಯಕರ್ತನಾದ ನನಗೆ ರಾಜ್ಯಸಭೆಗೆ ಅವಕಾಶ ಮಾಡಿಕೊಟ್ಟರು. ನಮ್ಮ‌ ಎಲ್ಲ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಅವಕಾಶ ನೀಡಿದ್ದಾರೆ. ತತ್ವ ಸಿದ್ಧಾಂತವನ್ನು ಗುರುತಿಸಿ ಅವಕಾಶ ನೀಡಿದ್ದಾರೆ ಎಂದು ಹೇಳಿದರು.

ಭಾಂಡಗೆ ಮನೆಯಲ್ಲಿ ಸಂಭ್ರಮ

ಬಾಗಲಕೋಟೆಯ ಲಕ್ಷ್ಮೀನಗರದಲ್ಲಿ ಇರುವ ನಾರಾಯಣಸಾ ಭಾಂಡಗೆ ನಿವಾಸದಲ್ಲಿ ಸಂಭ್ರಮ ಮನೆಮಾಡಿತ್ತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸಿಹಿ ಹಂಚಿ ಸಂಭ್ರಮಿಸಿದ ಕುಟುಂಬದವರು, ಬಂಧು ಮಿತ್ರರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Exit mobile version