Site icon Vistara News

Rajya Sabha Election: ನಾಳೆ ರಾಜ್ಯಸಭಾ ಕದನ; ಅಡ್ಡಮತದಾನ ಭೀತಿ, ಕೈಗೆ ಫಜೀತಿ! ಲೆಕ್ಕಾಚಾರ ಹೇಗೆ?

Rajya Sabha Election

Fearing cross-voting in Karnataka Rajya Sabha election, Congress MLAs to be put up in hotel

ಬೆಂಗಳೂರು: ರಾಜ್ಯದಲ್ಲಿ ರಾಜ್ಯಸಭಾ ಕದನ (Rajya Sabha Election) ಕುತೂಹಲ ಕೆರಳಿಸಿದೆ. “ನಂಬರ್‌ ಗೇಮ್‌” ಆರಂಭವಾಗಿರುವ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳೂ ತಂತ್ರಗಾರಿಕೆಯಲ್ಲಿ ತೊಡಗಿವೆ. ಒಟ್ಟು ನಾಲ್ಕು ಸ್ಥಾನಕ್ಕೆ ಐವರು ಅಭ್ಯರ್ಥಿಗಳು ಇರುವುದರಿಂದ ಚುನಾವಣಾ ಕಣ ರೋಚಕವಾಗಿದೆ. ಈ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಕಾಂಗ್ರೆಸ್‌ ತನ್ನ ಶಾಸಕರನ್ನು (Congress MLAs) ರೆಸಾರ್ಟ್‌ಗೆ (Resort Politics) ಶಿಫ್ಟ್‌ ಮಾಡಲು ಪ್ಲ್ಯಾನ್‌ ಮಾಡಿದೆ. ಈ ಸಂಬಂಧ ಈಗಾಗಲೇ ಸೂಚನೆಯನ್ನೂ ನೀಡಿದೆ.

ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮೂವರನ್ನು ಗೆಲ್ಲಿಸಿಕೊಂಡು ಬರಲು ಸ್ಪಷ್ಟ ಬಹುಮತ ಇತ್ತು. ಆದರೆ, ಭಾನುವಾರ ಶಾಸಕ ರಾಜವೆಂಕಟಪ್ಪ ನಾಯಕ ಅವರ ನಿಧನದಿಂದ ಈಗ ಕಾಂಗ್ರೆಸ್‌ ಸಂಖ್ಯಾಬಲ 134ಕ್ಕೆ ಇಳಿದಿದೆ. ಗೆಲ್ಲಲು 135 ಸೀಟುಗಳು ಬೇಕಿದೆ. ಇದು ಕೈಪಡೆ ಇಕ್ಕಟ್ಟಿಗೆ ಕಾರಣವಾಗಿದೆ. ಆದರೆ, ಪಕ್ಷೇತರ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ಹೇಳಿದ್ದರೂ ಅವರಿಗೆ ಈಗ ಡಿಮ್ಯಾಂಡ್‌ ಜಾಸ್ತಿ ಇದೆ.

ಮಂಗಳವಾರ ಬೆಳಗ್ಗೆ 9ರಿಂದ ಸಂಜೆ ನಾಲ್ಕು ಗಂಟೆಯವರೆಗೂ ವಿಧಾನಸೌಧದಲ್ಲಿ ಮತದಾನ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಾಂಗ್ರೆಸ್‌ಗೆ ತಲೆಬಿಸಿ ಇರುತ್ತಿರಲಿಲ್ಲ. ಆದರೆ, ಬಿಜೆಪಿ – ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕೆ ಇಳಿದಿದ್ದಾರೆ. ಹಾಗಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ.

ಕಾಂಗ್ರೆಸ್‌ನಿಂದ ಅಜಯ್ ಮಾಕೇನ್, ನಾಸಿರ್ ಹುಸೇನ್, ಚಂದ್ರಶೇಖರ್ ಕಣದಲ್ಲಿದ್ದಾರೆ. ಬಿಜೆಪಿಯಿಂದ ನಾರಾಯಣ್ ಸಾ ಬಾಂಡಗೆ ಕಣದಲ್ಲಿದ್ದಾರೆ. ಇಲ್ಲಿ ಬಿಜೆಪಿಯ ಹೆಚ್ಚುವರಿ ಮತಗಳು ಹಾಗೂ ಪಕ್ಷೇತರ ಮತಗಳ ಮೇಲೆ ಜೆಡಿಎಸ್‌ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಣ್ಣಿಟ್ಟಿದ್ದಾರೆ.

ಇಂದು ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್

ಕಾಂಗ್ರೆಸ್‌ನಿಂದ ಅಡ್ಡ ಮತದಾನವಾಗುವ ಸಾಧ್ಯತೆ ‌ಇರುವ ಹಿನ್ನೆಲೆಯಲ್ಲಿ ಆ ಪಕ್ಷದ ಎಲ್ಲ ಶಾಸಕರನ್ನು ಇಂದು ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗುತ್ತಿದೆ. ಅಲ್ಲಿಂದ ನೇರವಾಗಿ ಕರೆತಂದು ಮತದಾನ ಮಾಡಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ.

ದರ್ಶನ್‌ ಪುಟ್ಟಣ್ಣಯ್ಯ ಮತ ಕಾಂಗ್ರೆಸ್‌ ಮುಖ್ಯ

ಸುರುಪುರ ಶಾಸಕ ರಾಜವೆಂಕಟಪ್ಪ ನಾಯಕ ನಿಧನದಿಂದ ಕಾಂಗ್ರೆಸ್ ಶಾಸಕರ ಸಂಖ್ಯಾ ಬಲ 134ಕ್ಕೆ ಇಳಿಕೆಯಾಗಿರುವುದರಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಗೆದ್ದಿರುವ ದರ್ಶನ್ ಪುಟ್ಟಣ್ಣಯ್ಯ ಅವರ ಮತ ಬಹಳ ಮುಖ್ಯವಾಗಿದೆ. ಈಗಾಗಲೇ ಅವರು ತಮ್ಮ ಮತ ಕಾಂಗ್ರೆಸ್‌ಗೆ ಎಂದು ಹೇಳಿದ್ದಾರೆ. ಆದರೆ, ಒಬ್ಬ ಶಾಸಕರ ನಿಧನದಿಂದ ಈಗ ದರ್ಶನ್ ಪುಟ್ಟಣ್ಣಯ್ಯ‌ ಅವರಿಗೆ ಬೇಡಿಕೆ ಹೆಚ್ಚಿದೆ.

ಒಬ್ಬ ಅಭ್ಯರ್ಥಿ ಗೆಲ್ಲಲು 45 ಮತಗಳು ಅನಿವಾರ್ಯವಾಗಿವೆ. ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ಗೆಲ್ಲಲು ಕನಿಷ್ಠ 135 ಮತಗಳ ಅಗತ್ಯವಿದೆ. ಒಂದು ಮತದ ಕೊರತೆ ಎದುರಾಗಲಿರುವ ಹಿನ್ನೆಲೆಯಲ್ಲಿ ಪುಟ್ಟಣ್ಣಯ್ಯ ಅವರ ಮತ ಕಾಂಗ್ರೆಸ್‌ಗೆ ಬೇಕೇ ಬೇಕು.

ರೆಡ್ಡಿಗೆ ಕೆಲಸ ಮಾಡಿಕೊಟ್ಟಿರುವ ಡಿಕೆಶಿ

ಇತ್ತ ಜನಾರ್ದನ ರೆಡ್ಡಿ ಸೇರಿದಂತೆ ಪಕ್ಷೇತರರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಪರ್ಕ ಮಾಡಿದ್ದಾರೆ. ಒಟ್ಟು ನಾಲ್ಕು ಪಕ್ಷೇತರರ ಮತಗಳನ್ನೂ ಕಾಂಗ್ರೆಸ್‌ಗೆ ಹಾಕಿಸಿಕೊಳ್ಳಲು ತಂತ್ರಗಾರಿಕೆ ನಡೆಸಿದ್ದಾರೆ. ಶುಕ್ರವಾರ ವಿಧಾನಸಭೆಯಲ್ಲಿ ಜನಾರ್ದನ ರೆಡ್ಡಿಗೆ ನಗರಾಭಿವೃದ್ಧಿ ಇಲಾಖೆಯ ಕೆಲಸ ಮಾಡಿಕೊಟ್ಟು ಚುನಾವಣೆಯಲ್ಲಿ ತಮ್ಮ ಪರ ಇರುವಂತೆ ಡಿಕೆಶಿ ಹೇಳಿದ್ದಾರೆನ್ನಲಾಗಿದೆ.

ಇದನ್ನೂ ಓದಿ: Karnataka Weather : ಬೆಂಗಳೂರಲ್ಲಿ ಮುಂಜಾನೆ ಮಂಜು; ಹಲವೆಡೆ ಹಗುರ ಮಳೆ ಸಾಧ್ಯತೆ

ಯಾರು ಕೈಕೊಡುತ್ತಾರೆ? ಯಾರು ಕೈ ಹಿಡಿಯುತ್ತಾರೆ?

ಇತ್ತ ಜೆಡಿಎಸ್ – ಬಿಜೆಪಿ ಅಭ್ಯರ್ಥಿಗಳಿಂದಲೂ ಪಕ್ಷೇತರ ಅಭ್ಯರ್ಥಿಗಳನ್ನು ಸಂಪರ್ಕ ಮಾಡಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿಗೆ ಇನ್ನೂ ಐದು ಮತಗಳ ಕೊರತೆ ಇದೆ. ಹೀಗಾಗಿ ಪಕ್ಷೇತರ ಮತ ಸೆಳೆಯಲು ಮೈತ್ರಿ ಪಕ್ಷಗಳ ನಾಯಕರು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಕೊನೇ ಘಳಿಗೆಯಲ್ಲಿ ಯಾರು ಯಾರಿಗೆ ಕೈಕೊಡಲಿದ್ದಾರೆ? ಕೈ ಹಿಡಿಯಲಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ.

Exit mobile version