ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ಮಂಗಳವಾರ (ಫೆ. 27) ನಡೆಯಲಿರುವ ಚುನಾವಣೆ (Rajya Sabha Election) ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ (Janardhana Reddy) ಅವರು ಯೋಗೇಂದ್ರ ವಿಕ್ರಂ (Yogendra Vikram) ಅವರನ್ನು ಚುನಾವಣೆ ಏಜೆಂಟ್ ಆಗಿ ನೇಮಕ ಮಾಡಿದ್ದಾರೆ. ಇವರು ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತರಾಗಿದ್ದಾರೆ. ಹೀಗಾಗಿ ರೆಡ್ಡಿ ಮತ ಕಾಂಗ್ರೆಸ್‌ಗೆ ಖಚಿತ ಎಂದೇ ಹೇಳಲಾಗುತ್ತಿದೆ.
ಈ ಬಗ್ಗೆ ವಿಕ್ರಂ ಅವರು ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ಸೋಮವಾರ ಪತ್ರ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವ ಶಿವರಾಜ್ ತಂಗಡಗಿ ಉಪಸ್ಥಿತರಿದ್ದರು.
ರಾಜ್ಯಸಭಾ ಚುನಾವಣೆ (Rajya Sabha Election) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ತಂತ್ರಗಾರಿಕೆ ಜೋರಾಗಿದೆ. ಬಹುಮತ ಇರುವ ಕಾಂಗ್ರೆಸ್ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯನ್ನು ತಮ್ಮತ್ತ ಸೆಳೆದುಕೊಂಡಿದ್ದು, ಪಕ್ಷದ ಅಭ್ಯರ್ಥಿ ಪರ ಮತ ಹಾಕಿಸಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ರೆಡ್ಡಿ ಅವರು ಸಿಎಂ ನಿವಾಸ ಕಾವೇರಿಯಲ್ಲಿ ಸೋಮವಾರ ಭೇಟಿ ಮಾಡಿರುವುದು ಇದನ್ನು ಪುಷ್ಟೀಕರಿಸುತ್ತದೆ. ಅಲ್ಲದೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸಂಬಂಧಿಸಿ ರಾಜ್ಯಸಭಾ ಚುನಾವಣೆ ಏಜೆಂಟ್ ಆಗಿ ಯೋಗೇಂದ್ರ ವಿಕ್ರಂ ಅವರನ್ನು ನೇಮಕ ಮಾಡಲಾಗಿದೆ. ಇವರು ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಪತ್ರ ಕೊಡುವ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಶಿವರಾಜ್ ತಂಗಡಗಿ ಇರುವುದು ಈ ಅನುಮಾನವನ್ನು ಮತ್ತಷ್ಟು ದೃಢಪಡಿಸಿದೆ.
ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಜನಾರ್ದನ ರೆಡ್ಡಿ ಕೆಲಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಸಚಿವ ಶಿವರಾಜ್ ತಂಗಡಗಿ ಜತೆಗಿದ್ದರು.
ಈ ವರೆಗೂ ಜನಾರ್ದನ ರೆಡ್ಡಿ ಅವರು ಬಿಜೆಪಿ ಪರವಾಗಿಯೇ ಮಾತನಾಡುತ್ತಿದ್ದರು. ಅವರು ಬಿಜೆಪಿಗೆ ಇಲ್ಲವೇ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈಗ ಅವರು ಕಾಂಗ್ರೆಸ್ ಪಾಳೆಯದಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಕರೆತರುವಲ್ಲಿ, ಅವರ ಬೆಂಬಲ ಪಡೆಯುವಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ನಮಗೆ ನೀವು-ನಿಮಗೆ ನಾವು
ರೆಡ್ಡಿ ಪಕ್ಷೇತರ ಶಾಸಕರಾಗಿರುವ ಕಾರಣ ಅವರಿಗೆ ಇಂಥದ್ದೇ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ನಿಯಮ ಇಲ್ಲ. ಅಲ್ಲದೆ, ಅವರು ಪಕ್ಷೇತರರಾಗಿರುವುದರಿಂದ ಆಡಳಿತ ಪಕ್ಷದವರನ್ನು ಚೆನ್ನಾಗಿ ಇಟ್ಟುಕೊಂಡರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಅದಕ್ಕೆ ಹೆಚ್ಚಿನ ಅನುದಾನವನ್ನು ತರಬಹುದಾಗಿದೆ. ಇದನ್ನೇ ದಾಳವಾಗಿ ಬಳಸಿಕೊಂಡ ಡಿಸಿಎಂ ಡಿ.ಕೆ. ಶಿವಕುಮಾರ್ ಶುಕ್ರವಾರ ವಿಧಾನಸಭೆಯಲ್ಲಿ ರೆಡ್ಡಿ ಅವರ ಕೆಲಸವನ್ನು ಮಾಡಿಕೊಟ್ಟಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಸಹಕಾರ ಕೊಡುವೆ, ಪಕ್ಷಕ್ಕೆ ನಿಮ್ಮ ಸಹಕಾರ ಇರಲಿ ಎಂದು ಹೇಳಿದ್ದಾರೆನ್ನಲಾಗಿದೆ.
ಕೆಲಸ ಮಾಡಿಕೊಟ್ಟಿರುವ ಡಿಕೆಶಿ!
ಒಟ್ಟು ನಾಲ್ಕೂ ಪಕ್ಷೇತರರ ಮತಗಳನ್ನು ಸಹ ಕಾಂಗ್ರೆಸ್‌ಗೆ ಹಾಕಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ತಂತ್ರಗಾರಿಕೆ ನಡೆಸಿದ್ದಾರೆ. ಇದರ ಭಾಗವಾಗಿ ಶುಕ್ರವಾರ ವಿಧಾನಸಭೆಯಲ್ಲಿ ಜನಾರ್ದನ ರೆಡ್ಡಿಗೆ ನಗರಾಭಿವೃದ್ಧಿ ಇಲಾಖೆಯ ಕೆಲಸ ಮಾಡಿಕೊಟ್ಟು ಚುನಾವಣೆಯಲ್ಲಿ ತಮ್ಮ ಪರ ಇರುವಂತೆ ಡಿಕೆಶಿ ಹೇಳಿದ್ದಾರೆನ್ನಲಾಗಿದೆ. ಈಗ ಸೋಮವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ರೆಡ್ಡಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಪರೋಕ್ಷ ಸಂದೇಶವನ್ನು ರವಾನೆ ಮಾಡಲಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
ಯಾರು ಕೈಕೊಡುತ್ತಾರೆ? ಯಾರು ಕೈ ಹಿಡಿಯುತ್ತಾರೆ?
ಅಡ್ಡ ಮತದಾನದ ಭೀತಿಯೂ ಇರುವುದರಿಂದ ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲು ನಿರ್ಧಾರ ಮಾಡಿದೆ. ಅಲ್ಲಿಂದಲೇ ನೇರವಾಗಿ ಕರೆತಂದು ಮತದಾನವನ್ನು ಮಾಡಿಸಲಿದೆ. ಇತ್ತ ಜೆಡಿಎಸ್ – ಬಿಜೆಪಿ ಅಭ್ಯರ್ಥಿಗಳಿಂದಲೂ ಪಕ್ಷೇತರ ಅಭ್ಯರ್ಥಿಗಳನ್ನು ಸಂಪರ್ಕ ಮಾಡಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿಗೆ ಇನ್ನೂ ಐದು ಮತಗಳ ಕೊರತೆ ಇದೆ. ಹೀಗಾಗಿ ಪಕ್ಷೇತರ ಮತ ಸೆಳೆಯಲು ಮೈತ್ರಿ ಪಕ್ಷಗಳ ನಾಯಕರು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಕೊನೇ ಘಳಿಗೆಯಲ್ಲಿ ಯಾರು ಯಾರಿಗೆ ಕೈಕೊಡಲಿದ್ದಾರೆ? ಕೈ ಹಿಡಿಯಲಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ.
ಇದನ್ನೂ ಓದಿ: Rajya Sabha Election: ನಾಳೆ ರಾಜ್ಯಸಭಾ ಕದನ; ಅಡ್ಡಮತದಾನ ಭೀತಿ, ಕೈಗೆ ಫಜೀತಿ! ಲೆಕ್ಕಾಚಾರ ಹೇಗೆ?
ಇನ್ನೂ ತೀರ್ಮಾನ ಮಾಡಿಲ್ಲ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಐತಿಹಾಸಿಕ ಆನೆಗೊಂದಿ ಉತ್ಸವವನ್ನು ವೈಭವದಿಂದ ಆಚರಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಮಾರ್ಚ್ ತಿಂಗಳಲ್ಲಿ ವೈಭವದಿಂದ ಆಚರಿಸಲಾಗುತ್ತದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡಲು ಹೋಗಿದ್ದೆ. ರಾಜ್ಯಸಭಾ ಚುನಾವಣೆಗೆ ಮತ ನೀಡುವಂತೆ ಎಲ್ಲರೂ ಮನವಿ ಮಾಡಿದ್ದಾರೆ. ಸಿಎಂ, ಡಿಸಿಎಂ ಆದಿಯಾಗಿ ಎಲ್ಲ ಪಕ್ಷದವರೂ ಮನವಿ ಮಾಡಿದ್ದಾರೆ. ನಾನು ಇನ್ನೂ ಈ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.