Site icon Vistara News

Rajyasabha Election : ಕಾಂಗ್ರೆಸ್‌ ಶಾಸಕರು ಹೋಟೆಲ್‌ನಲ್ಲೇ ನೈಟ್‌ ಸ್ಟೇ, ಮತದಾನಕ್ಕೂ ತರಬೇತಿ

Rajyasabha Election Congress

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗಾಗಿ ನಡೆಯಲಿರುವ ಚುನಾವಣೆಯ (Rajyasabha Election) ಮತದಾನ ಮಂಗಳವಾರ ನಡೆಯಲಿದೆ. ನಾಲ್ಕು ಸ್ಥಾನಗಳಿಗೆ ಐವರು ಕಣದಲ್ಲಿರುವುದರಿಂದ ಮತದಾನ ಕುತೂಹಲ ಮೂಡಿಸಿದೆ. ಮತದಾನ ಬೆಳಗ್ಗೆ 10 ಗಂಟೆಯಿಂದ ವಿಧಾನಸೌಧದಲ್ಲಿ ಆರಂಭವಾಗಲಿದೆ. ಈ ನಡುವೆ, ಕಾಂಗ್ರೆಸ್‌ನ ಶಾಸಕಾಂಗ ಪಕ್ಷ ಸಭೆ (Congress Legislative party Meeting) ಮಾನ್ಯತಾ ಟೆಕ್ ಪಾರ್ಕ್ ನ ಹಿಲ್ಟನ್ ಹೊಟೇಲ್‌ನಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆದಿಯಾಗಿ ಎಲ್ಲ ಶಾಸಕರು ರಾತ್ರಿ ಹೋಟೆಲ್‌ನಲ್ಲೇ ಉಳಿದುಕೊಳ್ಳಲಿದ್ದಾರೆ. ಇಲ್ಲಿ ರಾಜ್ಯಸಭಾ ಚುನಾವಣೆಗೆ ಮತ ಹಾಕುವ ವಿಧಾನವನ್ನೂ ತರಬೇತಿ ಮೂಲಕ (Voting Training) ತಿಳಿಸಲಾಗಿದೆ.

ಶಾಸಕಾಂಗ ಪಕ್ಷ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸೇರಿದಂತೆ ಎಲ್ಲ ಶಾಸಕರು ಭಾಗವಹಿಸಿದ್ದಾರೆ. ಕಾಂಗ್ರೆಸ್‌ ಬೆಂಬಲ ನೀಡಿರುವ ಪಕ್ಷೇತರ ಶಾಸಕರಿಗೂ ಆಹ್ವಾನ ನೀಡಲಾಗಿದೆ. ರಾಜ್ಯ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಅವರು ಕೂಡಾ ಆಗಮಿಸಿದ್ದಾರೆ. ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳು ಕೂಡಾ ಭಾಗಿಯಾಗಿದ್ದಾರೆ.

ಬೆಳಗ್ಗೆ ಇಲ್ಲಿಂದಲೇ ವಿಧಾನಸಭೆಗೆ

ಶಾಸಕಾಂಗ ಪಕ್ಷ ಸಭೆಗೆ ಆಗಮಿಸಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ನಮಗೆ ಯಾವುದೇ ಅಡ್ಡ ಮತದಾನದ ಆತಂಕ ಇಲ್ಲ. ಆದರೆ, ಎಲ್ಲರೂ ಸರಿಯಾಗಿ ಮತದಾನ ಮಾಡಬೇಕು ಎಂಬ ಕಾಳಜಿ ಇದೆ ಎಂದರು.

ಸಿಎಂ ಆದಿಯಾಗಿ ಎಲ್ಲರೂ ರಾತ್ರಿ ಹೋಟೆಲ್‌ನಲ್ಲೇ ಉಳಿದು ಬೆಳಗ್ಗೆ ಹೋಟೆಲ್‌ನಿಂದಲೇ ವಿಧಾನಸೌಧಕ್ಕೆ ಹೋಗುತ್ತಿದ್ದೇವೆ ಎಂದು ಡಿಸಿಎಂ ತಿಳಿಸಿದರು. ಶಾಸಕರು ಕೂಡಾ ರಾತ್ರಿ ಹೋಟೆಲ್‌ನಲ್ಲಿ ಉಳಿಯುವ ರೀತಿಯಲ್ಲಿ ಲಗೇಜ್‌ ಜತೆಗೆ ಆಗಮಿಸಿದ್ದಾರೆ.

ಮತದಾನ ಪ್ರಕ್ರಿಯೆ ಕುರಿತು ಶಾಸಕರಿಗೆ ಪಾಠ

ರಾಜ್ಯಸಭಾ ಚುನಾವಣೆಯಲ್ಲಿ ಹೇಗೆ ಮತ ಹಾಕಬೇಕು ಎಂಬ ಬಗ್ಗೆ ತರಬೇತಿಯನ್ನು ಕೂಡಾ ನೀಡಲಾಗಿದೆ. ಬ್ಯಾಲೆಟ್ ಪೇಪರ್ ಮೇಲೆ ನೇರಳೆ ಬಣ್ಣದ ಪೆನ್ನಿನಿಂದಲೇ ಬರೆಯಬೇಕು, ರೈಟ್ ಮಾರ್ಕ್ ಮುಂದೆ ಪ್ರಾಶಸ್ತ್ಯದ ಅಂಕಿ ನಮೂದಿಸಬೇಕು ಮತ್ತು ಚುನಾವಣಾ ಏಜೆಂಟ್‌ಗೆ ತಾವು ಮತ ಹಾಕಿದ್ದನ್ನು ತೋರಿಸಬೇಕು ಎಂದು ಸೂಚಿಸಲಾಗಿದೆ.

ಮತಗಳು ಅನೂರ್ಜಿತವಾಗುವುದನ್ನು ತಪ್ಪಿಸಲು ಕಾಂಗ್ರೆಸ್‌ ಶಾಸಕರಿಗೆ ಅಣಕು ಚುನಾವಣಾ ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ. ಅದಕ್ಕಾಗಿಯೇ ಮೂರು ಬೂತ್ ಗಳನ್ನ ಇಡಲಾಗಿದ್ದು, ಯಾವ ರೀತಿ ಮತ ಚಲಾವಣೆ ಮಾಡಬೇಕು? ರಾಜ್ಯಸಭಾ ಚುನಾವಣೆಗೂ ಬೇರೆ ಚುನಾವಣೆಗೂ ಇರುವ ವ್ಯತ್ಯಾಸವೇನು? ಮತಪತ್ರ ಯಾವ ಮಾದರಿಯಲ್ಲಿರುತ್ತದೆ? ಅಭ್ಯರ್ಥಿಯ ಹೆಸರಿನ ಮುಂದೆ ಯಾವ ರೀತಿ ಗುರುತು ಹಾಕಬೇಕು ಎಂಬುದರ ಬಗ್ಗೆ ಶಾಸಕರಿಗೆ ತರಬೇತಿ ನೀಡಲಾಗುತ್ತಿದೆ.

ಇದನ್ನೂ ಓದಿ: Rajya Sabha Election: ನಾಳೆ ರಾಜ್ಯಸಭಾ ಚುನಾವಣೆ; ಮತದಾನ ಹೇಗೆ? ಯಾವ ಮತ ಅಸಿಂಧು ಆಗುತ್ತೆ?

ಮತದಾನಕ್ಕೆ ಮೂರು ತಂಡಗಳ ರಚನೆ

ಮತದಾನಕ್ಕೆ ಶಾಸಕರ ಮೂರು ತಂಡಗಳನ್ನು ರಚಿಸಲಾಗಿದೆ. ಮೂರು ಅಭ್ಯರ್ಥಿಗಳ ಪೈಕಿ ಯಾವ ಶಾಸಕರು ಯಾರಿಗೆ ಮತ ಹಾಕಬೇಕು ಎಂದು ಮತ ವಿಭಜನೆ ಮಾಡಲು ನಿರ್ಧರಿಸಲಾಗಿದೆ. ಮೊದಲ ಪ್ರಾಶಸ್ತ್ಯದ ಮತಗಳನ್ನು ಯಾರಿಗೆ ಹಾಕಬೇಕೆಂಬ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಕಾಂಗ್ರೆಸ್‌ ಚುನಾವಣಾ ಏಜೆಂಟ್‌ ಆಗಿ ಡಿ.ಕೆ. ಶಿವಕುಮಾರ್‌

ಚುನಾವಣೆಯ ವಿಚಾರದಲ್ಲಿ ಹೈ ಅಲರ್ಟ್‌ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ತಾನೇ ಸ್ವತಃ ಕಾಂಗ್ರೆಸ್ ಪಕ್ಷದ ಚುನಾವಣಾ ಏಜೆಂಟ್ ಆಗಲಿದ್ದಾರೆ. ಅದರ ಜತೆಗೆ ಚುನಾವಣೆ ಹಿನ್ನೆಲೆಯಲ್ಲಿ ಮೂವರು ಕೈ ಅಭ್ಯರ್ಥಿಗಳಿಗೆ ಪೋಲಿಂಗ್ ಬೂತ್ ಏಜೆಂಟ್ ಗಳಿಗೆ ಜವಾಬ್ದಾರಿ ನೀಡಲಾಗಿದೆ.

ಅಜಯ್ ಮಾಕೆನ್ ಅವರಿಗೆ ಪೋಲಿಂಗ್ ಏಜೆಂಟ್ ಆಗಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್
ಸೈಯದ್ ಹುಸೇನ್ ಅವರಿಗೆ ಪೋಲಿಂಗ್ ಏಜೆಂಟ್‌ ಆಗಿ ಪರಿಷತ್ ಸದಸ್ಯ ಯು.ಬಿ ವೆಂಕಟೇಶ್
ಜಿ.ಸಿ ಚಂದ್ರಶೇಖರ್ ಅವರಿಗೆ ಪೋಲಿಂಗ್ ಏಜೆಂಟ್ ಆಗಿ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಅವರನ್ನು ನೇಮಿಸಲಾಗಿದೆ.

ಈ ನಡುವೆ ಬಿಜೆಪಿ ಕೂಡಾ ಚುನಾವಣಾ ಏಜೆಂಟ್‌ಗಳನ್ನು ನೇಮಿಸಿದೆ. ಶಾಸಕರಾದ ಸುನಿಲ್ ಕುಮಾರ್ ಹಾಗೂ ಅರವಿಂದ್ ಬೆಲ್ಲದ್ ಪಕ್ಷದಿಂದ ಏಜೆಂಟ್‌ಗಳಾಗಲಿದ್ದಾರೆ. ಶಾಸಕರು ಮತ ಹಾಕುವಾಗ, ಏಜೆಂಟ್ ಗೆ ಮತ ಪತ್ರ ಪ್ರದರ್ಶನ ಮಾಡಬೇಕು ಎಂಬ ನಿಯಮವಿದೆ.

Exit mobile version