ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10ರಂದು ನಡೆಯಲಿರುವ ಚುನಾವಣೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಯಗಳಿಸಿದ್ದಾರೆ. ಹೌದು. ರಾಜ್ಯಸಭೆ ಚುನಾವಣೆ (Rajyasabha Election) ನಡೆಯುವ ಮೊದಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ತಂತ್ರ ಪ್ರತಿತಂತ್ರದಲ್ಲಿ ಸಿದ್ದರಾಮಯ್ಯ ಕೈ ಮೇಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಹಿಂಪಡೆಯದಂತೆ ತಡೆಯಲು ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ರಾಜ್ಯಸಭೆಗೆ ಕರ್ನಾಟಕದಿಂದ ನಾಲ್ಕು ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಈಗಾಗಲೆ ಕಾಂಗ್ರೆಸ್‌ನಿಂದ ಜೈರಾಮ್ ರಮೇಶ್, ಬಿಜೆಪಿಯಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಚಿತ್ರನಟ ಜಗ್ಗೇಶ್ ನಾಮಪತ್ರ ಸಲ್ಲಿಸಿದ್ದಾರೆ. ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಸಂಖ್ಯಾಬಲದ ಆಧಾರದಲ್ಲಿ ಈ ಮೂವರ ಗೆಲುವು ಖಚಿತವಾಗಿದೆ. ನಾಲ್ಕನೇ ಸ್ಥಾನಕ್ಕೆ ಬಿಜೆಪಿಯಿಂದ ಲೆಹರ್ ಸಿಂಗ್ ಸಿರೋಯಾ, ಜೆಡಿಎಸ್‌ನಿಂದ ಉದ್ಯಮಿ ಕುಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್‌ನಿಂದ ಮನ್ಸೂರ್ ಖಾನ್ ನಾಮಪತ್ರ ಸಲ್ಲಿಸಿದ್ದಾರೆ. ಶುಕ್ರವಾರ ಮಧ್ಯಾಹ್ನದವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿತ್ತು. ಯಾರೂ ಹಿಂಪಡೆಯದ ಕಾರಣ, ಎಲ್ಲರೂ ಕಣದಲ್ಲಿರಲಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರು ಘೊಷಣೆ ಮಾಡಿದ್ದಾರೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಕೇಂದ್ರ ಸಚಿವ ಕಿಶನ್ ರೆಡ್ಡಿ ಉಸ್ತುವಾರಿ: ಎಲ್ಲರ ಅರ್ಜಿ ಊರ್ಜಿತ
ರಾಜ್ಯಸಭೆಯಿಂದ ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ 45 ಮತಗಳ ಅವಶ್ಯಕತೆ ಇದೆ. ಆಡಳಿತ ಪಕ್ಷ ಬಿಜೆಪಿ ಬಳಿ ಸ್ಪೀಕರ್ ಸೇರಿ 120 ಮತಗಳಿವೆ. ಕಾಂಗ್ರೆಸ್ ಬಳಿ 69 ಮತಗಳಲ್ಲಿ ಒಬ್ಬ ಅಭ್ಯರ್ಥಿ ನಿರಾತಂಕವಾಗಿ ಆಯ್ಕೆ ಆಗಬಹುದು. ನಂತರ 24 ಮತಗಳು ಉಳಿಯುತ್ತವೆ. ಇನ್ನೂ 21 ಮತಗಳ ಕೊರತೆ ಆಗುತ್ತದೆ. ಜೆಡಿಎಸ್ ಬಳಿ 32 ಮತಗಳಿದ್ದು, ಉಳಿದ ಮತಗಳಿಗೆ ಅನ್ಯ ಪಕ್ಷವನ್ನು ಅವಲಂಬಿಸಲೇಬೇಕು.
ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರೇ ಹೇಳುವ ಪ್ರಕಾರ, “ದೆಹಲಿ ಮಟ್ಟದಲ್ಲೆ ದೇವೇಗೌಡರು ಇದಕ್ಕೆಲ್ಲ ಮಾತುಕತೆ ನಡೆಸಿದ್ದರು. ಕುಪೇಂದ್ರ ರೆಡ್ಡಿ ಅವರಿಗೆ ಕಾಂಗ್ರೆಸ್‌ನ ಹೆಚ್ಚುವರಿ ಮತಗಳು ಲಭಿಸುವಂತೆ ನಿರ್ಧರಿಸಲಾಗಿತ್ತು”. ಈ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಸಮ್ಮತಿಸಿದ್ದರು. ಆದರೆ ಸಿದ್ದರಾಮಯ್ಯ ನೇರವಾಗಿ ಹೈಕಮಾಂಡ್ ಸಂಪರ್ಕಿಸಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯಶಸ್ವಿಯಾದರು.
ಅಭ್ಯರ್ಥಿ ಹಾಕಿದರೇನು? ಮತ್ತೆ ನಾಮಪತ್ರ ಹಿಂಪಡೆಯುವಂತೆ ಮಾಡಿದರಾಯಿತು ಎಂದು ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪೂರ್ತಿ ಹೋರಾಟ ನಡೆಸಿದರು. ಮದ್ಯಾಹ್ನದ ವೇಳೆಗೆ ನಾಮಪತ್ರ ಹಿಂಪಡೆಯಲು ಹೈಕಮಾಂಡ್ ಒಪ್ಪಲೇ ಇಲ್ಲ. ಇಷ್ಟೊತ್ತಿಗಾಗಲೆ ಸಿದ್ದರಾಮಯ್ಯ, ಮುಖ್ಯ ಸಚೇತಕರ ಮೂಲಕ ವಿಪ್ ಹೊರಡಿಸಿದ್ದಾರೆ. ಜೂನ್ 10ರಂದು ನಡೆಯುವ ಚುನಾವಣೆಗೆ ಒಂದು ವಾರ ಮೊದಲೇ ವಿಪ್ ಹೊರಡಿಸಿ ಹೈಕಮಾಂಡ್ ಮೇಲೆಯೇ ಒತ್ತಡ ತಂತ್ರ ಅನುಸರಿಸಿದ್ದಾರೆ. ಜೂನ್ ಒಂಭತ್ತರಂದು ಶಾಸಕಾಂಗ ಪಕ್ಷದ ಸಭೆಯನ್ನೂ ಸಿದ್ದರಾಮಯ್ಯ ಆಹ್ವಾನಿಸಿದ್ದಾರೆ.
ಈ ಎಲ್ಲ ಲೆಕ್ಕಾಚಾರದಲ್ಲಿ ನೋಡಿದರೆ ಸಿದ್ದರಾಮಯ್ಯ ಗೆದ್ದಿದ್ದಾರೆ. ಡಿಕೆಶಿ, ಖರ್ಗೆ ಸೇರಿ ಘಟಾನುಘಟಿಗಳ ಪ್ರಯತ್ನಕ್ಕೆ ತಣ್ಣೀರೆರೆಚಿದ್ದಾರೆ. ಜೆಡಿಎಸ್ ಜತೆಗಿನ ತಮ್ಮ ದ್ವೇಷವನ್ನು ಸಾಧಿಸಿಕೊಂಡಿದ್ದಾರೆ. ಆದರೆ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ಅಷ್ಟು ಸುಲಭದ ಮಾತಾಗಿಲ್ಲ. ಗಣಿತದ ಲೆಕ್ಕಾಚಾರದ ಪ್ರಕಾರ, ಮೂರೂ ಅಭ್ಯರ್ಥಿಗಳು ತಂತಮ್ಮ ಪಕ್ಷದ ಮತಗಳನ್ನು ಗಳಿಸಿದರೆ ಬಿಜೆಪಿಯೇ ಗೆಲ್ಲುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕೆಂದರೆ ಜೆಡಿಎಸ್ ಮತಗಳನ್ನು ಪಡೆಯಲೇಬೇಕು. ಇದರಲ್ಲಿ ಮುಖ್ಯ ಅಂಶವೇನೆಂದರೆ ಜೆಡಿಎಸ್‌ನ ಅನೇಕ ಶಾಸಕರು ವಿಪ್ ಉಲ್ಲಂಘಿಸುವ ಸಾಧ್ಯತೆ ಇದೆ. ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕೆಂದರೆ ಕಾಂಗ್ರೆಸ್ ಮತಗಳೂ ಅತ್ಯಗತ್ಯ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ವಿಪ್ ಉಲ್ಲಂಘಿಸಿ ಜೆಡಿಎಸ್‌ಗೆ ಮತ ಚಲಾವಣೆ ಮಾಡುವ ಸಾಧ್ಯತೆ ಅತ್ಯಂತ ಕಡಿಮೆ. ಹೀಗಾಗಿ ಮೂವರಲ್ಲಿ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಸಿರೋಯಾ ಗೆಲ್ಲುವುದು ಬಹುತೇಕ ಖಚಿತ ಎಂದು ಲೆಕ್ಕಾಚಾರ ಹೇಳುತ್ತದೆ. ತೀರಾ ಅನಿರೀಕ್ಷಿತ ವಿಚಾರಗಳು ಘಟಿಸಿದರೆ ಮಾತ್ರವೇ ಸಿದ್ದರಾಮಯ್ಯ ಅವರು ಕಣಕ್ಕಿಳಿಸಿರುವ ಅಭ್ಯರ್ಥಿ ಚುನಾವಣೆಯಲ್ಲಿ ಜಯಿಸುತ್ತಾರೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ದೇಶದ ವಿತ್ತ ಸಚಿವೆಗಿಂತ JDS ಅಭ್ಯರ್ಥಿ 230 ಪಟ್ಟು ಶ್ರೀಮಂತ!