Site icon Vistara News

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

Rajyasabha Elections 42 Congress MLAs contacted by JDS candidate says DK Shivakumar

ಬೆಂಗಳೂರು: ರಾಜ್ಯಸಭಾ ಚುನಾವಣೆ (Rajya sabha Election) ಸಂಬಂಧ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಶಾಸಕರು ಮತ ಚಲಾವಣೆ ಮಾಡುತ್ತಿದ್ದಾರೆ. ಆದರೆ, ಇರುವ ನಾಲ್ಕು ಸ್ಥಾನಕ್ಕೆ ಐದನೇ ಅಭ್ಯರ್ಥಿಯನ್ನು ಬಿಜೆಪಿ-ಜೆಡಿಎಸ್‌ ಕಣಕ್ಕಿಳಿಸಿರುವುದರಿಂದ ಅಡ್ಡಮತದಾನದ ಭೀತಿ ಎದುರಾಗಿದೆ. ಹೀಗಾಗಿ ಆಡಳಿತ ಪಕ್ಷ ಕಾಂಗ್ರೆಸ್‌ ಅಲರ್ಟ್‌ ಆಗಿದ್ದು, ಸೋಮವಾರ ಸಂಜೆಯೇ ರೆಸಾರ್ಟ್‌ಗೆ ಶಿಫ್ಟ್‌ ಆಗಿತ್ತು. ಆದರೆ, ಈಗ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಕುದುರೆ ವ್ಯಾಪಾರಕ್ಕೆ ಇಳಿಯಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ. ಜತೆಗೆ ಐಟಿ, ಸಿಬಿಐ ಹೆಸರಲ್ಲಿ ಬೆದರಿಕೆಯನ್ನು ಹಾಕಲಾಗುತ್ತಿದೆ ಎಂಬ ಆರೋಪವನ್ನು ಮಾಡಲಾಗಿದೆ. ಅಲ್ಲದೆ, ತಮ್ಮ ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದು, ನಮ್ಮ 42 ಶಾಸಕರನ್ನು ಸಂಪರ್ಕ ಮಾಡಲಾಗಿದೆ. ಆದರೆ, ಎಲ್ಲರೂ ನಮ್ಮ ಜತೆಗೇ ಇದ್ದಾರೆ ಹೀಗಾಗಿ ನಮ್ಮ ಪಕ್ಷದ ಮೂರೂ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಟಿ, ಸಿಬಿಐ ಭಯ ಹುಟ್ಟಿಸುತ್ತಿದ್ದಾರೆ: ರಿಜ್ವಾನ್‌ ಅರ್ಷದ್

ಮೈತ್ರಿ ಅಭ್ಯರ್ಥಿ ಪರವಾಗಿ ಮತ ಚಲಾವಣೆ ಮಾಡುವಂತೆ ರಾತ್ರಿ ನಮ್ಮ ಶಾಸಕರನ್ನು ಸಂಪರ್ಕ ಮಾಡಿದ್ದಾರೆ.‌ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕುಪೇಂದ್ರ ರೆಡ್ಡಿ ಕರೆ ಮಾಡಿ ಮಾತನಾಡಿದ್ದಾರೆ. ವೋಟ್ ಹಾಕದಿದ್ದರೆ ಇಡಿ, ಐಟಿ, ಸಿಬಿಐ ಎಂಟ್ರಿ ಆಗುತ್ತದೆ ಅಂತ ಭಯ ಹುಟ್ಟಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಪೋಲಿಂಗ್ ಬೂತ್ ಏಜೆಂಟ್ ಆಗಿರುವ ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನು ನಮ್ಮ ಶಾಸಕರೇ ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ. ಈ ಬೆದರಿಕೆಗೆ ಯಾರೂ ಸಹ ಸೊಪ್ಪು ಹಾಕಿಲ್ಲ. ಇವರಿಗೆ ಆತ್ಮ ಅನ್ನೋದೇ ಇಲ್ಲ. ಇನ್ನು ಆತ್ಮಸಾಕ್ಷಿ ಮತ ಎಲ್ಲಿದೆ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ.

Rajyasabha Election : ಗೆಲ್ಲುವ ವಿಶ್ವಾಸ ಇಲ್ಲದೆ ಇದ್ರೆ ನಾನು ನಿಲ್ತಿದ್ನಾ?; ಕುಪೇಂದ್ರ ರೆಡ್ಡಿ

ಎನ್‌ಡಿಎ ಅಭ್ಯರ್ಥಿಯಾಗಿರುವ ಕುಪೇಂದ್ರ ರೆಡ್ಡಿ ಅವರು ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಗೆಲುವಿನ ವಿಶ್ವಾಸವಿಲ್ಲದೆ ನಾನು ಕಣಕ್ಕೆ ಇಳಿಯುತ್ತೀನಾ? ನನಗೆ ಎಲ್ಲ ಪಕ್ಷಗಳಲ್ಲೂ ಮಿತ್ರರಿದ್ದಾರೆ. ಮೈತ್ರಿ ಶಾಸಕರು ಮತ ಹಾಕಿದ ಬಳಿಕ ಕಡಿಮೆ ಬೀಳುವ ಮತಗಳನ್ನು ಪಡೆಯುವ ಪ್ರಯತ್ನ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದರು.

ʻʻನಾನೊಬ್ಬ ಎನ್‌ಡಿಎ ಅಭ್ಯರ್ಥಿ. ಇಂದು ನಮ್ಮ‌ ಕೈಯಲ್ಲಾದ ಒಂದು ಪ್ರಯತ್ನ ಮಾಡಿದ್ದೇನೆ. ಫಲ ಕೊಡಬಹುದು. ವಿಶ್ವಾಸ ಮತ ಕೇಳಿದ್ದೇನೆ. ಕೊಂಡುಕೊಳ್ಳುವ ಕೆಲಸ ಮಾಡಿಲ್ಲʼʼ ಎಂದು ಹೇಳಿದರು ಕುಪೇಂದ್ರ ರೆಡ್ಡಿ.

ನಾನು ಆಮಿಷ ಒಡ್ಡಿದ್ದೇನೆ ಎಂದು ದೂರು ಕೊಟ್ಟು ಎಫ್‌ಐಆರ್‌ ಹಾಕಿಸುವ ಮೂಲಕ ಕಾಂಗ್ರೆಸ್‌ ಹೊಸ ಪ್ರಯತ್ನ ನಡೆಸಿದೆ. ಅವರ ಸರ್ಕಾರ ಇರುವುದರಿಂದ ಅವರೇ ಮತಗಳನ್ನು ಕೊಂಡುಕೊಳ್ಳಬಹುದು. ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಕೇಳುವ ಕೆಲಸ ಮಾಡಿದ್ದೇನೆ. ಅವರ ಪಕ್ಷ, ಇವರ ಪಕ್ಷ ಅಂತಲ್ಲ. ಎಲ್ಲರಲ್ಲೂ ಮತ ಕೇಳಿದ್ದೇನೆ ಎಂದು ಕುಪೇಂದ್ರ ರೆಡ್ಡಿ ಹೇಳಿದರು.

ಕಾಂಗ್ರೆಸ್‌ ದೂರು ನೀಡಿರುವ ಬಗ್ಗೆ ಮಾತನಾಡಿರುವ ಅವರು, ಈ ರೀತಿ ದೂರು ಕೊಡುವುದು ಇದುವರೆಗೆ ಇರಲಿಲ್ಲ. ಈಗ ಕಾಂಗ್ರೆಸ್‌ನವರು ಹೊಸ ಸಿಸ್ಟಮ್ ಮಾಡಿದ್ದಾರೆ. ಅವರು ಒಂದು ವೇಳೆ ದೂರು ಕೊಡುವುದಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಿ, ಅವರಿಂದ ಅನುಮತಿ ಪಡೆದು, ಮಾಜಿಸ್ಟ್ರೇಟ್ ಅನುಮತಿ ಪಡೆದು ಕೇಸ್ ರಿಜಿಸ್ಟರ್ ‌ ಮಾಡಬೇಕಿತ್ತು. ಆದರೆ, ನೇರವಾಗಿ FIR ಹಾಕಿದ್ದಾರೆ. ಇದರಿಂದ ನನಗೂ ಮಾನನಷ್ಟ ಮೊಕದ್ದಮೆ ಹಾಕಲು ಅವಕಾಶ ಉಳಿಸಿದ್ದಾರೆ ಎಂದು ಹೇಳಿದರು ಕುಪೇಂದ್ರ ರೆಡ್ಡಿ.

ಇದನ್ನೂ ಓದಿ: Rajya Sabha Election: ಮೂರು ಪಕ್ಷಗಳಲ್ಲಿ ವಿಪ್‌ ಜಾರಿ; ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್

ಕುಪೇಂದ್ರ ರೆಡ್ಡಿನೇ ಗೆಲ್ಲೋದು ಎಂದ ಜಿ.ಟಿ. ದೇವೇಗೌಡ

ವಿಧಾನಸೌಧದ ಪಡಸಾಲೆಯಲ್ಲಿ ಮಾತನಾಡಿದ ಜೆಡಿಎಸ್‌ ಶಾಸಕ ಜಿ.ಟಿ ದೇವೇ ಗೌಡ ಅವರು, ನಮ್ಮ ಅಭ್ಯರ್ಥಿ ಗೆಲ್ತಾರೆ. ಕುಪೇಂದ್ರ ರೆಡ್ಡಿ ಅವರು ಅವರು ಪಕ್ಷಾತೀತ ಅಭ್ಯರ್ಥಿ. ಅನುಭವಿ ರಾಜಕಾರಣಿಯನ್ನು ಅಭ್ಯರ್ಥಿ ಮಾಡಿದ್ದೇವೆ.. ಅವರಿಗೆ ಬೇರೆ ಬೇರೆ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ಅವರು ಗೆಲ್ತಾರೆ ಎಂಬ ವಿಶ್ವಾಸವಿದೆʼʼ ಎಂದು ಹೇಳಿದರು.

Exit mobile version