Site icon Vistara News

Ram Janmabhoomi: ಅಯೋಧ್ಯೆ ಹೋರಾಟಗಾರರ ಬಂಧನ ಕಾಕತಾಳೀಯವಷ್ಟೇ: ಪರಮೇಶ್ವರ್

DR G Parameshwar

ಬೆಂಗಳೂರು: ರಾಮ ಜನ್ಮಭೂಮಿ (Ram Janmabhoomi) ಹೋರಾಟಕ್ಕೆ ಸಂಬಂಧಪಟ್ಟಂತೆ 31 ವರ್ಷದ ಹಳೇ ಕೇಸ್‌ನಲ್ಲಿ ಬಂಧನ ಮಾಡಲಾಗಿರುವುದು ಕಾನೂನು ಪ್ರಕ್ರಿಯೆ ಮಾತ್ರವಾಗಿದೆ. ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಬಂಧನ ಆಗಿದ್ದು ಕಾಕತಾಳೀಯ ಅಷ್ಟೇ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home Minister Dr G Parameshwara) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಈ ಹಿಂದೆ ಬಿಜೆಪಿಯವರು ಸರ್ಕಾರ ನಡೆಸಿದ್ದಾರೆ. ಬಿ.ಎಸ್.‌ ಯಡಿಯೂರಪ್ಪ ಅವರೂ ಸರ್ಕಾರ ನಡೆಸಿದ್ದಾರೆ. ಅವರಿಗೆ ಕಾನೂನು ಪ್ರಕ್ರಿಯೆಗಳು ಗೊತ್ತಿರುತ್ತದೆ. ಈಗ ನಡೆಯುತ್ತಿರುವುದು ಹಳೇ ಕೇಸ್‌ಗಳ ಕ್ಲಿಯರಿಂಗ್‌ ಆಗಿದೆ. ಇದೊಂದೇ ಕೇಸ್‌ ಎಂದು ನಾವು ನಿರ್ದಿಷ್ಟವಾಗಿ ಪರಿಗಣಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

Ram Janmabhoomi Case reopened after 31 years Search for Ayodhya activists in Hubballi

ಎಲ್ಲ ಕೇಸ್‌ಗಳನ್ನೂ ಪರಾಮರ್ಶೆ ಮಾಡುವಾಗ ಇದೂ ಆಗಿದೆ. ಸುಮ್ಮನೆ ಇದರಲ್ಲಿ ರಾಜಕೀಯ ಮಾಡಬಾರದು. ರಾಜಕೀಯ ಮಾಡುವ ಉದ್ದೇಶದಿಂದ ಟೀಕೆ ಮಾಡಬಾರದು. ಈ ನೆಲದ ಕಾನೂನಿನ ಪ್ರಕಾರ ಮಾಡಿದ್ದಾರೆ. ಇದು ಬಿಟ್ಟು ಬೇರೆ ಕೇಸ್‌ಗಳಲ್ಲಿ ಬಂಧನ ಆದವರು ಹಿಂದುಗಳಲ್ವಾ? ಅವರಿಗೊಂದು ನ್ಯಾಯ? ಇವರಿಗೊಂದು ನ್ಯಾಯವಾ? ಕಾನೂನು ಪ್ರಕಾರ ಏನು ಆಗುತ್ತದೆಯೋ ಅದು ಆಗುತ್ತದೆ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

ಇದು ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಹಳೆಯ ಕೇಸ್ ಅನ್ನು ರಿವ್ಯೂ ಮಾಡುತ್ತಿದ್ದೇವೆ. ಈ ಕಡೆಯಾದರೂ ನ್ಯಾಯ ಆಗಬೇಕು ಅಥವಾ ಆ ಕಡೆಯಾದರೂ ಆಗಬೇಕು. ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹೀಗಾಗುತ್ತಿರುವುದು ಕಾಕತಾಳೀಯ ಅಷ್ಟೇ. ನಮಗೆ ಹೇಳಿ, ಕಮಿಷನರ್ ಗಮನಕ್ಕೆ ತಂದು ಇವರನ್ನು ಅರೆಸ್ಟ್ ಮಾಡಿಲ್ಲ. ನಮ್ಮ ಪೊಲೀಸರಿಗೆ ಕಾನೂನು ಪುಸ್ತಕ ಕೊಟ್ಟಿಲ್ಲವೇ? ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಡಾ. ಜಿ. ಪರಮೇಶ್ವರ್‌ ಸ್ಪಷ್ಟನೆ ನೀಡಿದರು.

ಏನಿದು ಪ್ರಕರಣ?

ಕರಸೇವೆಗೂ ಮುನ್ನ ಅಂದರೆ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿಯೂ ಗಲಾಟೆಗಳು ನಡೆದಿದ್ದವು. ಈ ವೇಳೆ ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ 9 ಜನರ ವಿರುದ್ಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

Ram Janmabhoomi Case reopened after 31 years Search for Ayodhya activists in Hubballi

ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಹಿಂದು ಕಾರ್ಯಕರ್ತರು ಆ ವೇಳೆ ಕೆಲ ಕಾಲ ತಲೆಮರೆಸಿಕೊಂಡಿದ್ದರು. ಬಳಿಕ ಪ್ರಕರಣವು ಯಾವುದೇ ವಿಚಾರಣೆ ಕಾಣದೆ ಹಾಗೇ ಉಳಿದಿತ್ತು. ಪ್ರಕರಣ ತಿಳಿಯಾದಾಗ ಎಂದಿನಂತೆ ಎಲ್ಲರೂ ಮನೆಯಲ್ಲಿದ್ದರು.

30 ವರ್ಷದ ಹಳೇ ಕೇಸ್?

ಪ್ರಕರಣ ದಾಖಲಾದಾಗ ಆರೋಪಿತರು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ಈಗ 31 ವರ್ಷಗಳ ಹಳೇ ಪ್ರಕರಣಕ್ಕೆ ಹುಬ್ಬಳ್ಳಿ ಪೊಲೀಸರು ಜೀವ ಕೊಟ್ಟಿದ್ದಾರೆ. ಹೀಗಾಗಿ ಹುಬ್ಬಳ್ಳಿ ಪೊಲೀಸರಿಂದ ಅಂದಿನ ಆರೋಪಿಗಳ ಏಕಾಏಕಿ ಹುಡುಕಾಟ ಆರಂಭವಾಗಿದೆ. 31 ವರ್ಷದ ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.

ಇದನ್ನೂ ಓದಿ: Rama Mandir : ಅಯೋಧ್ಯೆಯಲ್ಲಿ ಕರ್ನಾಟಕದ ಶಿಲ್ಪಿ ಕೆತ್ತಿದ ವಿಗ್ರಹ ಪ್ರತಿಷ್ಠೆ; ಪ್ರಲ್ಹಾದ್‌ ಜೋಶಿ ಹರ್ಷ

ಉಳಿದ ಆರೋಪಿಗಳಿಗೆ ಹುಡುಕಾಟ

ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಪೊಲೀಸರು ಒಪ್ಪಿಸಿದ್ದರು. ಇನ್ನುಳಿದ ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ. ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿ ಹುಡುಕಾಟಕ್ಕೆ‌ ಪೊಲೀಸರು ಮುಂದಾಗಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ. ರಾಮ ಜನ್ಮಭೂಮಿ (Ram Janmabhoomi) ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಹಳೇ ಕೇಸ್‌ ಮತ್ತೆ ವಿಚಾರಣೆಗೆ ಬಂದಿರುವುದು ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

Exit mobile version