ಬೆಂಗಳೂರು: ಅತ್ತ ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದ್ದರೆ, ಇತ್ತ ರಾಜ್ಯದಲ್ಲಿ ಅದೇ ರಾಮಜನ್ಮಭೂಮಿಗಾಗಿ ಹೋರಾಟ ಮಾಡಿದ್ದ ಪ್ರಕರಣವೊಂದು ರಿಓಪನ್ ಆಗಿದ್ದು, ಹೋರಾಟಗಾರರ ಬಂಧನಕ್ಕೆ ಮುಂದಾಗಲಾಗಿದೆ. ಇದು ಈಗ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರದ ಈ ನಿಲುವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಳೆ (ಬುಧವಾರ) ರಾಜ್ಯಾದ್ಯಂತ ಬಂದ್‌ಗೆ ಕರೆ ಕೊಟ್ಟಿದೆ. ಅಲ್ಲದೆ, ಬಿಜೆಪಿ ನಾಯಕರೆಲ್ಲರೂ ಈಗ ರಾಜ್ಯ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ. ಹೋರಾಟಗಾರರ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದಾರೆ. ರಾಮ ಭಕ್ತರನ್ನು ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದೂ ಆರೋಪಿಸಿದ್ದಾರೆ.
ಹಿಂದು ಕರಸೇವಕರ ಬಂಧನಕ್ಕೆ ಬೊಮ್ಮಾಯಿ ಕಿಡಿ
ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಹಿಂದು ಕರ ಸವೇಕರ ಬಂಧನಕ್ಕೆ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಂತ್ಯ ನಿಶ್ಚಿತ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೊಮ್ಮಾಯಿ ಪೋಸ್ಟ್‌ನಲ್ಲೇನಿದೆ?
“ರಾಮಮಂದಿರ ಉದ್ಘಾಟನೆಗೆ ಸಿದ್ಧವಾಗಿರುವ ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ 30 ವರ್ಷದ ಹಳೆಯ ಪ್ರಕರಣವನ್ನು ಕೆದಕಿ ಹಿಂದು ಕರಸೇವಕರ ಬಂಧನ ಮಾಡಿರುವುದು ಅತ್ಯಂತ ಖಂಡನೀಯ.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗುತ್ತಿರುವಂತಹ ಈ ಹೊತ್ತಿನಲ್ಲಿ ಕಾಂಗ್ರೆಸ್‌ನವರಿಗೆ ಸಹಿಸಲು ಆಗುತ್ತಿಲ್ಲ. ಇಡೀ ದೇಶದ ಜನ ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ಹಿಂದು ಕಾರ್ಯಕರ್ತರನ್ನು ಬಂಧಿಸುವುದರ ಹಿಂದಿನ ಉದ್ದೇಶ ಏನು?
ಇಡೀ ದೇಶವೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ಕೊಡುತ್ತಿರುವ ಸಂದರ್ಭದಲ್ಲಿ ಈ ರೀತಿ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಪಾಲನೆ ಮಾಡುವವರೇ ಕಾನೂನು ಉಲ್ಲಂಘನೆ ಮಾಡುತ್ತಿರುವುದಕ್ಕೆ ಇದು ಸ್ಪಷ್ಪ ನಿದರ್ಶನ.
ಈಗಾಗಲೇ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿರುವುದಕ್ಕೆ ಕಾಂಗ್ರೆಸ್ ಗೆ ಸಂಸತ್ತಿನಲ್ಲಿ ಪ್ರತಿಪಕ್ಷದ ಸ್ಥಾನವೂ ಇಲ್ಲದಂತಾಗಿದೆ. ಈ ರೀತಿಯ ದ್ವೇಷದ ರಾಜಕಾರಣದಿಂದ ರಾಜ್ಯದಲ್ಲಿಯೂ ಕಾಂಗ್ರೆಸ್ ಅಂತ್ಯ ಕಾಣುವುದೂ ನಿಶ್ಚಿತ” ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ: ಮಾಜಿ ಸಚಿವ ಶ್ರೀರಾಮುಲು
ಕಾಂಗ್ರೆಸ್ ಸರ್ಕಾರ ಒಂದು ರೀತಿ ದ್ವೇಷದ ರಾಜಕಾರಣ ಮಾಡುತ್ತಿದೆ. ಅನೇಕ ವರ್ಷದಿಂದ ರಾಮಮಂದಿರ ಆಗಬೇಕು ಎಂಬ ಸಂಕಲ್ಪ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ. ಒಂದು ಕಡೆ ರಾಮಮಂದಿರ ಉದ್ಘಾಟನೆ ಸಮಯ ನಿಗದಿ ಮಾಡಲಾಗಿದೆ. ಮತ್ತೊಂದು ಕಡೆ ಕಾಂಗ್ರೆಸ್‌ನಿಂದ ಕರಸೇವಕರ ಬಂಧನ ಮಾಡಲಾಗುತ್ತಿದೆ. ಈ ಸರ್ಕಾರ ಹಿಂದು ವಿರೋಧಿಯಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಶ್ರೀರಾಮುಲು, ಕಾಂಗ್ರೆಸ್ ನಾಯಕರು ಶ್ರೀರಾಮಚಂದ್ರ ಕಾಲ್ಪನಿಕ ಎಂದು ಹೇಳಿದರು. ಆದರೆ, ದೇವಸ್ಥಾನದಲ್ಲಿ ಮಹರ್ಷಿ ವಾಲ್ಮೀಕಿ ಬೇಕು ಅಂತಾರೆ? ಶ್ರೀರಾಮಚಂದ್ರನೇ ಕಾಲ್ಪನಿಕ ಅಂದವರು, ವಾಲ್ಮೀಕಿ ದೇವಸ್ಥಾನ ಕೇಳಲು ಏನು ಹಕ್ಕಿದೆ? ಈ ದೇವಸ್ಥಾನವನ್ನು ಮಾಡಿದ ಬಳಿಕ ಸುಮ್ಮನಾಗಿದ್ದಾರೆ. ಅಯೋಧ್ಯೆ ಏರ್ಪೋರ್ಟ್‌ಗೆ ವಾಲ್ಮೀಕಿ ಏರ್ಪೋರ್ಟ್ ಅಂತ ಮೋದಿಯವರು ನಾಮಕರಣ ಮಾಡಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮನ ದೇವಸ್ಥಾನಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಜಾತಿ ಜಾತಿಗಳ ನಡುವೆ ಸಂಘರ್ಷ ಮಾಡಲಾಗುತ್ತಿದೆ. ಬಹುಶಃ ಇವರ ಅಂತ್ಯ ಕಾಲ ಬಂದಿದೆ ಎಂದೆನ್ನಿಸುತ್ತದೆ ಎಂದು ಹೇಳಿದರು.
ಪಟ್ಟಿ ಕೊಡ್ತೇನೆ ತಾಕತ್ತಿದ್ದರೆ ಬಂಧನ ಮಾಡಿ: ಸುನಿಲ್ ಕುಮಾರ್ ಸವಾಲು
ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ವೇಳೆ ಮಂಗಳಕರ ವಾತಾವರಣ ಸೃಷ್ಟಿಯಾಗಿರುವ ಇಂಥ ಸಂದರ್ಭದಲ್ಲಿ ಅಮಂಗಳಕರ ವಾತಾವರಣ ಸೃಷ್ಟಿಗೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ರಾವಣ ಮಾತ್ರ ರಾಮ ವಿರೋಧಿ ಅಲ್ಲ, ಸಿದ್ದರಾಮಯ್ಯ ಕೂಡ ರಾಮ ವಿರೋಧಿ ಎಂಬುದನ್ನು ತೋರಿಸಿದ್ದಾರೆ. ಕಾರ್ಯಕರ್ತರ ಬಂಧನ ಮಾಡೋ ಮೂಲಕ ತಮ್ಮ ನಿಲುವನ್ನು ತೋರಿಸಿದ್ದಾರೆ. ಹುಬ್ಬಳ್ಳಿ ಕಾರ್ಯಕರ್ತರ ಬಂಧನ ಮಾತ್ರವಲ್ಲ. 1992ರ ಕರ ಸೇವೆಯಲ್ಲಿ ನಾನು ಕೂಡ ಭಾಗಿಯಾಗಿದ್ದೆ. ರಾಜ್ಯದಿಂದ ಭಾಗಿಯಾಗಿದ್ದ ಕರಸೇವಕರ ಪಟ್ಟಿ ನನ್ನ ಬಳಿ ಇದೆ. ಅದರ ಪಟ್ಟಿ ಕೊಡುತ್ತೇನೆ. ತಾಕತ್ತಿದ್ದರೆ ಬಂಧನ ಮಾಡಿ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ಇದನ್ನೂ ಓದಿ: Ram Janmabhoomi: ರಾಮ ಮಂದಿರಕ್ಕೆ ನನ್ನ ದುಡ್ಡು ಬೇಕು, ಆಮಂತ್ರಣ ಮಾತ್ರ ಇಲ್ಲವೆಂದ ಲಕ್ಷ್ಮಣ ಸವದಿ
ಬಂಧನ ಮಾಡಿದಾಕ್ಷಣ ಹಿಂದುತ್ವಕ್ಕೆ ಧಕ್ಕೆ ಮಾಡಲು ಸಾಧ್ಯವಿಲ್ಲ. ರಾಮಮಂದಿರ ಉದ್ಘಾಟನೆಗೆ ಇಡೀ ದೇಶ ಖುಷಿ ಪಡುತ್ತಿದೆ. ರಾಷ್ಟ್ರ ಮಂದಿರ ನಿರ್ಮಾಣಕ್ಕೆ ಯಾವುದೇ ಆಹ್ವಾನ ಬೇಕಿಲ್ಲ. ಚುನಾವಣೆಗೆ ನೈಜ ಹಿಂದು ಆಗಬೇಡಿ. ಜ. 22ರಂದು ರಾಜ್ಯದ ಎಲ್ಲ ದೇವಾಲಯಗಳಿಗೆ ವಿಶೇಷ ಪೂಜೆ ಮಾಡಲು ಆದೇಶ ಮಾಡಿ. ದತ್ತ ಪೀಠವನ್ನೂ ಸೇರಿದಂತೆ ನೂರು ದೇವಾಲಯಗಳನ್ನು ಆಯ್ಕೆ ಮಾಡಿಕೊಳ್ಳಲಿ. ಕರ್ನಾಟಕದ ದೇವಸ್ಥಾನವನ್ನು ಕೂಡ ಅಭಿವೃದ್ಧಿ ಮಾಡಬೇಕಿದೆ. ನೂರು ದೇವಸ್ಥಾನ ಅಭಿವೃದ್ಧಿ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿ ಎಂದು ವಿ. ಸುನಿಲ್ ಕುಮಾರ್ ಹೇಳಿದರು.