Site icon Vistara News

Ram Janmabhoomi: ಅಯೋಧ್ಯೆ ಕೇಸ್‌ ರಿಓಪನ್‌; ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ

BJP state president BY Vijayendra

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದು ವಿರೋಧಿಯಾಗಿದೆ. 31 ವರ್ಷಗಳ ಹಿಂದಿನ ಕೇಸ್‌ ಅನ್ನು ರಿಓಪನ್‌ ಮಾಡುವುದು ಎಂದರೆ ಏನು? ಆಯ್ಕೆ ಮಾಡಿಕೊಂಡ ಸಂದರ್ಭ ಯಾವುದು? ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮ‌ ಉದ್ದೇಶ ಏನು? ತಪ್ಪು ಮಾಡಿದ್ದಾರೋ ಇಲ್ಲವೋ ಅನ್ನೋದನ್ನು ನೀವು ತೀರ್ಮಾನ ಮಾಡೋದಲ್ಲ. 31 ವರ್ಷದ ಹಿಂದಿನ ಅಯೋಧ್ಯೆ ರಾಮ ಜನ್ಮಭೂಮಿ (Ram Janmabhoomi) ವಿವಾದ ಗಲಾಟೆ ಕೇಸ್ ರಿಓಪನ್ ಮಾಡೋಕೆ ಈಗಲೇ ಸಮಯ ಬೇಕಿತ್ತಾ? ಇಡೀ ದೇಶ ಸಂಭ್ರಮದಲ್ಲಿದ್ದಾಗ ಹಿಂದು ಕಾರ್ಯಕರ್ತ, ರಾಮಭಕ್ತನ ಬಂಧನ ಮಾಡಬೇಕಿತ್ತಾ? ಧೈರ್ಯ ಎಷ್ಟಿರಬೇಕು ನಿಮಗೆ? ಹಾಗಿದ್ದರೆ ನಿಮ್ಮ ಉದ್ದೇಶವಾದರೂ ಏನು? ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇರುವಾಗ ಅದಕ್ಕೆ ಭಂಗ ತರುವ ಕೆಲಸಕ್ಕೆ ಸಿಎಂ ಕೈ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BJP state president BY Vijayendra) ಗುಡುಗಿದ್ದಾರೆ. ಅಲ್ಲದೆ, ಈ ಸಂಬಂಧ ಬುಧವಾರ (ಜನವರಿ 2) ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ (BJP protests) ನಡೆಸಲಿದೆ ಎಂದು ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬಿ.ವೈ. ವಿಜಯೇಂದ್ರ, ತಾನು ಹಿಂದು ವಿರೋಧಿ ಎಂಬುದನ್ನು ಈ ಸರ್ಕಾರವು ರಾಜ್ಯ ಮತ್ತು ದೇಶದ ಜನತೆಗೆ ಪದೇ‌ ಪದೆ ನೆನಪು ಮಾಡುವ ಕೆಲಸ ಮಾಡುತ್ತಿದೆ. ನಿನ್ನೆ ಹುಬ್ಬಳ್ಳಿಯಲ್ಲಿ 31 ವರ್ಷದ ಹಳೆಯ ಕೇಸನ್ನು ರಿಓಪನ್ ಮಾಡಿ ಹಿಂದು ಕಾರ್ಯಕರ್ತ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿದ್ದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

ಜನವರಿ 22ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಠಾಪನೆ ಆಗುವ ಶುಭ ಸಂದರ್ಭದಲ್ಲಿ ಇಡೀ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಕೋಟ್ಯಂತರ ಹಿಂದು ಕಾರ್ಯಕರ್ತರು ಸಂತಸದಲ್ಲಿದ್ದಾರೆ. ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಇದೆ. ಇಂಥ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಕೈಗೊಂಡ ಕ್ರಮದ ಮೂಲಕ ತಮ್ಮದು ಹಿಂದೂ ವಿರೋಧಿ ಸರ್ಕಾರ ಎಂದು ದೇಶಕ್ಕೇ ತೋರಿಸಿಕೊಟ್ಟಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಟೀಕಿಸಿದರು.‌

ನಾಳೆ ರಾಜ್ಯಾದ್ಯಂತ ಪ್ರತಿಭಟನೆ

ರಾಮನ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಕೆತ್ತನೆ ಮಾಡಿದ್ದಾಗಿ ನಿನ್ನೆ ಸಂಭ್ರಮದಿಂದ ಇದ್ದೆವು. ರಾಜ್ಯದ ಪ್ರತಿಯೊಬ್ಬರು ಹೆಮ್ಮೆ ಪಡುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು, ಹಳೆಯ ಕೇಸನ್ನು ಮತ್ತೆ ಓಪನ್ ಮಾಡಿ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿರುವುದು ಖಂಡನೀಯ. ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಳೆ ಇಡೀ ರಾಜ್ಯಾದ್ಯಂತ ಹೋರಾಟ ಮಾಡಲು ಕರೆ ನೀಡುತ್ತಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಮಾತ್ರವಲ್ಲದೆ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ‌ಬಿ.ವೈ. ವಿಜಯೇಂದ್ರ ಪ್ರಕಟಿಸಿದರು.

ಹಿಂದು ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೋರಾಟ ನಡೆಯಲಿದೆ. ಪದೇ ಪದೆ ಅಲ್ಪಸಂಖ್ಯಾತರನ್ನು ಓಲೈಸುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಬರಗಾಲದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಇಡೀ ದೇಶದಲ್ಲಿ ಸಂಭ್ರಮ ಇರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ‌ ಅವರ ನೇತೃತ್ವದ ಸರ್ಕಾರವು ಹಿಂದುಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿದೆ. ಇದಕ್ಕೆ ತಕ್ಕ ಶಾಸ್ತಿಯನ್ನು ಮತದಾರರು ಮುಂದಿನ ದಿನಗಳಲ್ಲಿ ಮಾಡುತ್ತಾರೆ ಎಂದು ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಹೋರಾಟಕ್ಕೆ ಇದೂ ಕಾರಣ

ಅಯೋಧ್ಯೆಯ ಮಂತ್ರಾಕ್ಷತೆಯನ್ನು ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಪ್ರತಿ ಮನೆಗೂ ತಲುಪಿಸಲಾಗುತ್ತಿದೆ. ಅಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ಅಡ್ಡಿ ಮಾಡುತ್ತಿದೆ. ಪುಡಾರಿತನ ಮಾಡುತ್ತಿದೆ ಎಂದು ಗೊತ್ತಾಗಿದೆ. ಇದನ್ನೆಲ್ಲ ಗಮನಿಸಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ‌ಬಿ.ವೈ. ವಿಜಯೇಂದ್ರ ತಿಳಿಸಿದರು.

ಸಿಎಂ, ಗೃಹ ಸಚಿವರೇ ಹೊಣೆ

ಗೃಹ ಸಚಿವರಿಗೆ ಹಳೆಯ ಕೇಸುಗಳ ಬಗ್ಗೆ ಬಹಳ ಕಾಳಜಿ ಇದೆ. ತುಂಬಾ ಸಂತೋಷ. ಆದರೆ, ಮುಂದೆ ನಡೆಯುವ ಘಟನೆಗೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ಹೊಣೆಗಾರರಾಗುತ್ತಾರೆ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದರು.

ಸಿಎಂ ಸಿದ್ದರಾಮಯ್ಯ ಅವರ ಕ್ರಮವನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ಮತ್ತು ಪ್ರತೀಕಾರ ಮನೋಭಾವವನ್ನು ಖಂಡಿಸಬೇಕಾಗಿದೆ.‌ ಕಾಂಗ್ರೆಸ್ಸಿಗರು ನಾಲಿಗೆ ಮತ್ತು ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅಯೋಧ್ಯೆ ಎಂಬುದು ಒಂದು ಭಾವನಾತ್ಮಕ ಸಂಬಂಧದ ವಿಚಾರ. ಶ್ರೀರಾಮನ ಜನ್ಮಸ್ಥಳವದು. ಕಾಂಗ್ರೆಸ್ಸಿಗರು ಹುಚ್ಚುಚ್ಚು ಹೇಳಿಕೆಗಳಿಗೆ ನಾವು ಉತ್ತರ ಕೊಡಬೇಕಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಬಿ.ವೈ. ವಿಜಯೇಂದ್ರ ಉತ್ತರಿಸಿದರು.

ಹಿಂದುಗಳು, ಹಿಂದು ಕಾರ್ಯಕರ್ತರ ಭಾವನೆಗೆ ಧಕ್ಕೆ ತರುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು. ಹಿಂದುಗಳಿಗೆ ನೋವು ಕೊಡುವುದರಲ್ಲಿ ಕಾಂಗ್ರೆಸ್ಸಿಗರಿಗೆ ಎಲ್ಲಿಲ್ಲದ ಸಂತೋಷ ಎಂದು ಬಿ.ವೈ. ವಿಜಯೇಂದ್ರ ಟೀಕಿಸಿದರು.

ಏನಿದು ಪ್ರಕರಣ?

ಕರಸೇವೆಗೂ ಮುನ್ನ ಅಂದರೆ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿಯೂ ಗಲಾಟೆಗಳು ನಡೆದಿದ್ದವು. ಈ ವೇಳೆ ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ 9 ಜನರ ವಿರುದ್ಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಹಿಂದು ಕಾರ್ಯಕರ್ತರು ಆ ವೇಳೆ ಕೆಲ ಕಾಲ ತಲೆಮರೆಸಿಕೊಂಡಿದ್ದರು. ಬಳಿಕ ಪ್ರಕರಣವು ಯಾವುದೇ ವಿಚಾರಣೆ ಕಾಣದೆ ಹಾಗೇ ಉಳಿದಿತ್ತು. ಪ್ರಕರಣ ತಿಳಿಯಾದಾಗ ಎಂದಿನಂತೆ ಎಲ್ಲರೂ ಮನೆಯಲ್ಲಿದ್ದರು.

30 ವರ್ಷದ ಹಳೇ ಕೇಸ್?

ಪ್ರಕರಣ ದಾಖಲಾದಾಗ ಆರೋಪಿತರು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ಈಗ 31 ವರ್ಷಗಳ ಹಳೇ ಪ್ರಕರಣಕ್ಕೆ ಹುಬ್ಬಳ್ಳಿ ಪೊಲೀಸರು ಜೀವ ಕೊಟ್ಟಿದ್ದಾರೆ. ಹೀಗಾಗಿ ಹುಬ್ಬಳ್ಳಿ ಪೊಲೀಸರಿಂದ ಅಂದಿನ ಆರೋಪಿಗಳ ಏಕಾಏಕಿ ಹುಡುಕಾಟ ಆರಂಭವಾಗಿದೆ. 31 ವರ್ಷದ ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.

ಇದನ್ನೂ ಓದಿ: Rama Mandir : ಅಯೋಧ್ಯೆಯಲ್ಲಿ ಕರ್ನಾಟಕದ ಶಿಲ್ಪಿ ಕೆತ್ತಿದ ವಿಗ್ರಹ ಪ್ರತಿಷ್ಠೆ; ಪ್ರಲ್ಹಾದ್‌ ಜೋಶಿ ಹರ್ಷ

ಉಳಿದ ಆರೋಪಿಗಳಿಗೆ ಹುಡುಕಾಟ

ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಪೊಲೀಸರು ಒಪ್ಪಿಸಿದ್ದರು. ಇನ್ನುಳಿದ ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ. ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿ ಹುಡುಕಾಟಕ್ಕೆ‌ ಪೊಲೀಸರು ಮುಂದಾಗಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ. ಇತ್ತ ರಾಮ ಜನ್ಮಭೂಮಿ (Ram Janmabhoomi) ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಹಳೇ ಕೇಸ್‌ ಮತ್ತೆ ವಿಚಾರಣೆಗೆ ಬಂದಿರುವುದು ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

Exit mobile version