Site icon Vistara News

Ram Janmabhoomi: ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ; ಹೃದಯದಲ್ಲೇ ದೇವರಿದ್ದಾನೆಂದ ಡಿಕೆಶಿ

DK Shivakumar

ಬೆಂಗಳೂರು: ಜನವರಿ 22ರಂದು ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ (Lord Ram in Ayodhya) ಪ್ರತಿಷ್ಠಾಪನೆ ಕಾರ್ಯಕ್ರಮಕ್ಕಾಗಿ ನನಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ಬಂದಿಲ್ಲ. ಆದರೆ, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಆಹ್ವಾನ ಬಂದಿದೆ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಪಕ್ಷ ಈ ವಿಚಾರದಲ್ಲಿ ತೀರ್ಮಾನ ಮಾಡುತ್ತದೆ. ನಮ್ಮ ಹೃದಯದಲ್ಲಿ ನಮ್ಮ ದೇವರುಗಳನ್ನು ಇಟ್ಟು ಪೂಜಿಸಿಕೊಂಡು ಬಂದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿ.ಕೆ. ಶಿವಕುಮಾರ್‌ (DCM DK Shivakumar) ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಡಿ.ಕೆ. ಶಿವಕುಮಾರ್‌, ನಮ್ಮ ಮನೆಯಲ್ಲಿ ಶಿವ, ಹನುಮಂತನ ಫೋಟೋ ಇಟ್ಟು ಪೂಜೆ ಮಾಡುತ್ತೇವೆ. ನಮ್ಮ ಹೃದಯದಲ್ಲಿ ನಮ್ಮ ದೇವರುಗಳನ್ನು ಇಟ್ಟು ಪೂಜಿಸಿಕೊಂಡು ಬಂದಿದ್ದೇವೆ. ಹೀಗಾಗಿ ಧರ್ಮ, ದೇವರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ಮಂತ್ರಾಕ್ಷತೆ ನೀಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಯಲ್ಲೆ ಮಂತ್ರಾಕ್ಷತೆ ಮಾಡಿ ಹಂಚುತ್ತಿದ್ದಾರೆ. ಅದೇ ನಮಗೆ ಸಂತೋಷ ಎಂದು ತಿಳಿಸಿದರು.

ಬೊಮ್ಮಾಯಿ ಅವರಿಗೆ ಮರೆವು ಶುರುವಾಗಿದೆ

ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯ ಸರ್ಕಾರದ ಕೊಡುಗೆ ಏನಿಲ್ಲ. ಇದು ಮೋದಿ ಸರ್ಕಾರ ನೀಡುತ್ತಿರುವ ಅಕ್ಕಿ ಎಂದು ಮಾಜಿ ಸಿಎಂ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಆಹಾರ ಭದ್ರತಾ ಕಾಯ್ದೆ ತಂದಿದ್ದು ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರು. ಈ ವಿಚಾರವನ್ನು ಬೊಮ್ಮಾಯಿ ಅವರು ಮರೆತಿದ್ದಾರೆ. ನಾವು 10 ಕೆ.ಜಿ ಅಕ್ಕಿ ನೀಡಲು ಮುಂದಾಗಿದ್ದೇವೆ. ನನ್ನ ಸ್ನೇಹಿತನಿಗೆ ಮರೆವು ಶುರುವಾಗಿರಬೇಕು ಎಂದು ತಿರುಗೇಟು ನೀಡಿದರು.

ನೈಸ್ ವಿಚಾರದಲ್ಲಿ ಸರ್ಕಾರ ಜಯಚಂದ್ರ ಅವರ ಬಾಯಿ ಕಟ್ಟಿಹಾಕಿದೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಈ ಬಗ್ಗೆ ಬೇರೆ ಸಮಯದಲ್ಲಿ ಚರ್ಚೆ ಮಾಡೋಣ. ಅಧಿವೇಶನದಲ್ಲಿ ಚರ್ಚೆಗೆ ಬನ್ನಿ ಎಂದು ಹೇಳಿದ್ದೆ. ಅಲ್ಲಿ ಯಾಕೆ ಚರ್ಚೆಗೆ ಬರಲಿಲ್ಲ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷಕ್ಕೆ 138 ವರ್ಷಗಳ ಇತಿಹಾಸವಿದೆ

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಂದಲೇ ಕಾಂಗ್ರೆಸ್ ಅಂತ್ಯ ಎಂಬ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಕಾಂಗ್ರೆಸ್ ಪಕ್ಷಕ್ಕೆ 138 ವರ್ಷಗಳ ಇತಿಹಾಸವಿದೆ. ಜನ 135 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ಅದರ ಜತೆಗೆ ಪಕ್ಷೇತರ ಶಾಸಕರು ಸೇರಿ ನಮ್ಮ ಬಲ 138 ಆಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Upper Krishna Project: ಕಲಬುರಗಿ, ರಾಯಚೂರು, ಬಾಗಲಕೋಟೆ, ಯಾದಗಿರಿಯ ಮೆಣಸಿನಕಾಯಿ ಬೆಳೆಗಳಿಗೆ 2.75 ಟಿಎಂಸಿ ನೀರು: ಡಿ.ಕೆ. ಶಿವಕುಮಾರ್

ನಿಮ್ಮ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಹಿಂದೆ ಏನಾದರೂ ತಂತ್ರಗಾರಿಕೆ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ನಮ್ಮನ್ನು ನೆನಪಿಸಿಕೊಳ್ಳುತ್ತಿರಬೇಕು. ಅವರು ಏನೇ ಮಾತನಾಡಿದರೂ ಅದನ್ನು ಆಶೀರ್ವಾದ ಎಂದು ಭಾವಿಸುತ್ತೇವೆ ಎಂದು ತಿಳಿಸಿದರು.

Exit mobile version