Site icon Vistara News

Ram Mandir: ರಾಜ್ಯಾದ್ಯಂತ ಬಿಜೆಪಿ ಸ್ವಚ್ಛತೀರ್ಥ ಅಭಿಯಾನ; ಬಿ.ವೈ. ವಿಜಯೇಂದ್ರ ಸೇರಿ ಹಲವರಿಂದ ದೇಗುಲಗಳ ಸ್ವಚ್ಛತೆ

BY Vijayendra clean temples

ಬೆಂಗಳೂರು/ಶಿವಮೊಗ್ಗ: ಅಯೋಧ್ಯೆ ರಾಮಜನ್ಮಭೂಮಿಯ (Ram Janmabhoomi) ರಾಮ ಮಂದಿರದಲ್ಲಿ (Ram Mandir) ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ರಾಜ್ಯಾದ್ಯಂತ ದೇಗುಲಗಳಲ್ಲಿ “ಸ್ವಚ್ಛತೀರ್ಥ ಅಭಿಯಾನ”ವನ್ನು ನಡೆಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರೆ, ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಬೆಂಗಳೂರಿನ ಜಯನಗರ 4ನೇ ಹಂತದ ಶ್ರೀ ವಿನಾಯಕ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದರು. ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಬೆಂಗಳೂರಿನ ಮಲ್ಲೇಶ್ವರದ ಕೋದಂಡರಾಮ ದೇವಸ್ಥಾನವನ್ನು ಸ್ವಚ್ಛಗೊಳಿಸಿದರು.

ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದರು. ವಿಜಯೇಂದ್ರ ಅವರಿಗೆ ಬಿಜೆಪಿ ‌ಕಾರ್ಯಕರ್ತರು ಸಾಥ್ ನೀಡಿದರು. ಹುಚ್ಚರಾಯಸ್ವಾಮಿ ದೇವಸ್ಥಾನ ಆವರಣವನ್ನು ಗುಡಿಸಿ, ನೀರು ಹಾಕಿ ಸ್ವಚ್ಛಗೊಳಿಸಲಾಯಿತು.

ವಿನಾಯಕ ದೇವಾಲಯ ಸ್ವಚ್ಛ ಮಾಡಿದ ಆರ್.‌ ಅಶೋಕ್

ಬೆಂಗಳೂರಿನ ಜಯನಗರ 4ನೇ ಹಂತದ ಶ್ರೀ ವಿನಾಯಕ ದೇವಾಲಯದ ಆವರಣವನ್ನು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ, ಶಾಸಕ ಸಿ‌.ಕೆ. ರಾಮಮೂರ್ತಿ, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಶ್ರೀರಾಮಮಂದಿರವು ಸ್ವಾಭಿಮಾನದ ಪ್ರತೀಕ: ಡಾ. ಸಿ.ಎನ್. ಅಶ್ವತ್ಥನಾರಾಯಣ್

ಅಯೋಧ್ಯೆಯ ಶ್ರೀರಾಮಮಂದಿರವು ಸ್ವಾಭಿಮಾನದ ಪ್ರತೀಕ ಎಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.

ಮಲ್ಲೇಶ್ವರದ 12ನೇ ಅಡ್ಡರಸ್ತೆಯಲ್ಲಿರುವ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎಲ್ಲ ಬಿಜೆಪಿ ಕಾರ್ಯಕರ್ತರು, ರಾಮಭಕ್ತರು ಎಲ್ಲ ದೇಗುಲಗಳು, ಮಂದಿರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಇದರ ಭಾಗವಾಗಿ ನಾವೂ ಸಹ ರಾಜ್ಯಾದ್ಯಂತ ಸ್ವಚ್ಛತೆಯಲ್ಲಿ ತೊಡಗಿದ್ದೇವೆ ಎಂದು ಹೇಳಿದರು.

ಅಯೋಧ್ಯೆ ಶ್ರೀರಾಮಮಂದಿರ ಪುನರ್ ನಿರ್ಮಾಣ ಆಗಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಹಬ್ಬದ ವಾತಾರವಣ ಇದೆ. 500 ವರ್ಷಗಳ ಕಾಲ ನಾವು ಅನ್ಯಾಯಕ್ಕೆ ಒಳಗಾಗಿದ್ದೆವು. ಎಲ್ಲ ಭಾರತೀಯರು ಈ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಡಾ. ಸಿ.ಎನ್.ಅಶ್ವತ್ಥನಾರಾಯಣ್ ಮನವಿ ಮಾಡಿದರು.

ಇತರ ಪಕ್ಷಗಳು ತಮ್ಮ ಕಾರ್ಯಕ್ರಮಗಳನ್ನು ಜನವರಿ 22ರ ಬಳಿಕ ಮಾಡಿದ್ದರೆ ಚೆನ್ನಾಗಿತ್ತು. ಇದಕ್ಕೆ ಜನತೆ ಸೂಕ್ತ ಉತ್ತರ ಕೊಡುತ್ತಾರೆ ಎಂದು ಡಾ. ಸಿ.ಎನ್.ಅಶ್ವತ್ಥನಾರಾಯಣ್ ಇತರೆ ಪಕ್ಷಗಳ ನಡೆಗೆ ಅಸಮಾಧಾನ ಹೊರಹಾಕಿದರು.

ನಮ್ಮ ಭಾಷೆ ಮೇಲೆ ಹಿಡಿತ ಇರಬೇಕು. ಸಮಾಧಾನದಿಂದ ಎಲ್ಲರಿಗೂ ಗೌರವ ನೀಡುವುದು ನಮ್ಮ ಸಂಸ್ಕೃತಿ ಆಗಿರಬೇಕು. ತಪ್ಪಾದಾಗ ಅದನ್ನು ಸರಿಪಡಿಸುವುದು ಪ್ರತಿಯೊಬ್ಬರ ಕರ್ತವ್ಯ. ಮೊದಲು ಏಕವಚನ ಬಳಕೆಗೆ ಸಂಬಂಧಿಸಿ ಮುಖ್ಯಮಂತ್ರಿಯವರು ತಮ್ಮ ಮೇಲೆ ಕೇಸು ಹಾಕಿಸಿ ನಂತರ ಅನಂತಕುಮಾರ್ ಹೆಗಡೆ ಅವರ ವಿರುದ್ಧ ಕೇಸು ಹಾಕಲು ಹೇಳಬೇಕು ಎಂದು ಡಾ. ಸಿ.ಎನ್.ಅಶ್ವತ್ಥನಾರಾಯಣ್ ಅವರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂ ಓದಿ: Lok Sabha Election 2024: ಮೈಸೂರು ಲೋಕಸಭೆಗೆ ಯದುವೀರ್‌ ಒಡೆಯರ್‌ ಎಂಟ್ರಿ? ಟಿಕೆಟ್‌ ಕೊಡಲು ಬಿಜೆಪಿ, ಕಾಂಗ್ರೆಸ್‌ ಪೈಪೋಟಿ!

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ. ನಾರಾಯಣಗೌಡ, ಕಾರ್ಯಕರ್ತರು, ರಾಮಭಕ್ತರು ಭಾಗವಹಿಸಿದ್ದರು.

Exit mobile version