ಶಿವಮೊಗ್ಗ: ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನಾ (Ram Lalla Murti Pranapratishthapane) ಕಾರ್ಯಕ್ರಮದ ನಿಮಿತ್ತ ಶ್ರೀರಾಮ ಸೇನೆ ಕಾರ್ಯಕರ್ತರು ಇಲ್ಲಿನ ಶಿವಪ್ಪನಾಯಕ ಸರ್ಕಲ್‌ನಲ್ಲಿ ಸಿಹಿ ಹಂಚುವ ವೇಳೆ ಮಹಿಳೆಯೊಬ್ಬಳು ಅಲ್ಲಾ ಹು ಅಕ್ಬರ್ ಎಂದು ಕೂಗಿರುವ ಘಟನೆಯನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಖಂಡಿಸಿದ್ದಾರೆ. ಆಕೆಯ ವಿರುದ್ಧ ಕೇಸ್ ದಾಖಲು ಮಾಡಬೇಕು. ಜತೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಮಹಿಳೆಯ ತಂದೆ ಪ್ರತಿಕ್ರಿಯೆ ನೀಡಿ, ತನ್ನ ಮಗಳು ಮಾನಸಿಕ ಅಸ್ವಸ್ಥೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, 500 ವರ್ಷಗಳ ಕನಸು ಇಂದು ನನಸಾಗಿದೆ. ಈ ನಡುವೆ ಶಿವಮೊಗ್ಗದಲ್ಲಿ ಮಹಿಳೆಯೊಬ್ಬಳು, ಶ್ರೀರಾಮಸೇನೆ ಕಾರ್ಯಕರ್ತರು ಸಿಹಿ ಹಂಚುವ ವೇಳೆ “ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿರುವುದು ನನ್ನ ಗಮನಕ್ಕೂ ಬಂದಿದೆ. ಆಕೆ ಹುಚ್ಚಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಆದರೆ, ಆಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿದ್ದಾರೆ. ಇದು ಖಂಡನೀಯವಾಗಿದ್ದು, ಆ ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ಮಾಡಬೇಕು. ಕೇಸ್ ದಾಖಲು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳೆ ಮೇಲೆ ಕೇಸ್ ದಾಖಲಿಸಿ ತನಿಖೆ ನಡೆಸಬೇಕು. ಇದರ ಹಿಂದೆ ಷಡ್ಯಂತ್ರ ಇದೆಯಾ ಎಂಬುದು ತನಿಖೆಯಿಂದ ಗೊತ್ತಾಬೇಕಿದೆ. ಆಕೆ ಹುಚ್ಚಿಯಾ ಎಂಬುದನ್ನೂ ತಿಳಿದುಕೊಳ್ಳಬೇಕು. ಈ ಬಗ್ಗೆ ನಿಪಕ್ಷಪಾತವಾದ ತನಿಖೆ ನಡೆಸಬೇಕು. ರಾಮ ಮಂದಿರದ ಸಂಭ್ರಮದ ವೇಳೆ ಆಕೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿರುವುದು ಸರಿ ಅಲ್ಲ. ಘೋಷಣೆ ಕೂಗಿದ್ದು ಯಾಕೆ ಎಂದು ತನಿಖೆ ಮಾಡಬೇಕು. ರಾಮಮಂದಿರ ಪ್ರತಿಷ್ಠಾಪನೆ ವೇಳೆ ಈ ಘಟನೆ ತೀವ್ರ ನೋವು ತಂದಿದೆ ಎಂದು ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಮಗಳು ಮಾನಸಿಕ ಅಸ್ವಸ್ಥೆ ಎಂದ ತಂದೆ
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳೆಯ ತಂದೆ ಸಯ್ಯದ್ ಅಬ್ಬಾಸ್, ನನ್ನ ಮಗಳು ಮೊದಲಿನಿಂದಲೂ ಸ್ವಲ್ಪ ಮಾನಸಿಕ ಅಸ್ವಸ್ಥಳಿದ್ದಾಳೆ. ಈ ಸಂಬಂಧ ಅವಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಕಳೆದ 10 ತಿಂಗಳಿನಿಂದ ಗಂಡನ ಮನೆ ಬಿಟ್ಟು ನನ್ನ ಮನೆಯಲ್ಲಿಯೇ ಇದ್ದಾಳೆ. ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಘಟನೆ ಬಗ್ಗೆ ಕೇಳಿ ನನಗೂ ನೋವಾಗಿದೆ. ಅವಳು ಆ ತರಹದ ಹುಡುಗಿ ಅಲ್ಲ. ಅವಳು ಜಾತಿ ಭೇದ ಮಾಡಲ್ಲ. ಎಲ್ಲರನ್ನೂ ಒಂದೇ ತರಹ ನೋಡುತ್ತಾಳೆ. ಅವಳು ಉದ್ದೇಶ ಪೂರಕವಾಗಿ ಅವಳು ಘೋಷಣೆ ಕೂಗಿಲ್ಲ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಶಿವಮೊಗ್ಗ ನಗರದ ಶಿವಪ್ಪನಾಯಕ ಸರ್ಕಲ್‌ನಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಮುಸ್ಲಿಂ ಮಹಿಳೆ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಮಹಿಳೆ ಅಲ್ಲಾ ಹು ಅಕ್ಬರ್ ಎಂದು ಕೂಗಿರುವ ಘಟನೆ ನಡೆದಿದೆ.
ನಗರದ ಶಿವಪ್ಪನಾಯಕ ಸರ್ಕಲ್‌ನಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಸಿಹಿ ಹಂಚುತ್ತಿದ್ದರು. ಈ ವೇಳೆ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮ್ ವೇಳೆ ಮುಂದು ಹೋಗುವಂತೆ ಶ್ರೀರಾಮನ ಭಕ್ತರು ಎಲ್ಲರಿಗೂ ಹೇಳುತ್ತಾ ಬಂದಿದ್ದಾರೆ. ಆಗ ಅಲ್ಲಿದ್ದ ಮುಸ್ಲಿಂ ಮಹಿಳೆಯೊಬ್ಬರು ಆಕ್ರೋಶಗೊಂಡಿದ್ದು, ನನ್ನನ್ನೇಕೆ ತಡೆಯುತ್ತೀರಿ? ಹೇ.. ನಿಮ್ಮ ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾನೆ? ಎಂದು ಆಕ್ರೋಶವನ್ನು ವ್ಯಕ್ತಪಡಿಸಿದಳು. ಇದು ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: Ram Mandir: ಪ್ರಧಾನಿ ಮೋದಿಯನ್ನು ರಾಮನಿಂದ ಚೀನಾವರೆಗೆ ಎಳೆದು ತಂದ ಸಿದ್ದರಾಮಯ್ಯ!
ಅಲ್ಲದೆ, ಇದೇ ವೇಳೆ ಆ ಮಹಿಳೆ ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದಾಳೆ. ಆಕೆ ಹೀಗೆ ಕೂಗುತ್ತಿದ್ದಂತೆ ರೊಚ್ಚಿಗೆದ್ದ ಶ್ರೀರಾಮ ಸೇನೆ ಕಾರ್ಯಕರ್ತರು, “ಜೈ ಶ್ರೀರಾಮ್” ಎಂದು ಘೋಷಣೆ ಕೂಗಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗುತ್ತಿದ್ದಂತೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ಬಿಟ್ಟು ಕಳಿಸಿದ್ದರು.