Site icon Vistara News

Ram Mandir: ದೇವರನ್ನು ಆಟಿಕೆ ಎನ್ನುವ ಕಾಂಗ್ರೆಸ್‌ಗೆ ಈ ಹೇಳಿಕೆ ಅವನತಿಯ ಅಡಿಗಲ್ಲು: ಆರ್‌. ಅಶೋಕ್‌

R Ashok

ಬೆಂಗಳೂರು: ದೇವರನ್ನು ಆಟಿಕೆ ಎನ್ನುವ ಮೂಲಕ ಕಾಂಗ್ರೆಸ್‌ ಪಕ್ಷ (Congress Party) ಬಾಲಿಶತನ ತೋರಿದೆ. ಮಾತಿನಲ್ಲಿ ಹಿಡಿತವಿಲ್ಲದೆ ಹಿಂದು ಧರ್ಮದ (Hindu Religion) ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಕಾಂಗ್ರೆಸ್‌ನ ಅವನತಿಗೆ ಅಡಿಗಲ್ಲಾಗಲಿದೆ. ಇದು ಮಾರಣಾಂತಿಕ ಕಲ್ಲಾಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಎಚ್ಚರಿಕೆ ನೀಡಿದರು. ರಾಮ ಮಂದಿರ (Ram Mandir) ವಿಷಯವಾಗಿ ಕಾಂಗ್ರೆಸ್‌ನ ಧೋರಣೆಯನ್ನು ಕಟುವಾಗಿ ಖಂಡಿಸಿದರು.

ಸಚಿವ ಕೆ.ಎನ್‌. ರಾಜಣ್ಣ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್.‌ ಅಶೋಕ್, ಕಾಂಗ್ರೆಸ್‌ನವರಿಗೆ ರಾಮ ಸೀತೆ ಎಲ್ಲರೂ ಟೂರಿಂಗ್‌ ಟಾಕೀಸ್‌ ಬೊಂಬೆಗಳಂತೆಯೇ ಕಾಣುತ್ತಾರೆ. ಹಿಂದೆ ಇವರೇ ರಾಮನನ್ನು ಕಾಲ್ಪನಿಕ ವ್ಯಕ್ತಿ, ಜನ್ಮ ಪ್ರಮಾಣ ಪತ್ರ ಇಲ್ಲ ಎಂದಿದ್ದರು. ಗುಜರಾತ್‌ನ ಸೋಮನಾಥ ದೇವಾಲಯ ಪುನರಜ್ಜೀವನಗೊಂಡಾಗ ಅದಕ್ಕೆ ಆಗಿನ ಪ್ರಧಾನಿ ಜವಾಹರ್‌ ಲಾಲ್ ನೆಹರು ಹೋಗಲಿಲ್ಲ. ಮುಸ್ಲಿಮರನ್ನು ಓಟ್‌ ಬ್ಯಾಂಕ್‌ ಮಾಡಿಕೊಂಡು, ಹಿಂದುಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಗುಣ ಕಾಂಗ್ರೆಸ್‌ನ ರಕ್ತದಲ್ಲೇ ಇದೆ. ವಕೀಲರಾಗಿರುವ ಸಿಎಂ ಸಿದ್ದರಾಮಯ್ಯ ಅವರೇ ಸುಪ್ರೀಂ ಕೋರ್ಟ್‌ ತೀರ್ಪಿಗೆ ಬೆಲೆ ಕೊಡುವುದಿಲ್ಲ ಎನ್ನುತ್ತಾರೆ ಎಂದು ಹರಿಹಾಯ್ದರು.

ಇವರ ಹೆಸರೇ ನಿದ್ದೆರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿಮಾನ ನಿಲ್ದಾಣದ ಕಾರ್ಯಕ್ರಮದಲ್ಲಿ ಆರಾಮವಾಗಿ ಗೊರಕೆ ಹೊಡೆಯುತ್ತಿದ್ದರು. ಸಿದ್ದರಾಮಯ್ಯ ನಿದ್ರೆ ಮಾಡುವ ವ್ಯಂಗ್ಯಚಿತ್ರಗಳು ಹರಿಡಾಡುತ್ತಿವೆ. ಆದರೆ ಪ್ರಧಾನಿ ಎಲ್ಲೂ ನಿದ್ರೆ ಮಾಡುವುದಿಲ್ಲ. ಮುಖ್ಯಮಂತ್ರಿ ಬರ ಪ್ರದೇಶಗಳಿಗೆ ಹೋಗಿ ಕೆಲಸ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ತಾವು ನಿದ್ರೆ ಮಾಡುವ ಚಿತ್ರವನ್ನು ಫ್ರೇಮ್‌ ಮಾಡಿಕೊಂಡು ಮನೆ ಮುಂದೆ ಹಾಕಿಕೊಳ್ಳಲಿ. ಇವರ ಹೆಸರೇ ನಿದ್ದೆರಾಮಯ್ಯ ಎಂದು ಬ್ರ್ಯಾಂಡ್‌ ಆಗಿದೆ ಎಂದು ವ್ಯಂಗ್ಯವಾಡಿದರು.

ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಪೂರ್ಣ ವಿಫಲ

ರಾಜ್ಯದ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಮಣಿಸಬೇಕಿದೆ. ಕಳೆದ ಏಳು ತಿಂಗಳಲ್ಲಿ ಕೊಲೆ, ಸುಲಿಗೆ ಹೆಚ್ಚಿದ್ದು, ಅಪರಾಧಿಗಳಿಗೆ ಪ್ರೀತಿ ತೋರಿಸಲಾಗುತ್ತಿದೆ. ಡಿ.ಕೆ.ಶಿವಕುಮಾರ್‌ ಅವರೇ ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದವರನ್ನು ಬ್ರದರ್‌ ಎಂದು ಹೇಳಿಕೊಳ್ಳುತ್ತಾರೆ. ಕೆಜಿ ಹಳ್ಳಿ ಡಿಜೆ ಹಳ್ಳಿ ಪ್ರಕರಣ ವಾಪಸ್‌ನಂತಹ ಘಟನೆ ನಡೆಯುತ್ತಿದೆ. ಕಾಂಗ್ರೆಸ್‌ನ ಮೃದು ಧೋರಣೆಯಿಂದ ಅಪರಾಧಿಗಳು ಎದ್ದು ಕುಳಿತಿದ್ದಾರೆ. ಹಾನಗಲ್‌ನ ಅತ್ಯಾಚಾರ ಪ್ರಕರಣದಲ್ಲೂ ಕಠಿಣ ಕ್ರಮ ವಹಿಸಿಲ್ಲ. ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಪೂರ್ಣ ವಿಫಲವಾಗಿದೆ ಎಂದು ಆರ್.‌ ಅಶೋಕ್ ಕಿಡಿಕಾರಿದರು.

ಅಭಿವೃದ್ಧಿಯ ಕಾರ್ಯ ಇಲ್ಲದೆ ಜನರು ರೊಚ್ಚಿಗೆದ್ದಿದ್ದಾರೆ

ಒಂದು ಕಡೆ ಡಿ.ಕೆ.ಶಿವಕುಮಾರ್‌, ಮತ್ತೊಂದು ಕಡೆ ಜಿ.ಪರಮೇಶ್ವರ, ಇನ್ನೊಂದೆಡೆ ಸತೀಶ್‌ ಜಾರಕಿಹೊಳಿಗೆ ಜೈ ಎನ್ನುವ ಗ್ಯಾಂಗ್‌ ಇದೆ. ಅಭಿವೃದ್ಧಿಯ ಕಾರ್ಯ ಇಲ್ಲದೆ ಜನರು ರೊಚ್ಚಿಗೆದ್ದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮಗ ಶಾಸಕರೂ ಅಲ್ಲ. ಅವರು ತಂದೆಯ ಬಗ್ಗೆ ಕುರುಡು ಪ್ರೇಮ ತೋರಿಸಬೇಕಿಲ್ಲ ಎಂದು ಆರ್.‌ ಅಶೋಕ್ ಹೇಳಿದರು.

ಮೋದಿ ಸರ್ಕಾರ ಶೇ.243 ರಷ್ಟು ಹೆಚ್ಚು ಪರಿಹಾರ ನೀಡಿದೆ

ಸರ್ಕಾರದ ಖಜಾನೆ ಖಾಲಿಯಾಗಿದ್ದು, ಎಲ್ಲ ಯೋಜನೆ ಮುಂದೂಡಲಾಗುತ್ತಿದೆ. ನೌಕರರ ವೇತನ ಹೆಚ್ಚಳ ಕೂಡ ಮಾಡಿಲ್ಲ. ಸರ್ಕಾರ ದಿವಾಳಿಯಾಗಿ ಜನರು ಇನ್ನಷ್ಟು ಕಷ್ಟ ಪಡಬೇಕಾಗುತ್ತದೆ. ಯುಪಿಎ ಸರ್ಕಾರವಿದ್ದಾಗ ಪರಿಹಾರ ಸಿಗಲು ಬಹಳ ತಡವಾಗಿದ್ದು, ಆಗ ಮಾತ್ರ ಕಾಂಗ್ರೆಸ್‌ ನಾಯಕರು ಸುಮ್ಮನಿದ್ದರು. ಈಗ ಕೇಂದ್ರದ ಮೇಲೆ ದೂರು ಹೇಳುತ್ತಿದ್ದಾರೆ. ಹಿಂದಿನ ಯುಪಿಎಗೆ ಹೋಲಿಸಿದರೆ ಮೋದಿ ಸರ್ಕಾರ ಶೇ.243 ರಷ್ಟು ಹೆಚ್ಚು ಪರಿಹಾರ ನೀಡಿದೆ ಎಂದು ಆರ್.‌ ಅಶೋಕ್‌ ಮಾಹಿತಿ ನೀಡಿದರು.

ಇದನ್ನೂ ಓದಿ: CM Siddaramaiah: ಮಹಾರಾಷ್ಟ್ರ ಕರ್ನಾಟಕದೊಳಗೆ ಬರಬಾರದು: ಸಿಎಂ ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್

ವರಿಷ್ಠರೊಂದಿಗೆ ಚರ್ಚೆ

ರಾಜ್ಯದಲ್ಲಿ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಕುರಿತು ನೀಲಿನಕ್ಷೆ ತಯಾರಾಗಿದೆ. ಹಿರಿಯ ನಾಯಕರು ಇದಕ್ಕೆ ಅಗತ್ಯ ಕ್ರಮಗಳನ್ನು ವಹಿಸಿದ್ದಾರೆ. ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್‌, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದೇನೆ ಎಂದು ಆರ್.‌ ಅಶೋಕ್ ತಿಳಿಸಿದರು.

Exit mobile version