Site icon Vistara News

Ramesh Jarakiholi : ಆಪರೇಷನ್‌ ಹಸ್ತ ಮಹಾನಾಯಕನ ಬೋಗಸ್‌ ಕಥೆ; ಡಿಕೆಶಿ ಮೇಲೆ ಸಾಹುಕಾರ್‌ ಪ್ರಹಾರ, ಸಿದ್ದು ಮೇಲೆ ಅಕ್ಕರೆ

Ramesh jarakiholi

ಚಿಕ್ಕೋಡಿ: ಆಪರೇಷನ್‌ ಹಸ್ತ (Operation hasta) ಎನ್ನುವುದು ಮಹಾನಾಯಕನ ಬೋಗಸ್‌ ಕಥೆ ಎಂದು ಹೇಳಿದ್ದಾರೆ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ (Ramesh Jarakiholi). ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ 25ರಿಂದ 30 ಹಿರಿಯ ಶಾಸಕರು ಬಿಟ್ಟುಹೋಗುವ ಸನ್ನಿವೇಶವೊಂದು ನಿರ್ಮಾಣವಾಗಿತ್ತು. ಅದನ್ನು ದಾರಿ ತಪ್ಪಿಸುವುದಕ್ಕಾಗಿ ಹೆಣೆದ ಕಥೆ ಇದು ಎಂದು ಅವರು ಹೇಳಿದ್ದಾರೆ. ಈ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದರು.

ʻʻಕಾಂಗ್ರೆಸ್ ಪಕ್ಷದ 25ರಿಂದ 30 ಹಿರಿಯ ಶಾಸಕರು ಮುಂದಿನ ನಿರ್ಣಯಕ್ಕೆ ಮಾಡಲು ಸೇರುವವರಿದ್ದರು. ಅದನ್ನು ಮರೆಮಾಚಲು ಮಹಾ ನಾಯಕ ಮಾಡಿದ ಕುತಂತ್ರವೇ ಆಪರೇಷನ್‌ ಹಸ್ತ. ಅದು ಬಿಟ್ಟರೆ ಇದರಲ್ಲಿ ಏನೂ ಇಲ್ಲ.. ಎಲ್ಲ ನನಗೆ ಗೊತ್ತಿದೆʼʼ ಎಂದು ರಮೇಶ್‌ ಜಾರಕಿಹೊಳಿ ಹೇಳಿದರು.

ʻʻಅವರ ಪಕ್ಷದಲ್ಲಿ 25ರಿಂದ 30 ಶಾಸಕರು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಸೇರುವವರಿದ್ದರು. ಹೀಗಾದರೆ ತಮ್ಮ ಪಕ್ಷಕ್ಕೆ ಅವಮಾನ ಆಗುತ್ತದೆ ಎಂಬ ಕಾರಣಕ್ಕಾಗಿ ಆಪರೇಷನ್ ಹಸ್ತ ಎಂಬ ಕಥೆಯನ್ನು ಕಟ್ಟಿದರು. ಅವರೆಲ್ಲರೂ ಸಿಎಂಗೆ ಪತ್ರ ಬರೆದು ಬಳಿಕ ಬಿಜೆಪಿ ಸೇರುವವರಿದ್ದರು. ಆಗ ಅವರನ್ನು ಹೆದರಿಸಲು ಅವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರ್ತಾರೆ, ಇವರು ಬರ್ತಾರೆ ಎಂದೆಲ್ಲ ನಾಟಕ ಮಾಡಿದ್ದಾರೆ. ಬಂಡುಕೋರರ ದೃಷ್ಟಿ ಬೇರೆಡೆ ಸೆಳೆಯಲು ಈ ರೀತಿ ಮಾಡಿದ್ದಾರೆʼʼ ಎಂದು ರಮೇಶ್‌ ಜಾರಕಿಹೊಳಿ ನುಡಿದರು.

ʻʻಆಪರೇಷನ್ ಹಸ್ತ ಮಾಡೋರು ಮೂರ್ಖರು, ಹೋಗುವವರು ಕೂಡಾ ಮೂರ್ಖರುʼʼ ಎಂದು ಹೇಳಿದ ರಮೇಶ್‌ ಜಾರಕಿಹೊಳಿ, ಫಲಿತಾಂಶದ ಬಳಿಕ ಆರು ತಿಂಗಳ ಕಾಲ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಬಾರದು ಅಂದುಕೊಂಡಿದ್ದೆ, ಈಗ ಮೂರು ತಿಂಗಳಾಗಿದೆ. ಈಗಲೇ ಮಾತನಾಡೋ ಪರಿಸ್ಥಿತಿ ಬಂದಿದೆʼʼ ಎಂದರು.

ʻʻನಾವು ಆಪರೇಷನ್‌ ಕಮಲ ಮೂಲಕ ಬಿಜೆಪಿ ಸೇರಿದಾಗ ಒಂದು ಅರ್ಥ ಇತ್ತು. ಸರ್ಕಾರಕ್ಕೆ ಬಹುಮತ ಇರಲಿಲ್ಲ, ಅದು ನಮ್ಮ ಸ್ವಂತ ನಿರ್ಣಯ. ಯಾರೂ ಬಿಜೆಪಿಯವರು ನಮಗೆ ಆಹ್ವಾನ ನೀಡಿರಲಿಲ್ಲ‌. ಕಾಂಗ್ರೆಸ್‌ನಲ್ಲಿ ಆದ ಅನ್ಯಾಯದಿಂದ ಹೊರಬಂದಿದ್ವಿ. ಆಪರೇಷನ್ ಕಮಲ ಏನಲ್ಲ, ನಾವು ಸ್ವತಃ ಮನಃಪೂರ್ವಕವಾಗಿ ಹೋಗಿ ಯಶಸ್ಸು ಕಂಡಿದ್ದೇವೆʼʼ ಎಂದು ಹೇಳಿದ ಅವರು, ಆದ್ರೆ ಈಗಿನ ಆಪರೇಷನ್‌ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದರು.

ಶೆಟ್ಟರ್‌, ಸವದಿ ಜರೂರತ್ತು ಇಲ್ಲ, ಬಂದರೆ ಬರಲಿ!

ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಅವರಿಗೆ ಬಿಜೆಪಿಗೆ ಬರುವಂತೆ ಶೋಭಾ ಕರಂದ್ಲಾಜೆ ಅವರು ಪರೋಕ್ಷ ಆಹ್ವಾನ ನೀಡಿರುವ ವಿಚಾರದ ಬಗ್ಗೆ ಕೇಳಿದಾಗ, ʻʻಅವರೆಲ್ಲ ಸ್ವಯಂಘೋಷಿತ ಲೀಡರ್‌ಗಳು, ತಾವು ತಾವೇ ಮಾಧ್ಯಮಗಳಲ್ಲಿ ಹಾಕಿಸುತ್ತಾರೆ. ನಮಗೇನೂ ಅಂಥ ಜರೂರತ್ತು ಇಲ್ಲ. ಇಂತಹ ಪ್ರಮಾಣದಲ್ಲಿ ಅಸಹ್ಯ ಮಾಡಿದವರನ್ನು ತೆಗೆದುಕೊಳ್ಳುವುದು ಬಿಡುವುದು ನಾಯಕರಿಗೆ ಬಿಟ್ಟ ವಿಚಾರ. ಪಕ್ಷಕ್ಕೆ ತೆಗೆದುಕೊಂಡರೆ ಸ್ವಾಗತʼʼ ಎಂದರು ರಮೇಶ್ ಜಾರಕಿಹೊಳಿ.

ಕಾಂಗ್ರೆಸ್ ಪಕ್ಷಕ್ಕೆ ಮರಳಿ ಹೋಗುವ ಚಾನ್ಸ್‌ ಏನಾದರೂ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ʻʻನನ್ನ ರುಂಡ ಸಹ ಹೋಗಲ್ಲ ಅಲ್ಲಿ, ಇಲ್ಲೇ ಉಳಿಯೋದು. ಬಿಜೆಪಿಯಲ್ಲೇ ಎಂಡ್ ನನ್ನ ರಾಜಕಾರಣʼʼ ಎಂದರು.

ಸತೀಶ್ ಜಾರಕಿಹೊಳಿ ಮಗಳಿಗೆ ಲೋಕಸಭೆ ಕಾಂಗ್ರೆಸ್ ಟಿಕೆಟ್ ಕೊಟ್ರೆ ನೀವು ಸ್ಪರ್ಧೆ ಮಾಡ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ʻʻನಾನು ಲೋಕಸಭೆ ಚುನಾವಣೆಗೆ ನಿಲ್ಲಲ್ಲ. ನನ್ನ ಮಗಳಿಗೆ ಟಿಕೆಟ್ ನೀಡಿದರೂ ನಾನು ಪಕ್ಷದ ಪರ ಕೆಲಸ ಮಾಡುವೆʼʼ ಎಂದರು.

ಇದನ್ನೂ ಓದಿ: DK Shivakumar : ಡಿಕೆ ಶಿವಕುಮಾರ್‌ ಟಿಪ್ಪಣಿ ಆಧರಿಸಿ ಮಾಡಿದ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಗೆ ಹೈಕೋರ್ಟ್‌ ತಡೆ

ಸಿದ್ದರಾಮಯ್ಯ ಬಗ್ಗೆ ಸಾಫ್ಟ್‌ ಕಾರ್ನರ್‌

ಡಿಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಸಿಎಂ ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಕಾರ್ನರ್ ಪ್ರದರ್ಶಿಸಿದರು ರಮೇಶ್‌ ಜಾರಕಿಹೊಳಿ. ಬರಗಾಲ ಘೋಷಣೆಗೆ ರಾಜ್ಯ ಸರ್ಕಾರ ಹಿಂದೇಟು ವಿಚಾರ ಪ್ರಸ್ತಾಪಿಸಿದಾಗ, ʻʻಸರ್ಕಾರಕ್ಕೆ ಅವರದ್ದೇ ಆದ ವಿಚಾರ ಇರುತ್ತದೆ. ಸಿದ್ದರಾಮಯ್ಯರವರ ಬಗ್ಗೆ ಗೌರವ ಇದೆ, ಒಳ್ಳೆಯ ನಿರ್ಣಯ ತಗೆದುಕೊಳ್ಳುವ ನಿರೀಕ್ಷೆ ಇದೆʼʼ

ʻʻ2013ರಿಂದ 2018ರಲ್ಲಿ ನಾನು ಅವರ ಜೊತೆಗೆ ಸಚಿವನಾಗಿದ್ದಾಗ ನೋಡಿದ ಸಿದ್ದರಾಮಯ್ಯ ಈಗ ಕಾಣುತ್ತಿಲ್ಲ. ಅವರಿಗೆ ಫ್ರೀ ಹ್ಯಾಂಡ್ ಇರುವುದು ಕಾಣುತ್ತಿಲ್ಲ. ಸಿದ್ದರಾಮಯ್ಯ ಮುಖದಲ್ಲಿ ಖುಷಿ ಇಲ್ಲ. 2013ರಲ್ಲಿ ನೋಡಿದ ಸಿದ್ದರಾಮಯ್ಯರಲ್ಲಿ 2023ರಲ್ಲಿ ನೋಡಲಾಗುತ್ತಿಲ್ಲʼʼ ಎಂದು ಹೇಳಿದರು.

Exit mobile version