ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪದ ನಂತರ ಪ್ರಕರಣವನ್ನು ಸಿಎಂ ಬಸವರಾಜ ಬೊಮ್ಮಾಯಿ ಸಿಬಿಐಗೆ ವಹಿಸುತ್ತಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಮಂಗಳವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಆಗಮಿಸಿದ ರಮೇಶ್ ಜಾರಕಿಹೊಳಿ ಸಾಕಷ್ಟು ಹೊತ್ತು ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸೋಮವಾರವಷ್ಟೆ ಸುದ್ದಿಗೋಷ್ಠಿ ನಡೆಸಿದ್ದ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ ಎನ್ನಲಾದ 18 ಸೆಕೆಂಡುಗಳ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಅಕ್ರಮ ಆಸ್ತಿ ಗಳಿಕೆ ಬಗ್ಗೆ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ ಎನ್ನಲಾಗಿತ್ತು.
ಮಂಗಳವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಆಗಮಿಸಿದ ರಮೇಶ್ ಜಾರಕಿಹೊಳಿ, ಸಿಡಿ ಕುರಿತು ಕೆಲ ಮಹತ್ವದ ವಿಷಯಗಳ ಕುರಿತು ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ನೀಡುವುದಕ್ಕೆ ಒತ್ತಾಯ ಮಾಡಿದ್ದು, ಹಾಗೆ ಸಿಬಿಐಗೆ ನೀಡಿದರೆ ಅಗತ್ಯ ಸಾಕ್ಷ್ಯಾಧಾರಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮಗಳಿಗೆ ತಡವಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೊರಟಾಗ ಅವರ ಜತೆಯಲ್ಲೇ ವಿಮಾನದಲ್ಲಿ ಧಾರವಾಡಕ್ಕೆ ಜಾರಕಿಹೊಳಿ ಹೊರಟಿದ್ದಾರೆ.
ಇದನ್ನೂ ಓದಿ : Ramesh Jarkiholi : ಮೂರನೆಯವರಿಗಾಗಿ ಪಕ್ಷ ಬಿಡಬೇಡಿ ಎಂದು ಡಿ.ಕೆ. ಶಿವಕುಮಾರ್ ಪತ್ನಿ ಹೇಳಿದ್ದರು: ರಮೇಶ್ ಜಾರಕಿಹೊಳಿ
ಇದೀಗ ಸಿಎಂ ಬಸವರಾಜ ಬೊಮ್ಮಾಯಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜ್ಯ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಆಗುವ ಸಾಧ್ಯತೆಯಿದೆ.