Site icon Vistara News

Karnataka Politics : ಬಿ.ಎಲ್.‌ ಸಂತೋಷ್‌ ಭೇಟಿಯಾದ ರಮೇಶ್‌ ಜಾರಕಿಹೊಳಿ; ವಿರೋಧಿಗಳಿಗೆ ಠಕ್ಕರ್

Ramesh Jarkiholi meets BL Santhosh in new delhi

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ (Karnataka Politics) ಸದಾ ಒಂದಿಲ್ಲೊಂದು ಕಾರಣಗಳಿಗಾಗಿ ಬೆಳಗಾವಿ ಜಿಲ್ಲೆಯು (Belagavi district) ಸುದ್ದಿಯಲ್ಲಿರುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly elections) ಹಲವು ಕಾರಣಗಳಿಂದ ಈ ಜಿಲ್ಲೆಯು ಸದ್ದು ಮಾಡಿತ್ತು. ಅದರಲ್ಲೂ ಬೆಳಗಾವಿ ಸಾಹುಕಾರ್‌ ಎಂದೇ ಖ್ಯಾತಿ ಪಡೆದಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi) ಅವರು ಅನೇಕ ಕಾರಣಗಳಿಂದ ಸುದ್ದಿಯಲ್ಲಿದ್ದರು. ಈ ಜಿಲ್ಲೆಯಲ್ಲಿ ಅವರು ಸೂಚಿಸಿದ ಬಹುತೇಕರಿಗೆ ಬಿಜೆಪಿ ಮನ್ನಣೆ ನೀಡಿತ್ತು. ಆದರೆ, ಎಲ್ಲರನ್ನೂ ಗೆಲ್ಲಿಸಿಕೊಂಡು ಬರುವಲ್ಲಿ ರಮೇಶ್‌ ಯಶ ಕಾಣಲಿಲ್ಲ. ಈ ನಡುವೆ ಅವರ ಮೇಲೆ ಜಿಲ್ಲೆಯ ಹಲವು ಶಾಸಕರು, ಮಾಜಿ ಶಾಸಕರು, ಕೆಲವು ನಾಯಕರು ಹೈಕಮಾಂಡ್‌ (BJP High Command) ಬಳಿ ದೂರು ಹೇಳಿದ್ದರು. ಇದರ ಬೆನ್ನಲ್ಲೇ ಈಗ ರಮೇಶ್‌ ಜಾರಕಿಹೊಳಿ ಮತ್ತೆ ಆ್ಯಕ್ಟಿವ್‌ ಆಗಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್‌ (BL Santhosh) ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ, ಅಚ್ಚರಿ ಮೂಡಿಸಿದ್ದಾರೆ.

ರಮೇಶ್‌ ಜಾರಕಿಹೊಳಿ ಅವರು ಲೋಕಸಭೆ ಚುನಾವಣೆಗೂ (Lok Sabha Election 2023) ಮುನ್ನವೇ ಮತ್ತೆ ರಾಜಕೀಯ ಆಟವನ್ನು ಆರಂಭಿಸಿದ್ದಾರೆಯೇ ಎಂಬ ಗುಮಾನಿ ಈಗ ಆರಂಭವಾಗಿದೆ. ಕೆಲವು ದಿನಗಳ ಹಿಂದೆ ರಮೇಶ್ ವಿರುದ್ಧ ಜಿಲ್ಲಾ ಬಿಜೆಪಿ ನಾಯಕರು ದೂರು ನೀಡಿ ಬಂದಿದ್ದರು. ಜೊಲ್ಲೆ ದಂಪತಿ, ರಾಜ್ಯಸಭಾ ಈರಣ್ಣ ಕಡಾಡಿ, ಮಾಜಿ ಎಂಎಲ್‌ಸಿ ಮಹಾಂತೇಶ್ ಕವಟಗಿಮಠ ಸೇರಿ ಕೆಲ ನಾಯಕರು ವರಿಷ್ಠರನ್ನು ಭೇಟಿಯಾಗಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಭಾಗದಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ರಮೇಶ್ ಜಾರಕಿಹೊಳಿ ಅವರೇ ನೇರ ಕಾರಣರಾಗಿದ್ದಾರೆ. ಅವರು ಸೂಚಿಸಿದ ವ್ಯಕ್ತಿಗಳಿಗೆ ಮಣೆ ಹಾಕಿದ್ದೇ ಸಮಸ್ಯೆಗೆ ಕಾರಣವಾಗಿದೆ. ಅವರ ವೈಯಕ್ತಿಕ ನಿರ್ಧಾರಗಳು ಪಕ್ಷದ ಮೇಲೆ, ಕಾರ್ಯಕರ್ತರ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಜವಾಬ್ದಾರಿಯನ್ನು ಯಾವುದೇ ಕಾರಣಕ್ಕೂ ರಮೇಶ್ ಕೈಯಲ್ಲಿ ನೀಡಬಾರದು ಎಂದು ಮನವಿ ಮಾಡಿದ್ದರು.

Ramesh Jarkiholi meets BL Santhosh in new delhi

ಬಿ.ಎಲ್.‌ ಸಂತೋಷ್‌ ಭೇಟಿಯಾದ ರಮೇಶ್‌ ಜಾರಕಿಹೊಳಿ

ತಮ್ಮ ವಿರೋಧಿ ಗ್ಯಾಂಗ್ ವರಿಷ್ಠರ ಭೇಟಿ ಮಾಡಿ ದೂರು ಹೇಳಿ ಬಂದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ದೆಹಲಿಗೆ ಹಾರಿದ್ದಾರೆ. ಅಲ್ಲಿ ಬಿ.ಎಲ್. ಸಂತೋಷ್‌ ಅವರನ್ನು ಭೇಟಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಸಂತೋಷ್‌ ಅವರನ್ನು ಭೇಟಿಯಾಗಿ ಜಿಲ್ಲಾ ರಾಜಕಾರಣ, ಲೋಕಸಭೆ ಚುನಾವಣೆ ತಯಾರಿ ಕುರಿತು ಚರ್ಚೆ ನಡೆಸಿ ಬಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Independence Day 2023 : ಆಗಸ್ಟ್‌ 15ರಂದು ಕೆಂಪುಕೋಟೆಗೆ ಆಹ್ವಾನ; ಬಣವಿಕಲ್ಲು ದಂಪತಿ ಸಂತಸ

ಇದೇ ವೇಳೆ ವಿಧಾನಸಭೆ ಚುನಾವಣೆ ಸೋಲಿನ ಕುರಿತು ಕೂಡ ರಮೇಶ್ ಮಾಹಿತಿ ನೀಡಿದ್ದಾರೆ. ಜಿಲ್ಲಾ ರಾಜಕಾರಣದಲ್ಲಿ ಕೆಲವರು ಗುಂಪುಗಾರಿಕೆ ಮಾಡುತ್ತಿದ್ದಾರೆ. ಚುನಾವಣೆ ವೇಳೆ ಬೇರೆ ಪಕ್ಷದ ನಾಯಕರ ಜತೆಗೆ ಕೈಜೋಡಿಸಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ. ಇದೇ ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು. ನೀವು ಮಧ್ಯ ಪ್ರವೇಶ ಮಾಡಿ ಎಲ್ಲವನ್ನೂ ಸರಿಪಡಿಸಿ ಎಂದು ಬಿ.ಎಲ್ ಸಂತೋಷ್‌ ಅವರಿಗೆ ರಮೇಶ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ದೆಹಲಿ ನಾಯಕರಿಗೆ ಬೆಳಗಾವಿ ಜಿಲ್ಲಾ ನಾಯಕರ ಬಣ ಬಡಿದಾಟ ತಲೆನೋವಾಗಿ ಪರಿಣಮಿಸಿದೆ.

Exit mobile version