ಬೆಂಗಳೂರು: ನಕಲಿ ವೋಟರ್ ಐಡಿ (Fake voter ID) ಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಲ್ಲದೆ, ಹೊರದೇಶದಿಂದ ಬಂದವರಿಗೂ ರೇಷನ್ ಕಾರ್ಡ್ (Ration Card) ಕೊಡಲಾಗುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ಇಲ್ಲವೇ ಎನ್‍ಐಎ ತನಿಖೆಗೆ (CBI or NIA probe) ವಹಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ (Former minister Suresh Kumar), ಹೆಬ್ಬಾಳದ ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣದ ಸಿಬಿಐ ಅಥವಾ ಎನ್‍ಐಎ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Congress Politics : ಅಭಿವೃದ್ಧಿ ಬಗ್ಗೆ ಮಾಧ್ಯಮ ಚರ್ಚೆಗೆ ಬನ್ನಿ; ಎಚ್‌ಡಿಕೆಗೆ ಡಿಕೆಶಿ ಸವಾಲು
ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್‌ನಲ್ಲಿ ಸಿದ್ಧಪಡಿಸಿದ ನಕಲಿ ಆಧಾರ್ ಕಾರ್ಡ್‍ಗಳನ್ನು ರದ್ದುಪಡಿಸಬೇಕು. ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡಬಾರದು. ಇದು ಕೇವಲ ರಾಜಕೀಯದ ಪ್ರಶ್ನೆಯಲ್ಲ. ಸಮಾಜದ ಅಳಿವು – ಉಳಿವಿನ ಪ್ರಶ್ನೆ ಎಂದು ಎಸ್. ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಜನ್ಮ ದೃಢೀಕರಣ ಪತ್ರವನ್ನೂ ನೀಡದೆ ಆಧಾರ್ ಕಾರ್ಡ್ ಮಾಡಲಾಗಿದೆ ಎಂದರೆ, ಇವರ ಅಟ್ಟಹಾಸ, ಅಹಂಕಾರ ಎಷ್ಟಿರಬೇಕು? ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದನ್ನು ಚುನಾವಣಾ ಗೆಲುವಿಗಾಗಿ ಮಾಡಿಸಿದ್ದಾರೆ. ಇದರ ಕುರಿತು ಚುನಾವಣಾ ಆಯೋಗಕ್ಕೂ ದೂರು ಕೊಡಲಿದ್ದೇವೆ. ಆಧಾರ್ ಕಾರ್ಡ್, ನಕಲಿ ಮತದಾರರ ಚೀಟಿ ಜಾಲದ ವ್ಯಾಪ್ತಿಯ ವಿಚಾರಣೆ ಆಗಬೇಕಿದ್ದು, ಎನ್‍ಐಎ ಅಥವಾ ಸಿಬಿಐಗೆ ಈ ಪ್ರಕರಣವನ್ನು ಒಪ್ಪಿಸಲು ಕೋರಲಿದ್ದೇವೆ ಎಂದು ಎಸ್. ಸುರೇಶ್ ಕುಮಾರ್ ತಿಳಿಸಿದರು.
ಬೈರತಿ ಸುರೇಶ್ ವಿಚಾರಣೆಯೂ ನಡೆಯಲಿ
ರಾಜ್ಯದ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ತಮ್ಮ ಗಾಂಭೀರ್ಯತೆ ತೋರಿಸಲಿ. ಈ ಪ್ರಕರಣದಲ್ಲಿ ಸಚಿವ ಬೈರತಿ ಸುರೇಶ್ ವಿಚಾರಣೆಯೂ ನಡೆಯಬೇಕು ಎಂದು ಎಸ್. ಸುರೇಶ್ ಕುಮಾರ್ ಆಗ್ರಹಿಸಿದರು.
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ಪ್ರಕಾರ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸ್ ಇನ್‍ಸ್ಪೆಕ್ಟರ್ ಅವರು ಇದೇ 19ರಂದು ಆರ್‌ಟಿ ನಗರದ ಸುಲ್ತಾನ್ ಪಾಳ್ಯ ಬನಶಂಕರಿ ಕಾಂಪ್ಲೆಕ್ಸ್‌ನ ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್‌ನಲ್ಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಇವರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತಿತರ ದಾಖಲಾತಿಗಳನ್ನು ತಮ್ಮ ಅಂಗಡಿಯ ಕಂಪ್ಯೂಟರ್‌ನಲ್ಲಿ ಸುಳ್ಳು ಸೃಷ್ಟಿ ಮಾಡಿ ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಗೆ, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸಹಕರಿಸುತ್ತಿದ್ದರು. ನಿಜವಾದ ಗುರುತಿನ ಚೀಟಿಗಳೆಂದು ಹೆಚ್ಚಿನ ಹಣಕ್ಕೆ ನೀಡಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು. ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್ ಮಾಲೀಕ ಮೌನೇಶ್ ಕುಮಾರ್ ಹಾಗೂ ಈತನ ಕೃತ್ಯಕ್ಕೆ ಸಹಕರಿಸಿದ ಭಗತ್, ರಾಘವೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಲಾಗಿತ್ತು ಎಂದು ಎಸ್. ಸುರೇಶ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: Karnataka Politics : ಸಿದ್ದರಾಮಯ್ಯ ನೋವಿನಲ್ಲಿದ್ದಾರೆ; ನಿಮ್ಮ ತಪ್ಪಿಂದ ಸರ್ಕಾರ ಬಿದ್ದರೆ ನಮ್ಮನ್ನು ದೂಷಿಸಬೇಡಿ: ಸಿಪಿವೈ
ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ಅಪರಾಧ
ಸೆಕ್ಷನ್ 420 ಸೇರಿ ಹಲವು ಸೆಕ್ಷನ್‍ಗಳಡಿ ಎಫ್‍ಐಆರ್ ದಾಖಲಾಗಿದೆ. ಈ ಅಪರಾಧವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ. ಆಧಾರ್ ಕಾರ್ಡ್ ನಕಲಿ ಸೃಷ್ಟಿಯು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಮಹಾನ್ ಅಪರಾಧ. ಆರೋಪಿಗಳು ಶಾಸಕ- ಸಚಿವ ಬೈರತಿ ಸುರೇಶ್ ಅವರು ನಿಕಟವರ್ತಿಗಳು ಎಂದು ಆರೋಪಿಸಿದ ಎಸ್. ಸುರೇಶ್ ಕುಮಾರ್, ಮೌನೇಶ್ ಸ್ಕೂಟರ್ ರೈಡ್ ಮಾಡುತ್ತಿದ್ದು, ಬೈರತಿ ಸುರೇಶ್ ಹಿಂದೆ ಕುಳಿತಿದ್ದ ಫೋಟೊವನ್ನು ಇದೇ ವೇಳೆ ಪ್ರದರ್ಶಿಸಿದರು.
ನಕಲಿ ಮತದಾರರ ಗುರುತು ಚೀಟಿ ಸಿದ್ಧಪಡಿಸುವುದು ಕೂಡ ರಾಷ್ಟ್ರೀಯ ಅಪರಾಧ. ರಾಷ್ಟ್ರೀಯ ಭದ್ರತೆಯ ವಿರುದ್ಧ ನಡೆದ ಕುಕೃತ್ಯದ ಬಗ್ಗೆ ಯಾವುದೇ ಕಾಂಗ್ರೆಸ್ ನಾಯಕರು ಮಾತನಾಡಿಲ್ಲ. ಬೈರತಿ ಸುರೇಶ್ ಅವರು ಸಿಎಂಗೆ ಹತ್ತಿರದವರೆಂದು ಯಾರೂ ಮಾತನಾಡುತ್ತಿಲ್ಲ ಎಂದು ಎಸ್. ಸುರೇಶ್ ಕುಮಾರ್ ಆರೋಪಿಸಿದರು.
ವಿದೇಶಿಗರಿಗೆ ಸುಲಭವಾಗಿ ನಕಲಿ ಗುರುತಿನ ಚೀಟಿ: ವಿವೇಕ್ ರೆಡ್ಡಿ
ವಕೀಲರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ ಮಾತನಾಡಿ, ಭಾರತದಲ್ಲಿ ಪೌರತ್ವ ಗುರುತು ಚೀಟಿ ಇಲ್ಲ; ಅದಕ್ಕೆ ಹತ್ತಿರದ ಹೋಲಿಕೆಯ ಕಾರ್ಡ್ ಎಂದರೆ ಆಧಾರ್ ಕಾರ್ಡ್ ಆಗಿದೆ. ಇದರ ಮೂಲಕ ಹಲವಾರು ಸೌಲಭ್ಯಗಳನ್ನು ಪಡೆಯಬಹುದು. ಬಾಂಗ್ಲಾದೇಶದಿಂದ ಬಂದ ನಿವಾಸಿಗಳು ಅತ್ಯಂತ ಸುಲಭವಾಗಿ ಇಂಥ ನಕಲಿ ಗುರುತಿನ ಚೀಟಿ ಪಡೆಯುವಂತಾಗಿದೆ ಎಂದು ಆಕ್ಷೇಪಿಸಿದರು.
ಭಾರತೀಯ ನಿವಾಸಿಗಳು ಕೆಲವು ಸಂದರ್ಭಗಳಲ್ಲಿ ಕೋರ್ಟಿಗೆ ಹೋಗಿ, ಪುರಾವೆ ನೀಡಿ ಅತ್ಯಂತ ಕಷ್ಟದಿಂದ ಆಧಾರ್ ಕಾರ್ಡ್ ಮಾಡಿಸುತ್ತಾರೆ. ಆದರೆ, ಇಲ್ಲಿ ಬೇರೆ ದೇಶದವರು ಸಲೀಸಾಗಿ ನಕಲಿ ಆಧಾರ್ ಕಾರ್ಡ್ ಮಾಡಿಸುತ್ತಿದ್ದಾರೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ ಎಂದು ವಿವೇಕ್ ರೆಡ್ಡಿ ಟೀಕಿಸಿದರು.
ಇದನ್ನೂ ಓದಿ: Karnataka Politics : ಬಿಜೆಪಿ ಮೈತ್ರಿ ಹಿಂಪಡೆಯದಿದ್ದರೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ದೇವೇಗೌಡರೇ ಬದಲು!
ಸರ್ಕಾರ ಇದರ ಹಿಂದಿನ ಜಾಲವನ್ನು ಭೇದಿಸಿ ಪೂರ್ಣ ಜಾಲವನ್ನು ಬಂಧಿಸಲು ಸೂಚಿಸಬೇಕು. ಚುನಾವಣಾ ಆಯೋಗವು ಇಂಥ ಮತದಾರರ ನಕಲಿ ಗುರುತುಚೀಟಿ ಕುರಿತಂತೆ ತನಿಖೆ ನಡೆಸಬೇಕು ಎಂದು ವಿವೇಕ್ ರೆಡ್ಡಿ ಒತ್ತಾಯಿಸಿದರು. ಬಿಜೆಪಿ ಮುಖಂಡ ಕಟ್ಟಾ ಜಗದೀಶ್ ನಾಯ್ಡು ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.