Site icon Vistara News

Veerashaiva Lingayat: ಮರು ಜಾತಿಗಣತಿ ಮಾಡಿ; ಸರ್ಕಾರಕ್ಕೆ ವೀರಶೈವ ಮಹಾಸಭಾ ಒಕ್ಕೊರಲ ಆಗ್ರಹ

veerashaiva lingayat conference

ದಾವಣಗೆರೆ: ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ವೇಳೆ ಕಾಂತರಾಜ್‌ ಆಯೋಗದ ಜಾತಿ ಗಣತಿ ವರದಿ (Caste Census Report) ಪ್ರಸ್ತಾಪವಾಗಿದೆ. ವೀರಶೈವ ಲಿಂಗಾಯತ ಸಮಾಜದ (Veerashaiva Lingayat community) ಸಚಿವರು, ಶಾಸಕರು, ಸ್ವಾಮೀಜಿಗಳು ಹಾಗೂ ಮುಖಂಡರು ಜಾತಿ ಗಣತಿಯ ವೈಜ್ಞಾನಿಕತೆ ಬಗ್ಗೆ ಧ್ವನಿ ಎತ್ತಿದ್ದಾರೆ. ನಾವ್ಯಾರೂ ಜಾತಿ ಗಣತಿಯ ವಿರೋಧಿಗಳಲ್ಲ. ವಾಸ್ತವಾಂಶದ ಆಧಾರದಲ್ಲಿ ಜಾತಿಯ ಗಣತಿ ಆಗಬೇಕು. ಈ ನಿಟ್ಟಿನಲ್ಲಿ ಮರು ಜಾತಿ ಗಣತಿಯನ್ನು (Re caste census) ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಎಲ್ಲಾ ಧರ್ಮಿಯರಿಗೆ ಆಶ್ರಯ ಕೊಟ್ಟ ಕೀರ್ತಿ ಲಿಂಗಾಯತ ಸಮಾಜಕ್ಕೆ ಸಲ್ಲುತ್ತೆ | Eshwar Khandre | Vistara News

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಮಾತನಾಡಿದ ಸಚಿವ ಹಾಗೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ನಾವು ಜಾತಿಗಣತಿ ವಿರೋಧಿಗಳು ಅಲ್ಲ. ಸಮೀಕ್ಷೆ ವಾಸ್ತವಾಂಶದಿಂದ ಹಾಗೂ ವೈಜ್ಞಾನಿಕತೆಯಿಂದ ಕೂಡಿರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಸರ್ಕಾರ ಹೊಸ ಜಾತಿ ಜನಗಣತಿಯನ್ನು ಮಾಡಬೇಕು. ಈಗಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಮನವಿ ಮಾಡಿದ್ದೇವೆ. ಪಕ್ಷಾತೀತವಾಗಿ ಈ ನಿರ್ಣಯ ಮಾಡಿದ್ದೇವೆ. ಸಂಘಟಿತವಾಗಿ ಸರ್ಕಾರಕ್ಕೆ ಒತ್ತಾಯ ಮಾಡಬೇಕು. ಎಲ್ಲ ಜಾತಿಗಳನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಸಮುದಾಯವೆಂದರೆ ಅದು ವೀರಶೈವ ಲಿಂಗಾಯತ ಸಮುದಾಯ ಎಂದು ಹೇಳಿದರು.

ಲಿಂಗಾಯತರು ಸುಧಾರಿಸಿದರೆ ರಾಜ್ಯ ಸುಧಾರಿಸುತ್ತದೆ. ಲಿಂಗಾಯತರು ಹಾಳಾದರೆ ರಾಜ್ಯ ಹಾಳಾಗುತ್ತದೆ. ನಮ್ಮದು ಹೇಡಿ ಸಮುದಾಯವಲ್ಲ. ಆರ್ಥಿಕವಾಗಿ ನಮ್ಮ ಸಮುದಾಯ ಸದೃಢರಾಗಬೇಕು. ನಾವು ಸದೃಢರಾದರೆ ಇತರ ಸಮುದಾಯವನ್ನು ಜತೆಗೆ ಕರೆದುಕೊಂಡು ಹೋಗಬೇಕು. ಇಂದು ನಮ್ಮ ಸಮಾಜದಲ್ಲಿ ಹಲವು ಕವಲು ದಾರಿಗಳಾಗಿವೆ. ನಾವೆಲ್ಲರೂ ಶ್ರೀಮಂತರಿದ್ದೇವೆ. ಆದರೆ, ಒಗ್ಗಟ್ಟಿನ ಕೊರತೆ ಹೆಚ್ಚಾಗಿದೆ. ವೀರಶೈವ ಲಿಂಗಾಯತ ಒಂದೇ ಎಂಬ ಭಾವನೆ ಮೂಡಬೇಕು. ಅದು ಈಗ ಮೂಡುತ್ತಿದೆ. ಎಲ್ಲ ಜಾತಿ, ಮತ, ಪಂಥಗಳ ಮೀರಿ ಅಪ್ಪಿಕೊಳ್ಳುವ ಸಮುದಾಯ ನಮ್ಮದು ಎಂದು ಈಶ್ವರ ಖಂಡ್ರೆ ಹೇಳಿದರು.

ಕೇಂದ್ರದ ಒಬಿಸಿ ಪಟ್ಟಿಯಲ್ಲಿ ನಮ್ಮ ಸಮುದಾಯ 1993ರಲ್ಲಿ ಬಿಟ್ಟು ಹೋಗಿದೆ. ಅಭಿವೃದ್ಧಿ ಹೊಂದಿದ ಎಷ್ಟೋ ಸಮುದಾಯಗಳು ಒಬಿಸಿ ಪಟ್ಟಿಯಲ್ಲಿ ಇವೆ. ಆದರೆ, ನಮ್ಮ ಸಮುದಾಯ ಮಾತ್ರ ಇಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ನಾವು ಒತ್ತಾಯ ಮಾಡುತ್ತೇವೆ. ಒಬಿಸಿ ಪಟ್ಟಿಗೆ ಸಮುದಾಯವನ್ನು ಸೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಕೂಡ ನಮ್ಮ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಬೇಕು. ಶೇಕಡಾ 27ರಷ್ಟು ಒಬಿಸಿ ಪಟ್ಟಿಯಲ್ಲಿ ನಮ್ಮನ್ನು ಸೇರಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಆಗ್ರಹಿಸಿದರು.

ಜಾತಿಗಣತಿಯನ್ನು ನಾವು ಒಪ್ಪುವುದಿಲ್ಲ: ಜಿ.ಎಂ. ಸಿದ್ದೇಶ್ವರ

ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ವೀರಶೈವ ಒಳ ಪಂಗಡಗಳು ಒಂದಾಗಬೇಕು. ಒಂದಾದಾಗ ಮಾತ್ರ ಸರ್ಕಾರದಲ್ಲಿ ವೀರಶೈವ ಸಮುದಾಯ ಇರುತ್ತದೆ. ವೀರಶೈವ ಸಮುದಾಯ ಕೇಂದ್ರದ ಒಬಿಸಿ ಪಟ್ಟಿಗೆ ಸೇರಬೇಕು ಎಂಬ ಒತ್ತಾಯವಿದೆ. ಜಾತಿಗಣತಿಯನ್ನು ನಾವು ಒಪ್ಪುವುದಿಲ್ಲ. ಕರ್ನಾಟಕದಲ್ಲಿ ಒಂದೂವರೆ ಕೋಟಿಗೂ ಅಧಿಕವಾಗಿ ಸಮುದಾಯದವರು ಇದ್ದಾರೆ. ವೀರಶೈವ ಸಮಾಜದ ಸಂಖ್ಯೆಯನ್ನು ಕಡಿಮೆ ತೋರಿಸಿ, ಯಾರಾದರೂ ಲಾಭ ‌ಮಾಡಿಕೊಳ್ಳಬಹುದು ಎಂದು ಭಾವಿಸಿದ್ದರೆ ಅದು ಅವರ ಹಗಲು ಕನಸು. ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ತೆಗೆದುಕೊಳ್ಳುವ ನಿರ್ಣಯಗಳಿಗೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಆಂತರಿಕ ಕಲಹ, ಒಳಬೇಗುದಿ ಬಿಟ್ಟು ಬದುಕಬೇಕು: ಸುತ್ತೂರು ಶ್ರೀ

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಆಂತರಿಕ ಕಲಹ, ಒಳಬೇಗುದಿ ಬಿಟ್ಟು ಬದುಕಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಯಿತು. ಸಮಾಜದ ಸಮಸ್ತರಿಗೂ, ಎಲ್ಲ ಭಾಗಗಳಲ್ಲಿ ಅವಕಾಶ ಇರಬೇಕು. ಕರ್ನಾಟಕದಲ್ಲಿ ಸಮಾಜ ಬೃಹತ್ ಆಗಿ ಬೆಳೆದಿದೆ. ಈ ಹಿಂದೆ ಮುಂಬೈನಲ್ಲಿ ಅಧಿವೇಶನ ನಡೆದಿತ್ತು. ಆ ಸಂದರ್ಭದಲ್ಲಿ ಸರ್ಕಾರ ಜಾತಿ, ಜನಗಣತಿ ಮಾಡಲ್ಲ ಎಂದು ಹೇಳಿತ್ತು. ಆದರೆ, ಜಾತಿಗಣತಿ ಮೂಲಕ ಯಾವ ಸಮುದಾಯದವರು ಎಷ್ಟಿದ್ದಾರೆ ಎಂದು ತಿಳಿಯಬೇಕು ಎಂದು ಅಂದು ಸಿದ್ಧಗಂಗಾ ಶ್ರೀಗಳು ಹೇಳಿದ್ದರು. ಅಂದರೆ ಜಾತಿಗಣತಿ ಮಾಡಬೇಕು ಎಂದು ಮೊದಲು ಹೇಳಿದ್ದು ಸಿದ್ದಗಂಗಾ ಶ್ರೀಗಳು. ಇವತ್ತು ವೈಜ್ಞಾನಿಕ ತಳಹದಿಯ ಮೇಲೆ ಪರಿಶೀಲನೆ ಮಾಡಬೇಕು ಎಂದು ಪ್ರಸ್ತಾಪ ಮಾಡುತ್ತಿದ್ದೇವೆ. ನಾವು ಜಾತಿಗಣತಿಗೆ ವಿರೋಧ ಮಾಡುತ್ತಿಲ್ಲ. ಆದರೆ, ಸರಿಯಾದ ಅಂಕಿ ಅಂಶಗಳನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಇದನ್ನೂ ಓದಿ: Hijab Row: ಹಿಜಾಬ್‌ ನಿಷೇಧ ವಾಪಸ್‌ ಮಾಡಿಲ್ಲ; ಉಲ್ಟಾ ಹೊಡೆದ ಸಿಎಂ!

ಯಾರು ಯಾರು ಭಾಗಿ?

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ 24ನೇ ಅಧಿವೇಶನಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಹೆಸರಿನಲ್ಲಿ ನಿರ್ಮಾಣವಾದ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸುತ್ತೂರಿನ ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಖಿಲ ವೀರಶೈವ ಲಿಂಗಾಯತ ‌ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದಾರೆ. ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ತರಳಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಿರಿಗೆರೆ, ಆಂಧ್ರಪ್ರದೇಶ ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಗದಗಿನ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜನವರು, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಮಹಾಸ್ವಾಮಿಗಳು, ಸಚಿವ ಎಸ್. ಎಸ್ ಮಲ್ಲಿಕಾರ್ಜುನ, ಶಾಸಕ ಬಿ.ಪಿ‌. ಹರೀಶ್, ಬಸವರಾಜು ಶಿವಗಂಗಾ, ಶಂಕರ್ ಬಿದರಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Exit mobile version