Site icon Vistara News

Assembly Session : ಈ ಅಧಿವೇಶನದಲ್ಲಿ 2 ಭಾಷೆಗೆ ಪ್ರಾತಿನಿಧ್ಯ; ಭಾಷಾ ಪಟ್ಟಿಗೆ ತುಳು, ಬಂಜಾರ ಸೇರ್ಪಡೆ?

Language Representation and CM Siddaramaiah

ಬೆಂಗಳೂರು: ಇದೇ ಡಿಸೆಂಬರ್‌ 4ರಂದು ವಿಧಾನ ಮಂಡಲ ಅಧಿವೇಶನ (Assembly Session) ನಡೆಯುತ್ತಲಿದ್ದು, ಹಲವು ಪ್ರಮುಖ ಯೋಜನೆಗಳು ಚರ್ಚೆಗೆ ಬರಲಿವೆ. ಈ ವೇಳೆ ಭಾಷಾ ಪ್ರಾತಿನಿಧ್ಯ (Language Representation) ವಿಚಾರವು ಮಹತ್ವವನ್ನು ಪಡೆದುಕೊಂಡಿದೆ. ಎರಡು ಭಾಷೆಗಳಿಗೆ ಪ್ರಾತಿನಿಧ್ಯ ಕೊಡುವ ನಿಟ್ಟಿನಲ್ಲಿ ಸರ್ಕಾರದ ಒಳಗೆ ಚರ್ಚೆಗಳು ನಡೆದಿವೆ ಎಂದು ತಿಳಿದು ಬಂದಿದೆ.

ಈ ಬಾರಿಯ ಅಧಿವೇಶನದಲ್ಲಿ ಈ ಬಗ್ಗೆ ಆ ಭಾಷಾ ಹಿನ್ನೆಲೆಯುಳ್ಳ ಶಾಸಕರು ಪ್ರಸ್ತಾಪ ಮಾಡಲಿದ್ದಾರೆ. ಇನ್ನು ಸರ್ಕಾರ ಸಹ ಈ ನಿಟ್ಟಿನಲ್ಲಿ ಉತ್ಸುಕವಾಗಿದೆ ಎನ್ನಲಾಗಿದೆ. ಆದರೆ, ಒಂದು ಭಾಷೆಯನ್ನು ಭಾಷಾ ಪಟ್ಟಿಗೆ ಸೇರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆಯಾ? ಇಲ್ಲದಿದ್ದರೆ ರಾಜ್ಯ ಸರ್ಕಾರ ಏನು ಮಾಡಬಹುದು ಎಂಬ ಪ್ರಶ್ನೆಗಳು ಮೂಡಬಹುದು. ಆ ಎಲ್ಲದಕ್ಕೂ ಇಲ್ಲಿ ವಿವರಣೆ ನೀಡಲಾಗಿದೆ.

ತುಳು ಮತ್ತು ಬಂಜಾರ ಭಾಷೆಗಳನ್ನು (Tulu and Banjara language) ಭಾಷಾ ಪಟ್ಟಿಗೆ ಸೇರಿಸುವಂತೆ ಒತ್ತಾಯಗಳು ಕೇಳಿಬಂದಿವೆ. ತುಳು ನಾಡಿನ ಜನರು ಮತ್ತು ಜನ ಪ್ರತಿನಿಧಿಗಳಿಂದ ಒತ್ತಡಗಳು ಹೆಚ್ಚಾಗಿವೆ. ಅಲ್ಲದೆ, ಈಗಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಉತ್ಸಾಹ ತೋರಿದ್ದಾರೆ. ಹೀಗಾಗಿ ಈ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಏನೆಲ್ಲ ಆಗಬೇಕು?

ತುಳು ಮತ್ತು ಬಂಜಾರ ಸಹಿತ ಯಾವುದೇ ಭಾಷೆಯನ್ನು ಭಾಷಾ ಪಟ್ಟಿಗೆ ಸೇರಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದರೆ ಮೊದಲು ಆ ಭಾಷೆಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಒಂದು ವರದಿ ಇರಬೇಕು. ಆ ಭಾಷೆ ಬೆಳೆದು ಬಂದ ಹಾದಿ, ಇತಿಹಾಸ, ಮಾತನಾಡುವವರ ಜನಸಂಖ್ಯೆ ಹಾಗೂ ಯಾವ ಪ್ರದೇಶದಲ್ಲಿ ಈ ಭಾಷೆ ಮಾತನಾಡುತ್ತಾರೆ ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾಹಿತಿ ಇರಬೇಕು.

ತುಳು ಭಾಷೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಈಗಾಗಲೇ ಮಾಹಿತಿ ಇದೆ. ಕಳೆದ ಸರ್ಕಾರದಲ್ಲಿ ಮೋಹನ್ ಆಳ್ವಾ ಕಮಿಟಿ ನೀಡಿರುವ ರಿಪೋರ್ಟ್ (Mohan Alva Committee Report) ಇದೆ. ಸದನದಲ್ಲಿ ಚರ್ಚೆ ಮಾಡಿ ಇದನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ತೀರ್ಮಾನ ಮಾಡುವಂತೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಬಳಿಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಧಾರಕ್ಕೆ ಸದನದಲ್ಲಿ ಬರಲಾಗುವುದು.

ಕೇಂದ್ರ ಸರ್ಕಾರ ಏನು ಮಾಡುತ್ತದೆ?

ಭಾಷಾ ಕಾಯಿದೆ ಪ್ರಕಾರ ಒಂದು ಕಮಿಟಿ ರಚನೆ ಮಾಡಬಹುದು. ಇಲ್ಲವೇ ರಾಜ್ಯ ಸರ್ಕಾರ ಕಳುಹಿಸಿ ಕೊಟ್ಟ ಮಾಹಿತಿಯನ್ನು ಅಧ್ಯಯನ ಮಾಡಿ ಬಳಿಕ ಹೆಚ್ಚುವರಿ ಮಾಹಿತಿ ಬೇಕಿದ್ದರೆ ಸಂಗ್ರಹ ಮಾಡಲು ಕಮಿಟಿ ರಚನೆ ಮಾಡಬಹುದು. ಬಳಿಕ ಇದನ್ನು ಭಾಷಾ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಮಾನದಂಡಗಳನ್ನು ನೋಡಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬಹುದು.

ಏನೆಲ್ಲ ಪರಿಶೀಲನೆ ಮಾಡುತ್ತಾರೆ?

ಕನಿಷ್ಠ ಐದು ಲಕ್ಷಕ್ಕಿಂತಲೂ ಹೆಚ್ಚು ಜನ ಆ ಭಾಷೆಯನ್ನು ಬಳಕೆ ಮಾಡುತ್ತಿರಬೇಕು. ಅಂದರೆ ಮಾತನಾಡುತ್ತಿರಬೇಕು. ಇನ್ನು ಆ ಭಾಷೆಯು ಕೇವಲ ಒಂದು ಪ್ರದೇಶಕ್ಕಷ್ಟೇ ಸೀಮಿತವಾಗಿದೆಯೇ? ಎಲ್ಲೆಲ್ಲಿ ಬಳಕೆಯಾಗುತ್ತಿದೆ? ಇದರ ಇತಿಹಾಸ ಏನು? ಎಷ್ಟು ತಲೆಮಾರುಗಳಿಂದ ಆ ಭಾಷೆಯನ್ನು ಮಾತನಾಡುತ್ತಿದ್ದಾರೆ? ಎಂಬ ಬಗ್ಗೆ ಮಾಹಿತಿ ಪಡೆದು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಇನ್ನು ರಾಜ್ಯದ ಅಧಿಕೃತ ಭಾಷೆ ಇವರಿಗೆ ಬರುವುದಿಲ್ಲವೇ ಎಂಬುದನ್ನು ಸಹ ಈ ವೇಳೆ ಗಮನಹರಿಸಲಾಗುತ್ತಿದೆ.

ಇದನ್ನೂ ಓದಿ : Panic button : ಇಂದಿನಿಂದ ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ; ಅಳವಡಿಸಲು ಆಗುವ ಖರ್ಚೆಷ್ಟು?

ಕೇಂದ್ರದಿಂದ ರಚನೆಯಾದ ಕಮಿಟಿಯು ಅಧ್ಯಯನ ಮಾಡಿ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಆ ಶಿಫಾರಸಿನ ಮೇಲೆ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಚರ್ಚೆ ಮಾಡುತ್ತದೆ. ಅಲ್ಲಿ ಅದರ ಮಹತ್ವದ ಬಗ್ಗೆ ಒಪ್ಪಿಗೆಯಾದಲ್ಲಿ ಭಾಷಾ ಪಟ್ಟಿಯಲ್ಲಿ ಸೇರಿಸಲು ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.

Exit mobile version