ಬೆಂಗಳೂರು: ಸಂವಿಧಾನ ಬದಲಾವಣೆ (constitutional change call) ಚರ್ಚೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಖಂಡನೆ ವ್ಯಕ್ತಪಡಿಸಿದ್ದಾರೆ. ಸಂವಿಧಾನ ಎನ್ನುವುದು ಪ್ರಜಾಪ್ರಭುತ್ವದ ಆತ್ಮ.. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ, ಆತ್ಮ ಇಲ್ಲದ ಜೀವ ಎರಡೂ ಸಹ ಒಂದೇ. ಇತ್ತೀಚೆಗೆ ಸಂವಿಧಾನ ಬದಲಾವಣೆಯ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ. ಇದನ್ನು ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಈ ಖಂಡನೆಗೆ ನಾನೂ ಧ್ವನಿಗೂಡಿಸುತ್ತೇನೆ ಎಂದು ಗಣರಾಜ್ಯೋತ್ಸವದ (Republic Day) ಮೇಲಿನ ಭಾಷಣದಲ್ಲಿ ಹೇಳಿದರು.
75ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮಾಣಿಕ್ ಷಾ ಪರೇಡ್ ಮೈದಾನ ಮತ್ತು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿರುವ ಸಿಎಂ ಸಿದ್ದರಾಮಯ್ಯ, ಸಂವಿಧಾನದ ವಿರೋಧಿ ಹೇಳಿಕೆ ನೀಡುವವರ ಹಾಗೂ ಆ ಬಗ್ಗೆ ಚರ್ಚೆ ಮಾಡುವವರ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ.
ನಮ್ಮ ಗ್ಯಾರಂಟಿ ಯೋಜನೆಗಳ (congress Guarantee Scheme) ಬಗ್ಗೆ ವಿರೋಧಿಗಳಿಂದ ವ್ಯಕ್ತವಾದ ಟೀಕೆ-ಟಿಪ್ಪಣಿ, ಅನುಮಾನ-ಆತಂಕಗಳನ್ನು ನಾವು ಗಮನಿಸಿದ್ದೇವೆ. ನಮ್ಮ ಸರ್ಕಾರ ದಿವಾಳಿಯಾಗಲಿದೆ ಎಂಬ ಅಪಪ್ರಚಾರವನ್ನು ಮಾಡಿದ್ದಾರೆ. ಇಂತಹವರೆಲ್ಲರಿಗೂ ನಮ್ಮ ಯೋಜನೆಗಳ ಫಲಾನುಭವಿಗಳೇ ದಿಟ್ಟತನದಿಂದ ಉತ್ತರ ನೀಡಬೇಕೆಂದು ನಾನು ಮನವಿ ಮಾಡುತ್ತೇನೆ. ನಾವು ಮಾತುಗಾರರಲ್ಲ, ಕೆಲಸಗಾರರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕೋಮುವಾದದಿಂದ ಅಪಾಯ
ನಮ್ಮ ನಡೆ ಅಭಿವೃದ್ಧಿಯ ಕಡೆಗೆ ಸಾಗುತ್ತಿದ್ದರೂ ನಮ್ಮ ಕನಸಿನ ಭಾರತದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎನ್ನುವುದನ್ನು ವಿಷಾದದಿಂದಲೇ ಒಪ್ಪಬೇಕಾಗಿದೆ. ಅಭಿವೃದ್ಧಿಯ ದಾರಿಯಲ್ಲಿ ಹೊಸ ಸವಾಲುಗಳು ಎದುರಾಗಿವೆ. ಮುಖ್ಯವಾಗಿ ಇತ್ತೀಚೆಗೆ ಹೆಡೆ ಎತ್ತಿರುವ ಕೋಮುವಾದ, ನಮ್ಮ ಜಾತ್ಯತೀತ ಸಮಾಜಕ್ಕೆ ಅಪಾಯವನ್ನುಂಟು ಮಾಡುವ ಆತಂಕವನ್ನು ಅನುಭವಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರು ನೀಡಿರುವ ಜನಮತದಲ್ಲಿ, ಸಂವಿಧಾನದ ಆಶಯವಾದ ಜಾತ್ಯತೀತ ಸಮಾಜದ ರಕ್ಷಣೆಯ ಸಂದೇಶವೂ ಇದೆ ಎನ್ನುವುದನ್ನು ನಮ್ಮ ಸರ್ಕಾರ ಅರ್ಥಮಾಡಿಕೊಂಡಿದೆ. ನಮ್ಮ ಸರ್ಕಾರ ಕೋಮುವಾದಿ ಶಕ್ತಿಗಳ ಹುಟ್ಟಡಗಿಸಲು ಸರ್ವ ಸನ್ನದ್ಧವಾಗಿದೆ. ಸಮಾಜವನ್ನು ಧರ್ಮಗಳ ಆಧಾರದಲ್ಲಿ ವಿಭಜಿಸುವ ಹುನ್ನಾರಕ್ಕೆ ಜನತೆ ಬಲಿಯಾಗಬಾರದು. ಚುನಾಯಿತ ಸರ್ಕಾರ ಇಲ್ಲವೇ ಜನಪ್ರತಿನಿಧಿಗಳು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಜಾತಿ-ಧರ್ಮಗಳಂತಹ ಭಾವನಾತ್ಮಕ ವಿಷಯಗಳನ್ನು ದುರ್ಬಳಕೆ ಮಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು ಮತ್ತು ಸಂವಿಧಾನಕ್ಕೆ ಬಗೆಯುವ ದ್ರೋಹವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: Republic Day 2024: “ಸಂವಿಧಾನವನ್ನು ರಕ್ಷಿಸೋಣ…ʼʼ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಗಣರಾಜ್ಯೋತ್ಸವದ ಸಂದೇಶ
ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ
ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಬರಗಾಲವನ್ನು ನಮ್ಮ ಸರ್ಕಾರ ಯಶಸ್ವಿಯಾಗಿ ನಿಭಾಯಿಸುತ್ತಿದೆ. ನಮ್ಮ ನಿರಂತರ ಪ್ರಯತ್ನದ ಹೊರತಾಗಿಯೂ ಬರಪರಿಹಾರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸದೆ ಬಿಡಿಗಾಸನ್ನೂ ನೀಡದಿರುವುದನ್ನು ವಿಷಾದದಿಂದ ಹೇಳಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.