Site icon Vistara News

Reservation Politics : ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮೀಸಲಾತಿ ಸಂಕಷ್ಟ; ಸರ್ಕಾರದ ವಿರುದ್ಧ ಸಚಿವರ ʼಮುನಿʼ

KH Muniyappa and CM Siddaramaiah

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ (Congress Government) ಮೀಸಲಾತಿ ಸಂಕಷ್ಟ (Reservation crisis) ಎದುರಾಗಿದೆ. ಕಾಂಗ್ರೆಸ್‌ ಸರ್ಕಾರ ಬಂದ ತಕ್ಷಣ ಮೀಸಲಾತಿ ಪಾಲಿಟಿಕ್ಸ್ (Reservation Politics) ಶುರುವಾಗಿತ್ತು. ಈಗ ಹಲವು ಸಮುದಾಯಗಳಿಂದ ಮೀಸಲಾತಿ ರಾಜಕಾರಣ ಆರಂಭವಾಗಿದೆ. ಅಲ್ಲದೆ, ಈ ಸಂಬಂಧ “ತಾವು ಯಾರಿಗೂ ಹೆದರುವುದಿಲ್ಲ. ಎಲ್ಲದಕ್ಕೂ ಸಿದ್ಧನಿದ್ದೇನೆ” ಎಂಬ ಸಚಿವ ಕೆ.ಎಚ್.‌ ಮುನಿಯಪ್ಪ ಅವರ ಬಹಿರಂಗ ಎಚ್ಚರಿಕೆಯು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Reservation Politics) ಮತ್ತೊಂದು ಸಮರಕ್ಕೆ ಮುನ್ನುಡಿ ಬರೆದಿದ್ದಾರೆ.

ಡಾ. ಜಿ.ಎಂ. ಪರಮೇಶ್ವರ್‌‌‌ ಸಿಎಂ ರೇಸ್‌ಗೆ ಎಂಟ್ರಿ ಆದ ತಕ್ಷಣ ಎಡಗೈ ಸಮುದಾಯ ಅಲರ್ಟ್‌‌ ಆಗಿದೆ. ಎಡಗೈ ಸಮುದಾಯದ ನಾಯಕರಿಂದ ಒಗ್ಗಟ್ಟು ಪ್ರದರ್ಶನ ಮಾಡಲಾಗಿದೆ. ಎಡಗೈ ಸಮುದಾಯದಿಂದ ಸಿಎಂ, ಡಿಸಿಎಂ ಹುದ್ದೆಗಾಗಿ ಬೇಡಿಕೆ ಇಡಲಾಗಿದೆ. ಸೋಮವಾರ ಬೆಂಗಳೂರಿನಲ್ಲಿ ನಡೆದಿದ್ದ ದುಂಡು ಮೇಜಿನ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಸರ್ಕಾರದ ವಿರುದ್ಧ ತೊಡೆ ತಟ್ಟಿದ ಕೆ.ಎಚ್‌‌. ಮುನಿಯಪ್ಪ

ರಾಜ್ಯ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ಬಹುಮತವನ್ನು ಪಡೆದುಕೊಂಡರೂ ಒಂದಲ್ಲ ಒಂದು ರೀತಿಯ ಕಿರಿಕಿರಿಯನ್ನು ಅನುಭವಿಸುತ್ತಲೇ ಬಂದಿದೆ. ಅಲ್ಲದೆ, ಸರ್ಕಾರದ ವಿರುದ್ಧ ಶಾಸಕರು – ಸಚಿವರಿಂದಲೇ ಅಸಮಾಧಾನಗಳು ವ್ಯಕ್ತವಾಗುತ್ತಾ ಬಂದಿದ್ದವು. ಇನ್ನು ಸಿಎಂ – ಡಿಸಿಎಂ ಹುದ್ದೆ ಸಹ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ಕಾಂಗ್ರೆಸ್‌ ಶಾಸಕರಾದಿಯಾಗಿ ಸಚಿವರು ಹೇಳಿಕೆ ನೀಡುತ್ತಲೇ ಬಂದಿದ್ದರು. ಬಳಿಕ ಹೈಕಮಾಂಡ್‌ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಣ್ಣಗಾಗಿಸುವ ಪ್ರಯತ್ನವನ್ನು ಮಾಡಿತ್ತು. ಈಗ ಮತ್ತೆ ಮೀಸಲಾತಿ ಸಂಕಷ್ಟ ಎದುರಾಗಿದೆ. ಅದೂ ಸರ್ಕಾರದ ಭಾಗವಾಗಿರುವ ಸಚಿವರ ಹೇಳಿಕೆಯು ರಾಜ್ಯ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಈಗ ಸರ್ಕಾರದ ವಿರುದ್ಧ ಕೆ.ಎಚ್.‌ ಮುನಿಯಪ್ಪ ತೊಡೆ ತಟ್ಟಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಆಗಿನ ಸಿಎಂ ಬಸವರಾಜ ಬೊಮ್ಮಾಯಿಗೆ ಪಂಚಮಸಾಲಿ ಸಮುದಾಯದವರ ಮೀಸಲಾತಿ ಹೋರಾಟ ಸಂಕಷ್ಟ ತಂದಿತ್ತು. ಪಂಚಮಸಾಲಿ ಮೀಸಲಾತಿ ಹೋರಾಟದಿಂದ ಬಿಜೆಪಿ ಕಂಗೆಟ್ಟಿತ್ತು. ಈಗ ಕಾಂಗ್ರೆಸ್‌ ಸರ್ಕಾರಕ್ಕೆ ಎಡಗೈ ಮೀಸಲಾತಿ ಸಮಸ್ಯೆ ಎದುರಾಗಿದೆ. ಸದಾಶಿವ ಆಯೋಗ ವರದಿ ಯಥಾವತ್ತು ಜಾರಿಗೆ ಆಗ್ರಹ ಮಾಡಲಾಗಿದೆ. ಅಲ್ಲದೆ, ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ ಕೊಟ್ಟ ಮೀಸಲಾತಿಯನ್ನು ತಿರಸ್ಕಾರ ಮಾಡುವಂತೆ ಒತ್ತಾಯ ಮಾಡಲಾಗಿದೆ. ನಮ್ಮ ಸಮುದಾಯದ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಕೊಡಿ ಎಂಬ ಆಗ್ರಹವನ್ನು ಇಡಲಾಗಿದೆ.

ನಾವು ಸಿಎಂ, ಡಿಸಿಎಂ ರೇಸ್‌ನಲ್ಲಿ ಇದ್ದೇವೆ ಎಂದು ಮುನಿಯಪ್ಪ ಇದೇ ವೇಳೆ ಹೇಳಿದ್ದಾರೆ. ನಾನು ಯಾರಿಗೂ ಹೆದರಲ್ಲ ಎಂದು ಪರೋಕ್ಷವಾಗಿ ಸಚಿವರಾದ ಡಾ. ಜಿ. ಪರಮೇಶ್ವರ್‌‌, ಪ್ರಿಯಾಂಕ್‌ ಖರ್ಗೆಗೆ ಸಂದೇಶವನ್ನು ರವಾನೆ ಮಾಡಿದ್ದಾರೆ. ಹಾಗಾಗಿ ಕಾಂತರಾಜು ವರದಿ ಬೆನ್ನಲ್ಲೇ ಸದಾಶಿವ ಆಯೋಗದ ಸಂಕಷ್ಟ ಸಹ ಈ ಸರ್ಕಾರಕ್ಕೆ ಶುರುವಾಗಿದೆ.

ಇದನ್ನೂ ಓದಿ: Murder Case : ಪುತ್ತೂರಿನ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ; ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ

ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಲು ಮುನಿಯಪ್ಪ ಕರೆ

ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಸೋಮವಾರ ಮಾತನಾಡಿದ್ದ ಕೆ.ಎಚ್. ಮುನಿಯಪ್ಪ, ಒಳ ಮೀಸಲಾತಿ ಸಂಬಂಧ ನಿರಂತರ ಹೋರಾಟ ನಡೆಯಲಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿದ್ದರೂ ಅದು ಅವೈಜ್ಞಾನಿಕವಾಗಿತ್ತು. ಅದು ಸುಪ್ರೀಂ ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ. ಏಕೆಂದರೆ ಮೀಸಲಾತಿ ಪ್ರಮಾಣ ಶೇಕಡಾ 50 ಮೀರುವ ಹಾಗಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಾರಿ ಕಂಡುಕೊಳ್ಳಬೇಕು. ಹೀಗಾಗಿ ನಮ್ಮ ಸಮುದಾಯದವರ ಹೋರಾಟ ಒಗ್ಗಟ್ಟಿನಲ್ಲಿ ಸಾಗಬೇಕು. ನಿಮ್ಮ ಕ್ಷೇತ್ರಗಳ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕುವಂತೆ ಹೋರಾಟ ಮಾಡಬೇಕು. ಹೋರಾಟ ತೀವ್ರ ಸ್ವರೂಪ ಕಾಣಬೇಕು. ಸಚಿವರಿಗೆ ಒಂದೊಂದು ಸಾವಿರ ಜನ ಹೋಗಿ ಮನವಿ ಕೊಡಿ. ಆಗ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ನಾನು ಸಚಿವನಾಗಿ ಈ ಮಾತು ಹೇಳುತ್ತಿದ್ದೇನೆ, ಹೀಗೆ ಹೇಳುವ ಸಂದರ್ಭ ಬಂದಿದೆ. ನಾನು ಈಗ ಸಚಿವನಾಗಿದ್ದೇನೆ, ನಾನಿದ್ದ ಮೇಲೆ ಬೇರೆಯವರ ಆಟ ನಡೆಯುವುದಿಲ್ಲ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ ಎಂದು ಕೆ.ಎಚ್.‌ ಮುನಿಯಪ್ಪ ಗುಡುಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version