ಬೆಂಗಳೂರು: ರಾಜ್ಯದ ಎಲ್ಲ ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದಲ್ಲಿ ಇದ್ದ ಘೋಷ ವಾಕ್ಯವನ್ನು ಬದಲಾಯಿಸಿರುವ ಸಮಾಜ ಕಲ್ಯಾಣ ಇಲಾಖೆ (Department of Social Welfare) ಕ್ರಮಕ್ಕೆ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಟಿರುವ ಬಗ್ಗೆಯೂ ಗೊಂದಲವಿದ್ದು, ಟೆಲಿಗ್ರಾಂ ಮೂಲಕ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಸರ್ಕಾರದ ಈ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದರಾದರೂ, ಸರ್ಕಾರದ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೀಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ಕುವೆಂಪು ಅವರ ತತ್ವ ಸಿದ್ಧಾಂತ ಪಾಲನೆ, ಪ್ರಚಾರ ಮಾಡುತ್ತಿರುವವರು ನಾವಾಗಿದ್ದೇವೆ ಎಂದು ಹೇಳಿದ್ದಾರೆ.
ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರವಾಗಿ ಬಿಜೆಪಿ ಟೀಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಾವು ಕುವೆಂಪು ಅವರ ಆಚಾರ, ವಿಚಾರ ಪ್ರಚಾರ ಮಾಡುತ್ತಿದ್ದೇವೆ. ಕುವೆಂಪು ಅವರ “ಭಾರತ ಜನನಿಯ ತನುಜಾತೆ…”, “ಸರ್ವಜನಾಂಗದ ಶಾಂತಿಯ ತೋಟ…” ಸಂದೇಶವನ್ನು ಪ್ರತಿನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯದ ಜನರಿಗೆ ಹೇಳುತ್ತಾ ಬಂದಿದ್ದೇವೆ. ಕುವೆಂಪು ಅವರ ತತ್ವ ಸಿದ್ಧಾಂತಗಳನ್ನು ನಾವು ಪಾಲಿಸಿ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಎಲ್ಲದರಲ್ಲೂ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಜನರ ಬದುಕಿನ ಬಗ್ಗೆ ಯೋಚಿಸುವುದಿಲ್ಲ, ಭಾವನೆ ಬಗ್ಗೆ ಮಾತ್ರ ಆಲೋಚಿಸಿ ಸಮಾಜ ಕೆಡಿಸುವ ಕೆಲಸ ಮಾಡುತ್ತಾರೆ” ಎಂದು ಹೇಳಿದರು.
ಈ ಘೋಷವಾಕ್ಯ ಬದಲಾವಣೆ ಅಗತ್ಯವೇನಿದೆ ಎಂದು ಕೇಳಿದಾಗ, “ಶಾಲೆಗಳಿಗೆ ಕೈಮುಗಿದು ಹೋಗುವುದರಲ್ಲಿ ತಪ್ಪೇನಿಲ್ಲ. ಹನುಮಂತಯ್ಯನವರು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳಿದ್ದಾರೆ. ಬಿಜೆಪಿಯವರು ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ದಯವಿಟ್ಟು ಕಾಂಟ್ರವರ್ಸಿ ಮಾಡಬೇಡಿ: ಎಚ್.ಸಿ. ಮಹದೇವಪ್ಪ
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಪ್ರತಿಕ್ರಿಯೆ ನೀಡಿ, ದಯವಿಟ್ಟು ಈ ವಾಕ್ಯವನ್ನು ಕಾಂಟ್ರವರ್ಸಿ ಮಾಡಬೇಡಿ. ಅನ್ಯಾಯವಾದಾಗ ಧ್ವನಿ ಎತ್ತಬೇಕು, ಪ್ರಶ್ನೆ ಮಾಡಬೇಕು. ಕುವೆಂಪು ಅವರು ಸಹ ಅದನ್ನೇ ಹೇಳಿದ್ದಾರೆ. ಮಾಧ್ಯಮಗಳಿಗೆ ಈಗ ಇದು ಮುಖ್ಯವಾ? ನಾವು ಕುವೆಂಪು ಅವರ ಪರ ಇದ್ದೇವೆ. ಸಂವಿಧಾನ ನಮಗೆ ಹಕ್ಕು ಅಧಿಕಾರ ಕೊಟ್ಟಿದೆ. ನಮ್ಮ ಆದೇಶದಲ್ಲಿ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಕುವೆಂಪು ಅವರ ವಾಕ್ಯವನ್ನು ನಾವು ಬದಲಾವಣೆ ಮಾಡಿಲ್ಲ. ನಾವು ಶಿಕ್ಷಣ ಸಂಸ್ಥೆಗಳನ್ನು ಸೈದ್ಧಾಂತಿಕವಾಗಿ ಕಟ್ಟಲು ಹೊರಟಿದ್ದೇವೆ. ಮಕ್ಕಳಿಗೆ ಇದು ಸಮಸ್ಯೆ ಆಗಲ್ಲ. ಬಿಜೆಪಿ ಎಲ್ಲವನ್ನೂ ಕಾಂಟ್ರವರ್ಸಿ ಮಾಡುತ್ತಿದೆ. ಸಂವಿಧಾನ ವಿರೋಧಿ, ಬಸವನ ವಿರೋಧಿಯಾಗಿ ವರ್ತನೆ ಮಾಡುತ್ತದೆ. ಪುನಃ ಪುನಃ ಇದನ್ನೇ ಕೇಳಬೇಡಿ. ಕುವೆಂಪು ನಮ್ಮ ಐಕಾನ್ .. ಸಂವಿಧಾನ ನಮ್ಮ ದೊಡ್ಡ ಗ್ರಂಥ. ಕೆಲಸಕ್ಕೆ ಬಾರದ ವಿಚಾರಗಳನ್ನು ಹೆಚ್ಚು ತೆಗೆದುಕೊಳ್ಳಬೇಡಿ. ಕುವೆಂಪು ಹೇಳಿದ್ದನ್ನು ನಾವು ತೆಗಿಸಿಲ್ಲ. ಕುವೆಂಪು ವಿಚಾರದ ಮೇಲೆ ಸಮಾಜವನ್ನು ಕಟ್ಟುತ್ತೇವೆ ಎಂದು ಡಾ. ಎಚ್.ಸಿ. ಮಹದೇವಪ್ಪ ಮಾಧ್ಯಮಗಳ ಮೇಲೆ ಹರಿಹಾಯ್ದರು.
ಇದನ್ನೂ ಓದಿ: Residential Schools: ಮತ್ತೆ ಬದಲಾಯಿತು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ! ಆಕ್ರೋಶಕ್ಕೆ ಮಣಿದ ಸರ್ಕಾರ
ಪ್ರತಿಪಕ್ಷಗಳಿಗೆ ಡಾ. ಎಚ್.ಸಿ. ಮಹದೇವಪ್ಪ ಸವಾಲು
ಈ ವಿಚಾರವಾಗಿ ವಿಪಕ್ಷಗಳು ಸದನದಲ್ಲಿ ಪ್ರಶ್ನೆ ಮಾಡಲಿ. ಅಲ್ಲಿಯೇ ಉತ್ತರ ಕೊಡುತ್ತೇವೆ. ಕುವೆಂಪು, ಅಂಬೇಡ್ಕರ್, ನಾರಾಯಣ ಗುರು ಅವರ ವೈಚಾರಿಕತೆ ನಿಲುವುಗಳನ್ನು ನಾವು ಮಕ್ಕಳಿಗೆ ತುಂಬುತ್ತೇವೆ. ಈ ಆದೇಶದಲ್ಲಿ ಏನಾಗಿದೆ ಅಂತ ಗೊತ್ತಿಲ್ಲ. ಆದರೆ, ಐಡಿಯಾಲಾಜಿಕಲ್ ಮೇಲೆ ಹೇಳುತ್ತಿದ್ದೇನೆ. ಕುವೆಂಪು ವಿಚಾರದ ಮೇಲೆ ಸಮಾಜ ಕಟ್ಟಬೇಕು. ಸಂವಿಧಾನದ ಮೇಲೆ ಸಮೃದ್ಧ ಭಾರತ ಕಟ್ಟಬೇಕು. ಈ ವಿಚಾರವನ್ನ ಕಾಂಟ್ರವರ್ಸಿ ಮಾಡಬೇಡಿ ಎಂದು ಹೇಳಿದ್ದರು.