ಬೆಂಗಳೂರು: ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಎಲ್ಲರಿಗೂ ಹಕ್ಕಿದೆ. ಆದರೆ, ಅಂತಿಮ ತೀರ್ಮಾನ ನ್ಯಾಯಾಲಯದ್ದೇ ಆಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ (CBI probe) ವಹಿಸಿದ್ದ ಪ್ರಕರಣದ ಅನುಮತಿಯನ್ನು ವಾಪಸ್ ಪಡೆದಿರುವುದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ಹೈಕೋರ್ಟ್‌ನಲ್ಲಿ (High Court) ದಾವೆ ಹೂಡಿರುವ ಬಗ್ಗೆ ಈ ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ಹಿಂದಿನ ರಾಜ್ಯ ಸರ್ಕಾರ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ತನಿಖೆಗೆ ಕಾನೂನು ಬಾಹಿರವಾಗಿ ಅನುಮತಿ ನೀಡಿತ್ತು. ಈ ಆದೇಶವನ್ನು ನಮ್ಮ ಸರ್ಕಾರ ವಾಪಸ್ ಪಡೆದಿದೆ ಎಂದು ಸ್ಪಷ್ಟೀಕರಣ ನೀಡಿದರು.
ಇದನ್ನೂ ಓದಿ: Congress Karnataka : ಸಿಎಂ, ಡಿಸಿಎಂ ನಡೆಗೆ ಹಿರಿಯ ಸಚಿವರ ಮುನಿಸು; ಅಭಿಪ್ರಾಯ ಕೇಳುತ್ತಿಲ್ಲವೆಂದ ಪರಮೇಶ್ವರ್!
ಹೈಕೋರ್ಟ್ ಮೆಟ್ಟಿಲೇರಿರುವ ಯತ್ನಾಳ್
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ವಿರುದ್ಧ ಸಿಬಿಐ ದಾಖಲಿಸಿಕೊಂಡಿರುವ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು (CBI Case against DK Shivakumar) ಹಿಂದಕ್ಕೆ ಪಡೆಯುವ ರಾಜ್ಯ ಸಚಿವ ಸಂಪುಟದ (State Cabinet meeting) ತೀರ್ಮಾನವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda pateel Yatnal) ಅವರು ಹೈಕೋರ್ಟ್ (Karnataka High court) ಮೆಟ್ಟಿಲೇರಿದ್ದಾರೆ. ಸರ್ಕಾರದ ಈ ನಡೆ ಕಾನೂನುಬಾಹಿರವಾಗಿದ್ದು, ಇದನ್ನು ತಡೆಯಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಸಿದ ದಾವೆಯಲ್ಲಿ ಮನವಿ ಮಾಡಲಾಗಿದೆ.
ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗುವುದಾಗಿ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೆಯೇ ಪ್ರಕಟಿಸಿದ್ದು, ಅದರಂತೆ ನಡೆದುಕೊಂಡಿದ್ದಾರೆ. ಸಿಬಿಐ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಈ ಹಂತದಲ್ಲಿ ತನಿಖೆಯನ್ನೇ ನಿಷ್ಫಲಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದು ಕಾನೂನುಬಾಹಿರ ಕ್ರಮವಾಗಿದೆ ಎಂದು ಯತ್ನಾಳ್ ತಮ್ಮ ದಾವೆಯಲ್ಲಿ ಹೇಳಿದ್ದಾರೆ.
ಮುಕ್ತಾಯದ ಹಂತಕ್ಕೆ ಬಂದಿರುವ ಪ್ರಕರಣವನ್ನು ಕೆಲವೊಂದು ಸಂಬಂಧವಿಲ್ಲದ ತಾಂತ್ರಿಕ ತೊಡಕುಗಳನ್ನು ಮುಂದಿಟ್ಟು ಮೊಟಕುಗೊಳಿಸುವ ಉದ್ದೇಶವನ್ನು ಸರ್ಕಾರದ ನಿರ್ಧಾರ ಹೊಂದಿದೆ. ಈ ಮೂಲಕ ನ್ಯಾಯಾಂಗದ ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ನಡೆದಿದೆ ಎಂದಿರುವ ಯತ್ನಾಳ್, ಈ ವಿಚಾರಕ್ಕೆ ಸೀಮಿತವಾಗಿ ಪ್ರಕರಣದ ವಿಚಾರಣೆಯನ್ನು ನಡೆಸಬೇಕು, ಪ್ರಕರಣ ವಾಪಸ್ ಪಡೆಯಲು ಅವಕಾಶ ನೀಡಬಾರದು ಎಂದು ಕೋರಿದ್ದಾರೆ. ಈಗ ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಯಾರು ಬೇಕಾದರೂ ಕೋರ್ಟ್ ಮೊರೆ ಹೋಗಬಹುದು ಎಂದು ಹೇಳಿದ್ದಾರೆ.
ನಿಗಮ – ಮಂಡಳಿ ಅಧ್ಯಕ್ಷರ ಆಯ್ಕೆ ಅಂತಿಮಗೊಂಡಿಲ್ಲ
ನಿಗಮ – ಮಂಡಳಿಗಳ ಅಧ್ಯಕ್ಷ ಸ್ಥಾನದ ನೇಮಕಾತಿ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಸಮಾಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅಧ್ಯಕ್ಷರ ನೇಮಕಾತಿಯಲ್ಲಿ ಯಾರ ಅಭಿಪ್ರಾಯವನ್ನೂ ಪಡೆಯಲಾಗಿಲ್ಲ. ಆಯ್ಕೆ ಪ್ರಕ್ರಿಯೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಆಯ್ಕೆ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದೆ
ಶಾಲೆಗಳಿಗೆ ಗುಣಮಟ್ಟದ ಹಾಲಿನ ಪೂರೈಕೆಯಾಗುತ್ತಿಲ್ಲ ಎಂದು ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಸರ್ಕಾರ ಕೆಎಂಎಫ್‌ನ ನಂದಿನಿ ಗುಣಮಟ್ಟದ ಹಾಲನ್ನು ಪೂರೈಸುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: DK Shivakumar : ನಮ್ಮ ಜಾಹೀರಾತಲ್ಲಿ ಮತಯಾಚನೆ ಮಾಡಿಲ್ಲ; ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ: ಡಿಕೆಶಿ
ತೆಲಂಗಾಣದಲ್ಲಿ ಕರ್ನಾಟಕದ ಸಾಧನೆ ಬಗ್ಗೆ ಮಾಡಿದ ಪ್ರಚಾರದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಆಕ್ಷೇಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಪ್ರಚಾರಕ್ಕೆ ಕೇಂದ್ರ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಚಾರವನ್ನು ಕೈಬಿಡಲಾಗಿದೆ ಎಂದು ಹೇಳಿದರು.