ಬೆಂಗಳೂರು: ಶಾಲಾ ಪಠ್ಯಪುಸ್ತಕ ವಿವಾದ ಇನ್ನೇನು ಮುಗಿಯಿತು ಎಂದುಕೊಳ್ಳುವಾಗಲೆ ಮತ್ತೊಂದು ಹಂತ ತೆರೆದುಕೊಳ್ಳುವ ಲಕ್ಷಣಗಳು ಗೋಚರಿಸಿದ್ದು, ಈ ಬಾರಿ ಶಾಲಾ ಪಠ್ಯದಲ್ಲಿ ಸಾವರ್ಕರ್ ಕುರಿತ ಪಠ್ಯ ವಿವಾದವಾಗುತ್ತಿದೆ. ಸಾಹಿತಿ ಕುಂ. ವೀರಭದ್ರಪ್ಪ ವಿರುದ್ಧ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹರಿಹಾಯ್ದಿದ್ದಾರೆ.
ಎಂಟನೇ ತರಗತಿಯ ದ್ವಿತೀಐ ಭಾಷೆ ಕನ್ನಡ ಪಠ್ಯದಲ್ಲಿ ಈ ಹಿಂದೆ ಇದ್ದ ವಿಜಯಮಾಲಾ ರಂಗನಾಥ್ ಅವರ ʼಬ್ಲಡ್ ಗ್ರೂಪ್ʼ ಪಾಠವನ್ನು ರೋಹಿತ್ ಚಕ್ರತೀರ್ಥ ಸಮಿತಿ ತೆಗೆದಿತ್ತು. ಈ ಜಾಗಕ್ಕೆ ಕೆ.ಟಿ. ಗಟ್ಟಿ ಅವರು ಬರೆದಿರುವ ʼಕಾಲವನ್ನು ಗೆದ್ದವರುʼ ಎಂಬ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ.
ಸಾವರ್ಕರ್ ಅವರನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿಗೆ ಲೇಖಕರು ತೆರಳಿದಾಗ ತಮ್ಮ ಭಾವನೆಗಳನ್ನು ವಿವರಿಸಿದ್ದಾರೆ. ʼಬ್ರಿಟಿಷರು ಸಾವರ್ಕರ್‌ರನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿನ ಕೋಣೆಗೆ ಬುಲ್‌ಬುಲ್ ಹಕ್ಕಿಗಳು ಬರುತ್ತಿದ್ದವು. ಅವುಗಳ ಮೇಲೆ ಕುಳಿತು ಸಾವರ್ಕರ್ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರುʼ ಎಂದು ಬರೆಯಲಾಗಿದೆ.
ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅಣಕಿಸಲಾಗುತ್ತಿದೆ. ಹೀಗೆ ಮಕ್ಕಳಿಗೆ ಕಪೋಲಕಲ್ಪಿತವಾಗಿ ವಿಚಾರ ತಿಳಿಸಬಾರದು ಎಂದು ಕೆಲವರು ಹೇಳುತ್ತಿದ್ದರೆ, ಇದನ್ನು ಕಾವ್ಯಾತ್ಮಕವಾಗಿ ನೋಡಬೇಕು ಎಂದು ಕೆಲವರು ವಾದಿಸುತ್ತಿದ್ದಾರೆ.
ಈ ಕುರಿತು ರೋಹಿತ್ ಚಕ್ರತೀರ್ಥ ಪ್ರತಿಕ್ರಿಯೆ ನೀಡಿದ್ದಾರೆ. ಸಾಹಿತ್ಯವನ್ನು ಓದಿಕೊಳ್ಳದ ಅಪಕ್ವ ವ್ಯಕ್ತಿಗಳು ಮಾಡಿರುವ ಆಪಾದನೆ ಇದು. ಕುಂ. ವೀರಭದ್ರಪ್ಪ ತೀರಾ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ. ಪಠ್ಯಪುಸ್ತಕ ಸಮಿತಿ ಅಧ್ಯಕ್ಷರು, ಶಿಕ್ಷಣ ಸಚಿವರು ಹಾಗೂ ಲೇಖಕರು ಕಾಗೆಯ ರೆಕ್ಕೆಯ ಮೇಲೆ ಹೋಗಲಿ ಎಂದಿದ್ದಾರೆ. ಇವರೆಲ್ಲ ಸಾಹಿತಿಗಳಾ? ಸಾಹಿತ್ಯದ ಗಂಧಗಾಳಿ ಇದೆಯ? ಎಂಬ ಪ್ರಶ್ನೆ ಏಳುತ್ತಿದೆ.
ಕೆ.ಟಿ. ಗಟ್ಟಿ ಅವರು ಹೀಗೆ ಬರೆದಿದ್ದಾರೆ. ಇದನ್ನು ಓದಿದ ಯಾರಿಗೇ ಆದರೂ, ಹಳ್ಳಿಯ ಸಾಮಾನ್ಯ ವ್ಯಕ್ತಿಗೂ ಇದು ಸಾಹಿತ್ಯದ ಅಲಂಕಾರ ಎಂದು ಗೊತ್ತಾಗುತ್ತದೆ. ಕಲ್ಪನೆಯಲ್ಲಿ, ಕನಸಿನ ರೀತಿಯಲ್ಲಿ ಈ ವಿಚಾರವನ್ನು ಅವರು ನೋಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಇವರೆಲ್ಲ ಟೀಕೆ ಮಾಡುತ್ತಿರುವುದನ್ನು ನೋಡಿದರೆ ಸಾಹಿತ್ಯದ ಭಾಷೆಯ ಯಾವುದೇ ಪರಿಚಯ ಇಲ್ಲ ಎಂದು ಹೇಳಬೇಕಾಗುತ್ತದೆ ಎಂದು ರೋಹಿತ್ ಚಕ್ರತೀರ್ಥ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | ಸವಿಸ್ತಾರ ಅಂಕಣ | ಇತಿಹಾಸದ ಕಣ್ತೆರೆಸಿ ಸ್ವಾತಂತ್ರ್ಯ ಜ್ಯೋತಿ ಬೆಳಗಿಸಿದವರು ಸಾವರ್ಕರ್