Site icon Vistara News

Congress Guarantee: ಗ್ಯಾರಂಟಿ ಅನುಷ್ಠಾನ ಸಮಿತಿಗೆ ಮಾಸಿಕ 50 ಸಾವಿರ ರೂ.; ರಾಜ್ಯಾದ್ಯಂತ ಎಷ್ಟು ಅಧ್ಯಕ್ಷರು, ಉಪಾಧ್ಯಕ್ಷರು?

Karnataka Budget 2024 guarantee

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ಸರ್ಕಾರ (Congress Government) ರಾಜ್ಯದಲ್ಲಿ ಜಾರಿಗೆ ತಂದಿರುವ 5 ಪ್ರಮುಖ ಗ್ಯಾರಂಟಿ ಯೋಜನೆಗಳ (Congress Guarantee Scheme) ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಮಹತ್ವದ ಘೋಷಣೆ ಮಾಡಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ (Implementation Committee of Guarantee Schemes) ರಚನೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ, ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ (Cabinet Rank Status) ನೀಡಲಾಗುತ್ತಿದೆ. ಇನ್ನು ಸುಮಾರು 31 ಜನ ಸದಸ್ಯರು ಇರಲಿದ್ದು, ಇವರೆಲ್ಲರೂ ಕಾಂಗ್ರೆಸ್‌ ಕಾರ್ಯಕರ್ತರಾಗಿರಲಿದ್ದಾರೆ ಎಂದು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಮಟ್ಟದ ಸಮಿತಿಯಿಂದ ಹಿಡಿದು, ವಿಧಾನಸಭಾ ಕ್ಷೇತ್ರವಾರ ಸಮಿತಿಯಲ್ಲಿ ಯಾರು ಯಾರು ಇರಲಿದ್ದಾರೆ? ಎಷ್ಟು ಮಂದಿ ಇರಲಿದ್ದಾರೆ? ಸಮಿತಿ ನಿರ್ವಹಣೆಗೆ ಎಷ್ಟು ಹಣವನ್ನು ಮೀಸಲಿಡಲಾಗುತ್ತದೆ? ಈ ಅನುದಾನವನ್ನು ಎಲ್ಲಿಂದ ಕೊಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ: Congress Guarantee: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ; ರಾಜ್ಯಾಧ್ಯಕ್ಷರಿಗೆ ಸಂಪುಟ ಸ್ಥಾನಮಾನವೆಂದ ಸಿಎಂ

ಸಮಿತಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ವಿಧಾನಸಭೆಯಲ್ಲಿಯೂ ಒಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇರಲಿದೆ. ಈ ರಾಜ್ಯ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಐದು ಜನ ಉಪಾಧ್ಯಕ್ಷರು ಇರಲಿದ್ದಾರೆ. ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಸ್ಥಾನಮಾನ ಇರಲಿದೆ. ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗುವುದು.

ಈ ಸಮಿತಿಯಲ್ಲಿ ಒಟ್ಟು ಸುಮಾರು 31 ಜನ ಸದಸ್ಯರು ಇರಲಿದ್ದು, ಇವರೆಲ್ಲರೂ ಕಾರ್ಯಕರ್ತರಾಗಿರಲಿದ್ದಾರೆ. 31 ಜಿಲ್ಲಾ ಮಟ್ಟದಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರು ಇರಲಿದ್ದಾರೆ. ಅವರಿಗೆ ಕಚೇರಿ ವ್ಯವಸ್ಥೆ ಹಾಗೂ ಗೌರವಧನ ನೀಡುವ ವ್ಯವಸ್ಥೆ ಆಗಲಿದೆ. ಜತೆಗೆ 50 ಸಾವಿರ ರೂ.ಗಳನ್ನು ಪ್ರತಿ ತಿಂಗಳು ನೀಡಲಾಗುವುದು. 224 ಕ್ಷೇತ್ರಗಳಲ್ಲಿ ಅಧ್ಯಕ್ಷರು ಹಾಗೂ 11 ಸದಸ್ಯರು ಇರಲಿದ್ದಾರೆ. ಇವರಿಗೆ ಗೌರವ ಧನ ಹಾಗೂ ಸಿಟ್ಟಿಂಗ್ ಫೀಸ್ ಸಹ ಒದಗಿಸಲಾಗುವುದು. ಈ ಮೊತ್ತವನ್ನು ರಾಜ್ಯ ಖಜಾನೆಯಿಂದ ಭರಿಸಲಾಗುವುದು.

ಯಾರಿಗೆ ಸಿಗಲಿದೆ ಸ್ಥಾನ?

ಕಾರ್ಯಕರ್ತರಿಗೆ, ಶಾಸಕರಲ್ಲದವರಿಗೆ, ಸಂಸದರಲ್ಲದವರಿಗೆ, ಸಮಿತಿ ಸದಸ್ಯತ್ವ ದೊರೆಯಲಿದೆ. ವಿವಿಧ ಇಲಾಖೆಗಳ ಸಮಿತಿಗಳನ್ನು ಕೂಡಲೇ ರಚಿಸಲು ಆಯಾ ಇಲಾಖೆಗಳ ಸಚಿವರ ವಿವೇಚನೆಗೆ ಬಿಡಲಾಗಿದೆ. ಹೆಸರುಗಳನ್ನು ಪಡೆಯುವಾಗ ಕಾಂಗ್ರೆಸ್‌ ಶಾಸಕರು, ಸಂಸದರ ಸಲಹೆ ಪಡೆಯಲಾಗುತ್ತದೆ. ಕೆಲವು ಶಾಸಕರಿಗೆ, ವಿಧಾನಸಭೆ ಟಿಕೆಟ್ ದೊರೆಯದವರಿಗೆ ಅವಕಾಶ ಕಲ್ಪಿಸಲಾಗುವುದು. ಈ ಸಮಿತಿಗೆ ಎರಡು ವರ್ಷಗಳ ಅವಧಿ ಇರಲಿದೆ.

ಸರ್ಕಾರಕ್ಕೆ ಹೊರೆ ಅಲ್ಲ ಎಂದ ಸಿಎಂ

ಈಗ ರಚಿಸಲಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಸರ್ಕಾರಕ್ಕೆ ದೊಡ್ಡ ಹೊರೆ ಆಗುವುದಿಲ್ಲ. ಪರಿಣಾಮಕಾರಿಯಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವಾಗಬೇಕು ಎಂಬ ಕಾರಣಕ್ಕೆ 16 ಕೋಟಿ ರೂ.ಗಳನ್ನು ಭರಿಸುತ್ತೇವೆ. ಅಪಪ್ರಚಾರಕ್ಕೆ ಉತ್ತರ ಕೊಡಲು ಈ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: Congress Karnataka: ಲೋಕಸಭೆಗೆ ಕಾಂಗ್ರೆಸ್‌ ರಣತಂತ್ರ; ಜಿಲ್ಲಾಧ್ಯಕ್ಷರಿಗೆ ಸಿಎಂ, ಡಿಸಿಎಂ, ಸುರ್ಜೇವಾಲ ಪಾಠ

ಭಾರತ್ ಜೋಡೋ ನ್ಯಾಯ ಯಾತ್ರಾ

ಲೋಕಸಭಾ ಚುನಾವಣೆ ಗೆಲ್ಲಲು ನಾವೆಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ರಾಹುಲ್ ಗಾಂಧಿ ಅವರು ಜನವರಿ 14ರಿಂದ 14 ರಾಜ್ಯಗಳ 85 ಜಿಲ್ಲೆಗಳಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರಾ ಕೈಗೊಳ್ಳಲಿದ್ದಾರೆ. ಚುನಾವಣೆಯನ್ನು ನಾವು ಗೆಲ್ಲಲೇಬೇಕು. ಇಷ್ಟೆಲ್ಲ ಮಾಡಿಯೂ ನಾವು ಗೆಲ್ಲದೆ ಹೋದರೆ ಅದು ನಮಗೆ ಹಿನ್ನಡೆಯಾಗಲಿದೆ. 28ಕ್ಕೆ 28 ಸೀಟನ್ನು ಗೆಲ್ಲಬೇಕು. ಕನಿಷ್ಠ 26 ಸೀಟು ಗೆಲ್ಲಬೇಕು. ಜನರ ನಾಡಿ ಮಿಡಿತ ನಮ್ಮ ಪರವಾಗಿರುವುದರಿಂದ ಅಪಪ್ರಚಾರದಿಂದ ನಾವು ಯಾರೂ ಹತಾಶರಾಗಬಾರದು. ಸಕಾರಾತ್ಮಕವಾಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಕಾರ್ಯಕರ್ತರಿಗೆ ಈ ವೇಳೆ ಕಿವಿಮಾತು ಹೇಳಿದ್ದಾರೆ.

Exit mobile version