Site icon Vistara News

Karnataka Politics : ಕಾಂಗ್ರೆಸ್‌ ವಿರುದ್ಧ ಸಿಡಿದ ಸಂಕೇತ್‌ ಏಣಗಿ; ಯುವ ನಾಯಕರು ಕೈ ಬಿಡುವ ಎಚ್ಚರಿಕೆ!

Congress spokesperson Sanket Enagi infront of vidhanasoudha with congress logo

ಬೆಂಗಳೂರು: ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ನಲ್ಲಿ ಒಳಬೇಗುದಿ ಇನ್ನೂ ತಣ್ಣಗಾಗಿಲ್ಲ. ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಕೆಲವು ಮುಖಂಡರ ಮುನಿಸು ಮುಂದುವರಿದಿದೆ. ಈ ನಡುವೆ ವಿಧಾನ ಪರಿಷತ್​ಗೆ (Karnataka Politics) ನಾಮನಿರ್ದೇಶನಕ್ಕೆ ಸಾಕಷ್ಟು ಪೈಪೋಟಿ ಇತ್ತು. ಕೆಲವರ ಹೆಸರಿಗೆ ವಿರೋಧವೂ ಇತ್ತು. ಈ ಎಲ್ಲವನ್ನೂ ದಾಟಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಚಿವೆ ಉಮಾಶ್ರೀ (Former Minister Umashree), ಮಾಜಿ ಸಚಿವ ಎಂ.ಆರ್. ಸೀತಾರಾಂ (Former minister MR Sitaram) ಹಾಗೂ ಮಾಜಿ ಇಡಿ ಅಧಿಕಾರಿ ಸುಧಾಮ್ ದಾಸ್ (Sudam Das) ಅವರ ಹೆಸರನ್ನು ಅಂತಿಮಗೊಳಿಸಿ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಇದು ಈಗ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡಿದ್ದು, ಕಾಂಗ್ರೆಸ್‌ ವಕ್ತಾರ ಸಂಕೇತ್ ಏಣಗಿ (Congress spokesperson Sanket Enagi) ಬಹಿರಂಗವಾಗಿಯೇ ಪಕ್ಷದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಪಕ್ಷದಲ್ಲಿ ಸಮರ್ಥ, ಸುಶಿಕ್ಷಿತ, ಪಕ್ಷನಿಷ್ಠ, ನ್ಯಾಯಪರತೆಯುಳ್ಳ ಯುವ ನಾಯಕರಿಗೆ ಬೆಲೆ ಇಲ್ಲ ಎಂದು ಗುಡುಗಿದ್ದಾರೆ. ಅಲ್ಲದೆ, ಯುವ ನಾಯಕರು ಪಕ್ಷದಲ್ಲಿ ಖಾಲಿಯಾಗುತ್ತಾರೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕಾಂಗ್ರೆಸ್ ವಕ್ತಾರರಾಗಿರುವ ಸಂಕೇತ್ ಏಣಗಿ ಅವರು, ಅಡ್ವೊಕೇಟ್ ಜನರಲ್ ಆಗುವ ನಿರೀಕ್ಷೆಯಲ್ಲಿದ್ದರು. ಆದರೆ, ಈ ಸ್ಥಾನವು ಕೈ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ಪರಿಷತ್‌ಗೆ ನಾಮನಿರ್ದೇಶನ ಆಗಲು ಪ್ರಯತ್ನ ಮಾಡಿದ್ದರು. ಈ ಸಂಬಂಧ ಅವರ ಮಟ್ಟದಲ್ಲಿ ಪ್ರಯತ್ನವನ್ನೂ ಮಾಡಿದ್ದರು. ಅಂತಿಮವಾಗಿ ಇವರಿಗೆ ಯಾವುದೇ ಪುರಸ್ಕಾರ ಸಿಗದೆ, ಉಮಾಶ್ರೀ, ಎಂ.ಆರ್‌. ಸೀತಾರಾಮ್, ಸುಧಾಮ್ ದಾಸ್ ಅವರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೂ ಕಳುಹಿಸಿಕೊಡಲಾಗಿದೆ. ಇದು ಸಂಕೇತ್‌ ಏಣಗಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಟ್ವೀಟ್‌ ಮೂಲಕ ಗುಡುಗು

ಈ ಬಗ್ಗೆ ಟ್ವೀಟ್‌ ಮಾಡಿರುವ ಸಂಕೇತ್‌ ಏಣಗಿ, ಪಕ್ಷದ ವಿರುದ್ಧ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಅವರ ಟ್ವೀಟ್‌ ಹೀಗಿದೆ: “ಪ್ರಾಮಾಣಿಕ_ಅಭಿಪ್ರಾಯ: ಹಿರಿಯ ರಾಜಕಾರಣಿಗಳು ಹಾಗೂ ಅವರ ಪರಿವಾರದವರಿಗೆ ಮಾತ್ರ ಯಾವತ್ತೂ ಮಣೆ ಹಾಕದೇ, ಇನ್ನಾದರೂ ಸಮರ್ಥ-ಸುಶಿಕ್ಷಿತ, ಪಕ್ಷನಿಷ್ಠ, ನ್ಯಾಯಪರತೆ ಇರುವ ಯುವ ರಾಜಕಾರಣಿಗಳಿಗೆ ಪಕ್ಷ ವಿಶೇಷ ಅವಕಾಶ ನೀಡಬೇಕು. ಹೀಗೆಯೇ ಮುಂದುವರಿದರೆ, ಪಕ್ಷ ಮುಂದೊಮ್ಮೆ ಯುವ ರಾಜಕಾರಣಿಗಳಿಲ್ಲದೆ ಬರಿದಾದರೆ ವಿಶೇಷವೇನಿಲ್ಲ” ಎಂದು ಬರೆದುಕೊಂಡಿದಾರೆ. ಕೊನೆಗೆ “ವಸ್ತುಸ್ಥಿತಿ” ಎಂಬ ಹ್ಯಾಶ್‌ಟ್ಯಾಗ್‌ ಅನ್ನೂ ಬಳಸಿದ್ದಾರೆ.

ಇದನ್ನೂ ಓದಿ: Karnataka Politics : ನಿಗಮ-ಮಂಡಳಿ ಮಾನದಂಡ ಅರ್ಜಿ ಹೊರಬಿಟ್ಟ ಕೆಪಿಸಿಸಿ; ಹಿಂದಿದೆ ದೊಡ್ಡ ಲೆಕ್ಕಾಚಾರ!

ಪರೋಕ್ಷ ಎಚ್ಚರಿಕೆ?

ಈ ಮೂಲಕ ಅವರು ಪಕ್ಷದ ನಿಲುವು ಹಾಗೂ ಆಯ್ಕೆಯನ್ನು ಪ್ರಶ್ನೆ ಮಾಡಿದ್ದಾರೆ. ಪರಿವಾರವಾದದ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಹಿರಿಯ ರಾಜಕಾರಣಿಗಳಿಗೆ ಪದೇ ಪದೆ ಅವಕಾಶಗಳನ್ನು ನೀಡಿದರೆ, ಯುವ ರಾಜಕಾರಣಿಗಳು ಬೆಳೆಯುವುದು ಹೇಗೆ? ಅವರು ತಮ್ಮ ಬೆಳವಣಿಗೆ ಸಂಬಂಧ ಅನ್ಯಪಕ್ಷವನ್ನು ನೋಡಿಕೊಳ್ಳಬೇಕಾಗುತ್ತದೆ ಎಂಬ ಪರೋಕ್ಷ ಎಚ್ಚರಿಕೆಯನ್ನು ಈ ಟ್ವೀಟ್‌ ಮೂಲಕ ನೀಡದಂತೆ ಕಾಣುತ್ತದೆ.

Exit mobile version