ಬೆಂಗಳೂರು: ತಲೆಮರೆಸಿಕೊಂಡಿರುವ ಸ್ಯಾಂಟ್ರೊ ರವಿಯ (santro ravi) ಕುರಿತು ಎಲ್ಲ ಮಾಹಿತಿ ಕಲೆಹಾಕಲಾಗಿದ್ದು, ಶೀಘ್ರದಲ್ಲೆ ಬಂಧಿಸಲಾಗುತ್ತದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ಅವನ ಓಡಾಟ ಎಲ್ಲೆಲ್ಲಿ ಇತ್ತೋ ಅಲ್ಲೆಲ್ಲ ಪೊಲೀಸರು ಹುಡುಕಾಟ ಮಾಡಿದ್ದಾರೆ. ಆತ ಎಲ್ಲೇ ಇದ್ದರೂ ಎಳೆದುಕೊಂಡು ಬಂದೇ ಬರುತ್ತಾರೆ ಎಂದರು.
ಕಾಂಗ್ರೆಸ್ ಕಾಲದಲ್ಲಿ ಸಹ ಸ್ಯಾಂಟ್ರೋ ರವಿ ಕೆಲಸ ಮಾಡಿದ್ದಾನೆ ಎನ್ನುವುದರ ಕುರಿತು ಪ್ರತಿಕ್ರಿಯಿಸಿದ ಜ್ಞಾನೇಂದ್ರ, ಈತ ಸುಮಾರು 20 ವರ್ಷಗಳಿಂದ ಚಟುವಟಿಕೆ ನಡೆಸುತ್ತಿದ್ದಾನೆ. ಎಲ್ಲ ಮಾಹಿತಿ ಕಲೆ ಹಾಕಲಾಗಿದೆ. ಕಾಂಗ್ರೆಸ್ ಕಾಲದಲ್ಲಿ ಅಂತ ಅಲ್ಲ, ಎಲ್ಲ ಕಾಲದಲ್ಲಿ ಮಾಡಿದ್ದಾನೆ. ಈ ಬಗ್ಗೆ ಎಲ್ಲ ತನಿಖೆ ಮಾಡಲಾಗುತ್ತದೆ.
ರೀತಿ ಟೀಮ್ ಮಾಡಿ ಮೈಸೂರು ಪೊಲೀಸರು ಸರ್ಚ್ ಮಾಡುತ್ತಿದ್ದಾರೆ. ಆತ ಉಳಿದುಕೊಂಡಿದ್ದ ಲಾಡ್ಜ್ ಚೆಕ್ ಮಾಡುತ್ತಿದ್ದಾರೆ. ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಹಾಗಾಗಿ ಹುಡುಕೋದು ಕಷ್ಟವಾಗಿದೆ. ಎಲ್ಲೇ ಇದ್ದರೂ ನಮ್ಮ ಪೊಲೀಸರು ಹುಡುಕಿ ಎಳೆದು ತರುತ್ತಾರೆ ಎಂದರು.
ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಏನೇ ಆರೋಪ ಮಾಡುವುದಕ್ಕೂ ಹೇಸುವುದಿಲ್ಲ. ಕಾಂಗ್ರೆಸ್ ಕಾಲದಲ್ಲೇ ಆತ ಬೆಳೆಯಲು ಕಾರಣವಾಗಿದೆ. ಆತನನ್ನು ನಾವು ಮಟ್ಟ ಹಾಕುತ್ತೇವೆ. ಯಾರೇ ಆಗಿದ್ದರೂ ಬಿಡುವುದಿಲ್ಲ, ಬಂಧನ ಮಾಡುತ್ತೇವೆ ಎಂದರು.
ತಮ್ಮ ಜತೆಗೆ ಸ್ಯಾಂಟ್ರೊ ರವಿ ಸಂಪರ್ಕದ ಕುರಿತು ಪ್ರತಿಕ್ರಿಯಿಸಿ, ನಾನು ನಿಮ್ಮೆಲ್ಲರಿಗೂ ಗೊತ್ತು. ಯಾರು ಬೇಕಾದರೂ ಬಂದು ಭೇಟಿ ಮಾಡಬಹುದು. ನನ್ನ ಮನೆಗೆ ಬರುವಾಗ ಪೊಲೀಸ್ ಸರ್ಟಿಫಿಕೇಟ್ ತೆಗೆದುಕೊಂಡು ಬಾ ಎನ್ನುವುದಕ್ಕಾಗುವುದಿಲ್ಲ. ಅನೇಕರು ಬಂದಾಗ ಫೋಟೊ ತೆಗೆಸಿಕೊಳ್ಳುತ್ತಾರೆ. ಬಂದರು, ಫೋಟೋ ತೆಗೆಸಿಕೊಂಡರು ಎನ್ನುವ ಕಾರಣಕ್ಕೆ ನಾವು ಅವರ ಜತೆ ಇರುವುದಿಲ್ಲ ಎಂದರು.
ಗುಜರಾತ್ ಪ್ರವಾಸ
ಅಹಮದಾಬಾದ್ ವಿಧಿವಿಜ್ಞಾನ ಪರೀಕ್ಷೆ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ, ಅದಕ್ಕಾಗಿ ಹುಜರಾತ್‌ಗೆ ಪ್ರವಾಸ ಮಾಡುತ್ತಿದ್ದೇವೆ. ಅಲ್ಲಿನ ಸಿಎಂ ಹಾಗೂ ಗೃಹ ಸಚಿವರ ಜತೆ ಸಭೆ ಇದೆ. ನಾನು, ರಜನೀಶ್ ಗೋಯಲ್, ಹಿತೇಂದ್ರ ಹೋಗುತ್ತಿದ್ದೇವೆ. ಈ ವಿಚಾರದಲ್ಲಿ ಹುಬ್ಬಳ್ಳಿಯಲ್ಲಿ ಇಂಟರ್ನ್ಯಾಷನಲ್ ವಿವಿ ನಿರ್ಮಾಣ ಆಗಲಿದೆ. ಬೇರೆ ದೇಶದವರು ಬಂದು ಇಲ್ಲಿ ಕಲಿಯುತ್ತಾರೆ ಎಂದರು.
ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿ ಮೊದಲ ಪತ್ನಿ ಮನೆಗೆ ಲಗ್ಗೆ ಇಟ್ಟ 30 ಪೊಲೀಸರ ವಿಶೇಷ ತಂಡ: ಡೈರಿ, ಗ್ಯಾಸ್ ಬಿಲ್ ವಶಕ್ಕೆ!