ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಫೋಟೊವನ್ನು ವಿಧಾನಸೌಧದಲ್ಲಿ ಅಳವಡಿಸುವ ಬಗ್ಗೆ ಈ ಹಿಂದೆ ಕಾಂಗ್ರೆಸ್ ಭಾರಿ ವಿರೋಧ ವ್ಯಕ್ತಪಡಿಸಿತ್ತು. ವಿರೋಧದ ನಡುವೆಯೂ ಆಗಿನ ಬಿಜೆಪಿ ಸರ್ಕಾರ, ಸಾವರ್ಕರ್ ಫೋಟೊ ಸಹಿತ ಏಳು ಮಂದಿ ಮಹನೀಯರ ಫೋಟೊವನ್ನು ಅಳವಡಿಸಿತ್ತು. ಇದರಿಂದ ಆಕ್ರೋಶಗೊಂಡಿದ್ದ ಕಾಂಗ್ರೆಸ್, ತಾನು ಅಧಿಕಾರಕ್ಕೆ ಬಂದ ಬಳಿಕ ಫೋಟೋ ತೆಗೆಯುವ ಬಗ್ಗೆ ಪ್ರಸ್ತಾಪ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸೋಮವಾರ (ಡಿ. 4) ವಿಧಾನ ಮಂಡಲ ಅಧಿವೇಶನ (Assembly Session) ಪ್ರಾರಂಭವಾಗುತ್ತಿದೆ. ಆದರೆ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (Belagavi Suvarna Vidhana Soudha) ವೀರ ಸಾವರ್ಕರ್ (Veer Savarkar) ಅವರ ಫೋಟೊವನ್ನು ಹಾಗೇ ಉಳಿಸಿಕೊಳ್ಳಲಾಗಿದೆ.
ಅಲ್ಲದೆ, ಈ ಬಗ್ಗೆ ವಿಸ್ತಾರ ನ್ಯೂಸ್ನ ಪವರ್ ಪಾಯಿಂಟ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸ್ಪೀಕರ್ ಯು.ಟಿ. ಖಾದರ್, ವೀರ ಸಾವರ್ಕರ್ ಫೋಟೊ ತೆಗೆಯುವ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಭಾನುವಾರ ಸಹ ವಿಧಾನಸೌಧ ಆವರಣವನ್ನು ಸ್ವಚ್ಛತೆ ಮಾಡುವುದರ ಸಹಿತ ಇನ್ನಿತರ ಸಿದ್ಧತಾ ಕಾರ್ಯಗಳನ್ನು ಮಾಡಲಾಗಿದೆ. ಆದರೆ, ಸಾವರ್ಕರ್ ಫೋಟೊವನ್ನು ತೆಗೆಯಲಾಗಿಲ್ಲ. ಈ ಬಗ್ಗೆ ಅಧಿವೇಶನ ಪ್ರಾರಂಭವಾದ ಮೇಲೆ ಕಾಂಗ್ರೆಸ್ ಯಾವ ನಿಲುವು ತೆಗೆದುಕೊಳ್ಳಲಿದೆ. ಸ್ಪೀಕರ್ ಯು.ಟಿ. ಖಾದರ್ ಅವರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲವನ್ನು ಕೆರಳಿಸಿದೆ.
ಸುವರ್ಣಸೌಧ ಅವ್ಯವಸ್ಥೆಗೆ ಪಿಡಬ್ಲ್ಯುಡಿ ಎಕ್ಸಿಕ್ಯುಟಿವ್ ಎಂಜಿನಿಯರ್ಗೆ ಸ್ಪೀಕರ್ ಕ್ಲಾಸ್
ಸೋಮವಾರ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧಕ್ಕೆ ಸ್ಪೀಕರ್ ಯು.ಟಿ. ಖಾದರ್ (UT Khadar) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಅಲ್ಲಿನ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಸಂಬಂಧ ಪಿಡಬ್ಲ್ಯುಡಿ ಎಕ್ಸಿಕ್ಯುಟಿವ್ ಎಂಜಿನಿಯರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಾನೇ ಬಂದು ನೋಡಿ ಎಲ್ಲವನ್ನೂ ಹೇಳಬೇಕಾ? ವಿಧಾನಸಭೆ ಹಾಲ್ ಅನ್ನು ಸುಂದರವಾಗಿ ಸಿದ್ಧಪಡಿಸುವಂತೆ ಸೂಚಿಸಿದ್ದೆ. ಆಸನಗಳು ನೋಡಲು ಆಕರ್ಷಕವಾಗಿ ಇರಬೇಕು. ಉತ್ತರ ಪ್ರದೇಶದ ವಿಧಾನಸಭೆ ಹಾಲ್ ಸುಂದರವಾಗಿದೆ. ಆಸನದ ಎದುರು ಚಂದವಾಗಿ ಪೇಂಟ್ ಮಾಡಲಾಗಿದೆ. ಇಲ್ಲಿ ಏಕೆ ಮಾಡಿಲ್ಲ? ನಾನು ಫೋಟೊ ಕಳುಹಿಸಿದ್ದೆ. ಆದರೂ ಏಕೆ ಮಾಡಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲರಿಗೂ ಕಾಣುವಂತೆ ಗಡಿಯಾರವನ್ನು ಸರಿಯಾಗಿ ಅಳವಡಿಸಿ ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: Tulu Language : ತುಳುಗೆ ಸಿಗಲಿದೆಯೇ ಭಾಷಾ ಪ್ರಾತಿನಿಧ್ಯ? ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!
ಸ್ಪೀಕರ್ ಆಸನದಲ್ಲಿ ಕುಳಿತು ಯು.ಟಿ. ಖಾದರ್ ಪರಿಶೀಲನೆ ನಡೆಸಿದ್ದಾರೆ. ಟೇಬಲ್ ಅಲ್ಲಾಡುತ್ತಿದೆ, ಸರಿಯಾಗಿ ಕೆಲಸ ಮಾಡಿ ಎಂದು ಸೂಚಿಸಿದ್ದಾರೆ. ಸೋಮವಾರಕ್ಕೆ ಹೂವಿನ ಅಲಂಕಾರ ಕೂಡ ಸರಿಯಾಗಿ ಮಾಡಿ. ಚಿಕ್ಕ ಚಿಕ್ಕ ಹೂಕುಂಡವನ್ನು ಇಟ್ಟಿದ್ದೀರಿ. ಅದು ಯಾರಿಗೂ ಸರಿಯಾಗಿ ಕಾಣಿಸುವುದಿಲ್ಲ. ಏಕೆ ಈ ರೀತಿ ಮಾಡಿದ್ದೀರಿ? ಎಂದು ಅಧಿಕಾರಿಗಳಿಗೆ ಯು.ಟಿ. ಖಾದರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: