Site icon Vistara News

SC Reservation : ಒಳ ಮೀಸಲಾತಿ ಬೇಡಿಕೆಯನ್ನು ಕೇಂದ್ರದ ಅಂಗಳಕ್ಕೆ ದಾಟಿಸಿದ ಸರ್ಕಾರ

Internal reservation

ಬೆಂಗಳೂರು: ಪರಿಶಿಷ್ಟ ಜಾತಿಗೆ (Scheduled Caste) ಒಳ ಮೀಸಲಾತಿ ಕಲ್ಪಿಸುವ ನ್ಯಾ. ಸದಾಶಿವ ಆಯೋಗದ (Justice Sadashiva Commission) ವರದಿ ಜಾರಿಗೆ ಸರ್ಕಾರ ಬದ್ಧವಾಗಿದೆ. ಆದರೆ, ಒಳಮೀಸಲಾತಿ ಕಲ್ಪಿಸಲು (Internal Reservation) ಸಂವಿಧಾನಕ್ಕೆ ತಿದ್ದುಪಡಿ ತರಬೇಕು, ಒಳಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯಗಳಿಗೆ ನೀಡಬೇಕು ಎಂದು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ (Cabinet Meeting) ತೀರ್ಮಾನಿಸಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರಾದ ಎಚ್‌.ಕೆ. ಪಾಟೀಲ್‌ (Minister HK Pateel) ಮತ್ತು ಎಚ್‌.ಸಿ ಮಹದೇವಪ್ಪ (Minister HC Mahadevappa) ಹೇಳಿದರು.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಒಪ್ಪಿಗೆ ಸೂಚಿಸಲಾಯಿತು. ಸಭೆಯ ಬಳಿಕ ಮಾತನಾಡಿದ ಅವಳಿ ಸಚಿವರು, ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಗ್ಗೆ ವಿವರಿಸಿದರು.

ವರದಿ ಕುರಿತು ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಹೊಸ ಜನಗಣತಿ ಪ್ರಕಾರ ಮೀಸಲಾತಿ ಪರಿಷ್ಕರಿಸಲು ಸಂವಿಧಾನಬದ್ಧವಾಗಿ ರಾಜ್ಯಗಳಿಗೆ ಅಧಿಕಾರ ನೀಡುವಂತೆ ಮತ್ತು ಒಳ ಮೀಸಲಾತಿಗಾಗಿ ಸಂವಿಧಾನದ ಅನುಚ್ಛೇದ 341ಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದರು.

ಇದರೊಂದಿಗೆ ಒಳ ಮೀಸಲಾತಿ ವಿವಾದ ಈಗ ಕೇಂದ್ರ ಸರ್ಕಾರದ ಅಂಗಳ ತಲುಪಿದೆ. ಈ ಹಿಂದೆ ಬಿಜೆಪಿ ಸರ್ಕಾರ ಮೀಸಲಾತಿ ವರ್ಗೀಕರಣ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಈ ವಿಚಾರ ಸುಪ್ರೀಂ​ನಲ್ಲಿ ವಿಚಾರಣೆ ನಡೆಯುತ್ತಿದೆ. ಈಗ ಸಿದ್ದರಾಮಯ್ಯನವರ ಸರ್ಕಾರ ಕಾನೂನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಿ ತನ್ನ ಹೊಣೆಯಿಂದ ಜಾರಿಕೊಂಡಿದೆ.

ಒಳ ಮೀಸಲಾತಿ ವಿಚಾರದ ಬಗ್ಗೆ ಕ್ಯಾಬಿನೆಟ್ ನಿರ್ಣಯ ಹೀಗಿದೆ

ಸಂವಿಧಾನ ಅನುಚ್ಛೇಧ 341ಕ್ಕೆ ಹೊಸದಾಗಿ Clause (3) ಸೇರ್ಪಡೆ ಮಾಡಲು ಈ ಕೆಳಕಂಡ ಉಪಬಂಧವನ್ನು ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಒಪ್ಪಿದೆ.

“341(3) Parliament may be law provide for Sub- categorization or De-sub- categorization of caste, race or tribe or part of or group within any caste, race or tribe specified in a notification issued under clause (1) or by law made by Parliament under clause (2), upon receiving the appropriate recommendation from the State/UT Governments (or resolution from legislature of a state/UT passed unanimously)”

ಭೋವಿ, ಮತ್ತು ಬಂಜಾರ, ಕೊರಮ ಕೊರಚ ಜಾತಿಗಳು ಹಾಗೂ ಅದರ ಪರ್ಯಾಯ ಜಾತಿಗಳು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದ್ದು, ಅದನ್ನು ಹಾಗೇಯೇ ಉಳಿಸಿಕೊಳ್ಳುವಂತೆ ಹಾಗೂ ಸೇರಿದ ಪಟ್ಟಿಯಲ್ಲಿ ರಾಜ್ಯಕ್ಕೆ ಪರಿಶಿಷ್ಟ ಜಾತಿಗಳ ಅವುಗಳನ್ನು ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ರಾಜ್ಯಗಳಿಗೆ ಅಧಿಕಾರ ಕೊಡಲು ಬೇಡಿಕೆ

ಒಳ ಮೀಸಲಾತಿಗೆ ಸಂಬಂಧಿಸಿದ ಸದಾಶಿವ ಆಯೋಗದ ವರದಿ ಜಾರಿಗೆ ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆಯಾದರೂ ಹೊಸ ಜನಗಣತಿ ಪ್ರಕಾರ ಮೀಸಲಾತಿ ಪರಿಷ್ಕರಣೆಗೆ ಕೇಂದ್ರಕ್ಕೆ ಶಿಫಾರಸು ಮಾಡಲು ತೀರ್ಮಾನ ಮಾಡಲಾಗಿದೆ. ಮೀಸಲಾತಿ ಪರಿಷ್ಕರಣೆ ಮಾಡಲು ಸಂವಿಧಾನಬದ್ಧವಾಗಿ ರಾಜ್ಯಗಳಿಗೆ ಅಧಿಕಾರ ನೀಡಬೇಕು ಎನ್ನುವುದು ಇನ್ನೊಂದು ಬೇಡಿಕೆ.

ಹಿಂದಿನ ಸರ್ಕಾರ ಶಿಫಾರಸು ಕ್ಲೋಸ್‌ ಮಾಡಿತ್ತು

ಎರಡು ದಶಕಗಳಿಂದ ಒಳಮೀಸಲಾತಿ ಹೋರಾಟ ಇತ್ತು. ಅದಕ್ಕಾಗಿ ಸದಾಶಿವ ಆಯೋಗ ರಚನೆ ಮಾಡಲಾಗಿತ್ತು.. ಆಯೋಗ ಮಾಡಿದ ಶಿಫಾರಸು ಸರ್ಕಾರದ ಬಳಿ ಇತ್ತು.‌ ಅಧಿಕಾರ ಕೊಟ್ಟರೆ ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವುದಾಗಿ ಚಿತ್ರದುರ್ಗದ ಸಮಾವೇಶದಲ್ಲಿ ನಾವು ಘೋಷಣೆ ಮಾಡಿದ್ದೆವು ಎಂದು ಸಚಿವ ಎಚ್‌.ಸಿ. ಮಹಾದೇವಪ್ಪ ವಿವರಣೆ ನೀಡಿದರು.

ಹಿಂದಿನ ಸರ್ಕಾರ ತರಾತುರಿಯಲ್ಲಿ ಕ್ರಮ ಕೈಗೊಂಡಿತ್ತು. ಸದಾಶಿವ ಆಯೋಗದ ಶಿಫಾರಸು ಕ್ಲೋಸ್‌ ಅಂತ ಹೇಳಿ ನಿರ್ಣಯ ಮಾಡಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಒಳಮೀಸಲು ಜಾರಿಗೆ, 101 ಜಾತಿಗಳ ಹಿತ ಕಾಪಾಡಲು ಬದ್ಧವಾಗಿದೆ ಎಂದು ಹೇಳಿದರು.

ಕಳೆದ ಎರಡು ದಶಕಗಳಿಂದ ದಲಿತರ ಒಳ‌ಪಂಗಡಗಳು ತಮಗೆ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗಿದೆ. ಹೀಗಾಗಿ ಒಳಮೀಸಲಾತಿ ಕೊಡಬೇಕು ಎಂದು ಆಗ್ರಹಿಸುತ್ತಿವೆ. ಹೀಗಾಗಿ ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಿ ವರದಿ ಕೇಳಲಾಗಿತ್ತು. ಸದಾಶಿವ ಆಯೋಗ ವರದಿ ಸಲ್ಲಿಸಿದರೂ ಅದು ಅಸೆಂಬ್ಲಿಯಲ್ಲಿ ಮಂಡನೆ ಆಗಲೇ ಇಲ್ಲ. ನಾವು ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಮಂಡನೆ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹಾಕಿದ್ದೆವು. ಆದರೆ, ಬಿಜೆಪಿಯ ಸರ್ಕಾರ ತರಾತುರಿಯಲ್ಲಿ ಕಾನೂನು ಸಚಿವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಯಿತು. ನ್ಯಾ.ಸದಾಶಿವ ಆಯೋಗದ ವರದಿ ಅಪ್ರಸ್ತುತ ಹಾಗೂ ಸಮಿತಿ ಮುಕ್ತಾಯ ಆಗಿದೆ ಎಂದು ಕ್ಯಾಬಿನೆಟ್ ನಿರ್ಣಯ ಮಾಡಲಾಯಿತು ಎಂದು ವಿವರಿಸಿದರು.

ಸಂವಿಧಾನ ತಿದ್ದುಪಡಿ ಮಾಡದಿದ್ದರೆ ಒಳಮೀಸಲಾತಿ ಸಾಧ್ಯವಿಲ್ಲ

2011ರ ಜನಸಂಖ್ಯೆ ಆಧಾರದಲ್ಲಿ ನ್ಯಾ. ನಾಗಮೋಹನ್ ದಾಸ್ ವರದಿ ನೀಡಲಾಗಿತ್ತು. ಏನೇ ಇದ್ದರೂ ಸಂವಿಧಾನದ ಆರ್ಟಿಕಲ್ 341ಕ್ಕೆ ಖಂಡ (3)ನ್ನು ಸೇರಿಸದೇ ಹೋದರೆ ಒಳ ಮೀಸಲಾತಿ ನೀಡಲು ಸಾಧ್ಯವಿಲ್ಲ. ಇದು ಸಂಸತ್ತಿನ ಮೂಲಕವೇ ಆಗಬೇಕು. ರಾಜ್ಯ ಸರ್ಕಾರ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು.

ಹೀಗಾಗಿ 101 ಜಾತಿಗಳ ಹಿತ ಕಾಪಾಡಲು ಆರ್ಟಿಕಲ್ 341ಕ್ಕೆ ತಿದ್ದುಪಡಿ ತನ್ನಿ ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ ಎಂದು ಸಚಿವ ಎಚ್‌.ಸಿ ಮಹದೇವಪ್ಪ ಹೇಳಿದರು.

ಇದನ್ನೂ ಓದಿ: Basavanna cultural leader : ಅಣ್ಣ ಬಸವಣ್ಣ ಇನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ

ಇದು ರಾಜಕೀಯವಲ್ಲ, ದಾರಿ ತಪ್ಪಿಸುವ ನಡೆಯಲ್ಲ

ಕೇಂದ್ರ ಸರ್ಕಾರವನ್ನು ಸಂವಿಧಾನ ತಿದ್ದುಪಡಿಗೆ ಕೋರುವುದು ಕಾನೂನು ಉಲ್ಲಂಘನೆ ಆಗುವುದಿಲ್ಲ. ಬೇರೆಯವರು ರಾಜಕೀಯ ಕಾಣಬಹುದು. ಆದರೆ, ನಾವಂತೂ ಇದರಲ್ಲಿ ರಾಜಕೀಯ ಮಾಡುವುದಿಲ್ಲ. ವರದಿಯನ್ನು ಹಿಂದಿನ ಬಿಜೆಪಿ ಸರ್ಕಾರವೇ ಅಪ್ರಸ್ತುತ ಮತ್ತು ಕ್ಲೋಸ್ ಮಾಡಿದೆ. ಹಾಗಂತ ನಾವು ಯಾರನ್ನೂ ದಾರಿ ತಪ್ಪಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಕೇಂದ್ರ ಸರಕಾರ ಈ ವಿಚಾರದಲ್ಲಿ ತಿದ್ದುಪಡಿ ಮಾಡಬೇಕು. ಎಲ್ಲಿವರೆಗೆ ತಿದ್ದುಪಡಿ ಆಗುವುದಿಲ್ಲವೋ ಅಲ್ಲಿವರೆಗೆ ನಮ್ಮ ಹೋರಾಟ ಮಾಡುತ್ತೇವೆ ಎಂದು ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

Exit mobile version