Site icon Vistara News

Security Breach in Lok Sabha: ಪ್ರತಾಪ್‌ ಸಿಂಹಗೆ ಬುದ್ಧಿ ಹೇಳಿ ಎಂದ ಡಿಕೆಶಿ; ತಿರುಗಿಬಿದ್ದ ಬಿಜೆಪಿ

Security Breach in Lok Sabha Pratap Sihma DK Shivakumar and R Ashok

ಬೆಳಗಾವಿ: ಲೋಕಸಭೆಯಲ್ಲಿ ಭಾರಿ ಪ್ರಮಾಣದ ಭದ್ರತೆ ಉಲ್ಲಂಘನೆ (Security Breach in Lok Sabha) ನಡೆದಿರುವುದು ಈಗ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಈ ವಿಷಯ ಗದ್ದಲಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ ಈ ವಿಷಯವನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರು ಪ್ರಸ್ತಾಪ ಮಾಡುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (Opposition leader R Ashok) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಸದ ಪ್ರತಾಪ್‌ ಸಿಂಹ (MP Pratap Simha) ಅವರು ಕೊಟ್ಟ ಪಾಸ್‌ನಿಂದಲೇ ಈ ರೀತಿಯಾಗಿದೆ. ಹೀಗಾಗಿ ಅವರಿಗೆ ಸ್ವಲ್ಪ ಬುದ್ಧಿವಾದ ಹೇಳಿ ಎಂದು ಡಿ.ಕೆ. ಶಿವಕುಮಾರ್‌ ಹೇಳುತ್ತಿದ್ದಂತೆ, ಆಕ್ಷೇಪ ವ್ಯಕ್ತಪಡಿಸಿದ ಆರ್.‌ ಅಶೋಕ್‌, “ನೀವು ಹೀಗೆಲ್ಲ ಮಾತನಾಡಬೇಡಿ. ಇದು ದೇಶದ ಭದ್ರತೆಯ ವಿಷಯವಾಗಿದೆ ಎಂದು ಕಿಡಿಕಾರಿದರು.

ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿರುವಾಗ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಸಂಸದ ಪ್ರತಾಪ್‌ ಸಿಂಹ ಅವರಿಗೆ ಬಿಜೆಪಿಯವರು ಸ್ವಲ್ಪ ಬುದ್ಧಿ ಹೇಳಬೇಕು. ಹೀಗೆ ಎಲ್ಲರಿಗೂ ಪಾಸ್‌ ಕೊಟ್ಟರೆ ಹೇಗೆ? ಅದು ಕಾಂಗ್ರೆಸ್‌ನವರು ಯಾರಾದರೂ ಪಾಸ್‌ ಕೊಟ್ಟಿದ್ದರೆ ನೀವು ಸುಮ್ಮನೆ ಇರುತ್ತಿದ್ದಿರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಇದಕ್ಕೆ ಮಧ್ಯ ಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ಇದು ದೇಶದ ಭದ್ರತೆಯ ಪ್ರಶ್ನೆಯಾಗಿದೆ. ಈ ವಿಷಯವನ್ನು ನೀವು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು. ಹೀಗಾಗಿ ಲೋಕಸಭೆಯೊಳಗೆ ವ್ಯಕ್ತಿಯೊಬ್ಬ ನುಗ್ಗಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಮಾತನಾಡಿ, ಇದು ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯವಾಗಿದ್ದು, ಇದನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಆದರೆ, ಇಂಥ ವಿಚಾರವನ್ನು ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಆಗ ಡಿ.ಕೆ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಅದೇ ನಾವು ಕಾಂಗ್ರೆಸ್‌ನವರು ಪಾಸ್‌ ಕೊಟ್ಟಿದ್ದರೆ ನೀವು ಸುಮ್ಮನಿರುತ್ತಿದ್ದಿರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಏನಿದು ಘಟನೆ?

ಲೋಕಸಭೆಯಲ್ಲಿ ಭಾರಿ ಪ್ರಮಾಣದ ಭದ್ರತೆ ಉಲ್ಲಂಘನೆ ( Security Breach In Parliament) ನಡೆದಿರುವುದು ವರದಿಯಾಗಿದೆ. ಇದರಿಂದ ಆತಂಕಗೊಂಡ ಸಂಸತ್‌ ಸದಸ್ಯರು ತಕ್ಷಣವೇ ಹೊರಗೆ ಬಂದಿದ್ದಾರೆ. ಅಲ್ಲದೆ, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಲೋಕಸಭೆ ಕಲಾಪ ನಡೆಯುತ್ತಿದ್ದಾಗ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಕೆಳಗೆ ಜಿಗಿದು ಸದನದಲ್ಲಿ ಸುತ್ತಲೂ ಓಡಾಡಲಾರಂಭಿಸಿದರು. ಅವರು ತಮ್ಮ ಕೈಯಲ್ಲಿದ್ದ ಸಾಧನಗಳಿಂದ ಫ್ಲೋರೊಸೆಂಟ್ ಬಣ್ಣದ ಅನಿಲವನ್ನು ಸಿಂಪಡಿಸುತ್ತಾ ಸೆರೆಹಿಡಿಯುವುದನ್ನು ತಪ್ಪಿಸಿಕೊಳ್ಳಲು ಯತ್ನಿಸಿದರು ಎಂದು ಕೆಲವು ಮೂಲಗಳು ತಿಳಿಸಿವೆ.

ಕೂಡಲೇ ಲೋಕಸಭೆಯ ಕಲಾಪವನ್ನು ಸ್ಥಗಿತಗೊಳಿಸಲಾಯಿತು ಮತ್ತು ಸಂಸದರು ಲೋಕಸಭೆಯಿಂದ ಹೊರಬರಲು ಪ್ರಾರಂಭಿಸಿದರು. ಒಳನುಗ್ಗಿದ ವ್ಯಕ್ತಿಗಳು ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಸಂಸದರು ಮತ್ತು ಭದ್ರತಾ ಸಿಬ್ಬಂದಿ ಆ ವ್ಯಕ್ತಿಗಳನ್ನು ಹಿಡಿದು ವಿಚಾರಣೆ ಆರಂಭಿಸಿದ್ದಾರೆ.

ತೆಲಂಗಾಣ ಮೂಲದವರು

ಸದ್ಯ ಇಬ್ಬರು ತೆಲಂಗಾಣ ಮೂಲದವರು ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬ ಪುರುಷ, ಇನ್ನೊಬ್ಬಳು ಮಹಿಳೆ. ಪುರುಷನ ಹೆಸರು ಸಾಗರ್‌ ಎಂದು ತಿಳಿದುಬಂದಿದೆ. ದಾಳಿಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಸಂಸತ್‌ ಭವನ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದೆ.

ಭದ್ರತೆ ಮುರಿದು ಒಳನುಗ್ಗಿದವರು ಇಬ್ಬರೋ ಅಥವಾ ಹಲವು ಮಂದಿ ಇದ್ದಾರೋ ಎಂಬುದು ಇನ್ನೂ ತಿಳಿದಿಲ್ಲ. ಗೊಂದಲದಲ್ಲಿ ಸಂಸದರು ಲೋಕಸಭೆಯಿಂದ ಹೊರಬಂದರು. ಗ್ಯಾಲರಿಯಿಂದ ಜಿಗಿದವರು ಯಾವುದೋ ಬಗೆಯ ರೀತಿಯ ಅನಿಲವನ್ನು ಸಿಂಪಡಿಸುತ್ತಿದ್ದಾರೆ ಎಂದು ಹೇಳಿದರು.

ಇಂದು ಸಂಸತ್‌ ಮೇಲಿನ ದಾಳಿ ಸಂಭವಿಸಿ 22 ವರ್ಷಗಳಾದ ದಿನ ಎಂಬುದು ಗಮನಾರ್ಹವಾಗಿದೆ. ಖಲಿಸ್ತಾನಿ ಉಗ್ರ ಸತ್ವಂತ್‌ ಸಿಂಗ್‌ ಪನ್ನುನ್‌ ಇತ್ತೀಚೆಗೆ, ʼʼಡಿಸೆಂಬರ್‌ 13ರಂದು ನಾವು ಭಾರತ ಬೆಚ್ಚಿಬೀಳುವಂತೆ ಮಾಡಲಿದ್ದೇವೆʼʼ ಎಂದು ಬೆದರಿಸಿದ್ದ.

ಮೈಸೂರು ಸಂಸದ ಪ್ರತಾಪ್‌ ಸಿಂಹ ಕಚೇರಿಯಿಂದ ಪಾಸ್‌ ಪಡೆದಿದ್ದ ದುಷ್ಕರ್ಮಿಗಳು!

ಬಂಧಿತರಿಬ್ಬರೂ ಮೈಸೂರು ಸಂಸದ ಪ್ರತಾಪ್‌ ಸಿಂಹ (BJP MP Pratap Simha) ಅವರ ಕಚೇರಿಯಿಂದ ಪಾಸ್‌ ಪಡೆದಿದ್ದರು ಎಂದು ತಿಳಿದುಬಂದಿದೆ. ದುಷ್ಕರ್ಮಿಗಳು ತೆಲಂಗಾಣ ಮೂಲದವರಾಗಿದ್ದಾರೆ. ಒಬ್ಬಾತನ ಹೆಸರು ಸಾಗರ್‌ ಎನ್ನಲಾಗಿದೆ. ಸುಳ್ಳು ಹೇಳಿ ಮೈಸೂರ ಸಂಸದರ ಕಚೇರಿಯಿಂದ ಪಾಸ್‌ಗಳನ್ನು ಪಡೆದಿದ್ದರು. “ತುಂಬಾ ಒತ್ತಾಯಿಸಿ ನಮ್ಮ ಕಚೇರಿಯಿಂದ ಪಾಸ್‌ ಪಡೆದಿದ್ದರು” ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಇದನ್ನೂ ಓದಿ: Security breach in Loksabha : ದುಷ್ಕರ್ಮಿಯನ್ನು ಮೊದಲು ಹಿಡಿದದ್ದು ಸಂಸದ ಮುನಿಸ್ವಾಮಿ ಎಂಡ್‌ ಟೀಮ್

ಇತಿಹಾಸದಲ್ಲೇ ಭಾರಿ ಭದ್ರತಾ ಲೋಪ ಎನಿಸಿಕೊಂಡ ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಕ್ಯಾನಿಸ್ಟರ್‌ಗಳನ್ನು ಹೊತ್ತಿದ್ದ ಒಬ್ಬಾತ ಲೋಕಸಭೆಯ ಒಳಗೆ ಕಲರ್‌ ಬಾಂಬ್‌ ಸಿಡಿಸಿದ್ದಾನೆ. ಇನ್ನಿಬ್ಬರು ಲೋಕಸಭೆಯ ಹೊರಗೆ ಕಲರ್‌ ಬಾಂಬ್‌ ಸಿಡಿಸಿದ್ದಾರೆ. ಮೂವರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ದುಷ್ಕರ್ಮಿಗಳು ಲೋಕಸಭೆಯ ಸಭಾಂಗಣಕ್ಕೆ ಜಿಗಿದ ಕ್ಷಣದ ಸಂಸದರ ನಡುವೆ ಕೋಲಾಹಲ ಉಂಟಾಗಿದ್ದು, ಕೆಲವು ಸಂಸದರು ಹಾಗೂ ಲೋಕಸಭೆ ಸಿಬ್ಬಂದಿ ಆತನನ್ನು ಹಿಡಿದರು. ಕೂಡಲೇ ಸ್ಪೀಕರ್‌ ಸದನವನ್ನು ಮುಂದೂಡಿದರು.

Exit mobile version