Site icon Vistara News

ಸಂಸತ್‌ ಮೇಲೆ ಕಿಡಿಗೇಡಿಗಳ ಅಟ್ಯಾಕ್; ವಿಪಕ್ಷ ಸಂಸದರ ಮೇಲೆ ಮೋದಿ, ಶಾ ದಾಳಿ: ಸುರ್ಜೇವಾಲ ಆಕ್ರೋಶ

Narendra Modi Amit Shah and Randeep Surjewala

ಬೆಂಗಳೂರು: ಸಂಸತ್ ಮೇಲಿನ ದಾಳಿಯ ಭದ್ರತಾ ವೈಫಲ್ಯಕ್ಕೆ (Security Breach in Lok Sabha) ಉತ್ತರ ಕೊಡಬೇಕಿರುವುದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹಾಗೂ ಗೃಹ ಸಚಿವ ಅಮಿತ್‌ ಶಾ (Home Minister Amit Shah) ಅವರ ಕರ್ತವ್ಯ ಎಂದು ಹಿರಿಯ ರಾಜ್ಯಸಭಾ ಸದಸ್ಯ ರಣದೀಪ್ ಸುರ್ಜೇವಾಲ (Rajya Sabha Member Randeep Surjewala) ಹೇಳಿದ್ದಾರೆ. ನ್ಯಾಯ ಕೇಳಲು ಬಂದವರನ್ನೇ ಅಮಾನತು ಮಾಡುವುದು ಎಷ್ಟು ಸರಿ? ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕರಾಳ ದಿನವಾಗಿದೆ ಎಂದಿದ್ದಾರೆ. ಒಂದು ಕಡೆ ಸಂಸತ್‌ ಮೇಲೆ ಈ ರೀತಿಯ ದಾಳಿ ನಡೆದರೆ, ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರ ಮೇಲೆ ಮತ್ತೊಂದು ರೀತಿಯಲ್ಲಿ ದಾಳಿ ಮಾಡುತ್ತಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವದ ಪರಮೋಚ್ಚ ವೇದಿಕೆಯಾಗಿರುವ ಸಂಸತ್ತಿನ ಮೇಲಿನ ದಾಳಿಯ ಹೊಣೆಯನ್ನು ಸರ್ಕಾರವೇ ಹೊರಬೇಕು. ರಕ್ಷಣಾ ವೈಫಲ್ಯದ ಬಗ್ಗೆ ಉತ್ತರ ಕೊಡುವಂತೆ ಆಗ್ರಹಿಸಿ ವಿರೋಧ ಪಕ್ಷಗಳು ನ್ಯಾಯಯುತವಾಗಿ ಸಂಸತ್‌ ಕಲಾಪದಲ್ಲಿ ಆಗ್ರಹಿಸಿವೆ. ಆದರೆ, ಪ್ರತಿಪಕ್ಷಗಳ ಮಾತಿಗೆ ಕೇಂದ್ರ ಸರ್ಕಾರವು ಮನ್ನಣೆ ನೀಡದೆ ಹಿಟ್ಲರ್‌ ಧೋರಣೆ ತಾಳಿದೆ ಎಂದು ರಣದೀಪ್ ಸುರ್ಜೇವಾಲ‌ ಕಿಡಿಕಾರಿದ್ದಾರೆ.

ಭದ್ರತಾ ಲೋಪ ಉಂಟಾಗಲು ಕಾರಣರಾದ ಕರ್ನಾಟಕದ ಸಂಸತ್‌ ಸದಸ್ಯ ಪ್ರತಾಪ್‌ ಸಿಂಹ ಅವರನ್ನು ಅಮಾನತು ಮಾಡುವುದನ್ನು ಬಿಟ್ಟು ಪ್ರತಿಪಕ್ಷಗಳ 141 ಸಂಸದರನ್ನು ಅಮಾನತು ಮಾಡಿದೆ. ಇದು ನಿಜಕ್ಕೂ ಖಂಡನೀಯ. ಭಾರತೀಯ ಸಂಸತ್‌ ವ್ಯವಸ್ಥೆಯ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಂಸದರನ್ನು ಅಮಾನತು ಮಾಡಿರುವುದು ಇದೇ ಮೊದಲು ಎಂದು ರಣದೀಪ್ ಸುರ್ಜೇವಾಲ‌ ವ್ಯಂಗ್ಯವಾಡಿದ್ದಾರೆ.

ಸಂಸದರ ಮೇಲೆ ಮೋದಿ, ಶಾ ದಾಳಿ

ಒಂದು ಕಡೆ ಸಂಸತ್‌ ಮೇಲೆ ಈ ರೀತಿಯ ದಾಳಿ ನಡೆದರೆ, ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರ ಮೇಲೆ ಮತ್ತೊಂದು ರೀತಿಯಲ್ಲಿ ದಾಳಿ ಮಾಡುತ್ತಿದ್ದಾರೆ. ಸಂಸದರನ್ನು ಅಮಾನತು ಮಾಡಿ ಅವರ ಹಕ್ಕನ್ನು ಹತ್ತಿಕ್ಕುವ ಕೆಲಸವನ್ನು ಮಾಡಲಾಗುತ್ತಿದೆ. ಒಂದು ವೇಳೆ ಅಮಾನತು ಮಾಡಬೇಕಿದ್ದರೆ ಲೋಪ ಎಸಗಿದ ಸಂಸದರಾದ ಪ್ರತಾಪ್‌ ಸಿಂಹ ಅವರನ್ನು ಅಮಾನತು ಮಾಡಬೇಕಿತ್ತು. ಇದು ಎಷ್ಟು ಸಮಂಜಸವಾಗಿದೆ? ಎಂದು ರಣದೀಪ್ ಸುರ್ಜೇವಾಲ‌ ಪ್ರಶ್ನಿಸಿದ್ದಾರೆ.

ಉತ್ತರ ಕೊಡಲು ಹೆದರಿದ ಕೇಂದ್ರ ಸರ್ಕಾರ

ಈ ಭದ್ರತಾ ವೈಫಲ್ಯದ ಬಗ್ಗೆ ಉತ್ತರ ಕೊಡಿ ಎಂಬ ಸಣ್ಣ ಬೇಡಿಕೆಯನ್ನು ನಾವು ಕೇಳಿದ್ದವು. ಇಷ್ಟಕ್ಕೆ ಬೆದರಿದ ಆಡಳಿತ ಪಕ್ಷದವರು ವಿರೋಧ ಪಕ್ಷದ 141 ಸಂಸದರನ್ನು ಅಮಾನತು ಮಾಡಿದೆ. ಇವರು ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಮುಕ್ತ ಮಾಡುತ್ತೇನೆ ಎಂದು ಹೋದರು. ಆದರೆ, ಅದು ಆಗಲಿಲ್ಲ. ಅದಕ್ಕೆ ಈಗ ವಿರೋಧ ಪಕ್ಷವನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದ್ದಾರೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷವೇ ಇರಬಾರದು ಎಂಬುದು ಇವರ ಅಜೆಂಡಾ ಆಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ‌ ಕಿಡಿಕಾರಿದ್ದಾರೆ.

ನಿಜವಾಗಿಯೂ ಅಮಾನತು ಮಾಡಬೇಕಿರುವುದು ಯಾರನ್ನು? ಪಾಸ್‌ ಕೊಟ್ಟು ಭದ್ರತಾ ವೈಫಲ್ಯಕ್ಕೆ ಕಾರಣರಾಗಿರುವ ಕರ್ನಾಟಕ ಸಂಸದ ಪ್ರತಾಪ್‌ ಸಿಂಹ ಅವರನ್ನು ಅಮಾನತು ಮಾಡಬೇಕಿದೆ. ಆದರೆ, ಇಲ್ಲಾಗಿದ್ದು ಏನು? ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ, ಭದ್ರತಾ ಲೋಪದ ಬಗ್ಗೆ ಗೃಹ ಸಚಿವರು ಉತ್ತರ ಕೊಡಬೇಕು ಎಂದು ಹೇಳಿದ್ದಕ್ಕೆ ಪ್ರತಿಪಕ್ಷದವರನ್ನು ಅಮಾನತು ಮಾಡುವುದು ಖಂಡನಾರ್ಹ ಎಂದಿದ್ದಾರೆ.

ಸಂಸತ್‌ ಇತಿಹಾಸಕ್ಕೆ ಕಪ್ಪು ಚುಕ್ಕೆ

ಚರ್ಚೆಗೆ ಅವಕಾಶ ಕೊಡುವುದು ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆ. ದೇಶದಲ್ಲಿ ಎಂಥ ಘಟನೆಗಳೇ ನಡೆದರೂ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಸ್ಥಳ ಸಂಸತ್‌ ಮಾತ್ರ. ಅಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬೇಕು. ಇನ್ನು ಆಡಳಿತ ಪಕ್ಷದಲ್ಲಿರುವವರು ಕಿವಿಯಾಗಿರಬೇಕು. ಪ್ರತಿಪಕ್ಷಗಳ ಚರ್ಚೆಯನ್ನು, ಸಲಹೆಯನ್ನು ಕೇಳಿಸಿಕೊಳ್ಳಬೇಕು. ಆದರೆ, ಇಲ್ಲಿ ಅದ್ಯಾವುದೂ ಆಗುತ್ತಿಲ್ಲ. ಈಗ ಬಿಜೆಪಿ ಸರ್ಕಾರವು ಕಣ್ಣು, ಕಿವಿ ಎಲ್ಲವನ್ನೂ ಮುಚ್ಚಿ ಇಂತಹ ವರ್ತನೆ ಮಾಡುತ್ತಿದೆ. ಸಂಸತ್‌ ಇತಿಹಾಸಕ್ಕೆ ಇದೊಂದು ಕಪ್ಪು ಚುಕ್ಕೆ ಎಂದು‌ ರಣದೀಪ್‌ ಸಿಂಗ್‌ ಸುರ್ಜೇವಾಲ ಟೀಕಿಸಿದ್ದಾರೆ.

ಇದನ್ನೂ ಓದಿ: Congress Karnataka: ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಡಿಶುಂ ಡಿಶುಂ; ನಿಗಮ-ಮಂಡಳಿ ನೇಮಕಕ್ಕೆ ಮೂಡದ ಒಮ್ಮತ!

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ್‌ ಶಾ ಅವರ ವರ್ತನೆ ಸರಿ ಅಲ್ಲ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದೂ ಸುರ್ಜೇವಾಲ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version