Site icon Vistara News

Sedition case: ರಾಜ್ಯಪಾಲರ ಅಂಗಳಕ್ಕೆ ‘ಪಾಕಿಸ್ತಾನ್‌ ಜಿಂದಾಬಾದ್‌’ ಕದನ; ಸರ್ಕಾರ ವಜಾಕ್ಕೆ ಬಿಜೆಪಿ ಆಗ್ರಹ

Sedition case Battle of Pakistan Zindabad reaches Governor court BJP demands dismissal of govt
FacebookTwitterWhatsAppPinterestTelegramLinkedInKoo

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಗೆದ್ದ ಕಾಂಗ್ರೆಸ್‌ ಅಭ್ಯರ್ಥಿಗಳ ವಿಜಯೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ (Pakistan zindabad) ಘೋಷಣೆ ಕೂಗಿದ ಆರೋಪ ಕೇಳಿಬಂದು 40 ಗಂಟೆ ಕಳೆದರೂ ಕ್ರಮ ಕೈಗೊಂಡಿಲ್ಲ. ದೇಶದ್ರೋಹಿಗಳಿಗೆ (Sedition case) ಈ ಸರ್ಕಾರದಿಂದ ರಕ್ಷಣೆ ಕೊಡಲಾಗುತ್ತಿದೆ. ಹೀಗಾಗಿ ಈ ಸರ್ಕಾರವನ್ನು ವಜಾ ಮಾಡಿ ಎಂದು ರಾಜ್ಯ ಬಿಜೆಪಿ ನಾಯಕರು ರಾಜಭವನದ ಕದ ತಟ್ಟಿದ್ದಾರೆ. ಹೀಗಾಗಿ “ಪಾಕಿಸ್ತಾನ್‌ ಜಿಂದಾಬಾದ್‌” ಕದನ ಈಗ ರಾಜ್ಯಪಾಲರ ಅಂಗಳ ತಲುಪಿದೆ.

ಫೆ. 27ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನೂತನ ಸದಸ್ಯರಾಗಿ ಆಯ್ಕೆಯಾದ ನಾಸಿರ್‌ ಹುಸೇನ್‌ ಅವರನ್ನು ವಿಧಾನಸೌಧದೊಳಗೆ ಅಭಿನಂದನೆ ಸಲ್ಲಿಸುವಾಗ ಪಾಕಿಸ್ತಾನ ಜಿಂದಾಬಾದ್‌ ಘೋಷಣೆಯನ್ನು ಕೂಗಲಾಗಿದೆ. ಇದು ದೇಶದ್ರೋಹದ ಕೆಲಸವಾಗಿದ್ದು, ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜರುಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅಲ್ಲದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದ್ದು, ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕಿದೆ. ಅಲ್ಲದೆ, ಈ ಸರ್ಕಾರವನ್ನು ವಜಾಗೊಳಿಸಬೇಕಿದೆ ಎಂದು ಬಿಜೆಪಿ ನಾಯಕರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅನುಪಸ್ಥಿತಿಯಲ್ಲಿ ರಾಜ್ಯಪಾಲರ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ ಬಿಜೆಪಿ ನಾಯಕರು.

ಬಿಜೆಪಿ ಮನವಿಯಲ್ಲೇನಿದೆ?

ನಾಸಿರ್‌ ಹುಸೇನ್‌ ಅವರ ಗೆಲುವಿನ ಸಂಭ್ರಮದ ವೇಳೆ ಕೆಲವರು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದ್ದಾರೆ. ಹೀಗಾಗಿ ಇದರ ಕೂಲಂಕಷ ತನಿಖೆಯಾಗಬೇಕಿದೆ. ಇದರ ಸಮಗ್ರ ತನಿಖೆಯಾಗಬೇಕಿದ್ದು, ಕೇಂದ್ರ ತನಿಖಾ ಸಂಸ್ಥೆಯಾಗಿರುವ ಎನ್‌ಐಎಗೆ ಜವಾಬ್ದಾರಿಯನ್ನು ಕೊಡಬೇಕು. ಈ ಮೂಲಕ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಇದರ ಜತೆಗೆ ಆರೋಪಿಗಳು ವಿಧಾನಸೌಧದ ಒಳಗೆ ಪಾಕ್‌ ಪರ ಘೋಷಣೆ ಕೂಗಿರುವುದರಿಂದ ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೇ ನೇರ ಹೊಣೆಗಾರರಾಗುತ್ತಾರೆ ಎಂದು ಬಿಜೆಪಿ ಆರೋಪ ಮಾಡಿದೆ.

ದುಷ್ಕರ್ಮಿಗಳು ಪಾಕ್‌ ಪರ ಘೋಷಣೆ ಕೂಗಿರುವ ಬಗ್ಗೆ ಈಗಾಗಲೇ ಎಲ್ಲ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಂದಿದೆ. ಆದರೆ, ರಾಜ್ಯ ಸರ್ಕಾರದಿಂದ ಈ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದೆ. ಹೀಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದ ಸುದೀರ್ಘ ತನಿಖೆಯಾಗಬೇಕೆಂಬುದು ಬಿಜೆಪಿಯ ಆಶಯವಾಗಿದೆ. ಇದರ ಹಿಂದೆ ಉಗ್ರ ಕೃತ್ಯ ಇಲ್ಲವೇ ದೇಶ ವಿರೋಧಿ ಚಟುವಟಿಕೆಯ ಹುನ್ನಾರ ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಬಿಜೆಪಿ ಆಗ್ರಹಿಸಿದೆ.

Sedition case Battle of Pakistan Zindabad reaches Governor court BJP demands dismissal of govt
ವಿಧಾನಸೌಧದ ಪಶ್ಚಿಮ ಬಾಗಿಲನ ಮುಂಭಾಗ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ – ಜೆಡಿಎಸ್‌ ಸದಸ್ಯರು.

ಕಾಂಗ್ರೆಸ್‌ ರಕ್ಷಣೆ ಬರಲಿದೆ ಎಂಬ ಭಾವನೆ

ಪಾಕ್‌ ಪರ ಘೋಷಣೆ ಕೂಗುತ್ತಾರೆಂದರೆ ಉಗ್ರ ಸಂಘಟನೆಗಳ ಜತೆಗೆ ಅವರಿಗೆ ಸಂಪರ್ಕ ಇದ್ದರೂ ಇರಬಹುದು ಎಂಬುದಾಗಿ ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ನಾವು ಎಂಥ ಕೃತ್ಯಗಳಲ್ಲಿ ತೊಡಗಿದರೂ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರವು ನಮ್ಮ ರಕ್ಷಣೆ ಬರಲಿದೆ ಎಂಬ ಭಾವನೆ ಇಂಥವರಿಗೆ ಬಂದುಬಿಟ್ಟಿದೆ. ಇದರಿಂದ ಇಂತಹ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಬಿಜೆಪಿ ಆಕ್ರೋಶವನ್ನು ಹೊರಹಾಕಿದೆ. ಹೀಗಾಗಿ ಇಂಥ ಘೋಷಣೆ ಕೂಗಿರುವವರನ್ನು ಕೇಂದ್ರ ತನಿಖಾ ತಂಡದವರು ತನಿಖೆ ಮಾಡಿ, ಜೈಲಿಗಟ್ಟುವ ಮೂಲಕ ಸ್ಪಷ್ಟ ಸಂದೇಶವನ್ನು ರವಾನೆ ಮಾಡಬೇಕಿದೆ ಎಂದು ಬಿಜೆಪಿ ವಾದಿಸಿದೆ.

ಇದನ್ನೂ ಓದಿ: Kannada signboard rules: ಕರ್ನಾಟಕದಲ್ಲಿ ಕನ್ನಡ ಬೋರ್ಡ್‌ ಕಡ್ಡಾಯ; 2 ವಾರ ಗಡುವು ವಿಸ್ತರಿಸಿದ ಡಿಕೆಶಿ

ರಾಜ್ಯ ಸರ್ಕಾರ ವಜಾಕ್ಕೆ ಬಿಜೆಪಿ ಆಗ್ರಹ

ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ ಅಪರಾಧ ಚಟುವಟಿಕೆ ಹೆಚ್ಚಾಗಿದೆ. ಅತ್ಯಾಚಾರಗಳು, ಕೋಮು ಗಲಭೆಗಳು ಮಿತಿ ಮೀರಿವೆ. ಇದಕ್ಕೆ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಓಲೈಕೆಯೇ ಕಾರಣ ಎಂದು ಬಿಜೆಪಿ ದೂರಿದೆ. ಅಲ್ಲದೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾದ ಈ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು ಎಂದು ಬಿಜೆಪಿ ಮನವಿ ಮಾಡಿದೆ.

Exit mobile version