Site icon Vistara News

Sedition Case: ಪಾಕ್‌ ಜಿಂದಾಬಾದ್‌ ಘೋಷಣೆ; ಸರ್ಕಾರದಿಂದ ಬೋಗಸ್ FSL ವರದಿ: ವಿಜಯೇಂದ್ರ ಅನುಮಾನ

Sedition Case Pakistan Zindabad slogan Bogus FSL report from govt BY Vijayendra

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Bomb Blast) ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದಿಲ್ಲ. ಒಂದು ಜವಾಬ್ದಾರಿಯುತ ವಿಪಕ್ಷವಾಗಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಡಲಿದ್ದೇವೆ ಎಂದು ನಿನ್ನೆಯೇ ಸ್ಪಷ್ಟಮಾತುಗಳಲ್ಲಿ ಹೇಳಿದ್ದೇವೆ. ಆದರೆ, ಸರ್ಕಾರವೇ ಸೂಕ್ತ ರೀತಿಯಲ್ಲಿ ತನಿಖೆ ಮಾಡುತ್ತಿಲ್ಲ. ಇನ್ನು ರಾಜ್ಯಸಭಾ ಫಲಿತಾಂಶ ವೇಳೆ ವಿಧಾನಸೌಧದೊಳಗೆ ಪಾಕಿಸ್ತಾನ್‌ ಜಿಂದಾಬಾದ್‌ (Pakistan Zindabad slogans) ಎಂದು ಕೂಗಲಾಗಿದೆ. ದೇಶದ್ರೋಹದ ಪ್ರಕರಣ (Sedition Case) ಇದಾಗಿದೆ. ಆದರೆ, ಆರೋಪಿ ರಕ್ಷಣೆಗೆ ರಾಜ್ಯ ಸರ್ಕಾರ ನಿಂತಿದೆ. ಇದಕ್ಕಾಗಿ ಎಫ್‌ಎಸ್‌ಎಲ್‌ ವರದಿಯನ್ನೇ ತಿರುಚಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಎಫ್.ಎಸ್.ಎಲ್ ವರದಿ ಬಂದಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ದೃಢಪಟ್ಟ ಮಾಹಿತಿ ನಮಗಿದೆ. ಆದರೆ, ರಾಜ್ಯ ಸರ್ಕಾರದ ವಿಳಂಬ ನೀತಿ, ನಡವಳಿಕೆಯನ್ನು ಗಮನಿಸಿದರೆ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬಂತಿದೆ. ದೇಶದ್ರೋಹಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಬೋಗಸ್ ‌FSL (ಎಫ್.ಎಸ್.ಎಲ್) ವರದಿ ತಯಾರಿಸುವ ಅನುಮಾನ ಕಾಡುವಂತಾಗಿದೆ ಎಂದು ಆರೋಪಿಸಿದರು.

ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಸಚಿವರ ಹೇಳಿಕೆಗಳು ಕೇವಲ ಬಿಜೆಪಿ ಮಾತ್ರವಲ್ಲ. ಸಾಮಾನ್ಯ ಜನರಿಗೂ ವಿಶ್ವಾಸ ಹುಟ್ಟಿಸುವಂತಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ದೇಶದ್ರೋಹಿಗಳ ಬಗ್ಗೆ ಸಚಿವರು ‘ಆ ರೀತಿ ಘೋಷಣೆ ಕೂಗಿಯೇ ಇಲ್ಲ’ ಎಂದಿದ್ದರು. ‘ಬಿಜೆಪಿಯವರಿಗೆ ಮಾಡುವುದಕ್ಕೆ ಕೆಲಸ ಇಲ್ಲ’ ಎಂದಿದ್ದರು. ವಿಧಾನಸೌಧಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಸಿ.ಸಿ.ಟಿ.ವಿ. ಫೂಟೇಜ್ ಗಮನಿಸಿ ಅರ್ಧ ಗಂಟೆಯಲ್ಲಿ ಅವರನ್ನೆಲ್ಲ ಹಿಡಿದು ಒಳಗೆ ಹಾಕಬೇಕಿತ್ತು. ಅದನ್ನೂ ಮಾಡಿಲ್ಲ ಎಂದು ಬಿ.ವೈ. ವಿಜಯೇಂದ್ರ ಆಕ್ಷೇಪಿಸಿದರು.

FSL ವರದಿ ಬಂದಿದ್ದರೂ ಇಲ್ಲವೆಂದಿರುವ ಸರ್ಕಾರ

ಎಫ್.ಎಸ್.ಎಲ್ ವರದಿ ಗಮನಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಘಟನೆ ನಡೆದು ನಾಲ್ಕೈದು ದಿನ ಕಳೆದಿದೆ. ಇವತ್ತಿಗೂ ಎಫ್.ಎಸ್.ಎಲ್ ವರದಿ ಬಂದಿಲ್ಲ ಎಂದರೆ ಏನು ಅರ್ಥ? ಎಫ್.ಎಸ್.ಎಲ್ ವರದಿ ಬಂದಿದೆ. ಪಾಕ್ ಪರ ಘೋಷಣೆ ದೃಢವಾಗಿದೆ ಎಂದು ಪತ್ರಿಕೆಗಳು, ಮಾಧ್ಯಮಗಳು ವರದಿ ಮಾಡಿವೆ. ಇದರ ಮಧ್ಯೆ ಮುಖ್ಯಮಂತ್ರಿಗಳು ಎಫ್.ಎಸ್.ಎಲ್ ವರದಿ ಬಂದೇ ಇಲ್ಲ ಎಂದು ಮೈಸೂರಿನಲ್ಲಿ ಹೇಳಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ರಾಜ್ಯದ ಜನರಲ್ಲೂ ಆತಂಕ

ರಾಜ್ಯದ ಜನರಲ್ಲೂ ಆತಂಕ ಕಾಡುತ್ತಿದೆ. ಇಂಥ ಘಟನೆಗಳನ್ನು ಎಷ್ಟು ಗಂಭೀರವಾಗಿ ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕೋ? ಇಂಥ ಘಟನೆ ನಡೆದಾಗ ಪೊಲೀಸ್ ಅಧಿಕಾರಿಗಳು ಎಷ್ಟು ಗಂಭೀರವಾಗಿ ವರ್ತಿಸಬೇಕೋ? ಅಂಥ ಗಂಭೀರತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ.‌ ಇನ್ನು ಪಾಕಿಸ್ತಾನ ಜಿಂದಾಬಾದ್ ಘಟನೆ ಕುರಿತು ನಿರ್ಧರಿಸಲು 5 ದಿನ ಬೇಕೇ? ಇದು ನಾಚಿಕೆಗೇಡಿನ ಸಂಗತಿ ಅಲ್ಲವೇ ಎಂದು ಬಿ.ವೈ. ವಿಜಯೇಂದ್ರ ಆಕ್ರೋಶವನ್ನು ಹೊರಹಾಕಿದರು.

ನಿಮ್ಮ ಭಯವನ್ನು ಸ್ಪಷ್ಟಪಡಿಸಿ

ಹಾದಿಬೀದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದಲ್ಲ. ವಿಧಾನಸೌಧದಲ್ಲಿ ಕೂಗಿರುವಾಗ ದೇಶದ್ರೋಹಿಗಳನ್ನು ಬಂಧಿಸಿಲ್ಲವೆಂದರೆ ನಿಮ್ಮ ಇಚ್ಛಾಶಕ್ತಿ ಕೊರತೆಯೇ? ಅಥವಾ ದೇಶದ್ರೋಹಿಗಳನ್ನು ರಕ್ಷಿಸುವ ಪ್ರಯತ್ನದ ಜತೆಗೆ, ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ಆಗುವುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ? ಅದನ್ನು ಸ್ಪಷ್ಟವಾಗಿ ಹೇಳಿ ಎಂದು ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.

ಡಿಕೆಶಿ ಹೇಳಿಕೆ ಅಂಶಾಂತಿ ಮೂಡಲು ಕಾರಣ

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡವಳಿಕೆ ಮತ್ತು ಸಚಿವರ ಹೇಳಿಕೆಗಳು, ಶಿವಮೊಗ್ಗದ ಟಿಪ್ಪು ಜಯಂತಿ ಸಂದರ್ಭದಲ್ಲಿ ದೇಶದ್ರೋಹಿಗಳ ಅಟ್ಟಹಾಸ, ಕುಕ್ಕರ್ ಬ್ಲಾಸ್ಟ್‌ನಲ್ಲಿ ಅಪರಾಧಿಗಳನ್ನು ಅಮಾಯಕರೆಂದು ಬಿಂಬಿಸುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗಳು ರಾಜ್ಯದಲ್ಲಿ ಅಶಾಂತಿ ಮೂಡಲು ಕಾರಣವಾಗುತ್ತಿದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ – ಮಂಗಳೂರು ಬ್ಲಾಸ್ಟ್‌ಗೆ ಸಾಮ್ಯತೆ; ಇಲ್ಲ ಅಂದ್ರು ಸಿಎಂ, ಇದೆ ಅಂದ್ರು ಡಿಸಿಎಂ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಇಂಥ ಘಟನೆಗಳನ್ನು ಹೆಚ್ಚು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಡದಂತೆ ನಿಲ್ಲಿಸಬೇಕು.‌ ಏನೂ ಆಗಿಯೇ ಇಲ್ಲ ಎಂಬಂತೆ ಸಚಿವರು ಮನಸೋ ಇಚ್ಛೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಟೀಕಿಸಿದರು.

Exit mobile version