Site icon Vistara News

BJP Karnataka: ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಕಾರ್ಯತಂತ್ರ; ಕ್ಷೇತ್ರವಾರು ಸಭೆಯಲ್ಲಿ ಬಿಜೆಪಿ ನಿರ್ಧಾರ

BY Vijayendra in BJP Meeting

ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ರಾಜ್ಯ ಬಿಜೆಪಿ (BJP Karnataka) ಭಾರಿ ತಯಾರಿಯಲ್ಲಿದೆ. ಈ ಸಂಬಂಧ ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ಈಗ ಸರಣಿ ಸಭೆ ನಡೆಸುತ್ತಿದ್ದಾರೆ. ಆ ಮೂಲಕ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸಕ್ಕೆ ಕೈ ಹಾಕಿದ್ದಾರೆ. ಬುಧವಾರ (ಜನವರಿ 10) ಲೋಕಸಭೆ ಕ್ಷೇತ್ರವಾರು ಸಭೆಯನ್ನು ಆರಂಭಿಸಲಾಗಿದ್ದು, ಸಂಘಟನೆಗೆ ಹೊಸ ರೂಪ ಕೊಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಕ್ಲಸ್ಟರ್ ಮಟ್ಟದಲ್ಲಿ ಸಭೆ ಬಳಿಕ ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಳ್ಳುವ ಕೆಲಸಕ್ಕೆ ಕೈಹಾಕಲಾಗಿದೆ.

ಈ ಲೋಕಸಭಾ ಚುನಾವಣೆ 2024ರ ಸಿದ್ಧತಾ ಸಭೆಗೆ ಪ್ರಮುಖ ಕಾರ್ಯಕರ್ತರು, ಶಾಸಕರು, ಮಾಜಿ ಶಾಸಕರನ್ನು ಆಹ್ವಾನಿಸಲಾಗಿತ್ತು. ಇಲ್ಲಿ ಅವರ ಅಭಿಪ್ರಾಯಗಳ ಸಂಗ್ರಹ ಸೇರಿದಂತೆ ಅಸಮಾಧಾನಗಳು, ಲೋಕಸಭಾ ಚುನಾವಣೆಗೆ ತಂತ್ರಗಾರಿಕೆ, ಪ್ರಚಾರ, ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಮುಕ್ತ ಚರ್ಚೆಗೆ ಅವಕಾಶ ನೀಡಿದ್ದು, ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಪಕ್ಷದ ಒಳಗಿನ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕವು ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ ರಾಜ್ಯವಾಗಿದೆ. ಕಾರಣ, ಕಳೆದ ಬಾರಿ ಇಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ 25 + 1 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಹೀಗಾಗಿ ಈ ಕ್ಷೇತ್ರಗಳನ್ನು ಉಳಿಸಿಕೊಂಡು 28ಕ್ಕೆ 28 ಕ್ಷೇತ್ರ ಹೇಗೆ ಗೆಲ್ಲಬೇಕು ಎಂಬುದನ್ನು ಈ ವೇಳೆ ಚರ್ಚೆ ನಡೆಸಲಾಗಿದೆ. ಅಲ್ಲದೆ, ಈ ಬಾರಿ ಜೆಡಿಎಸ್‌ ಸಹ ಎನ್‌ಡಿಎ ಮೈತ್ರಿಕೂಟವನ್ನು ಸೇರಿರುವುದರಿಂದ ಎರಡೂ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಒಟ್ಟಾಗಿ ಹೇಗೆ ಸಾಗಬೇಕು ಎಂಬ ಬಗ್ಗೆ ಸಹ ಈ ವೇಳೆ ಚರ್ಚೆ ನಡೆಸಲಾಗಿದೆ.

ಯಾರೆಲ್ಲ ಭಾಗಿ?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ್, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ ಕುಮಾರ್ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.

ಸಂಘಟನೆ ಬಗ್ಗೆ ಚರ್ಚೆಯಾಗಿದೆ: ಡಿ.ವಿ. ಸದಾನಂದಗೌಡ

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಲು ಬಿಜೆಪಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಂಘಟನೆಗೆ ಹೊಸ ರೂಪ ಕೊಡುವ ಉದ್ದೇಶದಿಂದ ಸಮಗ್ರ ಚರ್ಚೆ ಆಗಿದೆ. ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಲು ಈ ಸಭೆ ಮಹತ್ವದ್ದಾಗಿದೆ. ಈ ಸಭೆಯ ಮೂಲಕ ಸಣ್ಣಪುಟ್ಟ ವ್ಯತ್ಯಾಸಗಳು, ಗೊಂದಲಗಳು ಎಲ್ಲವೂ ಬಗೆಹರಿಯುತ್ತವೆ. ಈಗ ಕ್ಲಸ್ಟರ್ ಮಟ್ಟದಲ್ಲಿ ಸಭೆ ಆಗಿದೆ. ಮುಂದೆ ಜಿಲ್ಲಾ ಮಟ್ಟಕ್ಕೆ ಇದನ್ನು ತೆಗೆದುಕೊಂಡು ಹೋಗಲಾಗುವುದು. ಇದು ಪಕ್ಷಕ್ಕೆ ಹೊಸ ರೀತಿಯ ಶಕ್ತಿ ಕೊಡಲು ಸಹಕಾರಿ ಆಗುತ್ತದೆ. ಎಲ್ಲ ಸಲಹೆ, ಸೂಚನೆಗಳನ್ನು ಕ್ರೋಢೀಕರಣ ಮಾಡಿ ಹೊಸ ಪ್ಲಾನ್ ಮೂಲಕ ಚುನಾವಣೆ ಗೆಲ್ಲುವ ಕೆಲಸ ಆಗುತ್ತದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ತಯಾರಿ: ಆರ್.‌ ಅಶೋಕ್

ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಲೋಕಸಭಾ ಚುನಾವಣೆ ತಯಾರಿಯನ್ನು‌ ಮಾಡುತ್ತಿದ್ದೇವೆ. ಇದರ ಸಲುವಾಗಿ ಮೊದಲಿಗೆ ಕ್ಲಸ್ಟರ್ ಹಂತದಲ್ಲಿ ಸಭೆಗಳನ್ನು ಮಾಡುತ್ತಿದ್ದೇವೆ. ಪ್ರಮುಖ ಕಾರ್ಯಕರ್ತರು, ಶಾಸಕರು, ಮಾಜಿ ಶಾಸಕರು ಅಭಿಪ್ರಾಯ ತಿಳಿಸಿದ್ದಾರೆ. ಮುಕ್ತ ಚರ್ಚೆಗೆ ಅವಕಾಶ ಇತ್ತು. ಲೋಕಸಭಾ ಚುನಾವಣೆ ಹೇಗೆ ಗೆಲ್ಲಬೇಕು ಎಂಬ ಅಂಶಗಳು ಚರ್ಚೆಯಾಗಿವೆ. 28ಕ್ಕೆ 28 ಕ್ಷೇತ್ರಗಳನ್ನು ಹೇಗೆ ಗೆಲ್ಲಬೇಕು ಎಂಬುದರ ಬಗ್ಗೆ ಕಾರ್ಯತಂತ್ರ ಹೆಣೆಯಲಾಗಿದೆ. ಲೋಕಸಭೆಯಲ್ಲಿ ಪ್ರಚಂಡವಾಗಿ ಗೆಲ್ಲಲು ಈ ಮೂಲಕ ತಯಾರಿ ನಡೆಸಲಾಗಿದೆ. ಜೆಡಿಎಸ್ ಜತಗಿನ‌ ಹೊಂದಾಣಿಕೆಯಿಂದ, ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ.‌

ಇದನ್ನೂ ಓದಿ: Congress Karnataka: ಅಪಪ್ರಚಾರ ಬಿಡಿ, ಸರ್ಕಾರದಲ್ಲಿ ದುಡ್ಡಿಲ್ಲ ಎನ್ನಬೇಡಿ: ಸ್ವಪಕ್ಷ ನಾಯಕರ ಮೇಲೆ ಸಿದ್ದರಾಮಯ್ಯ ಕಿಡಿ

ಸರ್ವೆ ಆಧಾರದ ಮೇಲೆ ಲೋಕಸಭೆ ಟಿಕೆಟ್

ಇನ್ನು ಲೋಕಸಭಾ ಚುನಾವಣೆಗೆ ಟಿಕೆಟ್‌ ನೀಡುವ ವಿಚಾರದ ಬಗ್ಗೆ ಕೇಂದ್ರ ನಾಯಕರು ಸ್ಪಷ್ಟವಾಗಿದ್ದಾರೆ. ಎರಡು, ಮೂರು ಹಂತದ ಸರ್ವೆ ಮಾಡಲಾಗಿದೆ. ಸರ್ವೆ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ ಎಂದು ಆರ್.‌ ಅಶೋಕ್‌ ಹೇಳಿದರು.

Exit mobile version