ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಚಿತ್ರೀಕರಣ ನಿಷೇಧಿಸಿದ್ದ ಆದೇಶವನ್ನು ಹಿಂಪಡೆಯಲು ತಡರಾತ್ರಿ ಹೊರಡಿಸಿದ ಆದೇಶದಲ್ಲಿ ಅಕ್ಷರ ದೋಷಗಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ನಗೆಪಾಟಲಿಗೀಡಾಗಿದೆ.
ಒಟ್ಟು ಏಳು ತಪ್ಪುಗಳು ಕಂಡುಬಂದಿದ್ದು, ಆದೇಶ ಹೊರಡಿಸಿದ್ದನ್ನು ಸರಿಪಡಿಸಿಕೊಳ್ಳಲು ಹೋದ ಅಧಿಕಾರಿಗಳು ತರಾತುರಿಯಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಫೋಟೊ ಹಾಗೂ ವಿಡಿಯೊ ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಸಂಜೆ ಆದೇಶಿಸಿತ್ತು. ಈ ಕುರಿತು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ | ಸಿಎಂ ಬೊಮ್ಮಾಯಿ ಗಮನಕ್ಕೇ ತಾರದೆ ಫೋಟೊ, ವಿಡಿಯೊ ನಿಷೇಧ ಮಾಡಿದ ಅಧಿಕಾರಿಗಳು?
ಸಾಮಾಜಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ ಜೆಡಿಎಸ್, ಕಾಂಗ್ರೆಸ್ ಹಾಗೂ ಇನ್ನಿತರೆ ರಾಜಕೀಯ ಪಕ್ಷಗಳೂ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದವು. ಇದೆಲ್ಲದರಿಂದ ಒತ್ತಡಕ್ಕೊಳಗಾದ ಸರ್ಕಾರ, ತಡರಾತ್ರಿ ಆದೇಶ ಹೊರಡಿಸಿ, ಫೋಟೊ, ವಿಡಿಯೊ ನಿಷೇಧ ಆದೇಶವನ್ನು ರದ್ದುಪಡಿಸಿತು.
ಶುಕ್ರವಾರ ದಿನಪೂರ್ತಿ ಬಿಜೆಪಿ ಚಿಂತನ ಸಭೆ ಹಾಗೂ ಮಳೆ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ದೇವನಹಳ್ಳಿ ಬಳಿಯ ರೆಸಾರ್ಟ್‌ನಲ್ಲೆ ಇದ್ದದ್ದರಿಂದ ಇತ್ತ ವಿಧಾನಸೌಧದಲ್ಲಿ ಅಧಿಕಾರಿಗಳು ಆದೇಶ ಮಾಡಿದ್ದು ಸಿಎಂ ಗಮನಕ್ಕೆ ಬಂದಿರಲಿಲ್ಲ. ಆದೇಶದ ಕುರಿತು ವಿವಾದ ಭುಗಿಲೇಳುತ್ತಿದ್ದಂತೆಯೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೆ ವಿಧಾನಸೌಧಕ್ಕೆ ತೆರಳಿವಂತೆ ತಿಳಿಸಿ, ಆದೇಶವನ್ನು ಹೊರಡಿಸಲು ಸೂಚಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ಹೇಳಿದ್ದವು.
ಈ ತರಾತುರಿಯಲ್ಲಿ ಹೊರಡಿಸಿದ ಆದೇಶದಲ್ಲಿ ನಡಾವಳಿಗಳು ಎಂಬ ಬದಲಿಗೆ ʻನಡವಳಿಗಳುʼ, ಪ್ರಸ್ತಾವನೆ ಬದಲಿಗೆ ʻಪ್ರಸತ್ತಾವನೆʼ, ಮೇಲೆ ಬದಲಿಗೆ ʻಮೇಲೇʼ, ಭಾಗ ಬದಲಿಗೆ ʻಬಾಗʼ, ಕರ್ನಾಟಕ ಬದಲಿಗೆ ʻಕರ್ನಾಟಾʼ ಆಡಳಿತ ಬದಲಿಗೆ ʻಆಡಳಿದʼ, ಮತ್ತೊಮ್ಮೆ ಕರ್ನಾಟಕ ಬದಲಿಗೆ ಕರ್ನಾಟಾ ಎಂದು ಮುದ್ರಿಸಲಾಗಿತ್ತು.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿದ್ದವು. ಸರ್ಕಾರಿ ಅಧಿಕಾರಿಗಳಿಗೆ ಆದೇಶವನ್ನೂ ಹೊರಡಿಸಲು ಬರುವುದಿಲ್ಲವೇ ಎಂದು, ಆದೇಶ ಪ್ರತಿಯ ಮೇಲೆ ತಪ್ಪುಗಳನ್ನು ಗುರುತುಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಇದರಿಂದ ಎಚ್ಚೆತ್ತ ಅಧಿಕಾರಿಗಳು, ಹೊಸ ಆದೇಶವನ್ನು ಹೊರಡಿಸಿದ್ದಾರೆ. ಹಿಂದಿನ ತಪ್ಪುಗಳನ್ನು ಸರಿಪಡಿಸಿ ಈ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ | ಸರ್ಕಾರಿ ಕಚೇರಿಗಳಲ್ಲಿ ವಿಡಿಯೊ, ಫೋಟೊ ನಿಷೇಧದ ವಿವಾದಾತ್ಮಕ ಆದೇಶ ವಾಪಸ್