Site icon Vistara News

Shakti Scheme : ಶಕ್ತಿ ಯೋಜನೆ ನಿಲ್ಲಲ್ಲ, ಇನ್ನೂ 10 ವರ್ಷ ಓಡುತ್ತೆ: ಸರ್ಕಾರದ ಸ್ಪಷ್ಟನೆ

Ramalinga reddy shakti scheme and KSRTC Bus

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ (Congress Guarantee Scheme) ಒಂದಾದ ಶಕ್ತಿ ಯೋಜನೆಯು (Shakti Scheme) ನಿಂತು ಹೋಗುತ್ತದೆ. ಆಗಸ್ಟ್‌ 15ಕ್ಕೆ ಕೊನೆಯಾಗಿದೆ ಎಂದೆಲ್ಲ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದರೆ, ಇದಕ್ಕೆ ಈಗ ಸರ್ಕಾರ ಹಾಗೂ ಕೆಎಸ್‌ಆರ್‌ಟಿಸಿ (Congress Government and KSRTC) ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಶಕ್ತಿ ಯೋಜನೆಯು ನಿಲ್ಲುವುದಿಲ್ಲ. ನಿರಾತಂಕವಾಗಿ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Transport Minister Ramalinga Reddy) ಅವರು ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಯೋಜನೆಗೆ ಯಾವುದೇ ತೊಂದರೆ ಇಲ್ಲ. ಇನ್ನೂ ಹತ್ತು ವರ್ಷ ಮುಂದುವರಿಯಲಿದೆ ಎಂದು ಹೇಳಿದರು.

ಇದೆಲ್ಲ ಊಹಾಪೋಹ: ರಾಮಲಿಂಗಾ ರೆಡ್ಡಿ

ಶಕ್ತಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಊಹಾಪೋಹ ಕೇಳಿಬರುತ್ತಿದೆ. ಅದನ್ನು ಯಾರೂ ನಂಬಬೇಡಿ. ಯೋಜನೆ ನಿಂತು ಹೋಗುತ್ತದೆ ಎಂಬುದು ಸುಳ್ಳು. ಈ ಸುಳ್ಳು ಸುದ್ದಿಯನ್ನು ಒಂದು ಪಕ್ಷ ಹಬ್ಬಿಸುತ್ತಿದೆ. ಇನ್ನು 10 ವರ್ಷ ಶಕ್ತಿ ಯೋಜನೆ ಮುಂದುವರಿಯುತ್ತದೆ. ಯಾರೂ ಕೂಡ ಪಾಸ್ ಪಡೆಯುವ ಅಗತ್ಯ ಇಲ್ಲ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. 10 ವರ್ಷವೂ ಈ ಯೋಜನೆ ಮುಂದುವರಿಯಲಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಇದನ್ನೂ ಓದಿ: Karnataka Politics : ಘರ್ ವಾಪ್ಸಿಗೆ ಸಿದ್ದರಾಮಯ್ಯ ಅಡ್ಡಗಾಲು; ಡಿಕೆಶಿ-ಸಿದ್ದು ಮಧ್ಯೆ ನೀನಾ-ನಾನಾ ಫೈಟ್!

ಕೆಎಸ್‌ಆರ್‌ಟಿಸಿ ಸ್ಪಷ್ಟೀಕರಣ

ಶಕ್ತಿ ಯೋಜನೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಹಬ್ಬಿರುವ ಸುಳ್ಳು ಸುದ್ದಿ ಬಗ್ಗೆ ಕೆಎಸ್‌ಆರ್‌ಟಿಸಿ ಸಹ ಸ್ಪಷ್ಟೀಕರಣ ನೀಡಿದೆ. ಶಕ್ತಿ ಯೋಜನೆ ಕೊನೆಗೊಳ್ಳುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ನಾವು ಈ ಬಗ್ಗೆ ಕಾಲಕಾಲಕ್ಕೆ ಸಾರ್ವಜನಿಕರಿಗೆ ಸಮರ್ಪಕವಾದ ಮಾಹಿತಿಯನ್ನು ಒದಗಿಸುತ್ತೇವೆ. ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆ ಎಂದಿನಂತೆ ಮುಂದುವರಿಯಲಿದೆ ಎಂದು ಟ್ವೀಟ್‌ ಮೂಲಕ ಸ್ಪಷ್ಟೀಕರಣವನ್ನು ನೀಡಿದೆ.

ಸುಳ್ಳು ಸುದ್ದಿ ಬಿತ್ತರವಾಗಿದ್ದು ಹೇಗೆ?

ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆ ಸಂಬಂಧ ಕಾನೂನು ವಿದ್ಯಾರ್ಥಿಗಳು ಜುಲೈ 31ರಂದು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಈ ಯೋಜನೆಯಿಂದ ಅನನುಕೂಲ ಹೆಚ್ಚಾಗಿವೆ. ವಿದ್ಯಾರ್ಥಿಗಳು ಸೇರಿದಂತೆ ವಯೋವೃದ್ಧರಿಗೆ ಬಹಳವೇ ಸಮಸ್ಯೆಯಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಅಲ್ಲದೆ, ಪ್ರತಿನಿತ್ಯ ಬಸ್‌ಗಳಲ್ಲಿ ಸೀಟಿಗಾಗಿ, ಬಸ್‌ ಹತ್ತುವ ವಿಚಾರ ಸೇರಿದಂತೆ ಇನ್ನಿತರ ವಿಷಯಗಳಿಗೆ ಗಲಾಟೆಗಳು ನಡೆಯುತ್ತಿವೆ. ಜತಗೆ ಜನದಟ್ಟಣೆ ಹೆಚ್ಚಾಗಿ ಹಿರಿಯ ನಾಗರಿಕರು, ಮಕ್ಕಳು ಬಸ್ ಹತ್ತಲು ಕಷ್ಟಪಡುತ್ತಿದ್ದಾರೆ. ಕೆಲವು ಕಡೆ ತುಂಬಿದ ಬಸ್‌ನಿಂದ ವಿದ್ಯಾರ್ಥಿಗಳು, ಜನರು ಬಿದ್ದು ಅವಘಡಗಳು ಸಂಭವಿಸಿವೆ. ಶಾಲಾ- ಕಾಲೇಜು ಪರೀಕ್ಷೆಗಳಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ತಲುಪಲು ಸಾಧ್ಯವಾಗುತ್ತಿಲ್ಲ. ಸರಿಯಾದ ಸಮಯಕ್ಕೆ ಬಸ್‌ಗಳು ಬರುತ್ತಿಲ್ಲ. ಬಂದರೂ ಭರ್ತಿಯಾಗಿದ್ದರೆ ನಿಲ್ಲಿಸುತ್ತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಯೋಜನೆಗೆ ಒಂದೇ ವಾರದಲ್ಲಿ ತೆರಿಗೆದಾರರ 100 ಕೋಟಿ ಹಣವನ್ನು ಬಳಕೆ ಮಾಡಲಾಗಿದೆ. ಅಂದರೆ ವರ್ಷಕ್ಕೆ 3200ರಿಂದ 3400 ಕೋಟಿ ರೂಪಾಯಿ ಇದಕ್ಕಾಗಿ ನಷ್ಟವಾಗಲಿದೆ. ಅಲ್ಲದೆ, ದೂರದ ಊರಿಗೆ ನಿಂತು ಪ್ರಯಾಣ ಮಾಡಲು ಅವಕಾಶ ಕೊಡಬಾರದು. ಜತೆಗೆ ಟಿಕೆಟ್ ಖರೀದಿಸಿದವರಿಗೆ ಶೇ.50ರಷ್ಟು ಸೀಟ್ ಮೀಸಲಿಡಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿತ್ತು.

ಇದನ್ನೂ ಓದಿ: Commission Politics : ಗುತ್ತಿಗೆದಾರರ ಬಿಲ್‌ ಕೊಡದಿದ್ರೆ ಕಾಂಗ್ರೆಸ್‌ಗೆ ಗಂಡಾಂತರ; ಬೆಂಗಳೂರು ಶಾಸಕರ ವಾರ್ನಿಂಗ್!

ಹೀಗೆ ಪ್ರಕರಣ ಕೋರ್ಟ್‌ ಮೆಟ್ಟಿಲೇರುತ್ತಿದ್ದಂತೆ ಹಲವರು ಈ ಸುದ್ದಿಯನ್ನು ಬಳಸಿಕೊಂಡು ಶಕ್ತಿ ಯೋಜನೆ ಬಂದ್‌ ಆಗಲಿದೆ. ಆಗಸ್ಟ್‌ 15ಕ್ಕೆ ಕೊನೆಗೊಳ್ಳಲಿದೆ ಎಂಬ ಸಂದೇಶವನ್ನು ಸೋಷಿಯಲ್‌ ಮೀಡಿಯಾ ಮೂಲಕ ಹರಿಬಿಟ್ಟಿದ್ದರು. ಅಲ್ಲದೆ, ಇದನ್ನು ನಂಬಿ ಹಲವಾರು ಜನರು ವಾಟ್ಸಪ್‌, ಫೇಸ್‌ಬುಕ್‌ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಶೇರ್‌ ಮಾಡಿಕೊಂಡಿದ್ದರು. ಈಗ ಈ ಬಗ್ಗೆ ಸರ್ಕಾರವೇ ಸ್ಪಷ್ಟನೆ ನೀಡಿದ್ದು, ಜನರು ಯಾವುದೇ ಆತಂಕ ಪಡುವುದು ಬೇಡ ಎಂದು ಹೇಳಿದೆ.

Exit mobile version