Site icon Vistara News

Maha Politics | ರೆಬೆಲ್‌ ಶಾಸಕರ ಅನರ್ಹತೆಗೆ ಸೇನೆ ಮನವಿ; ಗಾಡಿ ತುಂಬಾ ಮುಂದೆ ಹೋಗಿದೆ ಎಂದ ಶಿಂಧೆ

Eknath Shinde in hotel

ಮುಂಬಯಿ: ಬಂಡಾಯ ಎದ್ದಿರುವ ಏಕನಾಥ್‌ ಶಿಂಧೆ ಸೇರಿದಂತೆ 12 ಶಾಸಕರನ್ನು ಅನರ್ಹಗೊಳಿಸುವಂತೆ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್‌ಗೆ ಮನವಿ ಮಾಡಲಾಗಿದೆ ಎಂದು ಶಿವಸೇನೆಯ ಮುಖಂಡ ಅರವಿಂದ ಸಾವಂತ್‌ ಹೇಳಿದ್ದಾರೆ.

ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಿಸಿ ಎಲ್ಲ ಶಾಸಕರಿಗೂ ವಿಪ್‌ ನೀಡಲಾಗಿತ್ತು. ವಿಪ್‌ ಅನ್ನು ಆ ಶಾಸಕರು ಉಲ್ಲಂಘಿಸಿರುವುದರಿಂದ 12 ಶಾಸಕರ ಅನರ್ಹತೆಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗಾಡಿ ಮುಂದೆ ಹೋಗಿಬಿಟ್ಟಿದೆ: ಶಿಂಧೆ

ʼಗಾಡಿ ತುಂಬಾ ಮುಂದೆ ಹೋಗಿಬಿಟ್ಟಿದೆʼ ಎಂದು ಹೇಳುವ ಮೂಲಕ ಏಕನಾಥ್‌ ಶಿಂಧೆ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಜತೆ ಯಾವುದೇ ಸಂಧಾನ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ತಮಗೆ 40ಕ್ಕೂ ಅಧಿಕ ಶಾಸಕರ ಬೆಂಬಲವಿದೆ ಎಂಬುದನ್ನು ಅವರು ಬಿಡುಗಡೆ ಮಾಡಿರುವ ಶಾಸಕರ ಗುಂಪಿನ ಫೋಟೋದ ಮೂಲಕ ಸಾಬೀತುಪಡಿಸಿದ್ದಾರೆ. ಇದರಿಂದಾಗಿ ಆತ್ಮವಿಶ್ವಾಸದ ತುತ್ತತುದಿಯಲ್ಲಿರುವ ಅವರು, ʼʼನಾವು ಹಿಂದೆ ಹೀಗುವ ಪ್ರಶ್ನೆಯೇ ಇಲ್ಲ. ಗಾಡಿ ಬಹಳ ಮುಂದೆ ಹೋಗಿದೆʼʼ ಎಂದಿದ್ದಾರೆ.

ಎಂವಿಎಗೆ ಬೆಂಬಲ: ಎನ್‌ಸಿಪಿ, ಕಾಂಗ್ರೆಸ್‌

ಉದ್ಧವ್‌ ಠಾಕ್ರೆ ಅವರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ನಾವು ಮುಂದುವರಿಸಲಿದ್ದೇವೆ. ಪ್ರಸ್ತುತ ಸನ್ನಿವೇಶವನ್ನು ನಾವು ಅವಲೋಕಿಸುತ್ತಿದ್ದು, ವಿಧಾನಸಭೆಯಲ್ಲಿ ಬಲಾಬಲದ ಪರೀಕ್ಷೆ ಉಂಟಾದರೆ ನಾವು ಶಿವ ಸೇನೆಯನ್ನು ಬೆಂಬಲಿಸುತ್ತೇವೆ ಎಂದು ಎನ್‌ಸಿಪಿ ನಾಯಕ, ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಹೇಳಿದ್ದಾರೆ. ಗುರುವಾರ ನಡೆದ ಮಹತ್ವದ ಎನ್‌ಸಿಪಿ ಮಂತ್ರಾಲೋಚನೆಯ ಬಳಿಕ ಅವರು ಇದನ್ನು ತಿಳಿಸಿದ್ದಾರೆ.

ಸರ್ಕಾರಕ್ಕೆ ಬೆಂಬಲವಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಲು ಸದನ ಮಾತ್ರ ಸೂಕ್ತ ಸ್ಥಳ. ಈ ಸರ್ಕಾರ ಉಳಿಯಲಿದೆ ಎಂಬುದು ನನ್ನ ದೃಢ ವಿಶ್ವಾಸ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ, ಕಾಂಗ್ರೆಸ್‌ ನಾಯಕ ಅಶೋಕ್‌ ಚವಾಣ್‌ ಅವರೂ ಕೂಡ, ಮಹಾ ವಿಕಾಸ್‌ ಅಘಾಡಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಕಾಂಗ್ರೆಸ್‌ ಮುಂದುವರಿಸಲಿದೆ ಹಾಗೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಿತ್ರಕೂಟದಿಂದ ಹೊರಬರಲು ಸಿದ್ಧ ಎಂದ ಉದ್ಧವ್‌ ಠಾಕ್ರೆ ಬಣ, ಮಹಾ ಸರಕಾರ ಪತನಕ್ಕೆ ಕ್ಷಣಗಣನೆ

ಬಂಡಾಯ ಶಾಸಕರಿಗೆ ಸಾಮ್ನಾ ಎಚ್ಚರಿಕೆ

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ʼವರ್ಷಾʼದಿಂದ ಉದ್ಧವ್‌ ಠಾಕ್ರೆ ಅವರು ತೆರವು ಮಾಡಿ “ಮಾತೋಶ್ರೀʼ ಮನೆಗೆ ತೆರಳಿದ ಒಂದು ದಿನದ ಬಳಿಕ ಶಿವಸೇನೆಯ ಮುಖವಾಣಿಯಾದ “ಸಾಮ್ನಾʼ ಪತ್ರಿಕೆ ಬಂಡಾಯ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದೆ. ʼʼಸೇನೆ ಈಗಾಗಲೇ ಸಾಕಷ್ಟು ಇಂಥ ಸನ್ನಿವೇಶಗಳನ್ನು ಕಂಡು ಜೀರ್ಣಿಸಿಕೊಂಡಿದೆ. ಇಂಥ ಬಂಡಾಯಗಾರರನ್ನು ಶಿವ ಸೈನಿಕರು ಮಣಿಸಿದ್ದಾರೆ. ಶಿವ ಸೈನಿಕರು ಇವರನ್ನು ಮಾಜಿ ಶಾಸಕರಾಗಿ ಮಾಡಲಿದ್ದಾರೆ. ಇದು ಎಚ್ಚೆತ್ತುಕೊಳ್ಳಲು ಸಕಾಲ.ʼʼ ಎಂದಿದೆ. ʼʼರೆಬೆಲ್‌ ಎಂಎಲ್‌ಎಗಳು ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆಯ ಬೆದರಿಕೆ ಎದುರಿಸುತ್ತಿದ್ದಾರೆ. ಇದು ಬಿಜೆಪಿಯ ʼಬಳಸಿ ಬಿಸುಡುವʼ ಸಂಸ್ಕೃತಿಗೆ ತಕ್ಕಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದೆ.

ನಾಳೆ ಶಿವ ಸೇನೆ ಸಭೆ

ನಗರದ ಸೇನಾ ಭವನದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಶಿವ ಸೇನೆ ಸಭೆ ನಡೆಯಲಿದೆ. ಜಿಲ್ಲಾ ಪ್ರಮುಖರ ಸಭೆ ಕರೆಯಲಾಗಿದೆ. ಮುಂಬಯಿ ಸಂಪರ್ಕ ಪ್ರಮುಖರ ಸಭೆಯನ್ನು ಗುರುವಾರ ಉದ್ಧವ್‌ ಠಾಕ್ರೆ ನಡೆಸಿದ್ದು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಎಂವಿಎ ಮೈತ್ರಿ ಅಸಹಜ, ಶಿವ ಸೇನೆ ಹೊರಬರಲಿ: ಏಕನಾಥ್ ಶಿಂಧೆ

Exit mobile version