Site icon Vistara News

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

Actor Shivarajkumar rejects DKS offer

ಬೆಂಗಳೂರು: ನಟ ಶಿವರಾಜ್‌ಕುಮಾರ್‌ (Shiva Rajkumar) ಅವರಿಗೆ ಲೋಕಸಭೆಗೆ (Lok Sabha Election 2024) ಸ್ಪರ್ಧೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ (DCM DK Shivakumar) ಆಹ್ವಾನ ನೀಡಿದ್ದಾರೆ. ಆದರೆ, ಈ ಆಫರ್‌ ಅನ್ನು ಶಿವರಾಜ್‌ಕುಮಾರ್‌ ಅವರು ಅಷ್ಟೇ ನಯವಾಗಿ ತಿರಸ್ಕಾರ ಮಾಡಿದ್ದಾರೆ. ನನಗೆ ಬಣ್ಣ ಹಚ್ಚುವುದಷ್ಟೇ ಗೊತ್ತು. ನಮ್ಮ ತಂದೆಯವರು ನನಗೆ ಅದನ್ನು ಮಾತ್ರ ಹೇಳಿಕೊಟ್ಟಿದ್ದಾರೆ. ನಾನು ಅದನ್ನು ಮಾತ್ರವೇ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಬರುವುದಿಲ್ಲ. ಆದರೆ, ನನ್ನ ಹೆಂಡತಿ ಗೀತಾ (Geetha Shivarajkumar) ರಾಜಕೀಯ ಎಂದರೆ ಇಷ್ಟವಿದೆ. ಆಕೆ ರಾಜಕಾರಣದ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವಳು. ಹೆಂಡತಿ ಇಷ್ಟಪಟ್ಟಿದ್ದನ್ನು ನೆರವೇರಿಸುವವನೇ ಗಂಡ. ಹಾಗಾಗಿ ಆಕೆಗೆ ನನ್ನ ಬೆಂಬಲ ಇರುತ್ತದೆ ಎಂದು ನೇರವಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ವೇದಿಕೆಯಲ್ಲಿ ಕುಳಿತಿದ್ದಾಗ ನಾನು ನಟ ಶಿವರಾಜ್‌ಕುಮಾರ್‌ ಅವರಿಗೆ ಹೇಳಿದೆ. ನೀವು ರಾಜಕೀಯಕ್ಕೆ ಬಂದು ಬಿಡಿ. ನಿಮಗೆ ಲೋಕಸಭೆಗೆ ಟಿಕೆಟ್‌ ಕೊಡುತ್ತೇವೆ ಎಂದು ಹೇಳಿದೆ. ಅದಕ್ಕೆ ಶಿವಣ್ಣ ಅವರು ನಾನು ಈಗಾಗಲೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು. ಅದಕ್ಕೆ ನಾನು ಹೇಳಿದ್ದೇನೆಂದರೆ, ಎಲ್ಲರಿಗೂ ರಾಜಕೀಯದಲ್ಲಿ ಒಳ್ಳೆಯ ಅವಕಾಶ ಸಿಗುವುದಿಲ್ಲ. ಲೋಕಸಭೆಯನ್ನು ಪ್ರವೇಶ ಮಾಡುವ ಭಾಗ್ಯ ಸಿಗಲಾರದು. ನಿಮಗೆ ಈಗ ಆ ಅದೃಷ್ಟ ಬಂದಿದೆ ಬನ್ನಿ ಎಂದು ಹೇಳಿದ್ದೇನೆ ಎಂಬುದಾಗಿ ಹೇಳಿದರು.

ಹೆಂಡತಿ ಇಷ್ಟಪಟ್ಟಿದ್ದನ್ನು ನೆರವೇರಿಸುವವನೇ ಗಂಡ

ಡಿ.ಕೆ. ಶಿವಕುಮಾರ್‌ ಭಾಷಣದ ಬಳಿಕ ಮಾತನಾಡಿದ ಶಿವರಾಜ್‌ಕುಮಾರ್‌, ನಾನು ರಾಜಕೀಯಕ್ಕೆ ಎಂದೂ ಬರಲಾರೆ. ನಮಗೆಲ್ಲ ರಾಜಕೀಯ ಬೇಡ ಸ್ವಾಮಿ. ಬಂಗಾರಪ್ಪ ಅವರ ಮಗಳನ್ನು ನಾನು ಮದುವೆಯಾಗಿದ್ದೇನೆ. ಅವರ ರಕ್ತದಲ್ಲಿ ರಾಜಕೀಯ ಇದೆ. ಅವರು ಮಾಡಲಿ. ಸಮಾಜಕ್ಕೆ ಯಾರಾದರೂ ಒಳ್ಳೆಯದನ್ನು ಮಾಡುತ್ತಾರೆಂದರೆ ಅದಕ್ಕೆ ನನ್ನ ಬೆಂಬಲ ಇದ್ದೇ ಇರುತ್ತದೆ. ಹೆಂಡತಿ ಇಷ್ಟಪಡುತ್ತಿರುವುದನ್ನು ನೆರವೇರಿಸಿದವನೇ ಗಂಡ. ಹಾಗಾಗಿ ಅವರಿಗೆ ನಾನು ಸಪೋರ್ಟ್‌ ಮಾಡುತ್ತೇನೆ ಎಂದು ಹೇಳಿದರು.

ಬಂಗಾರಪ್ಪ ಅವರೇ ನನ್ನನ್ನು ರಾಜಕೀಯಕ್ಕೆ ಕರೆದಿಲ್ಲ

ನಾನು ಗೀತಾ ಅವರನ್ನು ಮದುವೆಯಾದ ದಿನದಿಂದಲೂ ನಮ್ಮ ಮಾವನವರಾದ ಬಂಗಾರಪ್ಪ ಅವರಾಗಲೀ, ಭಾವ ಮೈದುನ ಮಧು ಬಂಗಾರಪ್ಪ ಅವರಾಗಲೀ ಎಂದೂ ಸಹ ನನಗೆ ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡಿಲ್ಲ. ಅದರಲ್ಲಿ ಆಸಕ್ತಿ ಇಲ್ಲ ಎಂಬ ಕಾರಣಕ್ಕೆ ಅವರು ನನ್ನನ್ನು ಕರೆಯಲಿಲ್ಲ. ನನಗೆ ಬಣ್ಣ ಹಚ್ಚುವುದು ಮಾತ್ರ ಗೊತ್ತಿದೆ. ನಮ್ಮ ತಂದೆಯವರಾದ ಡಾ. ರಾಜ್‌ಕುಮಾರ್‌ ಅವರು ನಮಗೆ ಅದನ್ನು ಮಾತ್ರ ಹೇಳಿಕೊಟ್ಟಿದ್ದಾರೆ ಎಂದು ಶಿವರಾಜ್‌ಕುಮಾರ್ ಹೇಳಿದರು. ‌

ಇದನ್ನೂ ಓದಿ: Congress Karnataka: ಸಿಎಂ ಈಡಿಗ ಪಾಲಿಟಿಕ್ಸ್‌; ಸಿದ್ದರಾಮಯ್ಯ ವಿರುದ್ಧ ಗುಡುಗಿದ ಬಿ.ಕೆ. ಹರಿಪ್ರಸಾದ್!

ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ

ರಾಜಕೀಯಕ್ಕೆ ಎಂದೇ ಒಳ್ಳೆ ಒಳ್ಳೆಯವರು ಇದ್ದಾರೆ. ಅವರು ರಾಜಕೀಯವನ್ನು ಮುಂದುವರಿಸಿಕೊಂಡು ಹೋಗಲಿ. ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಆಫರ್‌ ಅನ್ನು ನಯವಾಗಿಯೇ ತಿರಸ್ಕರಿಸಿದರು.

Exit mobile version