ಶಿವಮೊಗ್ಗ: ಡಬಲ್ ಇಂಜಿನ್ ಸರ್ಕಾರದ ಮೂಲಕ ಕರ್ನಾಟಕವು ಅಭಿವೃದ್ಧಿಯ ರಥ ಹಾಗೂ ಪಥದ ಮೇಲೆ ವೇಗವಾಗಿ ಸಾಗಿದ್ದು, ಮುಂದೆಯೂ ಎಲ್ಲರೂ ಒಟ್ಟಾಗಿ ಸಾಗಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣ ಉದ್ಘಾಟನೆ, ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ, ಶಿಮೂಲ್ ನೂತನ ಪ್ಯಾಕಿಂಗ್ ಘಟಕದ ಲೋಕಾರ್ಪಣೆ, ಮಲೆನಾಡು ಅಡಕೆ ಮಾರುಕಟ್ಟೆ ಸಹಕಾರಿ ಸಂಸ್ಥೆಯ ಹೊಸ ಕೇಂದ್ರ ಲೋಕಾರ್ಪಣೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೆ ಲೇನ್, ರಾಷ್ಟ್ರೀಯ ಹೆದ್ದಾರಿ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಉದ್ಘಾಟನೆ ನಂತರ ಮಾತನಾಡಿದರು.
ಕನ್ನಡದಲ್ಲಿ ಮಾತನ್ನು ಆರಂಭಿಸಿದ ಮೋದಿ, ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂದರು. ಏಕ ಭಾರತ ಮತ್ತು ಶ್ರೇಷ್ಠ ಭಾರತದ ಕುರಿತು ಇಂತಹ ಸಮರ್ಪಣೆಯ ಭಾವನೆ ಹೊಂದಿರುವ ರಾಷ್ಟ್ರಕವಿ ಕುವೆಂಪು ಅವರಿಗೆ ಆದರ ಪೂರ್ವಕ ನಮನ ಸಲ್ಲಿಸುತ್ತೇನೆ. ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಸಾವಿರಾರು ಕೋಟಿ ರೂ. ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ ಸೌಭಾಗ್ಯ ಸಿಕ್ಕಿದೆ.
ಈ ವಿಮಾನ ನಿಲ್ದಾಣ ಅತ್ಯಂತ ಸುಂದರವಾಗಿದೆ. ಸಂಪ್ರದಾಯ ಹಾಗೂ ತಂತ್ರಜ್ಞಾನವನ್ನು ಒಳಗೊಂಡು ನಿರ್ಮಾಣವಾಗಿದೆ. ಇದು ಕೇವಲ ವಿಮಾನ ನಿಲ್ದಾಣವಲ್ಲ, ನಾಡಿನ ಯುಜನರಿಗೆ ಅವಕಾಶದ ಬಾಗಿಲು ತೆರೆದಿದೆ.
ಬಿಜೆಪಿ ಸರ್ಕಾರದ ಸಮಯದಲ್ಲಿ ಕರ್ನಾಟಕದ ಅಭಿವೃದ್ಧಿಯನ್ನು ನೋಡುತ್ತಿದ್ದೇನೆ. ಕರ್ನಾಟಕವು ಅಭಿವೃದ್ಧಿಯ ರಥದ ಮೇಲೆ, ಈ ರಥವು ಪ್ರಗತಿಯ ಪಥದ ಮೇಲೆ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ರೈಲ್ವೆ, ರೋಡ್ ವೇ, ಐವೇ ಮೂಲಕ ಇದು ಸಾಗುತ್ತಿದೆ.
ಯಾವುದೇ ವಾಹನಕ್ಕೆ ಅಥವಾ ಸರ್ಕಾರಕ್ಕೆ ಡಬಲ್ ಇಂಜಿನ್ ಅಳವಡಿಸಿದರೆ ಹೆಚ್ಚಿನ ಶಕ್ತಿ ದೊರಕುತ್ತದೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಹೆಚ್ಚಿನ ಬದಲಾವಣೆ ತಂದಿದೆ. ಈ ಹಿಂದೆ ಅಭಿವೃದ್ಧಿ ಎನ್ನುವುದು ದೊಡ್ಡ ನಗರಗಳ ಆಸುಪಾಸಿಗೇ ಸೀಮಿತವಾಗುತ್ತಿತ್ತು. ಆದರೆ ಈಗ ಎರಡನೇ ಹಂತ, ಮೂರನೇ ಹಂತದ ನಗರಗಳು, ಗ್ರಾಮೀಣ ಭಾಗಕ್ಕೂ ಅಭಿವೃದ್ಧಿಯ ಫಲ ಸಿಗುತ್ತಿದೆ.
ಶಿವಮೊಗ್ಗದ ವಿಮಾನ ನಿಲ್ದಾಣವು, ಭಾರತದಲ್ಲಿ ವಾಯುಯಾನದ ಕುರಿತು ಬಹಳ ಉತ್ಸಾಹ ಇರುವ ಸಮಯದಲ್ಲಿ ನಿರ್ಮಾಣವಾಗಿದೆ. ಇತ್ತೀಚೆಗೆ ಏರ್ ಇಂಡಿಯಾವು ವಿಶ್ವದ ಅತಿ ದೊಡ್ಡ ವಿಮಾನ ಖರೀದಿಸಲು ಮುಂದಾಗಿದೆ. ಕಾಂಗ್ರೆಸ್ ಕಾಲದಲ್ಲಿ ಏರ್ ಇಂಡಿಯಾ ಗುರುತು ಕೇವಲ ನಷ್ಟ, ಹಗರಣಗಳಿಂದಲೇ ಕೂಡಿತ್ತು. ಇವತ್ತು ಏರ್ ಇಂಡಿಯಾ, ಭಾರತದ ಹೊಸ ಸಾಮರ್ಥ್ಯದ ಪ್ರತೀಕವಾಗಿದೆ. ಇಂದು ಭಾರತದ ವಾಯು ಯಾನದ ವಿಚಾರ ಇಡೀ ವಿಶ್ವದಲ್ಲಿ ಕೇಳಿಸುತ್ತಿದೆ.
ಈ ವಿಮಾನಗಳಲ್ಲಿ ಕೆಲಸ ಮಾಡಲು ಸಾವಿರಾರು ಯುವಕರ ಅವಶ್ಯಕತೆಯಿದೆ. ಈಗ ವಿಮಾನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಕೆಲವೇ ವರ್ಷದಲ್ಲಿ ಭಾರತದ ನಾಗರಿಕನು ಮೇಡ್ ಇನ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಾನೆ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ತೆರೆದುಕೊಳ್ಳಲಿದೆ. ಇಷ್ಟು ದೊಡ್ಡ ಬೆಳವಣಿಗೆ ಹಿಂದೆ ಬಿಜೆಪಿ ಸರ್ಕಾರದ ನೀತಿಗಳು ಹಾಗೂ ನಿರ್ಣಯದ ಪಾತ್ರವಿದೆ. 2014ಕ್ಕೂ ಹಿಂದೆ ದೊಡ್ಡ ನಗರಗಳ ಮೇಲಷ್ಟೆ ವಿಮಾನ ನಿಲ್ದಾಣ ನಿರ್ಮಾಣದ ಗಮನ ಕೇಂದ್ರಿತವಾಗಿತ್ತು.
2014ರ ನಂತರ ದೇಶದಲ್ಲಿ 74 ವಿಮಾನ ನಿಲ್ದಾಣಗಳಿದ್ದವು. ಇದೀಗ ಒಂಭತ್ತು ವರ್ಷದಲ್ಲಿ 74 ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗಿವೆ. ಪ್ರತಿ ಸಣ್ಣ ನಗರದಲ್ಲೂ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಇದು ಬಿಜೆಪಿ ಸರ್ಕಾರದ ವೇಗ. ಹವಾಯಿ ಚಪ್ಪಳಿ ತೊಡುವವರೂ ವಿಮಾನಯಾನ ಪ್ರಯಾಣ ನಡೆಸಬೇಕು ಎಂದು ಉಡಾನ್ ಯೋಜನೆ ಆರಂಭಿಸಿದೆವು. ನಮ್ಮ ಅನೇಕ ನಾಗರಿಕರು ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದ್ದು ಸಂತಸವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣವೂ ಇದಕ್ಕೆ ಸಾಕ್ಷಿಯಾಗಲಿದೆ.
ಇದನ್ನೂ ಓದಿ: Shivamogga Airport: ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ, ತಿಳಿಯಲೇಬೇಕಾದ 5 ಅಂಶ ಇಲ್ಲಿವೆ
ಶಿವಮೊಗ್ಗ-ಶಿಕಾರಿಪುರ ಹಾಗೂ ರಾಣೆಬೆನ್ನೂರು ಹೊಸ ಲೈನ್ ಪೂರ್ಣವಾದ ನಂತರ ಇತರೆ ಜಿಲ್ಲೆಗಳಿಗೂ ಅನುಕೂಲವಾಗುತ್ತದೆ. ಈ ಲೇನ್‌ನಲ್ಲಿ ಲೆವೆಲ್ ಕ್ರಾಸಿಂಗ್ ಇರುವುದಿಲ್ಲವಾದ್ಧರಿಂದ ವೇಗವಾಗಿ ರೈಲು ಚಲಿಸುತ್ತದೆ. ಶಿವಮೊಗ್ಗವು ಶಿಕ್ಷಣ ಕೇಂದ್ರವಾಗಿದ್ದು, ಉತ್ತಮ ಸಂಪರ್ಕದಿಂದಾಗಿ ಅಕ್ಕಪಕ್ಕದ ಯುವಕರಿಗೂ ಅನುಕೂಲವಾಗುತ್ತದೆ.
ಭಾರತದ ಅಮೃತ ಕಾಲವು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಕಾಲ ಎನ್ನುವುದು ಕರ್ನಾಟಕದ ಜನರಿಗೆ ಗೊತ್ತಿದೆ. ಇಡೀ ವಿಶ್ವದ ಹೂಡಿಕೆದಾರರು ಭಾರತಕ್ಕೆ ಆಗಮಿಸಲು ಇಚ್ಛಿಸಿದ್ದಾರೆ. ಇದರ ಲಾಭ ಕರ್ನಾಟಕದ ಯುವಕರಿಗೂ ಆಗುತ್ತದೆ. ಕರ್ನಾಟಕವು ಡಬಲ್ ಇಂಜಿನ್ ಸರ್ಕಾರಕ್ಕೆ ಅವಕಾಶ ನೀಡುವ ಮನಸ್ಸು ಮಾಡಿದೆ. ಕರ್ನಾಟಕದ ವಿಕಾಸದ ಈ ಅಭಿಯಾನ ಮತ್ತಷ್ಟು ವೇಗವಾಗಲಿದೆ. ಒಟ್ಟಾಗಿ ಸಾಗಬೇಕಿದೆ. ಕರ್ನಾಟಕ ಹಾಗೂ ಶಿವಮೊಗ್ಗದ ಜನರ ಕನಸನ್ನು ಸಾಕಾರಗೊಳಿಸಬೇಕಿದೆ. ಅಭಿವೃದ್ಧಿ ಯೋಜನೆಗಳಿಗಾಗಿ ಎಲ್ಲರಿಗೂ ಶುಭ ಕಾಮನೆಗಳು ಎಂದರು.