ವಿಜಯಪುರ: ʻʻರೈತರೇ ಬರಗಾಲ ಬರಲಿ (Drought Situation) ಎಂದು ಬಯಸುತ್ತಾರೆʼʼ ಎಂಬ ಹೇಳಿಕೆ ನೀಡಿ ಪ್ರತಿಪಕ್ಷಗಳು ಮತ್ತು ರೈತರ ಆಕ್ರೋಶಕ್ಕೆ ಗುರಿಯಾದ ಸಚಿವ ಶಿವಾನಂದ ಪಾಟೀಲ್ (Shivananda Pateel) ಈಗ ಉಲ್ಟಾ ಹೊಡೆದಿದ್ದಾರೆ. ಬಾಗಲಕೋಟೆಯಲ್ಲಿ ನೀಡಿದ ಹೇಳಿಕೆಗೆ ವಿಜಯಪುರದಲ್ಲಿ ಸ್ಪಷ್ಟನೆ ನೀಡಿದ ಸಚಿವ ಶಿವಾನಂದ ಪಾಟೀಲ್ ಅವರು, ಅದು ನಾನು ಹಾಗೆ ಹೇಳಿಲ್ಲ, ನನ್ನ ಹೇಳಿಕೆಯನ್ನ ತಿರುಚಿ ಪ್ರಸಾರ ಮಾಡಲಾಗಿದೆ ಎಂದಿದ್ದಾರೆ.
ʻʻರೈತರು ಸ್ವಾವಲಂಬಿಗಳಾಗಿ ಬದುಕಬೇಕು, ಯಾವುದೇ ಸರಕಾರದ ಯೋಜನೆ ಮೇಲೆ ಅವಲಂಬಿತರಾಗಿ ಬದುಕಬಾರದು ಎನ್ನುವುದು ನನ್ನ ಹೇಳಿಕೆʼʼ ಎಂದು ಶಿವಾನಂದ ಪಾಟೀಲ್ ಹೇಳಿದರು. ಬಾಗಲಕೋಟೆಯಲ್ಲಿ ಮಾತನಾಡಿದ್ದ ಅವರು, ರೈತರು ಬರಗಾಲ ಬರಬೇಕು, ರೈತರ ಸಾಲ ಮನ್ನಾ ಆಗಬೇಕು ಎಂದು ಬಯಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ʻʻವಿರೋಧ ಪಕ್ಷದವರಿಗೆ ಬೇರೆ ಕೆಲಸ ಇಲ್ಲ. ಕೆಲವು ರೈತರನ್ನು ಬುಟ್ಟಿಗೆ ಹಾಕಿಕೊಂಡು ಬೇರೆ ಬೇರೆ ಹೇಳಿಕೆ ಕೊಡಿಸಿ ನನ್ನ ವಿರುದ್ಧ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತರನ್ನು ಎತ್ತಿ ಕಟ್ಟುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆʼʼ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ಸಣ್ಣ ಸಣ್ಣ ವಿಚಾರ ದೊಡ್ಡದು ಮಾಡುವುದು ಬೇಡ ಎಂದರು.
ಇದನ್ನೂ ಓದಿ : Shivananda Pateel: ಬರ ಬರ್ಲಿ ಅಂತ ರೈತರೇ ಕಾಯ್ತಾರೆ; ಸಚಿವ ಶಿವಾನಂದ ಪಾಟೀಲ್ ಇದೆಂಥಾ ಮಾತು?
ನಮ್ಮ ಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ಯೋಜನೆ ಮಾಡಿದ್ದೇನೆ. ನನಗೆ ರೈತರ ಬಗ್ಗೆ ಕಾಳಜಿ ಇದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ʻʻವಿರೋಧ ಪಕ್ಷದ ನಾಯಕರು ನನಗೆ ಮದ ಏರಿದೆ ಎಂದು ರಿಯಾಕ್ಷನ್ ಕೊಟ್ಟಿದ್ದಾರೆ. ನನಗೆ ಮದ ಏರಿಲ್ಲ, ಮದ ರೈತರನ್ನು ತುಳಿಯುವಂತಹ ಜನರಿಗೆ ಏರಿದೆʼʼ ಎಂದು ಶಿವಾನಂದ ಪಾಟೀಲ್ ಹೇಳಿದರು.
ಇದನ್ನೂ ಓದಿ: Shivananda Pateel : ರೈತರಿಗೆ ಅಪಮಾನ; ಸಚಿವ ಪಾಟೀಲ್ ವಿರುದ್ಧ ಬಿಜೆಪಿ ಆಕ್ರೋಶ; ಪದಚ್ಯುತಿಗೆ ಆಗ್ರಹ
ಬಿಜೆಪಿಗೆ ಶಿವಾನಂದ ಪಾಟೀಲ್ ಹಲವು ಪ್ರಶ್ನೆಗಳು
- ಈ ರೀತಿ ಹೇಳಿಕೆಗಳನ್ನು ತಿರುಚಿ ಜನರನ್ನು ದಿಕ್ಕುತಪ್ಪಿಸಿ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಬದಲು ರೈತರ ಬಗ್ಗೆ ಕಾಳಜಿ ಇದ್ದರೆ ನೀರಾವರಿಗೆ ದುಡ್ಡು ಕೊಡಿಸಲಿ.
- ಕರ್ನಾಟಕ ಸರಕಾರದ ಎಲ್ಲಾ ಮುಖ್ಯಮಂತ್ರಿಗಳು ಈ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ನೀರು ಕೊಟ್ಟಿದ್ದಾರೆ, ಕರೆಂಟ್ ಕೊಟ್ಟಿದ್ದಾರೆ. ರಸಗೊಬ್ಬರ ಕೊಟ್ಟಿದ್ದಾರೆ, ಬೀಜ ಕೊಟ್ಟಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ರೈತರನ್ನು ಕಟ್ಟಿ ಹಾಕುವ ಕೆಲಸ ಮಾಡಿದೆ.
- ದುರ್ದೈವವಶಾತ್ ಕೇಂದ್ರ ಸರಕಾರದ ಇತ್ತೀಚಿನ ನೀತಿಗಳು ರೈತರಿಗೆ ಮಾರಕವಾಗಿವೆ. ಉದಾಹರಣೆಗೆ ಎಪಿಎಂಸಿ ಕಾಯ್ದೆ ವಿರುದ್ಧ ಇಡೀ ದೇಶದಲ್ಲಿ ರೈತರು ಪ್ರತಿಭಟನೆ ಮಾಡಿದರು.
- ರಾಜ್ಯದಲ್ಲಿ ಕಬ್ಬಿಗೆ ಬೆಲೆ ಇಲ್ಲ. ನಿಜವಾಗಿ ಈಗ 3500 ರೂ.ಗಿಂತ ಹೆಚ್ಚಾಗಬೇಕಾಗಿತ್ತು. ಆದರೆ, ಇವತ್ತು ಕೇಂದ್ರ ಸರಕಾರ ಸಕ್ಕರೆ ರಫ್ತು ನಿಷೇಧ ಮಾಡಿದೆ.
- ಎಥನಾಲ್ ಪಾಲಿಸಿ ತಂದರು, ಇಥನಾಲ್ ಪಾಲಿಸಿ ತಂದಾಗ ಕೆಲವರು 400-500 ಕೋಟಿ ರೂ. ಸಾಲ ತೆಗೆದು ಕಾರ್ಖಾನೆ ಆರಂಭ ಮಾಡಿದರು. ಈಗ ಎಥನಾಲ್ ಬ್ಯಾನ್ ಅಂತಿದ್ದಾರೆ.
- ಕೊಬ್ಬರಿಗೆ ಬೆಲೆ ಇಲ್ಲ, ದೇವೇಗೌಡರೇ ಒಂದು ಮನವಿ ಹಿಡ್ಕೊಂಡು ಪ್ರಧಾನಮಂತ್ರಿಗಳ ಬಳಿ ಹೋಗಿದ್ದಾರೆ. ಅದಕ್ಕೆ ಪರಿಹಾರ ಸಿಕ್ಕಿಲ್ಲ.
- ರೈತ ಇಂದು ಅಕ್ಕಿ ಬೆಳೆದರೆ ಅಕ್ಕಿ ಎಕ್ಸಪೋರ್ಟ್ ಆಗ್ತಾ ಇಲ್ಲ.
- ರೈತರಿಗೆ ಯಾವುದೇ ಬೆಳೆಗೆ ಮೂರು ವರ್ಷಕ್ಕೊಮ್ಮೆ ಧಾರಣೆ ಬರುತ್ತದೆ. ಆಗ ಒಂದು ನಾಲ್ಕು ದುಡ್ಡು ಅವರು ಗಳಿಸಿಕೊಳ್ಳುತ್ತಾರೆ. ಈಗ ವಿಜಯಪುರದಲ್ಲೇ ಈರುಳ್ಳಿ ಒಳ್ಳೆಯ ಬೆಳೆ ಬಂದಿದೆ. ಮಾರಿದ್ರೆ ನಾಲ್ಕು ಕಾಸು ಬರುತ್ತಿತ್ತು. ಆದರೆ, ಈಗ ಈರುಳ್ಳಿ ಎಕ್ಸ್‌ಪೋರ್ಟ್ ಬ್ಯಾನ್ ಮಾಡಿದ್ದಾರೆ. ಹಾಗಿದ್ದರೆ ರೈತರು ಬೆಲೆ ಪಡೆಯೋದು ಯಾವಾಗ?