ಬೆಂಗಳೂರು: ಆಪರೇಷನ್ ಹಸ್ತ (Operation Hasta) ರಾಜ್ಯ ರಾಜಕೀಯದಲ್ಲಿ (Karnataka Politics) ಭಾರಿ ಸಂಚಲವನ್ನುಂಟು ಮಾಡಿದೆ. ಕಾಂಗ್ರೆಸ್ ಸರ್ಕಾರವನ್ನು (Congress Government) ಕೆಡವಿ, ಆ ಪಕ್ಷವನ್ನು ತೊರೆದು ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ವಲಸಿಗರನ್ನು ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ಈಗ ಬಿಜೆಪಿಯ ಹಾಲಿ ಇಬ್ಬರ ಶಾಸಕರತ್ತ ಹೆಚ್ಚಿನ ದೃಷ್ಟಿ ನೆಟ್ಟಿದೆ. ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ (Yeshwanthpur MLA ST Somashekar) ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ (Yellapur MLA Shivaram Hebbar) ಅವರ ಜತೆ ಮಾತುಕತೆ ನಡೆದಿದ್ದು, ಬಹುತೇಕ ಕಾಂಗ್ರೆಸ್ ಸೇರ್ಪಡೆ ಪಕ್ಕಾ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಉಭಯ ನಾಯಕರು ಈ ಸುದ್ದಿಯನ್ನು ಅಲ್ಲಗಳೆಯುತ್ತಿದ್ದಾರೆ. ಈ ಬಗ್ಗೆ ಶಾಸಕ ಶಿವಾರಾಂ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದು, ನಾವು ಪಕ್ಷ ಬಿಡುವುದಿಲ್ಲ. ಯಾವುದನ್ನು ಯಾವಾಗ ಹೇಳಬೇಕೋ ಆವಾಗಲೇ ಹೇಳುತ್ತೇವೆ ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಇನ್ನು ಬಿಜೆಪಿ ಮೇಲೆ ಬಹಿರಂಗವಾಗಿಯೇ ಮುನಿಸು ಹೊರಗೆ ಹಾಕಿರುವ ಎಸ್.ಟಿ. ಸೋಮಶೇಖರ್, “ತಮಗೆ ನವ ದೆಹಲಿ ನಾಯಕರಿಂದ ಯಾವುದೇ ಕರೆ ಬಂದಿಲ್ಲ” ಎಂದು ಹೇಳಿದ್ದಾರೆ.
ಹೇಳುವ ಕಾಲ ಬಂದಾಗ ಹೇಳುತ್ತೇವೆ: ಶಿವರಾಂ ಹೆಬ್ಬಾರ್
ನಾವು ಪಕ್ಷ ಬಿಡುತ್ತೇವೆ, ಕಾಂಗ್ರೆಸ್‌ಗೆ ಹೋಗುತ್ತೇವೆ ಎಂಬ ವಿಚಾರ ಯಾಕೆ ಬಂದಿದೆಯೋ ಗೊತ್ತಿಲ್ಲ. ಅದನ್ನು ನಾವು ಆಲೋಚನೆ ಮಾಡುತ್ತೇವೆ. ಬೆಂಬಲಿಗರು ಅವರದ್ದೇ ಆದ ರೀತಿ ಮಾತನಾಡುತ್ತಾರೆ. ನಾವು ಆ ರೀತಿಯಾದಂತಹ ನಿರ್ಧಾರ ಮಾಡಿಲ್ಲ. ನಾವು ಇಲ್ಲೇ ಇರುತ್ತೇವೆ. ಹೇಳುವ ಕಾಲ ಬಂದಾಗ ಹೇಳುತ್ತೇವೆ. ಯಾವುದನ್ನು ಯಾವಾಗ ಹೇಳಬೇಕೋ ಆಗಲೇ ಹೇಳುತ್ತೇವೆ ಎಂದು ಶಾಸಕ ಶಿವರಾಂ ಹೆಬ್ಬಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Operation Hasta : ಜೆಡಿಎಸ್‌ನಲ್ಲೂ ʼಹಸ್ತʼಕ್ಷೇಪ; ಆಪರೇಷನ್ ಹಸ್ತದ ಬಗ್ಗೆ ಶಾಸಕ ಮಂಜುನಾಥ್ ಸ್ಫೋಟಕ ಸುಳಿವು!
ದೆಹಲಿಯಿಂದ ಯಾವುದೇ ಕರೆ ಬಂದಿಲ್ಲ: ಎಸ್.ಟಿ. ಸೋಮಶೇಖರ್
ದೆಹಲಿಯಿಂದ ಯಾವುದೇ ಕರೆ ಬಂದಿಲ್ಲ. ಬುಲಾವ್ ಬಂದರೆ, ನವ ದೆಹಲಿಗೆ ಹೋಗುತ್ತೇನೆ. ವಾರ್ಡ್‌ಗೆ ಒಬ್ಬರೋ ಇಬ್ಬರೋ ಕಾಂಗ್ರೆಸ್‌ಗೆ ಹೋದರೆ ಏನೂ ಆಗುವುದಿಲ್ಲ. ನಮಗೆ ಬಿಜೆಪಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನೇನು ರಾಜ್ಯ ಮಟ್ಟದ ನಾಯಕನಾಗಬೇಕಿಲ್ಲ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆ ಒಳ್ಳೆಯ ಮಾತು ಆಡುವುದರಲ್ಲಿ ಯಾವುದೇ ತಪ್ಪು ಇಲ್ಲ. ನಾನು ಹೇಳಿದ ಮಾತಿನಲ್ಲಿ ನನಗೆ ಯಾವುದೇ ತಪ್ಪು ಕಂಡು ಬರುತ್ತಿಲ್ಲ. ಈಗ ಕ್ಷೇತ್ರದಲ್ಲಿ ನೀರಿನ ಸಮಸ್ಯೆಯಿದೆ. ನಾನು ಅವರ ಜತೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು ತಪ್ಪು ಅಂತ ಹೇಳಿದರೆ ಹೇಗೆ? ಎಂದು ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯೆ ನೀಡಿದರು.
ನನ್ನ ಮಗ ರಾಜಕೀಯಕ್ಕೆ ಬರುವುದಿಲ್ಲ: ಎಸ್.ಟಿ. ಸೋಮಶೇಖರ್
ನಾನು ಬಿಜೆಪಿ ಬಿಡುವ ಮನಸ್ಸಿನಲ್ಲಿ ಇಲ್ಲ. ಆದರೆ, ಕೆಲವರು ನಾವು ಪಕ್ಷ ಬಿಡುತ್ತೇವೆ ಅಂತ ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನ ಚುನಾವಣೆ ಸಮಯದಲ್ಲೂ ಅಪಪ್ರಚಾರ ಮಾಡಿದರು. ಇದರ ಹಿಂದೆ ಅಮಾನತು ಆದ ವ್ಯಕ್ತಿ ಇದ್ದರು. ಆದರೂ ಕ್ಷೇತ್ರದಲ್ಲಿ ಕೆಲವರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಇಂಥವರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಹೇಳಿದೆ. ನಾನು ಲೋಕಸಭೆಗೆ ಹೋಗುವ ಆಸಕ್ತಿಯನ್ನು ಹೊಂದಿಲ್ಲ. ನನ್ನ ಮಗ ರಾಜಕೀಯಕ್ಕೆ ಬರುವುದಿಲ್ಲ ಎಂದು ಎಸ್.ಟಿ. ಸೋಮಶೇಖರ್ ಸ್ಪಷ್ಟನೆ ನೀಡಿದರು.
ಸಂಜೆ ನವ ದೆಹಲಿಗೆ ಎಸ್.ಟಿ. ಸೋಮಶೇಖರ್?
ನವ ದೆಹಲಿಯಿಂದ ಬಿಜೆಪಿ ಹೈಕಮಾಂಡ್‌ನವರು ತಮಗೆ ಇನ್ನೂ ಕರೆದಿಲ್ಲ ಎಂದು ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದರೂ, ಅವರು ಗುರುವಾರ (ಆಗಸ್ಟ್ 24) ಸಂಜೆ ನವದೆಹಲಿಗೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ಹೊರಟು ನಿಂತಿರುವ ಅವರು, ಪಕ್ಷದ ವಿಚಾರಗಳು, ತಮ್ಮ ಅಸಮಾಧಾನಕ್ಕೆ ಇರುವ ಕಾರಣಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Operation Hasta : ಕಾಂಗ್ರೆಸ್ ಸೇರಿದ ಆಯನೂರು ಮಂಜುನಾಥ್, ನಾಗರಾಜಗೌಡ; ಜಿಲ್ಲಾ ನಾಯಕರ ಸೇರ್ಪಡೆಗೆ ಡಿಕೆಶಿ ಕರೆ
ಶುಕ್ರವಾರ ಶಾ, ಸಂತೋಷ್ ಭೇಟಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿಗೆ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಮಯ ನೀಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಅಲ್ಲಿಗೆ ಎಸ್.ಟಿ. ಸೋಮಶೇಖರ್ ಒಬ್ಬರೇ ಹೋಗುತ್ತಾರೆಯೇ? ಅಥವಾ ಇತರೆ ವಲಸಿಗರೂ ಇರುತ್ತಾರಾ ಎಂಬುದರ ಕುರಿತು ಇನ್ನೂ ತಿಳಿದು ಬಂದಿಲ್ಲ. ಈ ಭೇಟಿ ಪಕ್ಷಾಂತರ ವಿಚಾರದ ಕ್ಲೈಮ್ಯಾಕ್ಸ್ ಆಗಲಿದೆಯೇ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.