Site icon Vistara News

Shobha Karandlaje : ಕರಂದ್ಲಾಜೆಗೆ ತಿರುಗುಬಾಣವಾದ ʻಸ್ಫೋಟಕʼ ಹೇಳಿಕೆ; ತಮಿಳಿಗರ ಕ್ಷಮೆ ಯಾಚನೆ

Shobha Karandlaje Tamilians

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಅಬ್ಬರದ ಮಾತುಗಳಿಗೆ ಫೇಮಸ್‌. ಕೆಲವೊಂದು ವಿಷಯಗಳನ್ನು ಮುಖಕ್ಕೆ ಹೊಡೆದಂತೆ ಆಡುವುದು ಅವರ ಅಭ್ಯಾಸ. ಅದು ಅವರಿಗೆ ಪ್ಲಸ್‌ ಕೂಡಾ ಹೌದು, ಕೆಲವೊಮ್ಮೆ ಮೈನಸ್‌ ಕೂಡಾ ಹೌದು. ಇದೀಗ ಶೋಭಾ ಕರಂದ್ಲಾಜೆ ಅವರು ತಮಿಳುನಾಡಿನ ಬಗ್ಗೆ ವಿವಾದಾತ್ಮಕ ಮಾತು (Controversial Statement) ಆಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತುಕೊಂಡ ಅವರು ಈಗ ತಮಿಳಿಗರ ಕ್ಷಮೆ ಯಾಚಿಸಿದ್ದಾರೆ (Karandlaje Apologises to Tamilians).

ನಗರದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ಸಂಭವಿಸಿದ ಬಾಂಬ್ ಸ್ಫೋಟಕ್ಕೂ ತಮಿಳುನಾಡಿಗೂ ಸಂಬಂಧ ಕಲ್ಪಿಸಿದ್ದೇ ಅವರು ವಿವಾದಕ್ಕೆ ಸಿಲುಕಲು ಕಾರಣ. ಬೆಂಗಳೂರಿನ ನಗರ್ತ ಪೇಟೆಯಲ್ಲಿ ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದ ಮುಕೇಶ್‌ ಅವರು ಹನುಮಾನ್‌ ಚಾಲೀಸಾ (Hanuman Chalisa Protest) ಹಾಕಿದ್ದನ್ನು ಪ್ರಶ್ನಿಸಿ ಮುಸ್ಲಿಂ ಯುವಕರೇ ಹೆಚ್ಚಾಗಿರುವ ತಂಡವೊಂದು ಆವರ ಮೇಲೆ ಹಲ್ಲೆ ಮಾಡಿತ್ತು. ಇದರ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಂಗಳವಾರ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದರು.

ಇದನ್ನೂ ಓದಿ : Hanuman Chalisa : ಇವತ್ತು ಜೈಲ್, ನಾಳೆ ಬೇಲ್, ಮತ್ತೆ ಅದೇ ಖೇಲ್‌; ನಗರ್ತ ಪೇಟೆ ಕಿರಾತಕರ ಸ್ಟೇಟಸ್‌

ಪ್ರತಿಭಟನೆಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು ʻʻನಮ್ಮ ಬೆಂಗಳೂರಿನ ಕೆಫೆಗೆ ತಮಿಳುನಾಡಿನ ಯಾರು ಯಾರೋ ಬಂದು ಬಾಂಬ್ ಹಾಕುತ್ತಾರೆ ಎಂಬ ಹೇಳಿಕೆ ನೀಡಿದ್ದರು. ʻʻಒಬ್ಬ ವ್ಯಕ್ತಿ ತಮಿಳುನಾಡಿನಿಂದ ಬಂದು ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾನೆ. ಮತ್ತೊಬ್ಬ ದೆಹಲಿಯಿಂದ ಬಂದು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಾನೆ. ಇನ್ನೊಬ್ಬ ಕೇರಳದಿಂದ ಬಂದು ವಿದ್ಯಾರ್ಥಿನಿಯರ ಮೇಲೆ ಆಸಿಡ್ ಎರಚುತ್ತಾನೆ. ಯಾರಿಗೂ ಕರ್ನಾಟಕದ ಬಗ್ಗೆ ಸಣ್ಣ ಭಯವೂ ಇಲ್ಲʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Shobha Karandlaje ಶೋಭಾ ಕರಂದ್ಲಾಜೆ ಮಾತಿಗೆ ಕೆರಳಿದ ತಮಿಳಿಗರು

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟಿದ್ದ ತಮಿಳಿಗ ಎಂಬರ್ಥದಲ್ಲಿ ಶೋಭಾ ಕರಂದ್ಲಾಜೆ ಅವರು ಹೇಳಿಕೆ ನೀಡಿದ್ದು ತಮಿಳುನಾಡಿನವರನ್ನು ಕೆರಳಿಸಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಸೇರಿ ಹಲವು ಇದಕ್ಕೆ ಪ್ರತಿಕ್ರಿಯೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.

ಭಾಷಿಗರ ನಡುವೆ ದ್ವೇಷ ಹಚ್ಚುವ ರೀತಿಯಲ್ಲಿ ಭಾಷಣ ಮಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂ.ಕೆ. ಸ್ಟಾಲಿನ್ ಅವರು ಚುನಾವಣಾ ಆಯೋಗವನ್ನೂ ಆಗ್ರಹಿಸಿದ್ದರು. ಇದನ್ನೂ ಮೀರಿ ಕೆಲವರು ಶೋಭಾ ಕರಂದ್ಲಾಜೆಯ ಹೇಳಿಕೆಗೆ ಪ್ರಧಾನಿ ಮೋದಿ ಅವರೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಇದರ ಜತೆಗೆ ಕೆಲವರು ಈ ರೀತಿ ಆದರೆ ಇನ್ನು ತಮಿಳುನಾಡಿನಲ್ಲಿ ಬಿಜೆಪಿ ಕತೆ ಮುಗಿದಂತೆಯೇ ಎಂದೆಲ್ಲ ಹೇಳಿದ್ದರು.

ಪ್ರತಿಭಟನೆ ಸಂದರ್ಭದಲ್ಲಿ ಆವೇಶದಲ್ಲಿ ಆಡಿದ ಮಾತು ಈ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ಶೋಭಾ ಕರಂದ್ಲಾಜೆ ಅದನ್ನು ಸರಿಪಡಿಸಲು ಮುಂದಾದರು. ಅದರಲ್ಲೂ ಇದು ತಮಿಳುನಾಡಿನಲ್ಲಿ ಬಿಜೆಪಿಯ ಭವಿಷ್ಯಕ್ಕೇ ಕುತ್ತಾಗಬಹುದು ಎಂಬೆಲ್ಲ ಅಭಿಪ್ರಾಯಗಳು ಆಕೆಯನ್ನು ತಕ್ಷಣ ಕ್ಷಮೆ ಯಾಚಿಸುವಂತೆ ಮಾಡಿದವು. ಅವರು ಕೂಡಲೇ ಜಾಲತಾಣ ಟ್ವಿಟರ್‌ನಲ್ಲಿ ಸರಣಿ ಟ್ವೀಟ್‌ ಮಾಡಿ ತಮಿಳುನಾಡಿನ ನಾಗರಿಕರಲ್ಲಿ ಕ್ಷಮೆ ಕೋರಿದರು. ನನ್ನ ಹೇಳಿಕೆಯಿಂದ ನನ್ನ ಹೃದಯದ ಆಳದಿಂದ ಕ್ಷಮೆ ಕೋರುತ್ತೇನೆ. ನನ್ನ ಮಾತುಗಳನ್ನು ಹಿಂಪಡೆಯುತ್ತೇನೆ ಎಂದೆಲ್ಲ ಹೇಳಿಕೊಂಡರು.

ಎಕ್ಸ್‌ನಲ್ಲಿ Shobha Karandlaje ಹೇಳಿದ್ದೇನು?

To my Tamil brothers & sisters,
I wish to clarify that my words were meant to shine light, not cast shadows. Yet I see that my remarks brought pain to some – and for that, I apologize. My remarks were solely directed towards those trained in the Krishnagiri forest, linked to the Rameshwaram Cafe blast. To anyone from Tamilnadu effected, From the depths of my heart, I ask your forgiveness. Furthermore, I retract my previous comments. 🙏

ನನ್ನ ತಮಿಳು ಸಹೋದರ ಸಹೋದರಿಯರಿಗೆ, ನಾನು ಘಟನೆ ಬಗ್ಗೆ ಬೆಳಕು ಚೆಲ್ಲಲು ಮಾತನಾಡಿದೆಮೇ ಹೊರತು ಕತ್ತಲನ್ನು ಬಿತ್ತರಿಸಲು ಅಲ್ಲ. ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರನ್ನು ಉದ್ದೇಶಿಸಿ ನಾನು ಹೇಳಿದ್ದೆ. ಆದರೂ ನನ್ನ ಟೀಕೆಗಳು ಕೆಲವರಿಗೆ ನೋವು ತಂದಿರುವುದನ್ನು ನಾನು ನೋಡುತ್ತೇನೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ತಮಿಳು ನಾಗರಿಕರು ಮತ್ತು ಕರ್ನಾಟಕದ ನಡುವೆ ಸೌಹಾರ್ದತೆಗೆ ಸುದೀರ್ಘ ಇತಿಹಾಸವಿದೆ.
ಅವರು ಕರ್ನಾಟಕದ ಸಾಮಾಜಿಕ ರಚನೆಯ ಅವಿಭಾಜ್ಯ ಅಂಗವಾಗಿದ್ದು ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾವು ನಿಕಟ ಸಾಂಸ್ಕೃತಿಕ ಬಂಧಗಳನ್ನು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಮೇಲೆ ಕೆಂಡಾಮಂಡಲ

ಈ ನಡುವೆ, ಶೋಭಾ ಕರಂದ್ಲಾಜೆ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರನ್ನು ಪ್ರತ್ಯೇಕವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

`ಸ್ಟಾಲಿನ್ ಅವರೇ, ನಿಮ್ಮ ಆಡಳಿತದಲ್ಲಿ ತಮಿಳುನಾಡಿನಲ್ಲಿ ಏನಾಗುತ್ತಿದೆ? ನಿಮ್ಮ ತುಷ್ಟೀಕರಣ ರಾಜಕಾರಣದಿಂದಾಗಿ ಹಗಲು ರಾತ್ರಿ ಎನ್ನದೆ ಹಿಂದೂಗಳು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿಗಳಾಗುತ್ತಿವೆ. ಐಸಿಸ್‌ ಮಾದರಿಯ ಭಯೋತ್ಪಾದಕ ಸಂಘಟನೆಗಳು ಚಿಗುರಿಕೊಳ್ಳುತ್ತಿವೆ. ನೀವು ಕಣ್ಣು ಮುಚ್ಚಿ ಕುಳಿತಿರುವುದರಿಂದ ಆಗಾಗ ಬಾಂಬ್ ಸ್ಫೋಟಗಳು ನಡೆಯುತ್ತಿರುತ್ತವೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದಾತ ಬಾಂಬರ್ ನಿಮ್ಮ ಮೂಗಿನ ಕೆಳಗೆ ಕೃಷ್ಣಗಿರಿ ಕಾಡುಗಳಲ್ಲಿ ತರಬೇತಿ ಪಡೆದಿದ್ದʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Exit mobile version