Site icon Vistara News

Belagavi Winter Session: ಚಳಿಗಾಲದ ಅಧಿವೇಶನಕ್ಕೆ ಶಾಸಕರ ಕೊರತೆ; ತೆಲಂಗಾಣದಲ್ಲಿ ಡಿಕೆಶಿ, ಜಮೀರ್‌!

Shortage of MLAs for Belagavi Winter Session

ಬೆಳಗಾವಿ: ಈ ಬಾರಿಯ ವಿಧಾನ ಮಂಡಲ ಅಧಿವೇಶನದ (Belagavi Winter Session) ಬಗ್ಗೆ ಭಾರಿ ನಿರೀಕ್ಷೆ ಹಾಗೂ ಕುತೂಹಲವನ್ನು ಇಟ್ಟುಕೊಳ್ಳಲಾಗಿದೆ. ಮೊದಲನೆಯದಾಗಿ ಉತ್ತರ ಕರ್ನಾಟಕ (Uttara Karnataka) ಭಾಗದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಸಾಕಷ್ಟು ಒತ್ತಾಯಗಳು ಕೇಳಿಬಂದಿವೆ. ಆದರೆ, ಈ ನಡುವೆ ಪ್ರಮುಖವಾಗಿ ಕೆಲವು ಸಚಿವರು ಹಾಗೂ ಶಾಸಕರೇ ಗೈರಾಗಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ (Deputy CM DK Shivakumar) ಹಾಗೂ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmed Khan) ತೆಲಂಗಾಣದಲ್ಲಿದ್ದಾರೆ. ಹೀಗಾಗಿ ಈ ಚಳಿಗಾಲದ ಮೊದಲ ಅಧಿವೇಶನಕ್ಕೆ ಶಾಸಕರ ಕೊರತೆ ಕಾಡುತ್ತಿದೆ.

ಆಡಳಿತ ಪಕ್ಷದಿಂದ -80, ಬಿಜೆಪಿಯಿಂದ 45, ಜೆಡಿಎಸ್‌ನಿಂದ 10 ಸದಸ್ಯರು ಹಾಜರಾಗಿದ್ದಾರೆ. ವಿಪಕ್ಷ ಸ್ಥಾನ ಆಸನದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಕುಳಿತಕೊಂಡಿದ್ದಾರೆ. ಅದೇ ಸಾಲಿನಲ್ಲಿ ಬಿಜೆಪಿ ಅತೃಪ್ತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಕುಳಿತುಕೊಂಡಿದ್ದಾರೆ.

ಇದನ್ನೂ ಓದಿ: Belagavi Winter Session: ಬರ ವೈಫಲ್ಯ ಬಗ್ಗೆ ವಿಪಕ್ಷಗಳಿಂದ ಮೊದಲ ದಿನವೇ ನಿಲುವಳಿ ನೋಟಿಸ್‌!

ಸದನದಲ್ಲಿ ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ. ಪಾಟೀಲ್, ಗೃಹ ಸಚಿವ ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವರು‌ ಭಾಗಿಯಾಗಿದ್ದಾರೆ. ಆದರೆ, ತೆಲಂಗಾಣದಲ್ಲಿ ಸರ್ಕಾರ ರಚಿಸುವ ಬ್ಯುಸಿಯಲ್ಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಜಮೀರ್ ಅಜಮದ್ ಖಾನ್‌ ಸದನಕ್ಕೆ ಗೈರಾಗಿದ್ದಾರೆ.

ಆರು ಸಚಿವರಿಂದ ಗೈರು ಪತ್ರ; ಹೊರಟ್ಟಿ ಅಸಮಾಧಾನ

ಮೊದಲ ದಿನದ ಸದನಕ್ಕೆ ಬರಲು ಆಗುತ್ತಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಆರು ಮಂದಿ ಸಚಿವರು ಪತ್ರ ಬರೆದಿದ್ದಾರೆ. ಇದಕ್ಕೆ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸದನಕ್ಕೆ ಬರಲು ಆಗುವುದಿಲ್ಲ ಎಂದು ಆರು ಸಚಿವರು ಪತ್ರ ಕೊಟ್ಟಿದ್ದಾರೆ. ಹೀಗಾದರೆ ಸದನ ನಡೆಸುವುದು ಹೇಗೆ? ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ಸಭಾನಾಯಕ ಬೋಸರಾಜು ಮೇಲೆ ಸಭಾಪತಿ ಹೊರಟ್ಟಿ ಸಿಟ್ಟಾಗಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪರಿಷತ್‌ ಸಭಾನಾಯಕ ಬೋಸರಾಜು, ಎಲ್ಲರೂ ಬರುತ್ತಿದ್ದಾರೆ. ಆನ್ ದಿ ವೇ ಎಂದು ಸಮಜಾಯಿಷಿ ಕೊಟ್ಟರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಸವರಾಜ ಹೊರಟ್ಟಿ, ಸದನ ಹನ್ನೊಂದು ಗಂಟೆಗೆ ಎಂದು ಸಮಯ ನಿಗದಿ ಆಗಿದೆ. ಆದರೂ ಇನ್ನೂ ಬರುತ್ತಿದ್ದಾರೆ ಎಂದರೆ ಏನರ್ಥ ಎಂದು ಪ್ರಶ್ನೆ ಮಾಡಿದರು. ಮುಂದೆ ಈ ರೀತಿ ಆದರೆ ನಾನು ಒಪ್ಪಲ್ಲ ಎಂದು ಖಡಕ್‌ ಸೂಚನೆ ಕೊಟ್ಟರು.

ತೆಲಂಗಾಣದಲ್ಲಿ ಸಭೆ ಮಾಡುತ್ತಿರುವ ಡಿ.ಕೆ. ಶಿವಕುಮಾರ್‌

ಪಂಚರಾಜ್ಯಗಳ ಚುನಾವಣೆ ಮುಗಿದು ತೆಲಂಗಾಣದಲ್ಲಿ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರವನ್ನು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಅಧಿಕೃತವಾಗಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಸಂಬಂಧ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಹೈದ್ರಾಬಾದ್‌ನಲ್ಲಿ ತೆಲಂಗಾಣ ಕಾಂಗ್ರೆಸ್‌ ಶಾಸಕಾಂಗ ಸಭೆ ನಡೆಯುತ್ತಲಿದ್ದು, ಬಹುತೇಕ ಇಂದೇ ಸಿಎಂ ಯಾರು ಎಂದು ಘೋಷಣೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Belagavi Winter Session: 1 ಗಂಟೆ ಸದನ ತಡ; ಉತ್ತರ ಕರ್ನಾಟಕಕ್ಕೆ ಮಾಡಿದ ಅಪಮಾನವೆಂದ ರಾಯರೆಡ್ಡಿ, ಯತ್ನಾಳ್!

ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ , ನೂತನ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ ಅಧಿಕೃತವಾಗಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಿದ ಬಳಿಕ ಸರ್ಕಾರ ರಚನೆಗೆ ರಾಜ್ಯಪಾಲರಲ್ಲಿ ಹಕ್ಕು ಮಂಡನೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ರಾಜ್ಯದಿಂದ ಡಿ.ಕೆ. ಶಿವಕುಮಾರ್‌ ಹಾಗೂ ಜಮೀರ್‌ ಅಹಮದ್‌ ಖಾನ್‌ ತೆಲಂಗಾಣದಲ್ಲಿ ಮೊಕ್ಕಾಂ ಹೂಡಿದ್ದಾರೆ.

Exit mobile version