Site icon Vistara News

HD Kumaraswamy : ಕಾಂಗ್ರೆಸ್‌ ಸಚಿವರ ಪಾಪದ ದುಡ್ಡಲ್ಲಿ ವಿದೇಶಕ್ಕೆ ಹೋಗಲಾ? ಎಚ್‌ಡಿಕೆ ಗರಂ

HD Kumaraswamy infront of vidhanasoudha

ಬೆಂಗಳೂರು: ಇಲ್ಲಿ ಲೂಟಿ ಹೊಡೆಯೋಕೆ ನಮ್ಮನ್ನು ಬಿಟ್ಟುಬಿಡಿ, ನೀವು ವಿದೇಶದಲ್ಲಿ ಇರಿ ಅಂತ ಕೆಲವು ಸಚಿವರು ಸಲಹೆ ಕೊಟ್ಟಿದ್ದಾರೆ. ಅದನ್ನು ಪಾಲಿಸಬೇಕಲ್ಲ. ಯಾಕೆಂದರೆ ಇಲ್ಲಿ ದರೋಡೆ ಮಾಡಿಕೊಂಡು ಕುಳಿತಿದ್ದಾರಲ್ಲ ಮಾನ ಮಾರ್ಯಾದೆ ಇಲ್ಲದೆ. ಇಂಥವರಿಂದ ವ್ಯವಸ್ಥೆ ಮಾಡಿಕೊಂಡು ನಾನು ವಿದೇಶಕ್ಕೆ ಹೋಗಬೇಕಾ? ಆ ಪಾಪದ ಹಣ ತಗೊಂಡು ಹೋಗಬೇಕಾ? ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಕಾಂಗ್ರೆಸ್‌ ಸರ್ಕಾರ (Congress Government) ಹಾಗೂ ಸಚಿವರ ವಿರುದ್ಧ ಗುಡುಗಿದ್ದಾರೆ. ರಾಜ್ಯ ರಾಜಕೀಯದಲ್ಲಿ (Karnataka Politics) ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ವಿದೇಶದಲ್ಲಿಯೇ ಇರಲಿ, ಅದಕ್ಕೆ ಬೇಕಾದ ವ್ಯವಸ್ಥೆ ನಾವು ಮಾಡುತ್ತೇವೆ ಎಂದು ಹೇಳಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ (Agriculture Minister Chaluvarayaswamy) ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Actor Upendra: ಜಾತಿನಿಂದನೆ ಕೇಸ್; ವಿಚಾರಣೆಗೆ ಹಾಜರಾಗದೆ ನಟ ಉಪೇಂದ್ರ ಎಸ್ಕೇಪ್‌, ಫೋನ್‌ ಸ್ವಿಚ್ಡ್‌ ಆಫ್!

ಕಾಂಬೋಡಿಯಾ ಹೊಗಳಿದ ಎಚ್‌ಡಿಕೆ

ವಿದೇಶಿ ಪ್ರವಾಸಕ್ಕೆ (Foreign Trip) ನಾನು ಅವರಿಂದ ವ್ಯವಸ್ಥೆ ಮಾಡಿಸಿಕೊಂಡು ಹೋಗಬೇಕಾ? ಆ ಪಾಪದ ಹಣ ತಗೊಂಡು ಹೋಗಬೇಕಾ? ವಿದೇಶಕ್ಕೆ ಹೋಗುವ ಯೋಗ್ಯತೆಯೂ ನನಗಿಲ್ಲವೇ? ಕಳೆದ 12 ವರ್ಷದಿಂದ ಪಕ್ಷದ ಸಂಘಟನೆಗೆ ಸಮಯ ಮೀಸಲಿಟ್ಟಿದ್ದೆ. ಎಲ್ಲೂ ಹೊರಗೆ ಹೋಗಿ ಬರುವ ಅವಕಾಶ ಸಿಕ್ಕಿರಲಿಲ್ಲ. ದೇಶ ಸುತ್ತು, ಕೋಶ ಓದು ಎಂದು ಹಿರಿಯರ ಮಾತಿದೆ. ಯಾವ ದೇಶದಲ್ಲಿ ಏನೇನಿದೆ ಎಂಬುದನ್ನು ತಿಳಿದುಕೊಳ್ಳಬೇಕಲ್ಲ? ಅಲ್ಲಿ ಯಾವ ರೀತಿ ಇದೆ? ನಮ್ಮಲ್ಲಿ ಯಾವ ರೀತಿ ಇದೆ ನೋಡಬೇಕಲ್ಲ. ಕಾಂಬೋಡಿಯಾಗೆ (Cambodia Tour) ಸ್ನೇಹಿತರ ಆಹ್ವಾನ ಇತ್ತು, ಹೋಗಿದ್ದೆ. ಅಲ್ಲಿನ ವಿಶಾಲ ಪ್ರದೇಶದಲ್ಲಿ ಕಟ್ಟಿರುವ ಅದ್ಭುತವಾದ ದೇವಸ್ಥಾನ ಇದೆ. ನಮ್ಮ ದೇಶದಲ್ಲೂ ಅಂತ ದೇವಸ್ಥಾನ ಇಲ್ಲ. ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಇರುವ ದೇವಸ್ಥಾನ (Brahma, Vishnu, Maheshwara Temple) ಅದಾಗಿದ್ದು, ಅದನ್ನು ಕಂಡು ನಾನು ವಿಸ್ಮಿತನಾದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇತ್ತೀಚೆಗೆ ಆ ದೇಶ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ಭಾರಿ ಸಂಕಷ್ಟದಲ್ಲಿದ್ದ ಆ ದೇಶ ಈಗ ತುಂಬ ಅದ್ಭುತವಾಗಿ ಬೆಳೆಯುತ್ತಿದೆ. ಕಾಂಬೋಡಿಯಾದ ಜಿಡಿಪಿ (Cambodia GDP) ಶೇ. 7.7ರಷ್ಟಿದೆ ಎಂದು ಅಲ್ಲಿನ ಮಂತ್ರಿಗಳೊಬ್ಬರು ಹೇಳಿದರು. ಸಾರ್ವಜನಿಕರ ಹಣದ ವಿನಿಯೋಗದ ಬಗ್ಗೆ ಅಲ್ಲಿ ಕಠಿಣ ನಿಯಮಗಳಿವೆ. ಆದರೆ, ನಮ್ಮಲ್ಲಿ ಹಣಕ್ಕೆ ಕೊರತೆ ಇಲ್ಲ, ಈಗ ಲೂಟಿ ಮಾಡ್ತಾ ಇದ್ದಾರೆ ಇವರು ಎಂದು ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈಗ ಮಧ್ಯಪ್ರದೇಶದಲ್ಲಿಯೂ 40% ಸರ್ಕಾರ ಅಂತಾ ಹೇಳಿ ಪೋಸ್ಟರ್ ಹಾಕಿಕೊಂಡಿದ್ದಾರೆ. ಈ ದೇಶವನ್ನು ಇವರು ಎಲ್ಲಿಗೆ ತಗೊಂಡು ಹೋಗುತ್ತಿದ್ದಾರೆ? ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ರಾಜ್ಯಪಾಲರ ಬಳಿ ಏಕೆ ಹೋದರು?

ಕೃಷಿ ಅಧಿಕಾರಿಗಳು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬರೆದಿದ್ದಾರೆನ್ನಲಾದ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ತಮ್ಮ ವಿರುದ್ಧ ಬರೆದಿರುವ ಪತ್ರ ನಕಲಿ ಎನ್ನುವುದಾದರೆ ಕೃಷಿ ಸಚಿವರು ರಾಜ್ಯಪಾಲರ ಬಳಿಗೆ ಏಕೆ ಹೋದರು? ಎಂದು ಪ್ರಶ್ನಿಸಿದರು.

ನಾನು ಆ ಪ್ರಕರಣದ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಎಲ್ಲೂ ಆ ಬಗ್ಗೆ ಮಾತನಾಡಿಲ್ಲ. ನನ್ನ ಹೆಸರು ಯಾಕೆ ತಳುಕು ಹಾಕುತ್ತಿದ್ದಾರೆ ಅಲ್ಲಿ? ಅವರಿಗೆ ಅಲ್ಲೂ ನನ್ನ ಹೆಸರೇ ಬೇಕಾ? ಏಕೆಂದರೆ ನನ್ನದೇ ಭಯ ಇರೋದು ಅವರಿಗೆ ಎಂದು ಎಚ್.ಡಿ. ಕುಮಾರಸ್ವಾಮಿ ಕುಟುಕಿದರು.

ಇದನ್ನೂ ಓದಿ: ದೇವಸ್ಥಾನದಲ್ಲಿ ದಲಿತರೆಡೆಗೆ ಪ್ರಸಾದ ಎಸೆದು, ಜಾತಿ ನಿಂದನೆ; ಬಿದ್ದ ತಿನಿಸು ಹೆಕ್ಕಲು ಓಡಿದ ಮಕ್ಕಳು

ಮೊದಲು ಪ್ರಾಮಾಣಿಕವಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು. ಪ್ರಾಮಾಣಿಕವಾಗಿ ನಡೆದುಕೊಂಡರೆ ಇಂತಹ ಪರಿಸ್ಥಿತಿ ಏನಕ್ಕೆ ಬರುತ್ತದೆ? ಮಂತ್ರಿಗಿರಿ ಸಿಕ್ಕಿದೆ ಅಂತಾ ಹಗಲು ದರೋಡೆ ಮಾಡೋದಲ್ಲ. ಒಳ್ಳೆಯ ಕೆಲಸ ಮಾಡಲಿ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕ ಮಂಜುನಾಥ್ ಇದ್ದರು.

Exit mobile version