Site icon Vistara News

Caste Census : ಜಾತಿ ಗಣತಿ ವಿರೋಧ ಮನವಿ ಪತ್ರಕ್ಕೆ ನಾನು ಸಹಿ ಮಾಡಬಾರದೇ? ಡಿಕೆಶಿ ಸಮರ್ಥನೆ

DK Shivakumar on caste census

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಜಾತಿ ಗಣತಿ ವರದಿ (Caste Census) ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ನಡುವೆ ತಿಕ್ಕಾಟಗಳು ಪ್ರಾರಂಭವಾಗಿವೆ. ಜಾತಿ ಗಣತಿ ವರದಿಯನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂಬ ಒಕ್ಕಲಿಗರ ಸಂಘದ ಮನವಿ ಪತ್ರಕ್ಕೆ ಡಿ.ಕೆ. ಶಿವಕುಮಾರ್‌ ಮನವಿ ಸಹಿ ಹಾಕುತ್ತಿದ್ದಂತೆ, ಇತ್ತ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, ರಾಹುಲ್‌ ಗಾಂಧಿ (Rahul Gandhi) ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಅವರ ನಿಲುವಿಗೆ ನನ್ನ ಪೂರ್ಣ ಸಹಮತ ಇದೆ ಎಂದು ಹೇಳುವ ಮೂಲಕ ಡಿಕೆಶಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ದಾಳ ಉರುಳಿಸಿದ್ದರು. ಈಗ ಮನವಿ ಪತ್ರಕ್ಕೆ ಸಹಿ ಹಾಕಿರುವ ಕ್ರಮವನ್ನು ಸಮರ್ಥನೆ ಮಾಡಿಕೊಂಡಿರುವ ಡಿ.ಕೆ. ಶಿವಕುಮಾರ್‌, “ನಾನು ಸಹಿ ಮಾಡಬಾರದೇ? ಸಹಿ ಮಾಡಿದರೆ ತಪ್ಪಾ? ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ನಾನು ಸಹಿ ಮಾಡಬಾರದೇ? ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜ, ಅದರ ಗೌರವ, ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲ ನಾಯಕರಲ್ಲೂ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: Fish Delivery : ಬೆಂಗಳೂರಿನ ಮನೆ ಬಾಗಿಲಿಗೆ ಬರುತ್ತೆ ಮತ್ಸ್ಯ ವಾಹಿನಿ; ಸಿಗಲಿದೆ ತಾಜಾ ಮೀನು, ಖಾದ್ಯ!

ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್‌ ನಿಲುವಿಗೆ ಬದ್ಧ

ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ವೈಜ್ಞಾನಿಕ ಸಮೀಕ್ಷೆಗಾಗಿ ಒತ್ತಾಯ ಬರುತ್ತಿದೆ

“ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು ಎಂದು ಅನೇಕ ಸಮುದಾಯಗಳು ಆಗ್ರಹ ಮಾಡಿವೆ. ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಪಕ್ಷ ಭೇದ ಮರೆತು ಹೋರಾಟ ಮಾಡಲಾಗುತ್ತಿದೆ. ಕೆಲ ಸಮುದಾಯ ಹಾಗೂ ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

28ಕ್ಕೆ ನಿಗಮ ಮಂಡಳಿ ಸಂಬಂಧ ಮತ್ತೊಂದು ಸುತ್ತಿನ ಸಭೆ

ನಿಗಮ ಮಂಡಳಿ ನೇಮಕ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ. ಹಿರಿಯ ನಾಯಕರು, ಶಾಸಕರ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ನಾನು ಹಾಗೂ ಮುಖ್ಯಮಂತ್ರಿಗಳು ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋಗಬೇಕಿದೆ. ನ. 28ರಂದು ನಮ್ಮ ದೆಹಲಿ ನಾಯಕರು ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಆ ಸಭೆ ಬಳಿಕ ನಮ್ಮ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ಕಳುಹಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಗೃಹಸಚಿವರು ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಅಸಮಾಧಾನ ಹೊಂದಿದ್ದಾರೆಯೇ ಎಂದು ಕೇಳಿದಾಗ, “ಗೃಹಮಂತ್ರಿಗಳು ಮೂರು ದಿನಗಳ ಕಾಲ ಪ್ರವಾಸದಲ್ಲಿದ್ದರು, ಅವರಿಗೆ ಅವರದೇ ಆದ ಕೆಲಸಗಳಿರುತ್ತವೆ. ಸುಮ್ಮನೆ ಯಾರೋ ಹೇಳಿದ್ದನ್ನು ನೀವು (ಮಾಧ್ಯಮಗಳು) ದೊಡ್ಡದಾಗಿ ಬಿಂಬಿಸುತ್ತೀರಿ. ಅವರು ಯಾವ ಕಾರಣಕ್ಕೆ ಅಸಮಾಧಾನಗೊಳ್ಳುತ್ತಾರೆ? ಅಸಮಾಧಾನ ಆಗುವಂತಹದ್ದು ಏನಾಗಿದೆ? ಈ ರೀತಿ ಅಸಮಾಧಾನ ಸೃಷ್ಟಿಸಿ ನಿಮ್ಮ ಘನತೆಯನ್ನು ಏಕೆ ಹಾಳು ಮಾಡಿಕೊಳ್ಳುತ್ತೀರಿ ಎಂದು ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.

ಹಿರಿಯ ಶಾಸಕರಿಗೆ ನಿಗಮ ಮಂಡಳಿ ಸ್ಥಾನ

ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರ ಬೆಂಬಲಿಗರಿಗೆ ನಿಗಮ ಮಂಡಳಿ ಸ್ಥಾನದ ವಿಚಾರವಾಗಿ ಬೇಸರವಾಗಿದೆ ಎಂಬ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಇಲ್ಲಿ ಅವರ ಬೆಂಬಲಿಗರು, ನನ್ನ ಬೆಂಬಲಿಗರು ಎಂಬುದಿಲ್ಲ. ಎಲ್ಲ ಒಟ್ಟಾಗಿ ಕಾಂಗ್ರೆಸ್ ಬೆಂಬಲಿಗರು. ನನಗೆ, ಸಿಎಂ, ಗೃಹ ಸಚಿವರಿಗೆ ಬೆಂಬಲಿಗರು ಇಲ್ಲ. ಇರುವವರೆಲ್ಲ ಕಾಂಗ್ರೆಸ್ ಬೆಂಬಲಿಗರು. ಮಂತ್ರಿಗಿರಿ ಸಿಗದ ಹಿರಿಯ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Caste Census : ಜಾತಿ ಗಣತಿ ಮೂಲ ವರದಿ ಇಲ್ಲ, ಸಹಿಯನ್ನೂ ಹಾಕಿಲ್ಲ; ಸರ್ಕಾರಕ್ಕೆ ಜಯಪ್ರಕಾಶ್‌ ಹೆಗ್ಡೆ ಪತ್ರ

ಬಿಜೆಪಿಯಲ್ಲಿ ಎಷ್ಟು ವರ್ಷದ ನಂತರ ಆಯ್ಕೆ ನಡೆಯಿತು?

ನಿಗಮ ಮಂಡಳಿ ನೇಮಕ ವಿಳಂಬ ಮಾಡುತ್ತಿರುವುದು ಕಲೆಕ್ಷನ್‌ಗಾಗಿ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಾವು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ನಿಗಮ ಮಂಡಳಿ ನೇಮಕ ಮಾಡುತ್ತಿದ್ದೇವೆ. ಅವರು ಅಧಿಕಾರಕ್ಕೆ ಬಂದ ಎಷ್ಟು ವರ್ಷಗಳ ನಂತರ ಮಾಡಿದರು? ಅವರಿಗೆ ನಾಲ್ಕೈದು ಸಚಿವರನ್ನು ನೇಮಕ ಮಾಡಲಾಗದೇ ಮುಖ್ಯಮಂತ್ರಿಗಳೇ ಖಾತೆಯನ್ನು ಇಟ್ಟುಕೊಂಡಿದ್ದರು. ಬಿಜೆಪಿ ತಟ್ಟಿಯಲ್ಲಿ ಹೆಗಣ ಬಿದ್ದದ್ದು, ಮೊದಲು ಅದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

Exit mobile version